ADVERTISEMENT

ಆಳ-ಅಗಲ: ಚಿಂತಕರ ಚಾವಡಿಗೆ ಎಂಥವರು ಬೇಕು?

ಎಸ್.ರವಿಪ್ರಕಾಶ್
ರಾಜೇಶ್ ರೈ ಚಟ್ಲ
Published 10 ಜೂನ್ 2025, 23:40 IST
Last Updated 10 ಜೂನ್ 2025, 23:40 IST
   

‘ಚಿಂತಕರ ಚಾವಡಿ’ ಎಂದೇ ಕರೆಸಿಕೊಳ್ಳುವ ವಿಧಾನ ಪರಿಷತ್ತಿಗೆ ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣ, ಸಮಾಜ ಸೇವೆಯಂತಹ ಕ್ಷೇತ್ರಗಳಲ್ಲಿ ಅಪಾರ ಶ್ರಮ ಹಾಕಿದ ಗಣ್ಯರ ನಾಮ ನಿರ್ದೇಶನ ಮಾಡಬೇಕು. ಇದಕ್ಕಾಗಿ 11 ಸ್ಥಾನಗಳಿವೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಚುನಾವಣೆಗಳಲ್ಲಿ ಸೋತ ಪ್ರಮುಖ ರಾಜಕಾರಣಿಗಳು ಮತ್ತು ಪ್ರಭಾವಿ ರಾಜಕಾರಣಿಗಳ ಹಿಂಬಾಲಕರು ಈ ‘ಕೋಟಾ’ದಡಿ ಮೇಲ್ಮನೆ ಪ್ರವೇಶಿಸುತ್ತಿದ್ದಾರೆ...

ಸಂಸದೀಯ ಪ್ರಜಾಸತ್ತೆ ವ್ಯವಸ್ಥೆಗೆ ಸಾಹಿತ್ಯ, ಸಂಗೀತ, ಕಲೆ, ಶಿಕ್ಷಣ, ಮಾಧ್ಯಮ, ಸಮಾಜಸೇವೆಯ ಗಂಧ ತೀಡಿ, ಶಾಸನ ರಚನೆಯ ವೇಳೆ ರಾಜಕೀಯಕ್ಕೆ ಮಿಗಿಲಾದ ಮಾನವೀಯ ಸ್ಪರ್ಶವೂ ಸಿಗಬೇಕೆಂಬ ಆಶಯದಿಂದ ವಿಧಾನ ಪರಿಷತ್ತು ಅಥವಾ ಮೇಲ್ಮನೆಯನ್ನು ಸೃಜಿಸಲಾಯಿತು. ಚುನಾವಣೆ ಎದುರಿಸಿ ಗೆಲ್ಲಲಾಗದ ಬಲಹೀನ ಸಮುದಾಯ, ಧ್ವನಿಯೇ ಇಲ್ಲದ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಆ ಜನವರ್ಗದ ಮಾತು ಕೇಳುವ ವೇದಿಕೆಯೂ ಇದಾಗಬೇಕೆಂಬ ಹಂಬಲವೂ ಇತ್ತು. ಸ್ಥಳೀಯ ಸಂಸ್ಥೆ ಹಾಗೂ ಪದವೀಧರ, ಶಿಕ್ಷಕರ ಪ್ರಾತಿನಿಧ್ಯಕ್ಕೂ ಅವಕಾಶ ಕಲ್ಪಿಸಿ, ಅವರ ಅನುಭವವು ಆಡಳಿತಕ್ಕೆ ದಕ್ಕಲಿ ಎಂಬ ಸಂಕಲ್ಪವೂ ಪರಿಷತ್ತಿನ ಸೃಷ್ಟಿಯ ಹಿಂದಿತ್ತು.  

ರಾಜಕೀಯೇತರ ನೆಲೆಯಿಂದ ಬಂದವರು ಮೇಲ್ಮನೆಯ ಘನತೆ ಹೆಚ್ಚಿಸಲು ನಡೆಸಬಹುದಾದ ಮೌಲಿಕ ಚರ್ಚೆ ಮತ್ತು ಸಂವಾದಕ್ಕೆ ಇಲ್ಲಿ ಆದ್ಯತೆ ಸಿಗಬೇಕೆಂಬ ಆಶಯವೂ ಇದನ್ನು ರಚಿಸಿದವರ ಹಿಂದಿತ್ತು. ಹೀಗಾಗಿಯೇ,  ಇದನ್ನು ‘ಚಿಂತಕರ ಚಾವಡಿ’ ಎಂದು ಕರೆಯುವ ಪರಿಪಾಟವಿದೆ. 

ADVERTISEMENT

ಪ್ರಜಾಪ್ರಭುತ್ವದಲ್ಲಿ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸುವ ಮತ್ತು ಆ ನಿಟ್ಟಿನಲ್ಲಿ ಪ್ರೌಢಿಮೆಯಿಂದ ಕೂಡಿದ ಚರ್ಚೆ, ಸಂವಾದ ಮತ್ತು ಶಾಸನ ರಚನೆಯಲ್ಲಿ ಇವರೆಲ್ಲರೂ ಪಾಲ್ಗೊಳ್ಳಬೇಕು ಎಂಬುದು ಮೇಲ್ಮನೆ ರಚನೆಯ ಉದ್ದೇಶವಾಗಿತ್ತು. ಹೀಗಾಗಿ ಇತ್ತೀಚಿನ ದಶಕಗಳಲ್ಲಿ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ, ಎಲ್.ಹನುಮಂತಯ್ಯ, ಮಹದೇವ ಬಣಕಾರ, ಏಜಾಸುದ್ದೀನ್‌, ಕಲಾವಿದರಾದ ಆರತಿ, ಅನಂತನಾಗ್, ಬಿ.ಜಯಮ್ಮ, ಜಯಮಾಲ, ಶ್ರೀನಾಥ್‌, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಶಿಕ್ಷಣ ತಜ್ಞರಾದ ಎಚ್‌.ನರಸಿಂಹಯ್ಯ, ಪ್ರೊ.ಎಂ.ಆರ್‌.ದೊರೆಸ್ವಾಮಿ, 
ಪ್ರೊ. ಪಿ.ವಿ. ಕೃಷ್ಣ ಭಟ್, ಪತ್ರಕರ್ತರಾದ ಖಾದ್ರಿ ಶಾಮಣ್ಣ, ಪಿ.ರಾಮಯ್ಯ, ಹಿಂದೂಸ್ತಾನಿ ಸಂಗೀತದ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್‌, ಸಮಾಜ ಸೇವೆ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ ಡಾ.ಎಂ.ಸಿ.ಮೋದಿ ಅಂತಹವರು ಮೇಲ್ಮನೆ ಮೆಟ್ಟಿಲು ಹತ್ತಲು ಸಾಧ್ಯವಾಯಿತು.

ಸಂವಿಧಾನದ ಅನುಚ್ಛೇದ 171(5)ರ ಅನ್ವಯ ರಾಜ್ಯಪಾಲರಿಂದ ನಾಮನಿರ್ದೇಶಿತರಾಗುವವರು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆಗಳಲ್ಲಿ ವಿಶೇಷ, ಪ್ರಾಯೋಗಿಕ ಜ್ಞಾನ ಮತ್ತು ಅನುಭವ ಪಡೆದಿರಬೇಕು. ಈ ಕ್ಷೇತ್ರಗಳಲ್ಲಿ ಇವರು ಸಮಾಜಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ. ಅಲ್ಲದೇ, ರಾಜಕಾರಣಿಗಳು ಕಾಣಲಾಗದ ಸಮಾಜದ, ಜನರ ಮತ್ತು ಸಮಸ್ಯೆಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ಇವರು ಹೊಂದಿರುತ್ತಾರೆ. ಇದು ಸರ್ಕಾರ ನಡೆಸುವವರಿಗೆ ಮಾರ್ಗದರ್ಶನವಾಗುತ್ತದೆ ಎಂಬ ಸದುದ್ದೇಶವೂ ಇದೆ. ಆದರೆ, ಇವರ ಸಲಹೆಯನ್ನು ಎಷ್ಟರ ಮಟ್ಟಿಗೆ ಪಡೆಯಲಾಗುತ್ತದೆ ಎಂಬುದು ಬೇರೆ ವಿಷಯ. ಆಯಾ ಕಾಲಕ್ಕೆ ರಚಿತವಾಗುವ ಸರ್ಕಾರವೂ ಈ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ ನಾಮ ನಿರ್ದೇಶನ ಮಾಡಬೇಕು ಎಂಬುದು ಆಶಯ.

ಇತ್ತೀಚಿನ ದಿನಗಳಲ್ಲಿ ಸಾಹಿತ್ಯ, ಕಲೆ ಹೆಸರಿನಲ್ಲಿ ಚುನಾವಣೆಯಲ್ಲಿ ಸೋತ ರಾಜಕಾರಣಿಗಳನ್ನೇ ಹಿಂಬಾಗಿಲ ಮೂಲಕ ತಂದು ಕೂರಿಸುವ ಪರಿಪಾಟ ನಡೆದಿದೆ.

ಹೊರಟ್ಟಿ ಪತ್ರ: ಪರಿಷತ್ತಿನ ನಾಮನಿರ್ದೇಶನ ಹಾಗೂ ಅದರಿಂದಾಗಿರುವ ಪರಿಣಾಮಗಳಿಂದ ಬೇಸತ್ತ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇತ್ತೀಚೆಗೆ ಪತ್ರ ಬರೆದು ಗಮನ ಸಳೆದಿದ್ದರು.

‘ಸಂವಿಧಾನದ ಅನ್ವಯ ವಿಧಾನ ಪರಿಷತ್ತು ರಚನೆಗೊಂಡಿದೆ. ಇದನ್ನು ಹಿರಿಯರ ಮನೆ, ಚಿಂತಕರ ಚಾವಡಿ ಎಂದೂ ಕರೆಯಲಾಗುತ್ತದೆ. ಹಲವು ಕ್ಷೇತ್ರಗಳ ಗಣ್ಯರು ಮೇಲ್ಮನೆ ಪ್ರವೇಶಿಸಿದ ಕಾರಣ ಇದರ ಘನತೆ, ಗಾಂಭೀರ್ಯ ಮತ್ತು ಹಿರಿಮೆಯೂ ಹೆಚ್ಚಿದೆ. ವಿಧಾನ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆಯಲ್ಲಿ 11 ಸ್ಥಾನಗಳಿಗೆ ಸಂವಿಧಾನದ ಅನುಚ್ಛೇದ 171(3)(ಇ) ಅನ್ವಯ (5)ನೇ ಖಂಡದ ಉಪಬಂಧಗಳಿಗೆ ಅನುಸಾರ ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುತ್ತಾರೆ. ಇದರ ಪ್ರಕಾರ ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆ ಕ್ಷೇತ್ರದಿಂದ ಆಯ್ಕೆ ಮಾಡಬೇಕು. ಈಗ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಬೇಕಿದೆ. ಇದಕ್ಕೆ ಸೂಕ್ತ ಮತ್ತು ಅರ್ಹ ವ್ಯಕ್ತಿಗಳನ್ನು ನಾಮ ನಿರ್ದೇಶನಗೊಳಿಸಲು ಶಿಫಾರಸು ಮಾಡುವ ಹೊಣೆಗಾರಿಕೆ ನಿಮ್ಮ (ಕೆಪಿಸಿಸಿ ಅಧ್ಯಕ್ಷರು) ಮೇಲಿದೆ. ಸಂವಿಧಾನದ ಆಶೋತ್ತರ ಅನ್ವಯ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಮೇಲ್ಮನೆಯಲ್ಲಿ ಕಾರ್ಯ ಕಲಾಪದ ಗುಣಮಟ್ಟದ ಹೆಚ್ಚಿಸಲು ಸಾಧ್ಯ ಎಂಬುದು ನಮ್ಮ ಅಭಿಲಾಷೆ’ ಎಂದು ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಇತ್ತೀಚಿನ ದಿನಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸೋತವರು ಮತ್ತು ಪ್ರಭಾವಿ ನಾಯಕರ ಹಿಂದೆ ಓಡಾಡುವವರು ನಾಮ ನಿರ್ದೇಶನಗೊಳ್ಳುತ್ತಿದ್ದಾರೆ. ಈ ಪರಿಪಾಟ ಎಲ್ಲ ಸರ್ಕಾರದ ಅವಧಿಯಲ್ಲೂ ನಡೆದುಕೊಂಡು ಬಂದಿದೆ. ಈ ಬಾರಿ ನೀವು ಇಂತಹದ್ದೊಂದು ಕೆಟ್ಟ ಪರಂಪರೆಗೆ ಕಡಿವಾಣ ಹಾಕಬೇಕು. ಈಗಾಗಲೇ ನಾಲ್ಕು ಜನರ ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗಿದೆ. ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಶಿಕ್ಷಣ, ಸಮಾಜಸೇವೆ ಕ್ಷೇತ್ರದಲ್ಲಿ ಸಲ್ಲಿಸಿದವರನ್ನೇ ನಾಮ ನಿರ್ದೇಶನ ಮಾಡುವುದು ಸೂಕ್ತ ಎಂಬ ಕೂಗು ಸಾರ್ವಜನಿಕರಿಂದಲೂ ಕೇಳಿ ಬಂದಿದೆ’ ಎಂದು ಹೇಳಿದ್ದಾರೆ.

ರಾಜಕೀಯ ಆಯ್ಕೆಗಳು

ರಾಮಕೃಷ್ಣ ಹೆಗಡೆ

1983ರಲ್ಲಿ ಮೊದಲ ಬಾರಿಗೆ ಜನತಾಪಕ್ಷವು ಮಿತ್ರ ಪಕ್ಷಗಳೊಂದಿಗೆ ಅಧಿಕಾರ ಹಿಡಿದಾಗ, ವಿಧಾನಸಭೆ ಅಥವಾ ಪರಿಷತ್ತಿನ ಸದಸ್ಯರಾಗಿರದ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದರು. ತತ್‌ಕ್ಷಣಕ್ಕಾಗಿ ಅವರು ಪರಿಷತ್ತಿನ ಸದಸ್ಯರಾದರು. ಕೆಲ ತಿಂಗಳ ಬಳಿಕ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆದರು. ಪಿ.ಜಿ.ಆರ್‌.ಸಿಂಧ್ಯ ಅವರು ಹೆಗಡೆ ಅವರಿಗೆ ಕ್ಷೇತ್ರ ತೆರವು ಮಾಡಿಕೊಟ್ಟಿದ್ದರು.

ಡಿ.ವಿ.ಸದಾನಂದಗೌಡ

ಡಿ.ವಿ.ಸದಾನಂದಗೌಡ ಅವರು 2011ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದರು. ಮುಖ್ಯಮಂತ್ರಿಯಾದ ಬಳಿಕ ಅವರು ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಯಾವುದಾದರೂ ಸದನದ ಸದಸ್ಯರಾಗಿರದ ಕಾರಣಕ್ಕೆ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. 2013ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ಅವರು ಕಾರ್ಯನಿರ್ವಹಿಸಿದರು.

ಬಿ.ಎಸ್‌.ಯಡಿಯೂರಪ್ಪ

1999ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಯಡಿಯೂರಪ್ಪ ಅವರನ್ನು 2000ರಲ್ಲಿ ಮೇಲ್ಮನೆಗೆ ಆಯ್ಕೆ ಮಾಡಲಾಯಿತು. ಅವರು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದರು.

ವಿ.ಸೋಮಣ್ಣ

2008ರಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದ ವಿ.ಸೋಮಣ್ಣ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿ ಸೇರಿದರು. ಅವರನ್ನು ಸಚಿವರಾಗಿ ಮಾಡಲಾಯಿತು. ನಿಯಮದಂತೆ ಆರು ತಿಂಗಳೊಳಗೆ ವಿಧಾನಸಭೆ ಅಥವಾ ಪರಿಷತ್ತಿನ ಸದಸ್ಯರಾಗಲೇಬೇಕಿತ್ತು. ಉಪಚುನಾವಣೆಯಲ್ಲಿ ಸೋತ ಸೋಮಣ್ಣ ಅವರನ್ನು 2009ರಲ್ಲಿ ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡಲು ಸರ್ಕಾರ ಶಿಫಾರಸು ಮಾಡಿತು. ಆಗ ರಾಜ್ಯಪಾಲರಾಗಿದ್ದ ಎಚ್.ಆರ್. ಭಾರದ್ವಾಜ್ ಅವರು, ರಾಜಕೀಯ ನಾಮನಿರ್ದೇಶನ ಎಂಬ ಕಾರಣ ಮುಂದೊಡ್ಡಿ ತಿರಸ್ಕರಿಸಿದರು. ಎರಡೂ ಮನೆಯ ಸದಸ್ಯರಾಗದ ಕಾರಣಕ್ಕೆ ಸೋಮಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಮತ್ತೆ ಪರಿಷತ್‌ ಸದಸ್ಯರಾಗಲು 2010ರವರೆಗೆ ಕಾಯಬೇಕಾಯಿತು. 2010ರಲ್ಲಿ ಮೇಲ್ಮನೆ ಪ್ರವೇಶಿಸಿ, ಸಚಿವರಾದರು.

ಜಗ್ಗೇಶ್‌

2008ರಲ್ಲಿ ತುರುವೇಕರೆ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಗೆದ್ದಿದ್ದ ಜಗ್ಗೇಶ್‌ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದರು. ಇವರನ್ನು ಸಿನಿಮಾ ವಿಭಾಗದಿಂದ ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಯಿತು.

ಎಚ್‌.ವಿಶ್ವನಾಥ್‌

2019ರಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಎಚ್‌.ವಿಶ್ವನಾಥ್‌ ಅವರು ವಿಧಾನಸಭೆಯ ಉಪಚುನಾವಣೆಯಲ್ಲಿ ಸೋತರು. 2020ರಲ್ಲಿ ಅವರನ್ನು ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲಾಯಿತು.

ಸಿ.ಪಿ.ಯೋಗೇಶ್ವರ

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಸಿ.ಪಿ.ಯೋಗೇಶ್ವರ ಅವರು, ಆಗ ಅಸ್ತಿತ್ವದಲ್ಲಿದ್ದ ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರ ಪತನಗೊಳಿಸುವ ಕಾರ್ಯಾಚರಣೆಯ ಭಾಗವಾಗಿದ್ದರು. ಬಿಜೆಪಿ ಸರ್ಕಾರ ಬಂದ ಬಳಿಕ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. 2020ರಲ್ಲಿ ಸಿ.ಪಿ.ಯೋಗೇಶ್ವರ ಅವರನ್ನು ಸಿನಿಮಾ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡಿ, ಸಚಿವ ಸ್ಥಾನ ನೀಡಲಾಯಿತು.

ಎಂ.ಪಿ.ಪ್ರಕಾಶ್

1999ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಎಂ.ಪಿ.ಪ್ರಕಾಶ್ ಅವರನ್ನು 2000ರಲ್ಲಿ ಮೇಲ್ಮನೆಗೆ ಆಯ್ಕೆ ಮಾಡಲಾಯಿತು.

ಕೆ.ಎಸ್‌.ಈಶ್ವರಪ್ಪ

2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಕೆ.ಎಸ್‌.ಈಶ್ವರಪ್ಪ ಅವರನ್ನು ವಿಧಾನಪರಿಷತ್ತಿಗೆ ಕಳುಹಿಸಲಾಯಿತು. 2014ರಲ್ಲಿ ಮೇಲ್ಮನೆ ವಿರೋಧಪಕ್ಷದ ನಾಯಕರಾಗಿ ಕೆಲಸ ಮಾಡಿದರು.

ಜಿ.ಪರಮೇಶ್ವರ

2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್‌ ಪಕ್ಷ ಮೇಲ್ಮನೆಗೆ ಕಳುಹಿಸಿತು.

ಜಗದೀಶ ಶೆಟ್ಟರ್

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದಾಗ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಯಿತು. ಆದರೆ ಅವರು 2024ರ ಲೋಕಸಭಾ ಚುನಾವಣೆ ಸಂದರ್ಭ ಮತ್ತೆ ಬಿಜೆಪಿ ಸೇರಿದರು.

ಸಿ.ಟಿ.ರವಿ

2023ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವ ಅನುಭವಿಸಿದ ಸಿ.ಟಿ.ರವಿ ಅವರನ್ನು ಮೇಲ್ಮನೆಗೆ ಕಳುಹಿಸಲಾಯಿತು.

ಛಲವಾದಿ ನಾರಾಯಣಸ್ವಾಮಿ

2018ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಯಿತು. ಬಳಿಕ ಅವರು ವಿರೋಧ ಪಕ್ಷದ ನಾಯಕ ಹುದ್ದೆಗೇರಿದರು.

ಆಯ್ಕೆ ವಿಧಾನ

ವಿಧಾನ ಪರಿಷತ್‌ 1957ರಲ್ಲಿ ಅಸ್ತಿತ್ವಕ್ಕೆ ಬಂದಿತು. ಆಗ ಸದಸ್ಯರ ಸಂಖ್ಯೆ 63 ಇತ್ತು. 1987ರಲ್ಲಿ ಈ ಸಂಖ್ಯೆಯನ್ನು 75ಕ್ಕೆ ಏರಿಸಲಾಯಿತು. 75ರಲ್ಲಿ 25 ಸದಸ್ಯರನ್ನು ವಿಧಾನಸಭೆಯಿಂದ, 25 ಸದಸ್ಯರನ್ನು ಸ್ಥಳೀಯ ಸಂಸ್ಥೆಗಳಿಂದ, ತಲಾ 7 ಸದಸ್ಯರನ್ನು ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಶಿಫಾರಸಿನ ಅನುಸಾರ 11 ಸದಸ್ಯರನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.