ADVERTISEMENT

Explainer | 'ಅತಿ ವೇಗದ' ಚಂಡಮಾರುತಕ್ಕೆ 'ಅಂಪನ್' ಹೆಸರು ಹೇಗೆ ಬಂತು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮೇ 2020, 8:30 IST
Last Updated 21 ಮೇ 2020, 8:30 IST
ಅಂಪನ್ ಚಂಡಮಾರುತದ ಪ್ರಭಾವದಿಂದ ಕೊಲ್ಕತ್ತಾದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀರು ನಿಂತಿದೆ.
ಅಂಪನ್ ಚಂಡಮಾರುತದ ಪ್ರಭಾವದಿಂದ ಕೊಲ್ಕತ್ತಾದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀರು ನಿಂತಿದೆ.   

ಬಂಗಾಳ ಕೊಲ್ಲಿಯ ಕರಾವಳಿಗೆ ಅಪ್ಪಳಿಸಿರುವ ಅಂಪನ್ ಚಂಡಮಾರುತದ ಹೊಡೆತವನ್ನು ಅಂದಾಜಿಸಿ ಲಕ್ಷಾಂತರ ಮಂದಿಯನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಸಂತ್ರಸ್ತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈಚಿನ ದಿನಗಳಲ್ಲಿ ಕಾಣಿಸಿಕೊಂಡ ಭೀಕರ ಚಂಡಮಾರುತವಿದು ಎಂದೇ 'ಅಂಪನ್‌' ಅನ್ನು ಗುರುತಿಸಲಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಒಡಿಶಾದಲ್ಲಿ 60 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಅಶಿತ್ ಕುಮಾರ್ ತ್ರಿಪಾಠಿ ಮತ್ತುಪಶ್ಚಿಮ ಬಂಗಾಳದಲ್ಲಿ 3 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಅತ್ಯಂತ ಪ್ರಬಲ ಚಂಡಮಾರುತ 'ಅಂಪನ್' ಎಂದುಹವಾಮಾನ ಇಲಾಖೆ ಮಾಹಿತಿ ನೀಡಿದೆ. 1999ರಲ್ಲಿ ಒಡಿಶಾ ದಡಕ್ಕೆ ಅಪ್ಪಳಿಸಿದ್ದ ಚಂಡಮಾರುತವು ಈವರೆಗಿನ ದಾಖಲೆಯಾಗಿತ್ತು.

ಚಂಡಮಾರುತಗಳಿಗೆ ಹೆಸರು ಏಕೆ ಇಡುತ್ತಾರೆ?

ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಸಂವಹನದಲ್ಲಿ ತೊಡಕುಂಟಾಗದಿರಲಿ ಎನ್ನುವ ಕಾರಣಕ್ಕೆ ಚಂಡಮಾರುತಗಳಿಗೆ ಹೆಸರು ಇಡಲಾಗುತ್ತದೆ. ಏಕಕಾಲಕ್ಕೆ ಹಲವು ಮಾರುತಗಳು ಬೀಸುವ ಕಾರಣ ನಿರ್ದಿಷ್ಟ ಹೆಸರು ಕರೆಯುವುದು ಒಳಿತು ಎಂಬ ಕಾರಣಕ್ಕೆ ಚಂಡಮಾರುತಗಳಿಗೆ ಹೆಸರು ಇಡುತ್ತಾರೆ.

ಅಂಪನ್ ಹೆಸರು ಹೇಗೆ ಬಂತು?

ಅಂಪನ್ ಎಂಬ ಪದವು ಅಮ್-ಪನ್ ಎಂಬ ಪದಗಳಿಂದ ಬಂದಿದೆ. ಥಾಯ್ ಭಾಷೆಯಲ್ಲಿ ಅಮ್-ಪನ್ ಎಂದರೆ ಆಕಾಶ ಎಂದು ಅರ್ಥ. ಥಾಯ್ಲೆಂಡ್ ಈ ಹೆಸರನ್ನು 2004ರಲ್ಲಿ ಸೂಚಿಸಿತ್ತು. ವಿಶ್ವಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್‌ಗಾಗಿನಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಅಧೀನದಲ್ಲಿ ಕಾರ್ಯನಿರ್ವಹಿಸುವವಿಶ್ವ ಹವಾಮಾನ ಒಕ್ಕೂಟದ (ವರ್ಲ್ಡ್ ಮೀಟಿಯಾರಲಾಜಿಕಲ್ ಆರ್ಗನೈಸೇಷನ್ - ಡಬ್ಲ್ಯುಎಂಒ) ಸದಸ್ಯ ದೇಶಗಳು ಚಂಡಮಾರುತಗಳಿಗೆ ನಾಮಕರಣ ಮಾಡಬಹುದಾದ ಹೆಸರುಗಳನ್ನು ಸೂಚಿಸುತ್ತವೆ.

1972ರಲ್ಲಿ ಆರಂಭವಾದ ಮಂಡಳಿಯಲ್ಲಿ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ದೇಶಗಳಿದ್ದವು. 2018ರಲ್ಲಿ ಇರಾನ್, ಕತಾರ್, ಸೌದಿ ಅರೇಬಿಯಾ, ಅರಬ್ ಸಂಯುಕ್ತ ಸಂಸ್ಥಾನ ಮತ್ತು ಯೆಮೆನ್ ದೇಶಗಳಿಗೂ ಸದಸ್ಯತ್ವ ನೀಡಲಾಯಿತು. ಮಂಡಳಿಯಲ್ಲಿರುವ 13 ಸದಸ್ಯ ದೇಶಗಳಿಗೆ ತಲಾ 13 ಹೆಸರುಗಳನ್ನು ಸೂಚಿಸಲು ಅವಕಾಶವಿದೆ. ಮಂಡಳಿಯಲ್ಲಿ ಪ್ರಸ್ತುತ 169 ಹೆಸರುಗಳಿವೆ.

ಥಾಯ್ಲೆಂಡ್‌ಸಲಹೆ ನೀಡಿದ್ದ ಅಂಪನ್ ಸಹಈ ಪಟ್ಟಿಯಲ್ಲಿದ್ದ ಹೆಸರು. ಎಲ್ಲಾ 169 ಹೆಸರುಗಳು ಮುಗಿದ ನಂತರ ಹೊಸ ಪಟ್ಟಿಯೊಂದನ್ನು ರೂಪಿಸಲಾಗುತ್ತದೆ. ಮುಂದೆ ರೂಪುಗೊಳ್ಳುವ ಚಂಡಮಾರುತಗಳಿಗೆ ಇಡಬಹುದಾದ, ಈ ಪಟ್ಟಿಯಲ್ಲಿರುವ ಹೆಸರುಗಳು ಮತ್ತು ಅದನ್ನು ಸೂಚಿಸಿದ ದೇಶಗಳಿವು.

ನಿಸರ್ಗ (ಬಾಂಗ್ಲಾದೇಶ), ಗತಿ (ಭಾರತ), ನಿವರ್ (ಇರಾನ್), ಬುರೆವಿ (ಮಾಲ್ಡೀವ್ಸ್), ತೌಕ್ಟೆ (ಮ್ಯಾನ್ಮಾರ್), ಯಾಸ್ (ಒಮನ್).

ದುರಂತದ ನೆನಪು

ಅಂಪನ್, ಸ್ವಾತಂತ್ರ್ಯಾನಂತರ ಭಾರತಕ್ಕೆ ಅಪ್ಪಳಿಸಿರುವ ಎರಡನೇ ಅತಿವೇಗದ ಚಂಡಮಾರುತ (ಸೂಪರ್‌ ಸೈಕ್ಲೋನ್‌).1999ರ ಅಕ್ಟೋಬರ್ 29ರಂದು ಮೊದಲ ಸೂಪರ್ ಸೈಕ್ಲೋನ್ ದಾಳಿಯಿಟ್ಟಿತ್ತು.ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ಶತಮಾನದಲ್ಲಿ ದಾಖಲಾದ ಈ ಭೀಕರ ಚಂಡಮಾರುತದಲ್ಲಿ ಸುಮಾರು 9 ಸಾವಿರ ಜನರು ಮೃತಪಟ್ಟಿದ್ದರು.

ಅಂದಾಜು 260 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಯು 36 ಗಂಟೆಗಳ ಕಾಲ ಕರಾವಳಿಯನ್ನು ಅಕ್ಷರಶಃ ರೌದ್ರವಾಗಿಸಿತ್ತು. ಕರಾವಳಿಯ 14 ಜಿಲ್ಲೆಗಳು, 2 ಕರಾವಳಿ ಪಟ್ಟಣಗಳು ತೀವ್ರ ಹಾನಿಗೀಡಾಗಿದ್ದವು. 9,885 ಜನರು ಮೃತಪಟ್ಟರು ಎಂದುಅಧಿಕೃತ ದಾಖಲೆಗಳ ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.