ADVERTISEMENT

ಆಳ–ಅಗಲ: ತೆರಿಗೆ ಕಟ್ಟಿದರೂ ಹೆದ್ದಾರಿ ಬಳಕೆಗೆ ಶುಲ್ಕ

ಜಯಸಿಂಹ ಆರ್.
Published 17 ಆಗಸ್ಟ್ 2023, 23:52 IST
Last Updated 17 ಆಗಸ್ಟ್ 2023, 23:52 IST
   

ವಾಹನ ಖರೀದಿ ವೇಳೆ ಅದರ ಎಕ್ಸ್‌ಷೋರೂಂ ಬೆಲೆಯ ಮೇಲೆ ಶೇ 32ರಿಂದ ಶೇ 50ರವರೆಗೂ ತೆರಿಗೆ (ಜಿಎಸ್‌ಟಿ ಮತ್ತು ಸೆಸ್‌ ಒಳಗೊಂಡು), ನೋಂದಣಿ ವೇಳೆ ರಸ್ತೆ ತೆರಿಗೆ ಕಟ್ಟಲಾಗುತ್ತದೆ. ಇದರ ಜತೆಯಲ್ಲಿ ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲೂ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌, ಹೆಚ್ಚುವರಿ ಅಬಕಾರಿ ಸುಂಕಗಳನ್ನು ಕಟ್ಟಲಾಗುತ್ತದೆ. ಇಷ್ಟೆಲ್ಲಾ ಸ್ವರೂಪದ ತೆರಿಗೆ ಕಟ್ಟಿದ್ದರೂ, ರಾಷ್ಟ್ರೀಯ ಹೆದ್ದಾರಿ ಮತ್ತು ಆಯ್ದ ರಾಜ್ಯ ಹೆದ್ದಾರಿಗಳನ್ನು ಬಳಸಲು ಬಳಕೆದಾರರ ಶುಲ್ಕ (ಟೋಲ್‌) ಕಟ್ಟಬೇಕು. ಹೀಗೆ ಸಂಗ್ರಹಿಸುತ್ತಿರುವ ತೆರಿಗೆಯನ್ನು ಕೇಂದ್ರ ಸರ್ಕಾರವು ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದರಿಂದಲೇ ಹೆದ್ದಾರಿಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಉಂಟಾಗುತ್ತಿದೆ. ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಕಾನೂನಿನಲ್ಲಿ ಅಗತ್ಯ ತಿದ್ದುಪಡಿಗಳನ್ನು ಸರ್ಕಾರ ಮಾಡಿಕೊಂಡಿದೆಯಾದರೂ, ಅಂತಿಮವಾಗಿ ವಾಹನ ಮಾಲೀಕರು ಮತ್ತು ಬಳಕೆದಾರರು ‘ಟೋಲ್‌’ ಹೊರೆಯನ್ನು ಹೊರಬೇಕಾಗಿದೆ

ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ರಸ್ತೆ ಸೆಸ್‌ ಎಂಬ ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುತ್ತಿತ್ತು. 1989ರಲ್ಲಿ ಜಾರಿಗೆ ಬಂದಿದ್ದ ಈ ತೆರಿಗೆಯ ಮೂಲಕ ಸಂಗ್ರಹಿಸಿದ ಹಣವನ್ನು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇತುವೆಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕಿತ್ತು. ಹೀಗೆ ಸಂಗ್ರಹಿಸಿದ ಸೆಸ್‌ ಅನ್ನು ಸಂಪೂರ್ಣವಾಗಿ ಕೇಂದ್ರ ರಸ್ತೆ ನಿಧಿಗೆ ವರ್ಗಾಯಿಸಲಾಗುತ್ತಿತ್ತು. ಆ ನಿಧಿಯಲ್ಲಿನ ಹಣವನ್ನು ಬಳಸಿಕೊಂಡು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತಿತ್ತು. ಹೀಗಿದ್ದೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅಗತ್ಯವಾದ ಅನುದಾನದ ಕೊರತೆಯನ್ನು ಖಾಸಗಿ ವಲಯದ ಭಾಗವಹಿಸುವಿಕೆಯಿಂದ ತುಂಬಿಕೊಳ್ಳಲಾಗುತ್ತಿತ್ತು. ಖಾಸಗಿಯವರ ಪಾಲುದಾರಿಕೆಯಿಂದ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಗಳಿಗೆ ಬಳಕೆದಾರರ ಶುಲ್ಕ ವಿಧಿಸಲಾಗುತ್ತಿತ್ತು. ಇದಕ್ಕಾಗಿ 2008ರ ಹೆದ್ದಾರಿ ಬಳಕೆದಾರರ ಶುಲ್ಕ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಆದರೆ ಈಗ ದೇಶದಲ್ಲಿ ನಿರ್ಮಿಸಲಾಗುತ್ತಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗೂ ಶುಲ್ಕ ವಿಧಿಸಲಾಗುತ್ತಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಧಿಸಲಾಗುವ ರಸ್ತೆ ಸೆಸ್‌ ಅನ್ನು ಅನ್ಯ ಉದ್ದೇಶಗಳಿಗೂ ಬಳಸಿಕೊಳ್ಳಲು ಕೇಂದ್ರ ಸರ್ಕಾರವು 2018ರಲ್ಲಿ ಸಂಬಂಧಿತ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾಡಿಕೊಂಡಿತ್ತು. 2018ರಲ್ಲಿ ಜಾರಿಗೆ ತರಲಾದ ಹಣಕಾಸು ಮಸೂದೆಯಲ್ಲಿ ‘ರಸ್ತೆ ಸೆಸ್‌’ ನಿಯಮಗಳಿಗೆ ತಿದ್ದುಪಡಿ ತರಲಾಯಿತು. ‘ರಸ್ತೆ ಸೆಸ್‌’ ಎಂಬುದನ್ನು ‘ರಸ್ತೆ ಮತ್ತು ಮೂಲಸೌಕರ್ಯ ಸೆಸ್‌’ ಎಂದು ಬದಲಿಸಲಾಯಿತು. ಮೊದಲು ಈ ಸೆಸ್‌ ಅನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆಗಷ್ಟೇ ಬಳಸಲಾಗುತ್ತಿತ್ತು. 2018ರಲ್ಲಿ ತಿದ್ದುಪಡಿ ತರುವ ಮೂಲಕ ರೈಲು ಸೌಕರ್ಯ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ–ನಿರ್ವಹಣೆ, ಬಂದರುಗಳ ನಿರ್ಮಾಣ–ನಿರ್ವಹಣೆ, ಶುದ್ಧ ನೀರಿನ ಪೂರೈಕೆ ಯೋಜನೆ ಸೇರಿದಂತೆ ಅನ್ಯ ಸ್ವರೂಪದ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಂಡಿದೆ. ಹೀಗಾಗಿ ಹೆದ್ದಾರಿ ಅಭಿವೃದ್ಧಿಗೆ ಈ ಸೆಸ್‌ ಅಡಿಯಲ್ಲಿ ರೂಪಿಸಲಾದ ನಿಧಿಯಲ್ಲಿ ಅಗತ್ಯ ಅನುದಾನ ಇಲ್ಲವಾಗಿದೆ.

ADVERTISEMENT

ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಮಾತ್ರವಲ್ಲದೆ, ಪೆಟ್ರೋಲ್‌ ಮತ್ತು ಡೀಸೆಲ್ ಮೇಲೆ ‘ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ’ವನ್ನೂ ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಈ ಎರಡೂ ತೆರಿಗೆಗಳನ್ನು ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಹಂಚಿಕೊಳ್ಳುವಂತಿಲ್ಲ. ಬದಲಿಗೆ ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಬಳಸಿಕೊಳ್ಳುತ್ತದೆ. ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ಸಂಗ್ರಹವು ಈಚಿನ ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಎರಡೂ ಸ್ವರೂಪದ ತೆರಿಗೆಗಳ ಮೂಲಕ 2022–23ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ₹ 2ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿದೆ. 2023–24ನೇ ಸಾಲಿನಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಸಂಗ್ರಹದ ಗುರಿಯನ್ನು ಕಡಿತ ಮಾಡಲಾಗಿದೆ. ಆದರೆ, ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ಸಂಗ್ರಹದ ಗುರಿಯನ್ನು ಹೆಚ್ಚಿಸಿಕೊಳ್ಳಲಾಗಿದೆ. ಎರಡೂ ತೆರಿಗೆಗಳ ಮೂಲಕ ಈ ಆರ್ಥಿಕ ವರ್ಷದಲ್ಲೂ ₹2.25 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರೆ, ರಸ್ತೆಗಳು, ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿ ಮತ್ತು ಸೇತುವೆಗಳ ಅಭಿವೃದ್ಧಿಗೆಂದು ತೆಗೆದಿರಿಸಿದ ಅನುದಾನ ₹1.07 ಲಕ್ಷ ಕೋಟಿ ಮಾತ್ರ.

ಆಧಾರ: ಹಣಕಾಸು ಕಾಯ್ದೆ–2002, ಹಣಕಾಸು ಕಾಯ್ದೆ–2018, ಕೇಂದ್ರ ಸರ್ಕಾರದ ಬಜೆಟ್‌ಗಳು, ಸಂಸತ್ತಿಗೆ ಹಣಕಾಸು ಸಚಿವಾಲಯ ನೀಡಿರುವ ಮಾಹಿತಿಗಳು, ಪಿಟಿಐ

ಹೆದ್ದಾರಿ ಶುಲ್ಕ ಸಂಗ್ರಹದಲ್ಲಿ ನಿಯಮ ಉಲ್ಲಂಘನೆ

ರಾಜ್ಯದ ಬೇರೆ–ಬೇರೆ ಜಿಲ್ಲೆಗಳನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಲವು ಟೋಲ್‌ ಸಂಗ್ರಹ ಘಟಕಗಳು ಇವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ. ಅಂತರದ ಒಳಗೆ ಎರಡು ಟೋಲ್‌ ಘಟಕಗಳು ಇರಬಾರದು. 60 ಕಿ.ಮೀ. ಅಂತರದಲ್ಲಿ ಇರುವ ಎಲ್ಲಾ ಟೋಲ್‌ಗಳನ್ನು ತೆಗೆದುಹಾಕಲಾಗುತ್ತದೆ ಎಂದು ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದ್ದರು. ಆದರೆ, ಇದಿನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಜತೆಗೆ ರಾಜ್ಯದಲ್ಲಿನ ಕೆಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಡಿಮೆ ಅಂತರ ಕ್ರಮಿಸಿದರೂ, ಟೋಲ್‌ ವ್ಯಾಪ್ತಿಯಲ್ಲಿನ ಇಡೀ ಹೆದ್ದಾರಿಗೆ ಅನ್ವಯವಾಗುವ ಶುಲ್ಕವನ್ನು ಭರಿಸಬೇಕು. ಶುಲ್ಕ ಸಂಗ್ರಹ ಸಂಬಂಧ ಇಂತಹ ಹಲವು ಸಮಸ್ಯೆಗಳು ರಾಜ್ಯದಲ್ಲಿವೆ.

* ಹೊಸಪೇಟೆ–ವಿಜಯಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೊಪ್ಪಳ ತಾಲ್ಲೂಕಿನ ಶಹಾಪುರ ಬಳಿ ಹಾಗೂ ಕುಷ್ಟಗಿ ತಾಲ್ಲೂಕಿನ ಕೆ. ಬೊದೂರು ಗ್ರಾಮದ ಬಳಿ ಟೋಲ್‌ ಗೇಟ್ ನಿರ್ಮಿಸಲಾಗಿದೆ. ಇದರ ನಡುವಿನ ಅಂತರ 50 ಕಿ.ಮೀ

* ರಾಷ್ಟ್ರೀಯ ಹೆದ್ದಾರಿ 67ರ ಹುಬ್ಬಳ್ಳಿ–ಹೊಸಪೇಟೆ ಮಾರ್ಗ
ದಲ್ಲಿ ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದ ಬಳಿ ಟೋಲ್‌ ನಿರ್ಮಿಸಲಾಗಿದೆ. ಇಲ್ಲಿಂದ 7 ಕಿ.ಮೀ. ದೂರ ದಲ್ಲಿ ಶಹಾಪುರ–ಕೆರೆಹಳ್ಳಿ ಬಳಿ ಇನ್ನೊಂದು ಟೋಲ್‌ ಇದೆ.

* ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು (ಎನ್‌ಎಚ್‌ 75) ಟೋಲ್‌ಗೇಟ್‌ ಹಾಗೂ ಉಳ್ಳಾಲ ತಾಲ್ಲೂಕಿನ ತಲಪಾಡಿ (ಎನ್‌ಎಚ್‌ 66) ಟೋಲ್‌ ಗೇಟ್‌ಗಳ ನಡುವಿನ ಅಂತರ 45 ಕಿ.ಮೀ ಇದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ತಲಪಾಡಿ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಹೆಜಮಾಡಿ ಟೋಲ್‌ಗಳ ನಡುವಿನ ಅಂತರ 51 ಕಿ.ಮೀ ಮಾತ್ರ.

* ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ, ಕಾಪು ತಾಲ್ಲೂಕಿನ ಹೆಜಮಾಡಿ ಹಾಗೂ ಬೈಂದೂರು ತಾಲ್ಲೂಕಿನ ಶಿರೂರು ಟೋಲ್‌ಗೇಟ್‌ಗಳಿವೆ. 60 ಕಿ.ಮೀ ಅಂತರದಲ್ಲಿ ಮೂರು ಟೋಲ್‌ಗಳು ಕಾರ್ಯ ನಿರ್ವಹಿಸುತ್ತಿವೆ.

* ಮೈಸೂರು–ಊಟಿ ರಾಷ್ಟ್ರೀಯ ಹೆದ್ದಾರಿ 65 ಇನ್ನೂ ದ್ವಿಪಥ ರಸ್ತೆಯಾಗಿಯೇ ಇದ್ದು, ಯಾವೊಂದು ಸೌಲಭ್ಯವೂ ಇಲ್ಲ. ಹೀಗಿದ್ದೂ ಇಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದೆ.

* ಮೈಸೂರು–ನಂಜನಗೂಡು ಗಡಿಭಾಗದ ಕಡಕೊಳ ಟೋಲ್‌ ಘಟಕದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ₹50ರಂತೆ ಟೋಲ್ ಸಂಗ್ರಹಿಸಲಾಗುತ್ತಿದೆ. ಸ್ಥಳೀಯರಿಗೆ ಈ ಶುಲ್ಕದಲ್ಲಿ ಶೇ 50 ವಿನಾಯಿತಿ ನೀಡಿದ್ದರೂ, ವಾಹನಗಳ ನೋಂದಣಿ ಸಂಖ್ಯೆ ಕಡ್ಡಾಯವಾಗಿ ಸ್ಥಳೀಯವಾಗಿ ಇರಬೇಕು ಎಂಬ ನಿಯಮ ಮಾಡಿದ್ದಾರೆ. ಇದರಿಂದಾಗಿ ಸ್ಥಳೀಯರು ಹಾಗೂ ಟೋಲ್‌ ಸಿಬ್ಬಂದಿ ನಡುವೆ ನಿತ್ಯ ಜಗಳ ಸಾಮಾನ್ಯ ಎಂಬಂತೆ ಆಗಿದೆ.

* ಮೈಸೂರು ತಾಲ್ಲೂಕಿನ ತಿ. ನರಸೀಪುರ ಬಳಿ ಇರುವ ಎನ್‌ಎಚ್‌ 766 ಟೋಲ್‌ನಲ್ಲೂ ಯಾವುದೇ ಸೌಕರ್ಯ ಇರದಿದ್ದರೂ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

* ಬೆಂಗಳೂರು–ಮಂಗಳೂರು ಹೆದ್ದಾರಿ–75ರಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಬರುವಷ್ಟರಲ್ಲಿ 4 ಟೋಲ್‌ ಕೇಂದ್ರಗಳು ಸಿಗುತ್ತವೆ. ನೆಲಮಂಗಲ, ದೇವಿಹಳ್ಳಿ ಹಾಗೂ ಕರ್ಬೈಲು (ಬೆಳ್ಳೂರು ಕ್ರಾಸ್‌), ಶಾಂತಿಗ್ರಾಮ ಸೇರಿದಂತೆ 160 ಕಿ.ಮೀ. ವ್ಯಾಪ್ತಿಯಲ್ಲಿ 4 ಟೋಲ್‌ಗೇಟ್‌ಗಳಿವೆ. ಶಾಂತಿಗ್ರಾಮದ ಬಳಿ ಸರ್ವೀಸ್‌ ರಸ್ತೆ ಸೇರಿದಂತೆ ಯಾವುದೇ ಅಗತ್ಯ ಸೌಕರ್ಯಗಳನ್ನು ಕಲ್ಪಿಸದೇ ಟೋಲ್‌ ವಸೂಲಿ ಮಾಡಲಾಗುತ್ತಿದೆ.

* ತುಮಕೂರಿನ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿಯ ಜಾಸ್‌ ಟೋಲ್‌ ದಾಟಿ ಜಮೀನಿಗೆ ಹೋಗಲು ರೈತರು ತಿಂಗಳ ಪಾಸ್‌ ಪಡೆಯಬೇಕಾಗಿದೆ. ಅದೇ ರೀತಿ  ತಿಪಟೂರು ತಾಲ್ಲೂಕಿನ ಹತ್ಯಾಳು ಬಳಿ ಬೆಂಗಳೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ–206 ಟೋಲ್‌ ಪ್ಲಾಜಾ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್‌ ಸಂಗ್ರಹಿಸಲಾಗುತ್ತಿದೆ.

* ತುಮಕೂರಿನ ತಿಪಟೂರು ತಾಲ್ಲೂಕಿನ ಹತ್ಯಾಳು ಬಳಿ ಬೆಂಗಳೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿದೆ. ಅಗತ್ಯ ಸೌಲಭ್ಯ ಕಲ್ಪಿಸದೆ ಟೋಲ್‌ ಪಡೆಯುತ್ತಿದ್ದಾರೆ.

* ತುಮಕೂರಿನಿಂದ ಬೆಂಗಳೂರಿನ ನಾಗಸಂದ್ರ ನಡುವೆ 60 ಕಿ.ಮೀ.ಗೂ ಕಡಿಮೆ ಅಂತರದಲ್ಲಿ ಮೂರು ಟೋಲ್‌ ಘಟಕಗಳು ಇವೆ.

ಮಾಹಿತಿ: ಪ್ರಮೋದ, ಶಶಿಕಾಂತ ಎಸ್‌. ಶೆಂಬೆಳ್ಳಿ, ಪ್ರವೀಣ್‌ ಕುಮಾರ್‌ ಪಿ.ವಿ, ಬಾಲಚಂದ್ರ ಎಚ್‌., ವಿಜಯಕುಮಾರ್ ಎಸ್‌.ಕೆ., ಆರ್‌.ಜಿತೇಂದ್ರ, ವಿ.ಸೂರ್ಯನಾರಾಯಣ, ಎಂ.ಎನ್‌.ಯೋಗೇಶ್‌, ಚಿದಂಬರ ಪ್ರಸಾದ್, ಬಸವರಾಜ ಸಂಪಳ್ಳಿ, ಜಿ.ಬಿ. ನಾಗರಾಜ್, ಮೈಲಾರಿ ಲಿಂಗಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.