
ಭಾರತದಲ್ಲಿ ಮರಣದಂಡನೆ ವಿಧಿಸಲಾಗಿರುವ ಅಪರಾಧಿಗಳಿಗೆ ಯಾವ ವಿಧಾನದ ಮೂಲಕ ಪ್ರಾಣಹರಣ ಮಾಡಬೇಕು ಎನ್ನುವುದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದು, ಚರ್ಚೆಗೆ ಗ್ರಾಸವಾಗಿದೆ. ಗಲ್ಲಿಗೇರಿಸುವುದರ ಬದಲು ವಿಷದ ಇಂಜೆಕ್ಷನ್ ನೀಡುವ ಮೂಲಕ ಅಪರಾಧಿ ಸಾಯುವಂತೆ ಮಾಡಬೇಕು ಎನ್ನುವ ವಾದ ಕೇಳಿಬಂದಿದೆ. ಆದರೆ, ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಯಾವ ಬದಲಾವಣೆಗೂ ಸಿದ್ಧವಿರುವಂತೆ ಕಾಣುತ್ತಿಲ್ಲ
ಮರಣದಂಡನೆಯನ್ನು ಅನೇಕ ದೇಶಗಳಲ್ಲಿ ರದ್ದುಪಡಿಸಲಾಗಿದೆ. ಭಾರತದಲ್ಲಿ ವಿರಳ ಪ್ರಕರಣಗಳಲ್ಲಿ ಮಾತ್ರವೇ ಮರಣದಂಡನೆ ವಿಧಿಸಲಾಗುತ್ತಿದೆ. ಈ ಶಿಕ್ಷೆ ವಿಧಿಸಲ್ಪಟ್ಟವರ ಪ್ರಾಣಹರಣವನ್ನು ಯಾವ ವಿಧಾನದ ಮೂಲಕ ಮಾಡಬೇಕು ಎನ್ನುವುದು ದೇಶದಲ್ಲಿ ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ.
ಅಪರಾಧಿಗಳಿಗೆ ನೇಣು ಹಾಕುವುದು ಅತ್ಯಂತ ಕ್ರೂರ ಹಾಗೂ ಅನಾಗರಿಕ ಪದ್ಧತಿ. ಇದು ಹಳೆಯ ಹಾಗೂ ಅತ್ಯಂತ ಯಾತನಾದಾಯಕ ಪದ್ಧತಿಯಾಗಿದೆ ಎನ್ನುವ ಆಕ್ಷೇಪಣೆಗಳು ಹಿಂದೆಯೇ ಕೇಳಿಬಂದಿದ್ದವು. ಗಲ್ಲಿಗೇರಿಸುವಾಗ ಕುತ್ತಿಗೆಯ ಮೂಳೆ ಮುರಿಯುವುದು, ಕಣ್ಣು ಗುಡ್ಡೆ ಹೊರಬರುವುದು, ನಾಲಗೆ ಹೊರಚಾಚಿಕೊಂಡಿರುವುದು, ದೇಹದ ಭಾಗಗಳು ನೋಡಲಾಗದಂತೆ ವಿರೂಪಗೊಳ್ಳುವುದು ವರದಿಯಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧಿಗಳು ಮಲ, ಮೂತ್ರ ವಿಸರ್ಜನೆಯನ್ನೂ ಮಾಡಿಕೊಳ್ಳುತ್ತಾರೆ. ಈ ವಿಧಾನದಲ್ಲಿ ಅಪರಾಧಿಯ ಪ್ರಾಣ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಕ್ಷಿಪ್ರವಾದ, ಕಡಿಮೆ ಯಾತನೆಯ ಮಾರ್ಗಗಳನ್ನು ಹುಡುಕಬೇಕು; ವಿಷದ ಚುಚ್ಚುಮದ್ದು ನೀಡುವುದು, ಗುಂಡು ಹಾರಿಸಿ ಸಾಯಿಸುವುದು, ವಿದ್ಯುತ್ ಸ್ಪರ್ಶದ ಮೂಲಕ ಸಾವು, ಸಾರಜನಕದಿಂದ ಉಸಿರುಗಟ್ಟಿಸಿ ಸಾಯುವಂತೆ ಮಾಡುವುದು.. ಹೀಗೆ ಮರಣದಂಡನೆ ಜಾರಿಗೆ ಹಲವು ಪರ್ಯಾಯ ಮಾರ್ಗಗಳಿದ್ದು, ಅವುಗಳನ್ನು ಪರಿಗಣಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.
ಆದರೆ, ಗಲ್ಲಿಗೇರಿಸುವ ವಿಧಾನವನ್ನು ಪುನರ್ ಪರಿಶೀಲಿಸಬೇಕು ಎಂದು ಭಾರತದ ಕಾನೂನು ಆಯೋಗವು 2003ರಲ್ಲಿ ಸೂಚಿಸಿತು. ವಿಷದ ಇಂಜೆಕ್ಷನ್ ನೀಡುವುದು ಹೆಚ್ಚು ಮಾನವೀಯವಾಗಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಧಾನವನ್ನು ಬಳಸಲಾಗುತ್ತಿದೆ ಎನ್ನುವುದು ಆಯೋಗದ ಅಭಿಪ್ರಾಯವಾಗಿತ್ತು.
ನೇಣಿಗೇರಿಸುವುದಕ್ಕಿಂತ ಇತರ ಮಾರ್ಗಗಳು ಕಡಿಮೆ ಯಾತನಾದಾಯಕ ಎನ್ನುವುದನ್ನು ನಿರಾಕರಿಸಿದ್ದ ಕೇಂದ್ರ ಸರ್ಕಾರವು, ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ 2018ರಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿತ್ತು. ಇದರ ಬಗ್ಗೆ ತಜ್ಞರ ಸಮಿತಿ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು 2023ರಲ್ಲಿ ತಿಳಿಸಿದ್ದ ನ್ಯಾಯಾಲಯವು, ಈ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ಕೇಂದ್ರವನ್ನು ಕೇಳಿತ್ತು. ಆದರೆ, ಅಪರಾಧಿಗಳಿಗೆ ಶಿಕ್ಷೆ ನೀಡುವ ವಿಧಾನದ ಬಗ್ಗೆ ನ್ಯಾಯಾಂಗವು ಶಾಸಕಾಂಗಕ್ಕೆ ನಿರ್ದೇಶಿಸಲಾಗದು ಎಂದು ಅಭಿಪ್ರಾಯಪಟ್ಟಿತ್ತು.
ಪ್ರಸ್ತುತ ಈ ಕುರಿತ ವಾದ–ಪ್ರತಿವಾದ ನಡೆಯುತ್ತಿದ್ದು, ನ್ಯಾಯಾಲಯ ವಿಚಾರಣೆ ಮುಂದುವರಿಸುತ್ತಿದೆ. ಕಾಲ ಬದಲಾಗಿದೆ; ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರದ ಮನೋಭಾವವು ವಿಕಾಸಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚ್ಯವಾಗಿ ಹೇಳಿದೆ. ಇನ್ನೊಂದೆಡೆ, ಮರಣದಂಡನೆಯೇ ಅಮಾನವೀಯ ಶಿಕ್ಷಾ ಪದ್ಧತಿಯಾಗಿದ್ದು, ಅದನ್ನು ರದ್ದುಪಡಿಸಬೇಕು ಎನ್ನುವ ಬೇಡಿಕೆ ಇದೆ.
ಜಗತ್ತಿನ ಶೇ 70ರಷ್ಟು ರಾಷ್ಟ್ರಗಳಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ. ಆದರೂ, ಸುಮಾರು 50 ದೇಶಗಳಲ್ಲಿ ಈ ಶಿಕ್ಷೆ ಕಾನೂನುಬದ್ಧವಾಗಿದೆ. ಇದರಲ್ಲಿ ಭಾರತ, ಅಮೆರಿಕ, ಚೀನಾ, ಅಘ್ಗಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ, ಜಪಾನ್, ಇರಾನ್, ಇರಾಕ್, ಸೌದಿ ಅರೇಬಿಯಾ, ಥಾಯ್ಲೆಂಡ್ ಮುಂತಾದ ದೇಶಗಳಿವೆ. 2024ರಲ್ಲಿ ಚೀನಾ, ಇರಾನ್, ಸೌದಿ ಅರೇಬಿಯಾ, ಇರಾಕ್, ಯೆಮನ್‌ನಲ್ಲಿ ಹೆಚ್ಚು ಮಂದಿಗೆ ಮರಣದಂಡನೆ ವಿಧಿಸಲಾಗಿದೆ.
ಚೀನಾದಲ್ಲಿ ಅತಿ ಹೆಚ್ಚು ಮಂದಿಗೆ ಸಾವಿನ ಶಿಕ್ಷೆ ನೀಡಲಾಗಿದೆ.ಹೆಚ್ಚು ರಾಷ್ಟ್ರಗಳಲ್ಲಿ ಮರಣದಂಡನೆ ರದ್ದುಪಡಿಸಲಾಗುತ್ತಿದೆಯಾದರೂ ಈ ಶಿಕ್ಷೆಗೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಶಿಕ್ಷೆಯ ಪ್ರಮಾಣವು ಹೆಚ್ಚಾಗುತ್ತಿದ್ದು, 2025ರಲ್ಲಿ ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಏರಿಕೆ ಕಾಣಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದಲ್ಲಿ ಪ್ರಸಕ್ತ ವರ್ಷ 39 ಮಂದಿಯನ್ನು ಮರಣದಂಡನೆಗೆ ಈಡು ಮಾಡಲಾಗಿದೆ. ಅವುಗಳಲ್ಲಿ 33 ಮಂದಿಗೆ ವಿಷದ ಇಂಜೆಕ್ಷನ್ ನೀಡಿ, ಇಬ್ಬರಿಗೆ ಗುಂಡು ಹೊಡೆದು, ನಾಲ್ವರ ಮಾಸ್ಕ್‌ಗಳ ಒಳಗೆ ಸಾರಜನಕ ಪೂರೈಸಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಸಾರಜನಕದಿಂದ ಉಸಿರುಗಟ್ಟಿಸುವ ವಿಧಾನವು ಕ್ರೂರ ಮತ್ತು ಅಮಾನವೀಯ ಎಂದು ವಿಶ್ವಸಂಸ್ಥೆ ಆಕ್ಷೇಪಿಸಿದೆ. ಅಮೆರಿಕದ 50 ರಾಜ್ಯಗಳ ಪೈಕಿ 23ರಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ.
ಆಧಾರ: ಪಿಟಿಐ, ಎಎಫ್‌ಪಿ, ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್, ದೆಹಲಿಯ ನ್ಯಾಷನಲ್ ಲಾ ಕಾಲೇಜ್ ಯೂನಿವರ್ಸಿಟಿ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.