ADVERTISEMENT

ಆಳ ಅಗಲ | ನ್ಯಾಯದಾನ: ರಾಜ್ಯ ನಂ.1; ಆದರೆ...

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 22:01 IST
Last Updated 17 ಏಪ್ರಿಲ್ 2025, 22:01 IST
<div class="paragraphs"><p>ನ್ಯಾಯದಾನ</p></div>

ನ್ಯಾಯದಾನ

   

ಭಾರತ ನ್ಯಾಯ ವರದಿ’ಯ ನಾಲ್ಕನೇ ಆವೃತ್ತಿ ಬಿಡುಗಡೆಯಾಗಿದೆ. ನ್ಯಾಯ ನೀಡಿಕೆಗೆ ಸಂಬಂಧಿಸಿದ ನಾಲ್ಕು ಪ್ರಮುಖ ಸಂಸ್ಥೆಗಳ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳು ನಂತರದ ಸ್ಥಾನ ಪಡೆದಿವೆ. ಕರ್ನಾಟಕವು ಕಾನೂನು ನೆರವು ಮತ್ತು ಕಾರಾಗೃಹಗಳ ವಿಚಾರದಲ್ಲಿ ಉತ್ತಮ ಅಂಕಗಳನ್ನು ಗಳಿಸಿದೆ. ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯ ಕಾರ್ಯನಿರ್ಹಣೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಹಲವು ಅಂಶಗಳಲ್ಲಿ ಇನ್ನೂ ಬಹಳ ಕೆಲಸ ಆಗಬೇಕಿದೆ ಎನ್ನುವುದನ್ನು ವರದಿ ಉಲ್ಲೇಖಿಸಿದೆ

ಭಾರತ ನ್ಯಾಯ ವರದಿ– 2025 (ಇಂಡಿಯಾ ಜಸ್ಟೀಸ್ ರಿಪೋರ್ಟ್), ನ್ಯಾಯ ನೀಡುವಿಕೆಯಲ್ಲಿ ರಾಜ್ಯಗಳ ಸಾಮರ್ಥ್ಯವನ್ನು ವಿಶ್ಲೇಷಿಸುವ ಪ್ರಯತ್ನವಾಗಿದೆ. ಪೊಲೀಸ್ ವ್ಯವಸ್ಥೆ, ನ್ಯಾಯಾಂಗ, ಜೈಲು ನಿರ್ವಹಣೆ ಮತ್ತು ಕಾನೂನು ನೆರವು– ಈ ನಾಲ್ಕು ವಿಭಾಗಗಳ ಕಾರ್ಯನಿರ್ವಹಣೆ ಕುರಿತ ‌ದತ್ತಾಂಶಗಳನ್ನು ಹೋಲಿಸಿ ವರದಿ ಸಿದ್ಧಪಡಿಸಲಾಗಿದೆ. ವರದಿಯಲ್ಲಿ ರಾಜ್ಯಗಳ ಮಾನವ ಹಕ್ಕು ಆಯೋಗಗಳ ಕಾರ್ಯನಿರ್ವಹಣೆಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ರಾಜ್ಯಗಳ ನ್ಯಾಯ ವ್ಯವಸ್ಥೆಯ ಶಕ್ತಿ ಮತ್ತು ದೌರ್ಬಲ್ಯ, ಸಂಪನ್ಮೂಲಗಳ ಸ್ಥಿತಿಗತಿಯನ್ನು ವರದಿ ಒಳಗೊಂಡಿದೆ.

ADVERTISEMENT

ನ್ಯಾಯ ನೀಡಿಕೆಗೆ ಸಂಬಂಧಿಸಿದ ನಾಲ್ಕು ವಿಭಾಗಗಳ ಕಾರ್ಯನಿರ್ವಹಣೆಯಲ್ಲಿ ದೇಶದ ದೊಡ್ಡ ಮತ್ತು ಮಧ್ಯಮ ಗಾತ್ರದ 18 ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣದ ರಾಜ್ಯಗಳು ಮುಂಚೂಣಿಯಲ್ಲಿದ್ದು, ಕರ್ನಾಟಕವು ಮೊದಲ ಸ್ಥಾನ ಪಡೆದಿದೆ. ಆದರೆ, ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವುದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಗ್ರಾಮೀಣ ಭಾಗಗಳ ಜನರಿಗೆ ಕಾನೂನು ನೆರವು ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ಅಂಶಗಳಲ್ಲಿ ರಾಜ್ಯ ಸುಧಾರಣೆಯಾಗಬೇಕಾದ ಅಗತ್ಯವಿದೆ ಎಂದು ವರದಿ ಹೇಳಿದೆ. 

ಕಾನೂನು ನೆರವಿನಲ್ಲಿ ಮೊದಲ ಸ್ಥಾನ

ಕಾನೂನು ನೆರವಿನಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ರಾಷ್ಟ್ರ ಮಟ್ಟದಲ್ಲಿ ಅರೆನ್ಯಾಯಿಕ ಸ್ವಯಂಸೇವಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಆದರೆ ರಾಜ್ಯದಲ್ಲಿ ಇವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕರ್ನಾಟಕವು ದೇಶದಲ್ಲಿಯೇ ಹೆಚ್ಚು ಅರೆನ್ಯಾಯಿಕ ಸ್ವಯಂಸೇವಕರನ್ನು ಹೊಂದಿದೆ. 2019ರ ಜನವರಿಯಲ್ಲಿ ಇವರ ಪ್ರಮಾಣವು (ಒಂದು ಲಕ್ಷ ಜನಸಂಖ್ಯೆಗೆ) 4.9 ಇದ್ದರೆ, 2024ರ ಸೆಪ್ಟೆಂಬರ್‌ನಲ್ಲಿ 7.59 ಆಗಿದೆ. ಹಾಗೆಯೇ ರಾಜ್ಯವು ದೇಶದಲ್ಲಿ ಅತಿ ಹೆಚ್ಚು ಪ್ಯಾನೆಲ್ ವಕೀಲರನ್ನು (ಕಾನೂನು ನೆರವಿಗೆ ನಿಯೋಜಿತರಾದವರು) (ಶೇ 44ರಷ್ಟು) ಹೊಂದಿದೆ.

ಆದರೆ, ಗ್ರಾಮೀಣ ಭಾಗದಲ್ಲಿ ಜನರಿಗೆ ಕಾನೂನಿನ ನೆರವು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ವರದಿ ಹೇಳಿದೆ. 2021–22ರಲ್ಲಿ ರಾಜ್ಯದಲ್ಲಿ ಕಾನೂನು ಸೇವಾ ಘಟಕಗಳ ಸಂಖ್ಯೆಯು 174 ಇತ್ತು. 2023–24ರ ವೇಳೆಗೆ ಅದು 32ಕ್ಕೆ ಕುಸಿತ ಕಂಡಿದೆ.

ಕಾರಾಗೃಹ: ವಿಚಾರಣಾಧೀನ ಕೈದಿಗಳೇ ಹೆಚ್ಚು

ಬಂದೀಖಾನೆಗಳ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ರಾಜ್ಯವು ಎರಡನೇ ಸ್ಥಾನ ಪಡೆದಿದೆ. ಕಾರಾಗೃಹ ಸಿಬ್ಬಂದಿಯಲ್ಲಿ ಶೇ 33ರಷ್ಟು ಮಹಿಳೆಯರಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಎಂದು ವರದಿ ತಿಳಿಸಿದೆ. ರಾಜ್ಯದ ಜೈಲುಗಳಲ್ಲಿರುವ ವಿಡಿಯೊ ಕಾನ್ಫರೆನ್ಸ್‌ ಸೌಲಭ್ಯದಲ್ಲಿಯೂ ಸುಧಾರಣೆಯಾಗಿದೆ; 2021ರಲ್ಲಿ ಶೇ 68ರಷ್ಟು ಜೈಲುಗಳಲ್ಲಿ ಇದ್ದ ಈ ಸೌಲಭ್ಯ 2022ರ ಹೊತ್ತಿಗೆ ಶೇ 93ರಷ್ಟು ಜೈಲುಗಳಿಗೆ ವಿಸ್ತರಣೆಯಾಗಿದೆ. 

ಆದಾಗ್ಯೂ, ವೈದ್ಯಾಧಿಕಾರಿಗಳ ಹುದ್ದೆಗಳು (ಶೇ 74) ಮತ್ತು ವೈದ್ಯಕೀಯ ಸಿಬ್ಬಂದಿ ಹುದ್ದೆಗಳು (ಶೇ 64) ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇವೆ. ಜತೆಗೆ, ಜೈಲುಗಳಲ್ಲಿರುವವರ ಪೈಕಿ ವಿಚಾರಣಾಧೀನ ಕೈದಿಗಳ ಸಂಖ್ಯೆ (ಶೇ 80) ಹೆಚ್ಚಾಗಿದ್ದು, 2015ರಿಂದ ಇದೇ ದೊಡ್ಡ ಪ್ರಮಾಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಪೊಲೀಸ್: ಮಹಿಳಾ ಪ್ರಾತಿನಿಧ್ಯ ಅತ್ಯಲ್ಪ

ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ರಾಜ್ಯವು ಮೂರನೇ ಸ್ಥಾನ ಪಡೆದಿದೆ. ಸಿಬ್ಬಂದಿಗಾಗಿ ಸರ್ಕಾರ ಮಾಡುವ ತಲಾವಾರು ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವಾಗಿದೆ; 2020–21ರಲ್ಲಿ ₹943 ಇದ್ದ ತಲಾವಾರು ವೆಚ್ಚ 2022–23ರ ಹೊತ್ತಿಗೆ ₹1,261ಕ್ಕೆ ಹೆಚ್ಚಾಗಿತ್ತು. 2022 ಮತ್ತು 2023ರ ನಡುವೆ ಕಾನ್‌ಸ್ಟೆಬಲ್‌ಗಳ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ 12ರಿಂದ ಶೇ 6ಕ್ಕೆ ಮತ್ತು ಅಧಿಕಾರಿಗಳ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ 11ರಿಂದ ಶೇ 1ಕ್ಕೆ ಇಳಿಸಲಾಗಿದೆ. ಎಲ್ಲ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅಧಿಕಾರಿಗಳ ಖಾಲಿ ಹುದ್ದೆಗಳ ಸಂಖ್ಯೆ ಅತ್ಯಂತ ಕಡಿಮೆ (ಶೇ 1.2) ಇದೆ. ಜತೆಗೆ, ಅಧಿಕಾರಿಗಳು ಮತ್ತು ಕಾನ್‌ಸ್ಟೆಬಲ್‌ ಹುದ್ದೆಗಳನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಅನ್ವಯ ‌ಭರ್ತಿ ಮಾಡಿದ ಏಕೈಕ ರಾಜ್ಯವಾಗಿದೆ. 

ರಾಜ್ಯದ ಶೇ 99ರಷ್ಟು ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳು ಇವೆ. ಆಧುನೀಕರಣದ ನಿಧಿಯನ್ನು ಅತಿ ಹೆಚ್ಚು ಬಳಸಿಕೊಂಡ (ಶೇ 85) ರಾಜ್ಯ ಕರ್ನಾಟಕವಾಗಿದೆ ಎಂದು ವರದಿ ತಿಳಿಸಿದೆ. ಇಷ್ಟಾದರೂ ಪೊಲೀಸ್ ಇಲಾಖೆಯಲ್ಲಿ ಪುರುಷರೇ ಹೆಚ್ಚಾಗಿದ್ದು, ಕೆಳಹಂತದಲ್ಲಿ ಶೇ 9ರಷ್ಟು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಶೇ 6ರಷ್ಟು ಮಹಿಳೆಯರಿದ್ದಾರೆ.

ನ್ಯಾಯಾಂಗ: ಖಾಲಿ ಹುದ್ದೆಗಳಲ್ಲಿ ಇಳಿಕೆ

ಇದರಲ್ಲಿ ರಾಜ್ಯವು ನಾಲ್ಕನೇ ಶ್ರೇಯಾಂಕ ಹೊಂದಿದೆ. 2022ರಲ್ಲಿ ಶೇ 22ರಷ್ಟು ಜಿಲ್ಲಾ ಮಟ್ಟದ ನ್ಯಾಯಾಧೀಶರ ಹುದ್ದೆಗಳು ಖಾಲಿ ಇದ್ದವು. ಅವುಗಳನ್ನು 2025ರ ಹೊತ್ತಿಗೆ ಶೇ 16ಕ್ಕೆ ಇಳಿಸಲಾಗಿದೆ. ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಲ್ಲಿ ಮಹಿಳೆಯರ ಪ್ರಮಾಣ ಶೇ 37ರಷ್ಟಿದೆ. ಹೈಕೋರ್ಟ್‌ನಲ್ಲಿ ಖಾಲಿ ಹುದ್ದೆಗಳ ಸಂಖ್ಯೆಯನ್ನು ಶೇ 26ರಿಂದ ಶೇ 17ಕ್ಕೆ ಇಳಿಸಲಾಗಿದೆ. ನ್ಯಾಯಾಲಯಗಳ ನೇಮಕಾತಿಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯ ಹುದ್ದೆಗಳನ್ನು ತುಂಬಿದ ಏಕೈಕ ರಾಜ್ಯ ಕರ್ನಾಟಕ ಎಂದು ವರದಿ ಶ್ಲಾಘಿಸಿದೆ. 

ನ್ಯಾಯ ವರದಿ: ದೇಶದ ನೋಟ

* ಶೇ 83ರಷ್ಟು ಪೊಲೀಸ್‌ ಠಾಣೆಗಳಲ್ಲಿ ಕನಿಷ್ಠ ಒಂದು ಸಿ.ಸಿ.ಟಿ.ವಿ ಕ್ಯಾಮೆರಾ ಸೌಲಭ್ಯವಿದೆ 

* ಶೇ 78ರಷ್ಟು ಠಾಣೆಗಳು ಮಹಿಳಾ ಸಹಾಯಕೇಂದ್ರಗಳನ್ನು ಹೊಂದಿವೆ

* ಜಿಲ್ಲಾ ಹಂತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇ 38ರಷ್ಟು ಮಹಿಳಾ ನ್ಯಾಯಾಧೀಶರಿದ್ದಾರೆ

* ಶೇ 86 ಕಾರಾಗೃಹಗಳಲ್ಲಿ ಕನಿಷ್ಠ ಒಂದು ವಿಡಿಯೊ ಕಾನ್ಫರೆನ್ಸಿಂಗ್‌ ಸೌಲಭ್ಯ ಇದೆ 

* ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಮೀಸಲಾತಿಯನ್ನು ಯಾವುದೇ ರಾಜ್ಯ ಮತ್ತು ಯಾವುದೇ ಕೇಂದ್ರಾಡಳಿತ ಪ್ರದೇಶ  ಪಾಲಿಸಿಲ್ಲ

* ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಶಿಷ್ಟ ಪಂಗಡದವರ ಪಾಲು ಶೇ 12 ಮತ್ತು ಪರಿಶಿಷ್ಟ ಜಾತಿಯವರ ಪಾಲು ಶೇ 17ರಷ್ಟಿದೆ

* ಅರೆನ್ಯಾಯಿಕ ಸ್ವಯಂಸೇವಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಐದು ವರ್ಷಗಳಲ್ಲಿ ಈ ಪ್ರಮಾಣ ಶೇ 38ರಷ್ಟು ಕುಸಿತ ಕಂಡಿದೆ

* ದೇಶದಾದ್ಯಂತ ಇರುವ ಕಾರಾಗೃಹಗಳಲ್ಲಿ ಕೇವಲ 25 ಮನೋವಿಜ್ಞಾನಿ/ಮನೋವೈದ್ಯರು ಇದ್ದಾರೆ

ಆಧಾರ: ಭಾರತ ನ್ಯಾಯ ವರದಿ–2025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.