ADVERTISEMENT

ಆಳ-ಅಗಲ| ಲಸಿಕೆಯ ರಕ್ಷಣೆ ಮಕ್ಕಳಿಗೂ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 19:30 IST
Last Updated 26 ಡಿಸೆಂಬರ್ 2021, 19:30 IST
ಅಮೆರಿಕದ ಬಾಲಕನೊಬ್ಬ ಫೈಝರ್‌ ಲಸಿಕೆ ಹಾಕಿಸಿಕೊಂಡ ಕ್ಷಣ- –ಎಎಫ್‌ಪಿ ಚಿತ್ರ
ಅಮೆರಿಕದ ಬಾಲಕನೊಬ್ಬ ಫೈಝರ್‌ ಲಸಿಕೆ ಹಾಕಿಸಿಕೊಂಡ ಕ್ಷಣ- –ಎಎಫ್‌ಪಿ ಚಿತ್ರ   

ದೇಶದಲ್ಲಿ ಒಟ್ಟು 10 ಕೋಟಿಯಷ್ಟು ಇರುವ 15–18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರವು ಘೋಷಿಸಿದೆ. 2022ರ ಜನವರಿ 3ರಿಂದ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಓಮೈಕ್ರಾನ್‌ ರೂಪಾಂತರ ತಳಿಯ ಪ್ರಕರಣಗಳ ಜತೆಗೆ ಡೆಲ್ಟಾ ತಳಿಯ ಪ್ರಕರಣಗಳೂ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರ ಪ್ರಕಟಿಸಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಬಗ್ಗೆ ಹಲವು ತಿಂಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಲಸಿಕೆ ಲಭ್ಯವಿಲ್ಲದೇ ಇದ್ದ ಕಾರಣ ಮಕ್ಕಳಿಗೆ ಲಸಿಕೆ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಭಾರತ್‌ ಬಯೊಟೆಕ್‌ನ ಕೋವ್ಯಾಕ್ಸಿನ್‌ ಲಸಿಕೆಯನ್ನು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ನೀಡಲು ಅನುಮತಿ ದೊರೆತಿದೆ. ಝೈಡಸ್ ಕ್ಯಾಡಿಲಾ ಕಂಪನಿಯ ಝೈಕೋವ್‌–ಡಿ ಸೂಜಿರಹಿತ ಲಸಿಕೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲು ಅನುಮತಿ ದೊರೆತಿದೆ.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಇನ್ನೆರಡು ವಾರಗಳಲ್ಲಿ ವರ್ಷ ತುಂಬಲಿದೆ. 94 ಕೋಟಿಯಷ್ಟಿರುವ ಈ ವರ್ಗದ ಎಲ್ಲರಿಗೂ ಈವರೆಗೆ ಎರಡೂ ಡೋಸ್‌ಗಳನ್ನು ನೀಡಲು ಸಾಧ್ಯವಾಗಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನಅಂದಾಜು 40 ಕೋಟಿಯಷ್ಟಿರುವ ಮಕ್ಕಳಿಗೆ ಒಂದೂ ಡೋಸ್‌ ಲಸಿಕೆ ನೀಡಲಾಗಿಲ್ಲ.

ADVERTISEMENT

ದೇಶದ ಬಹುತೇಕ ರಾಜ್ಯಗಳಲ್ಲಿ ಶಾಲಾ–ಕಾಲೇಜುಗಳು ಆರಂಭವಾಗಿವೆ. ಆದರೆ ಆ ಸಂಸ್ಥೆಗಳಲ್ಲಿನ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆಯೇ ಹೊರತು, ಸೋಂಕು ತಗಲುವ ಸಾಧ್ಯತೆ ಅತ್ಯಧಿಕವಾಗಿರುವ ಮಕ್ಕಳಿಗೆ ಲಸಿಕೆಯ ರಕ್ಷಣೆ ಇಲ್ಲ. ಶಾಲಾ–ಕಾಲೇಜುಗಳಲ್ಲಿ ಮಕ್ಕಳು ಅಕ್ಕಪಕ್ಕ ಕುಳಿತೇ ಪಾಠ ಕೇಳಬೇಕಾದ, ಪರೀಕ್ಷೆ ಬರೆಯಬೇಕಾದ ಸ್ಥಿತಿ ಇದೆ. ಹೀಗಾಗಿ ಒಂದು ಮಗುವಿಗೆ ಸೋಂಕು ತಗುಲಿದರೂ, ತರಗತಿಯಲ್ಲಿನ ಇತರ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಅಪಾಯ ಅತ್ಯಧಿಕವಾಗಿರುತ್ತದೆ. ಲಸಿಕೆಯ ಪರಿಣಾಮದ ಪ್ರಮಾಣ ಎಷ್ಟೇ ಇದ್ದರೂ, ಮಕ್ಕಳಿಗೆ ಲಸಿಕೆ ನೀಡಲೇಬೇಕಾದ ಸ್ಥಿತಿ ಇದೆ.

ಆದರೆ ಈಗ ಸರ್ಕಾರವು 15–18 ವರ್ಷ ಮಕ್ಕಳಿಗಷ್ಟೇ ಲಸಿಕೆ ನೀಡಲು ಮುಂದಾಗಿದೆ. ಈ ವಯಸ್ಸಿನ ಮಕ್ಕಳ ಸಂಖ್ಯೆ 10.02 ಕೋಟಿಯಷ್ಟು. ಆದರೆ, 15 ವರ್ಷಕ್ಕಿಂತ ಕಡಿಮೆ ಮಯಸ್ಸಿನ ಮಕ್ಕಳ ಸಂಖ್ಯೆ 29 ಕೋಟಿಗಿಂತ ಹೆಚ್ಚು. ಈ ಮಕ್ಕಳಿಗೆ ಲಸಿಕೆ ಯಾವಾಗ ನೀಡಲಾಗುತ್ತದೆ ಎಂಬುದರ ಸೂಚನೆಯನ್ನು ಸರ್ಕಾರ ನೀಡಿಲ್ಲ.‌

ಸಾಮಾನ್ಯ ಸ್ಥಿತಿಗೆ ಮರಳಲಿವೆಯೇ ಶಾಲೆಗಳು?

‘ಈ ಲಸಿಕೆ ಕಾರ್ಯಕ್ರಮದಿಂದ ಶಾಲಾ–ಕಾಲೇಜುಗಳ ಕಾರ್ಯಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನದ ಕಾರ್ಯಯೋಜನೆಯ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟ ಮಾಹಿತಿ ನೀಡಿಲ್ಲ.

ಮಕ್ಕಳಿಗೆ ನೀಡಬೇಕಿರುವ ಲಸಿಕೆಯ ಡೋಸ್‌ಗಳ ತಯಾರಿಕೆ, ಲಭ್ಯತೆ ಮತ್ತು ಪೂರೈಕೆ ಬಗ್ಗೆ ಸರ್ಕಾರವು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನದ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ಸ್ಪಷ್ಟ ಮಾರ್ಗಸೂಚಿಯನ್ನೂ ಹೊರಡಿಸಿಲ್ಲ. ಆದರೆ ಕೇಂದ್ರ ಸರ್ಕಾರದಿಂದ ಇನ್ನಷ್ಟೇ ಪೂರೈಕೆಯಾಗಬೇಕಿರುವ ಈ ಲಸಿಕೆಗಳಿಗಾಗಿ ರಾಜ್ಯ ಸರ್ಕಾರಗಳು ಎದುರು ನೋಡುತ್ತಿವೆ. ಅಭಿಯಾನವನ್ನು ಅನುಷ್ಠಾನಕ್ಕೆ ತರಲು ಸಿದ್ಧತೆಯನ್ನೂ ನಡೆಸಿವೆ. ಕೆಲವು ರಾಜ್ಯಗಳು ಪ್ರತ್ಯೇಕ ಲಸಿಕಾ ಶಿಬಿರಗಳನ್ನು ನಡೆಸಲು ಯೋಜನೆ ಹಾಕಿಕೊಂಡಿವೆ. ಕೆಲವು ರಾಜ್ಯಗಳು ಶಾಲೆ ಮತ್ತು ಕಾಲೇಜುಗಳಲ್ಲೇ ಲಸಿಕೆ ನೀಡಲು ಸಿದ್ಧತೆ ಮಾಡಿಕೊಂಡಿವೆ.

ಈ ಕಾರ್ಯಕ್ರಮದ ಅನುಷ್ಠಾನದ ಯಶಸ್ಸು, ಕೇಂದ್ರ ಸರ್ಕಾರವು ಪೂರೈಸಲಿರುವ ಲಸಿಕೆಯ ಡೋಸ್‌ಗಳ ಸಂಖ್ಯೆಯನ್ನು ಆಧರಿಸಿದೆ. ದೇಶದಲ್ಲಿ 15–18 ವರ್ಷ ವಯಸ್ಸಿನ ಮಕ್ಕಳ ಸಂಖ್ಯೆ ಅಂದಾಜು 10.02 ಕೋಟಿಯಷ್ಟಿದೆ. ಈ ಮಕ್ಕಳಿಗೆ ಲಸಿಕೆಯ ಎರಡು ಡೋಸ್‌ ನೀಡಬೇಕು ಎಂದರೂ, ಅಂದಾಜು 21 ಕೋಟಿ ಡೋಸ್‌ಗಳಷ್ಟು ಲಸಿಕೆ ಬೇಕಾಗುತ್ತದೆ. ಮಕ್ಕಳಿಗೆಂದೇ ಪ್ರತ್ಯೇಕವಾಗಿ ಅಭಿವೃದ್ಧಿ ಪಡಿಸಿರುವ ಈ ಲಸಿಕೆಗಳ ತಯಾರಿಕೆ ಸಾಮರ್ಥ್ಯ ಎಷ್ಟು ಎಂಬುದರ ದತ್ತಾಂಶ ಬಹಿರಂಗವಾಗಿಲ್ಲ. ಅಲ್ಲದೆ, 18 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮವು ಇನ್ನೂ ಪೂರ್ಣಗೊಂಡಿಲ್ಲ. ಹೀಗಿರುವಾಗ ಲಸಿಕೆ ತಯಾರಿಕೆ ಕಂಪನಿಗಳು, ತಮ್ಮ ತಯಾರಿಕೆ ಸಾಮರ್ಥ್ಯವನ್ನು ವಯಸ್ಕರಿಗೆ ನೀಡುವ ಲಸಿಕೆಗಳು ಮತ್ತು ಮಕ್ಕಳಿಗೆ ನೀಡುವ ಲಸಿಕೆಗಳ ಮಧ್ಯೆ ಹೇಗೆ ಹಂಚಿಕೆ ಮಾಡಿಕೊಳ್ಳುತ್ತವೆ ಎಂಬುದರ ಕಾರ್ಯಯೋಜನೆ ಸಿದ್ಧವಾಗಿಲ್ಲ. ಮಕ್ಕಳಿಗೆ ನೀಡುವ ಲಸಿಕೆಗಳನ್ನು ಕೇಂದ್ರ ಸರ್ಕಾರವು ಯಾವ ಪ್ರಮಾಣದಲ್ಲಿ ಪೂರೈಸುತ್ತದೆ ಎಂಬುದು ಅಸ್ಪಷ್ಟವಾಗಿದೆ.

‘ಅವೈಜ್ಞಾನಿಕ ನಿರ್ಧಾರ’

‘15–18 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ನಿರ್ಧಾರವು ಅವೈಜ್ಞಾನಿಕವಾದುದು’ ಎಂದು ದೆಹಲಿ ಏಮ್ಸ್‌ನ ವೈರಾಣುರೋಗಶಾಸ್ತ್ರಜ್ಞ ಡಾ.ಸಂಜಯ್ ಕೆ.ರಾಯ್ ಹೇಳಿದ್ದಾರೆ.

‘ಮಕ್ಕಳಿಗೆ ಲಸಿಕೆ ನೀಡುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ಸರ್ಕಾರವು ಸ್ಪಷ್ಟಪಡಿಸಿಲ್ಲ. ರೋಗ ಹರಡುವುದನ್ನು ತಡೆಯಲು ಲಸಿಕೆ ನೀಡಲಾಗುತ್ತಿದೆಯೇ ಅಥವಾ ರೋಗದ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಲಸಿಕೆ ನೀಡಲಾಗುತ್ತಿದೆಯೇ ಎಂಬುದನ್ನು ಸರ್ಕಾರ ತಿಳಿಸಿಲ್ಲ’ ಎಂದು ಅವರು ಹೇಳಿದ್ದಾರೆ. ಭಾರತೀಯ ಸಾರ್ವಜನಿಕ ಆರೋಗ್ಯ ಸಂಘಟನೆಯ ಅಧ್ಯಕ್ಷರೂ ಆಗಿರುವ ಅವರು, ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ಕ್ಲಿನಿಕಲ್ ಟ್ರಯಲ್‌ನ ಪ್ರಧಾನ ಪರೀಕ್ಷಕರಾಗಿದ್ದರು.

‘ವಿಶ್ವದ ಎಲ್ಲೆಡೆ ಲಸಿಕೆಯ ಎರಡೂ ಡೋಸ್‌ ಪಡೆದುಕೊಂಡವರಿಗೂ ಕೋವಿಡ್‌ ತಗುಲುತ್ತಿದೆ. ಹೀಗಾಗಿ ಲಸಿಕೆ ನೀಡುವ ಮೂಲಕ ಮಕ್ಕಳಿಗೆ ಕೋವಿಡ್‌ ಹರಡುವುದನ್ನು ತಪ್ಪಿಸುತ್ತೇವೆ ಎಂಬುದರಲ್ಲಿ ಅರ್ಥವಿಲ್ಲ. ಕೋವಿಡ್‌ ತಗುಲಿದ 10 ಲಕ್ಷ ಮಕ್ಕಳಲ್ಲಿ ಇಬ್ಬರಷ್ಟೇ ಮೃತಪಡುತ್ತಿದ್ದಾರೆ. ಆದರೆ ಲಸಿಕೆ ನೀಡಿಕೆಯ ಅಪಾಯದ ಪ್ರಮಾಣವು ಇದಕ್ಕಿಂತಲೂ ಅಧಿಕವಾಗಿದೆ. ಹೀಗಿರುವಾಗ ವಿಶ್ವದ ಬೇರೆಡೆ ಮಕ್ಕಳಿಗೆ ಲಸಿಕೆ ನೀಡುತ್ತಿರುವ ಕಾರ್ಯಕ್ರಮಗಳನ್ನು ಪರಿಶೀಲಿಸಿ, ನಮ್ಮಲ್ಲಿ ಕಾರ್ಯಕ್ರಮ ಜಾರಿಗೆ ತರಬೇಕಿತ್ತು’ ಎಂದು ಅವರು ವಿವರಿಸಿದ್ದಾರೆ.

‘ಸದ್ಯದ ಸ್ಥಿತಿಯಲ್ಲಿ ಮಕ್ಕಳಿಗೆ ಕೋವಿಡ್‌ ಹರಡುವುದನ್ನು ತಡೆಯಲು ಲಸಿಕೆಗಳಿಂದ ಸಾಧ್ಯವಿಲ್ಲ. ರೋಗವು ತೀವ್ರಗೊಳ್ಳುವ ಮಕ್ಕಳ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ ಇರುವ ಕಾರಣ, ರೋಗದ ತೀವ್ರತೆಯನ್ನು ಕಡಿಮೆ ಮಾಡಲೂ ಸಾಧ್ಯವಿಲ್ಲ. ಈ ಲಸಿಕೆ ಕಾರ್ಯಕ್ರಮದಿಂದ ಈ ಎರಡು ಉದ್ದೇಶಗಳೂ ಈಡೇರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಮಕ್ಕಳಿಗಾಗಿ ಐದು ಲಸಿಕೆಗಳು

ಮಕ್ಕಳಿಗೆ ನೀಡುವ ಉದ್ದೇಶದಿಂದ 5 ಕೋವಿಡ್ ಲಸಿಕೆಗಳು ದೇಶದಲ್ಲಿ ಸಿದ್ಧವಾಗುತ್ತಿವೆ. ಈ ಪೈಕಿ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ. ಇನ್ನೂ ಮೂರು ಲಸಿಕೆಗಳು ಕ್ಲಿನಿಕಲ್ ಪ್ರಯೋಗದ ವಿವಿಧ ಹಂತಗಳಲ್ಲಿವೆ.

ಕ್ಯಾಡಿಲಾ ಹೆಲ್ತ್‌ಕೇರ್‌ ಅಭಿವೃದ್ಧಿಪಡಿಸಿರುವ ಝೈಕೋವ್‌–ಡಿ ಹಾಗೂ ಭಾರತ್ ಬಯೊಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗಳು ಬಳಕೆಗೆ ಸಿದ್ಧವಾಗಿವೆ. ಜನವರಿ 3ರಿಂದ ಆರಂಭವಾಗಲಿರುವ ಮಕ್ಕಳ ಲಸಿಕಾ ಅಭಿಯಾನದಲ್ಲಿ ಈ ಲಸಿಕೆಗಳನ್ನು ಬಳಸಿಕೊಳ್ಳಲಾಗುತ್ತದೆ. ಸೀರಂ ಸಂಸ್ಥೆಯ ಕೋವೊವ್ಯಾಕ್ಸ್, ಬಯೋಲಾಜಿಕಲ್‌–ಇ ಸಂಸ್ಥೆಯ ಆರ್‌ಬಿಡಿ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ‘ಎಡಿ 26ಕೋವ್.2ಎಸ್‌’ ಲಸಿಕೆಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ.

ಝೈಕೋವ್‌–ಡಿ:12 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುವ ಲಸಿಕೆಯ 3ನೇ ಹಂತದ ಪ್ರಾಯೋಗಿಕ ಪರೀಕ್ಷೆಯನ್ನು (ಮರುಸಂಯೋಜಿತ ಡಿಎನ್‌ಎ) ಝೈಡಸ್ ಕ್ಯಾಡಿಲಾ ಸಂಸ್ಥೆ ನಡೆಸಿದೆ. ಇದರ ತುರ್ತು ಬಳಕೆಗೆ ಆಗಸ್ಟ್ 20ರಂದು ಅನುಮತಿ ಸಿಕ್ಕಿತ್ತು. ಈ ಲಸಿಕೆಯ 3 ಡೋಸ್‌ಗಳನ್ನು ನೀಡಬೇಕಿದೆ. 28 ದಿನಗಳ ಅಂತರದಲ್ಲಿ ಮೂರು ಡೋಸ್‌ಗಳನ್ನು ನೀಡಲಾಗುತ್ತದೆ.

ಪ್ರತೀ ಡೋಸ್‌ಗೆ ₹265 ದರದಲ್ಲಿ,1 ಕೋಟಿ ಡೋಸ್ ಪೂರೈಸುವಂತೆಕೇಂದ್ರ ಸರ್ಕಾರದಿಂದ ಬೇಡಿಕೆ ಬಂದಿದೆ ಎಂದು ಸಂಸ್ಥೆಯು ನವೆಂಬರ್ 8ರಂದು ತಿಳಿಸಿತ್ತು. ನೋವು ರಹಿತವಾಗಿ ಈ ಲಸಿಕೆಯನ್ನು ಹಾಕಲಾಗುತ್ತದೆ. ಸೂಜಿಯ ಬದಲಾಗಿ, ‘ನೀಡ್ಲ್ ಫ್ರೀ ಅಪ್ಲಿಕೇಟರ್’ ಅನ್ನು ಇದಕ್ಕಾಗಿ ಬಳಸಲಾಗುತ್ತದೆ. ₹93 ದರದಲ್ಲಿಈ ಉಪಕರಣವನ್ನು ಸರ್ಕಾರ ಖರೀದಿ ಮಾಡುತ್ತಿದೆ.

ಈ ಲಸಿಕೆಯನ್ನು ಆರಂಭದಲ್ಲಿ ಏಳು ರಾಜ್ಯಗಳಲ್ಲಿ ಬಳಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್ ಇತ್ತೀಚೆಗೆ ತಿಳಿಸಿದ್ದರು. ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್, ಜಾರ್ಖಂಡ್, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಕ್ಕಳಿಗೆ ಈ ಲಸಿಕೆ ಹಾಕಲಾಗುತ್ತದೆ.

ಕೋವ್ಯಾಕ್ಸಿನ್:ಭಾರತ್ ಬಯೊಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2 ಡೋಸ್‌ಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಬಳಿಕ 20 ದಿನಗಳ ಅಂತರ ಇರಲಿದೆ.2ರಿಂದ 18 ವರ್ಷ ವಯೋಮಾನದವರ ಮೇಲೆ ಲಸಿಕೆಯ ಎರಡು ಹಾಗೂ ಮೂರನೇ ಹಂತದ ಪರೀಕ್ಷೆಗಳು ನಡೆಯುತ್ತಿವೆ. ಲಸಿಕೆಯ ತುರ್ತು ಬಳಕೆಗೆ ಡಿ.25ರಂದು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯವು ಅನುಮತಿ ನೀಡಿತ್ತು. ಪ್ರಾಯೋಗಿಕ ಹಂತದಲ್ಲಿ ಲಭ್ಯವಾದ ಸುರಕ್ಷತಾ ಹಾಗೂ ರೋಗನಿರೋಧಕ ಶಕ್ತಿ ಕುರಿತ ಮಾಹಿತಿಯನ್ನು ಒಳಗೊಂಡ ಮಧ್ಯಂತರ ವರದಿಯನ್ನು ಸಂಸ್ಥೆಯು ಸಲ್ಲಿಸಿದ ಬಳಿಕ ಇದರ ಬಳಕೆಗೆ ಅನುಮತಿ ನೀಡಲಾಗಿದೆ.

ಕೋವೊವ್ಯಾಕ್ಸ್:ಪುಣೆಯ ಸೀರಂ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ‘ಕೋವೊವ್ಯಾಕ್ಸ್’ ಅನ್ನು 2ರಿಂದ 17 ವರ್ಷದೊಳಗಿನ ಮಕ್ಕಳಿಗೆ ನೀಡಬಹುದು. ಇದರ ಎರಡನೇ ಹಾಗೂ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ಚಾಲ್ತಿಯಲ್ಲಿವೆ.

ಆರ್‌ಬಿಡಿ:ಬಯೋಲಾಜಿಕಲ್ ಇ ಸಂಸ್ಥೆ ಸಿದ್ಧಪಡಿಸುತ್ತಿರುವ ಆರ್‌ಬಿಡಿ ಲಸಿಕೆಯನ್ನು 5ರಿಂದ 18 ವರ್ಷದ ಮಕ್ಕಳಿಗೆ ನೀಡುವ ಬಗ್ಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ.

ಜಾನ್ಸನ್ ಅಂಡ್ ಜಾನ್ಸನ್:ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತಯಾರಿಸುತ್ತಿರುವ ‘ಎಡಿ 26ಕೋವ್.2ಎಸ್‌’ ಹೆಸರಿನ ಲಸಿಕೆಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಇದನ್ನು 12ರಿಂದ 17 ವರ್ಷ ವಯೋಮಾನದ ಮಕ್ಕಳನ್ನು ಗುರಿಯಾಗಿಸಿಕೊಂಡು ತಯಾರಿಸಲಾಗುತ್ತಿದೆ.

ಅಡ್ಡ ಪರಿಣಾಮಗಳು ಕಡಿಮೆ

ಲಸಿಕೆ ಪಡೆದ ಬಳಿಕ ಕೆಲವೊಂದು ಅಡ್ಡ ಪರಿಣಾಮಗಳು ಉಂಟಾಗ ಬಹುದು.ಲಸಿಕೆ ಹಾಕಿಸಿಕೊಂಡ ಕೈಯಲ್ಲಿ ನೋವು, ಊತ ಕಾಣಿಸಿಕೊಳ್ಳ ಬಹುದು ಅಥವಾ ಲಸಿಕೆ ಹಾಕಿಸಿಕೊಂಡ ಜಾಗ ಕೆಂಪಗಾಗಬಹುದು. ಮಗುವಿನಲ್ಲಿ ಸುಸ್ತು, ತಲೆನೋವು, ಸ್ನಾಯುನೋವು, ವಾಕರಿಕೆ, ‌ಜ್ವರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.ದೇಹದ ರೋಗನಿರೋಧಕ ಶಕ್ತಿಯ ಜೊತೆಗೆ ಲಸಿಕೆಯು ಹೊಂದಾಣಿಕೆ ಮಾಡಿಕೊಳ್ಳುವಾಗ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದರೂ, ಅವು ಸ್ವಾಭಾವಿಕ ಎಂದು ತಜ್ಞರು ಹೇಳುತ್ತಾರೆ.

ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡರೂ ಅವು ದೀರ್ಘಕಾಲ ಬಾಧಿಸುವುದಿಲ್ಲ. ಕೆಲವರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡಬರುವುದಿಲ್ಲ. ಕೆಲವರಲ್ಲಿ ಅಲರ್ಜಿಯಿಂದ ಸಮಸ್ಯೆ ಉಂಟಾಗಬಹುದು. ಆದರೆ ಇಂತಹವರ ಪ್ರಮಾಣ ತೀರಾ ಕಡಿಮೆ. ಸಮಸ್ಯೆ ಕಂಡುಬಂದಲ್ಲಿ, ಆರೋಗ್ಯ ಕಾರ್ಯಕರ್ತರು ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ.

ಅಮೆರಿಕದಲ್ಲಿ, ಮಕ್ಕಳ ಲಸಿಕೆ ಸೇರಿದಂತೆ ಎಲ್ಲ ವಯೋಮಾನದವರ ಕೋವಿಡ್ ಲಸಿಕೆಗಳ ಸುರಕ್ಷತೆ ಮೇಲೆ ಸೆಂಟರ್‌ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಸಂಸ್ಥೆಯು ನಿಗಾ ಇರಿಸಿದೆ. ಅಮೆರಿಕದಲ್ಲಿ ಫೈಝರ್–ಬಯೊಎನ್‌ಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು 12–17 ವರ್ಷದೊಳಗಿನ ಮಕ್ಕಳಿಗೆ ನೀಡಿದಾಗ, ಮಯೊಕಾರ್ಡಿಟಿಸ್ (ಹೃದಯ ಸ್ನಾಯುವಿನ ಉರಿಯೂತ) ಹಾಗೂಪೆರಿಕಾರ್ಡಿಟಿಸ್ (ಹೃದಯದ ಹೊರ ಪದರದ ಉರಿಯೂತ) ಸಮಸ್ಯೆಗಳು ಕಂಡುಬಂದಿದ್ದರೂ, ಇವುಗಳ ಪ್ರಮಾಣ ತೀರಾ ಕಡಿಮೆಯಿತ್ತು. 5–11 ವರ್ಷ ವಯೋಮಾನದ ಮಕ್ಕಳಿಗೆ ಹೋಲಿಸಿದರೆ, 12–17 ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆಗಳು ಹೆಚ್ಚು ಕಂಡುಬಂದರೂ, ಅಪಾಯಕಾರಿ ಪ್ರಮಾಣದಲ್ಲಿ ಇರುವುದಿಲ್ಲ ಎಂಬುದು ಕ್ಲಿನಿಕಲ್ ಪ್ರಯೋಗದಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.