ದೀಪಾವಳಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಆಚರಿಸುವ ಸಂಪ್ರದಾಯವಿದೆ. ಕೆಲವು ಸಮುದಾಯಗಳು ವಿಶಿಷ್ಟವಾಗಿ ಹಬ್ಬವನ್ನು ಆಚರಿಸುತ್ತವೆ. ವಿವಿಧ ರಾಜ್ಯಗಳಲ್ಲೂ ಭಿನ್ನ ರೀತಿಯ ಸಂಪ್ರದಾಯ ಅನುಸರಿಸುತ್ತಿರುವ ನಿದರ್ಶನಗಳಿವೆ. ಕೆಲವು ದೇಶಗಳಲ್ಲಿ ಬೆಳಕಿನ ಹಬ್ಬಕ್ಕೆ ಭಾರತದಲ್ಲಿ ಇರುವಷ್ಟೇ ಮಹತ್ವ ಇದೆ. ಶತಮಾನಗಳಿಂದ ರೂಢಿಯಲ್ಲಿರುವ ಕೆಲವು ವಿಶಿಷ್ಟ ಆಚರಣೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ
ಎಮ್ಮೆಗಳಿಗೆ ಮನ್ನಣೆ
ರಾಜ್ಯದ ವಿವಿಧೆಡೆ ಇರುವ ಗೌಳಿಗ ಸಮುದಾಯದವರು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ವಿಜಯನಗರ ಜಿಲ್ಲೆ ಅಲ್ಲದೇ, ಧಾರವಾಡ, ಬೆಳಗಾವಿ, ಹಾವೇರಿ ಮುಂತಾದ ಕಡೆ ಹಬ್ಬವು ರಂಗೇರುತ್ತದೆ. ಪಾಂಡವರು ಅಜ್ಞಾತವಾಸ ಮುಗಿಸಿ ನಾಡಿಗೆ ಮರಳುವ ವೇಳೆ ವಿರಾಟರಾಯನಿಗೆ ಸೇರಿದ್ದ ಗೋವುಗಳನ್ನು ಕೌರವರು ಅಪಹರಿಸಿಕೊಂಡು ಹೋಗಿರುತ್ತಾರೆ. ಇದನ್ನು ತಿಳಿದ ಅರ್ಜುನ, ತಕ್ಷಣ ಗೋವುಗಳನ್ನು ರಕ್ಷಿಸುತ್ತಾನೆ. ಇದು ಬುಡಕಟ್ಟು ಗೌಳೇರರಿಗೆ ಸಂಭ್ರಮಕ್ಕೆ ಕಾರಣವಾಗುತ್ತದೆ. ಗೌಳಿಗರಿಗೆ ದೀಪಾವಳಿಯೇ ಆ ಸಂಭ್ರಮ ಆಚರಿಸುವ ಸಂದರ್ಭ.
ಗೌಳಿಗರ ಬದುಕಿನ ಭಾಗವಾಗಿರುವ ಎಮ್ಮೆಗಳಿಗೆ ಕ್ಷೌರ, ಎಣ್ಣೆ ಮಜ್ಜನ ಮಾಡಿಸಿ, ಸಾಂಪ್ರದಾಯಿಕವಾಗಿ ಕಬ್ಬಿಣದ ಸಲಾಕೆ ಬೆಂಕಿಯಲ್ಲಿ ಕಾಯಿಸಿ ಮುದ್ರೆ ಒತ್ತುತ್ತಾರೆ. ಅವುಗಳನ್ನು ಸಿಂಗರಿಸಿ ಪಟ್ಟಣದ ಗೌಳೇರ ಬೀದಿಯಲ್ಲಿ ಬೆದರಿಸುವ ಆಟ ಆಡಿಸುತ್ತಾರೆ.
ಬೆಳಗಾವಿಯಲ್ಲೂ ಇಂತಹದೇ ಆಚರಣೆ ರೂಢಿಯಲ್ಲಿದೆ. ಗೌಳಿ ಗಲ್ಲಿಗೆ ಬಂದರಂತೂ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ. ಇಲ್ಲಿನ ಜನರ ದೀಪಾವಳಿ ತಾವು ಸಾಕಿದ ಪ್ರಾಣಿಗಳ ಸಮೇತ ನಡೆಯುತ್ತದೆ. ಎಮ್ಮೆಗಳನ್ನು ಸಿಂಗರಿಸಿ, ಸಾಲಾಗಿ ಓಡಿಸಿ ಸಂಭ್ರಮಿಸುವುದು ಒಂದೆಡೆಯಾದರೆ, ಜಿದ್ದಿಗೆ ಬಿದ್ದು ಓಡಿಸುವ ಸ್ಪರ್ಧೆ ಇನ್ನೊಂದು.
ತುಳುನಾಡಿನ ‘ತುಡರ ಪರ್ಬ’
ತುಳುನಾಡಿನಲ್ಲಿ ದೀಪಾವಳಿ ಎಂದರೆ ಸ್ನಾನದ ಹಬ್ಬ (ಮೀಪಿನ ಪರ್ಬ), ‘ಕುಲೆ ಪರ್ಬ’, ಭೂಮಿ ಪೂಜೆ, ಗೋಪೂಜೆ, ಬಲೀಂದ್ರ ಪೂಜೆ ಇವೆಲ್ಲವೂ ಸಮ್ಮಿಳಿತಗೊಂಡಿವೆ. ಪುರಾಣದ ಬಲಿಚಕ್ರವರ್ತಿ, ನರಕ ಚತುರ್ದಶಿಯ ನರಕಾಸುರ ವಧೆ ತುಳುವರ ಕಲ್ಪನೆಯಲ್ಲಿ ಇಲ್ಲ. ಬಲೀಂದ್ರ ತುಳುವರ ರಾಜ. ನೆಲೆ ಕಳೆದುಕೊಂಡ ಬಲೀಂದ್ರನಿಗೆ ಮೌಖಿಕ ಪರಂಪರೆಯ ಪಾಡ್ದನಗಳ ಮೂಲಕ ನೆಲೆ ಕಲ್ಪಿಸಿದವರು ತುಳುನಾಡಿನ ಮೂಲ ನಿವಾಸಿಗಳಾದ ಕೃಷಿ ಕಾರ್ಮಿಕರು ಎಂಬ ಕಲ್ಪನೆಯಿದೆ. ಹೀಗಾಗಿ, ಬಲೀಂದ್ರನ ಬಗ್ಗೆ ಇಲ್ಲಿನವರಿಗೆ ಅಪಾರ ಗೌರವ.
ಬಲೀಂದ್ರನ ಪ್ರತಿನಿಧಿಯಾಗಿ ಗದ್ದೆ ಬದಿಯಲ್ಲಿ ಸ್ಥಾಪಿಸುವ ಹಾಲೆಮರದ ಕಂಬದ (ಬೊಳ್ಪು ಕಂಬ) ಮೇಲೆ ಹಣತೆ ಬೆಳಗಿ, ಬಲೀಂದ್ರನನ್ನು ಸ್ವಾಗತಿಸುವ ‘ಬಲೀಂದ್ರ ಲೆಪ್ಪುನು’ ಎಂಬ ಆಚರಣೆಯ ಸೊಗಡು ಗ್ರಾಮೀಣ ಪ್ರದೇಶಗಳಲ್ಲಿದೆ. ಕಳೆದ ಪರ್ಬದಿಂದ ಈ ಪರ್ಬದ ನಡುವಿನ ಅವಧಿಯಲ್ಲಿ ಗತಿಸಿದ ಕುಟುಂಬದ ಸದಸ್ಯರನ್ನು ನೆನಪಿಸುವ ‘ಕುಲೆ ಪರ್ಬ’ ಆಚರಣೆ ತುಳುನಾಡಿನ ದೀಪಾವಳಿಯ ವಿಶೇಷ.
ಅಂಟಿಗೆ–ಪಂಟಿಗೆ
ಅಂಟಿಗೆ–ಪಂಟಿಗೆ ಎಂದರೆ ದೀಪಾವಳಿ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆ ಬುಡಕಟ್ಟು ಜನರು ಆಚರಿಸುವ ಸಂಪ್ರದಾಯ. ಇದು, ವಿಶಿಷ್ಟ ಗಾಯನ ಮತ್ತು ನೃತ್ಯದ ಮೂಲಕ ಮನೆ ಮನೆಯಿಂದ ಜ್ಯೋತಿ ಪಡೆಯುವ ಆಚರಣೆ. ಎರಡು ವಾರಗಳವರೆಗೆ ಈ ಕಲೆಯನ್ನು ಆಯ್ದ ಮನೆಗಳಿಗೆ ಮಾತ್ರ ತೆರಳಿ ಪ್ರದರ್ಶನ ಮಾಡಲಾಗುತ್ತದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ ಮತ್ತು ನರಸಿಂಹರಾಜಪುರ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಈ ಕಲೆ ಜೀವಂತವಾಗಿದೆ.
ಕಡೂರು ತಾಲ್ಲೂಕಿನ ಲಂಬಾಣಿ ತಾಂಡಾಗಳಲ್ಲಿ ಅಮಾವಾಸ್ಯೆ ದಿನ ಹಿರಿಯರ ಪೂಜೆ ನೆರವೇರಿಸುವುದು ವಿಶೇಷ. ಅಕ್ಕಿ ಹಿಟ್ಟು, ಬೆಲ್ಲ, ತುಪ್ಪ ಹಾಕಿ ಗಟ್ಟಿಯಾಗಿ ಪಾಯಸವನ್ನು ಕೆಂಡದ ಮೇಲೆ ತಯಾರಿಸಿ ಹಿರಿಯರ ಹೆಸರಿನಲ್ಲಿ ಆಹುತಿ ನೀಡಿ ಹಬ್ಬ ಆಚರಿಸಲಾಗುತ್ತದೆ. ಸಂಜೆ ಮನೆಗಳ ಮುಂದೆ ದೀಪ ಬೆಳಗಿಸಿ ತಮ್ಮ ಸಮುದಾಯದ ಹಾಡುಗಳನ್ನು ಹೇಳುತ್ತಾ ದೀಪದ ಸುತ್ತ ನರ್ತಿಸುವುದು ಸಂಪ್ರದಾಯ.
ದೀವಟಿಗೆ ಉತ್ಸವ
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿ ಪಂಜುಗಳನ್ನು ಹಿಡಿದು ಪಾಲ್ಗೊಳ್ಳುವ ‘ದೀವಟಿಗೆ ಉತ್ಸವ’ ಉತ್ಸವ ನಡೆಯುತ್ತದೆ. ಬಲಿಪಾಡ್ಯಮಿಯ ಮುನ್ನಾದಿನ ಬೆಟ್ಟದಪುರ ಗ್ರಾಮದ ಮಧ್ಯಭಾಗದಲ್ಲಿರುವ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ನಂತರ 3,108 ಮೆಟ್ಟಿಲುಗಳಿರುವ ಬೆಟ್ಟವನ್ನು ರಾತ್ರಿಯೇ ಹತ್ತುತ್ತಾರೆ. ಬಲಿಪಾಡ್ಯಮಿಯಂದು ಮುಂಜಾನೆ ಉತ್ಸವಮೂರ್ತಿಗಳನ್ನು ಕೆಳಕ್ಕೆ ತರಲಾಗುತ್ತದೆ.
ಬೆಟ್ಟದಪುರದಿಂದ ಆರಂಭಗೊಳ್ಳುವ ‘ದೀವಟಿಗೆ ಉತ್ಸವ (ಪಂಜಿನ ಮೆರವಣಿಗೆ) ಬೆಟ್ಟದತುಂಗ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕುಡಕೂರು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುತ್ತದೆ. ಸಾವಿರಾರು ಮಂದಿ ದೀವಟಿಗೆ ಹಿಡಿದು ಪಾಲ್ಗೊಳ್ಳುತ್ತಾರೆ.
ಮಲೆನಾಡಲ್ಲಿ ಹೋರಿ ಹಬ್ಬ
ದೀಪದ ಹಾಡು ಎಂದೇ ಕರೆಯಲ್ಪಡುವ ‘ಅಂಟಿಕೆ- ಪಂಟಿಕೆ’ ಕಲಾಪ್ರಕಾರ ಹಾಗೂ ಹೋರಿ ಬೆದರಿಸುವ ಆಟ ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ. ಬಲೀಂದ್ರನು ಭೂಮಿಯಲ್ಲಿ ಅವತರಿಸಿ ಪ್ರತಿವರ್ಷವೂ ದೀಪಾವಳಿ ವೇಳೆ ಕೆಲಕಾಲ ಭೂಮಿಗೆ ಬರುತ್ತಾನೆ. ಈ ಅವಧಿಯಲ್ಲಿ ಆತನ ಸ್ತುತಿಸಿ, ಆರಾಧಿಸಿದರೆ ಅವರವರ ಅಭೀಷ್ಟೆ ಈಡೇರುತ್ತವೆ ಎಂಬ ನಂಬಿಕೆಯಿಂದ ಬಲಿಪಾಡ್ಯಮಿಯಂದು ಅಂಟಿಕೆ-ಪಂಟಿಕೆ ಕಲಾ
ಪ್ರದರ್ಶನ ನಡೆಯುತ್ತದೆ.
ಅಂದು ರಾತ್ರಿ ಊರಿನವರೆಲ್ಲ ಒಟ್ಟಿಗೆ ಸೇರಿ ತುಳಸಿ ಮತ್ತು ಬಲೀಂದ್ರನಿಗೆ ಪೂಜೆ ಸಲ್ಲಿಸುತ್ತಾರೆ. ಅಂಟಿಕೆ- ಪಂಟಿಕೆಯ ಕಲಾಸಂಪ್ರದಾಯದಲ್ಲಿ ಕೈದೀಪ ಬಹಳ ಪವಿತ್ರವಾದದ್ದು. ಅದನ್ನು ಹೊತ್ತಿಸಿ ಊರೂರು ಸುತ್ತುವಾಗ ಮಧ್ಯೆ ಆರಬಾರದು, ಆರಿದರೆ ಅಪಶಕುನ ಎಂಬ ನಂಬಿಕೆ ಇದೆ. ಒಂದು ತಂಡ ಮತ್ತೊಂದು ತಂಡಕ್ಕೆ ಎದುರಾಗಬಾರದು ಎಂಬ ಪ್ರತೀತಿ ಇದೆ. ಬಲೀಂದ್ರನನ್ನು ಸ್ಮರಿಸಿ ಅವನು ಭೂಮಿಯಲ್ಲಿ ಅವತರಿಸಿದಾಗ ನಡೆದ ಪವಾಡಗಳನ್ನು ಕುರಿತಂತೆ ಹಾಡುತ್ತಾರೆ.
ಅರೆಮಲೆನಾಡು ಭಾಗದ ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ತಾಲ್ಲೂಕುಗಳಲ್ಲಿ ಹೋರಿ ಬೆದರಿಸುವ ಹಬ್ಬ ಬಹು ಜನಪ್ರಿಯ. ದೀಪಾವಳಿ ಆರಂಭದ ದಿನದಿಂದ ಕಾರ್ತಿಕ ಮಾಸದವರೆಗೆ ಬೇರೆ ಬೇರೆ ಗ್ರಾಮಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ.
ಸಗಣಿ ಕಾಳಗ
ಮಂಡ್ಯ ಜಿಲ್ಲೆ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ದೀಪಾವಳಿಯಂದು ಸಗಣಿ ಕಾಳಗ ನಡೆಯುವುದು ವಿಶೇಷ. ಮಾಣಿಕಶೆಟ್ಟಿ (ಕತ್ತೆ) ಮೇಲೆ ಬಾಲವಟುವನ್ನು ಕೂರಿಸಿ ಮಾಡುವ ಧಾರ್ಮಿಕ ಆಚರಣೆಯ ಮೆರವಣಿಗೆಯನ್ನು ಮಾಣಿಕಶೆಟ್ಟಿ ಹಬ್ಬ ಎಂಬ ಹೆಸರಿನಲ್ಲಿ ಆಚರಿಸುವುದು ವಿಶಿಷ್ಟವಾಗಿದೆ. ಮಕ್ಕಳು ಹಾಗೂ ಯುವಕರು ಸಗಣಿ ಕಾಳಗದಲ್ಲಿ ಪಾಲ್ಗೊಳ್ಳುತ್ತಾರೆ.
ಕಿರು ದೀಪಾವಳಿ
ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಜಗಳೂರು, ಹೊನ್ನಾಳಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಚಿತ್ರದುರ್ಗ ಜಲ್ಲೆಯ ಕೆಲವು ಗ್ರಾಮಗಳಲ್ಲಿ ನಾಡೆಲ್ಲ ದೀಪಾವಳಿ ಆಚರಿಸಿದ ನಂತರ ಬರುವ ಮೊದಲ ಶುಕ್ರವಾರ ಅಥವಾ ಮುಂದಿನ ಹುಣ್ಣಿಮೆಯ ದಿನದಂದು ದೀಪಾವಳಿ ಆಚರಿಸುವುದು ಪದ್ಧತಿ. ಕೆಲವೆಡೆ ಅದಕ್ಕೆ ಕಿರು ದೀಪಾವಳಿ ಎಂದೂ ಕರೆಯಲಾಗುತ್ತದೆ.
ನೀರು ತುಂಬುವ ದಿನದಂದು ನಸುಕಿನಲ್ಲಿ ಕುರಿಗಾಹಿಗಳು ಹೆಣ್ಣು, ಗಂಡು ಕುರಿಗಳನ್ನು ತಂದು, ಮೈ ತೊಳೆದು, ಅರಿಸಿನ–ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಪೂಜೆ ಮಾಡಿ ಅವುಗಳಿಗೆ ಮದುವೆ ಮಾಡುವ ವಿಶಿಷ್ಟ ಸಂಪ್ರದಾಯ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್, ಬನ್ನಿಗೋಳ, ನಾಗಲಾಪುರ, ನಾಗರಾಳ, ಆನೆಹೊಸೂರು ಗ್ರಾಮಗಳಲ್ಲಿದೆ. ಕುರಿಗಳು ಹೆಚ್ಚು ಮರಿಗಳಿಗೆ ಜನ್ಮನೀಡಿದರೆ ಪ್ರಾಣಿ ಸಂಪತ್ತು ವೃದ್ಧಿಯಾಗುತ್ತದೆ. ಇದನ್ನೇ ಶ್ರೀಲಕ್ಷ್ಮಿಯ ಆಶೀರ್ವಾದ ಎಂದು ನಂಬುತ್ತಾರೆ.
ಬುಧವಾರ ಬಂದರಷ್ಟೆ ಆಚರಣೆ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬಲಿ ಪಾಡ್ಯಮಿ ಬುಧವಾರ ಬಂದರಷ್ಟೇ ಹಬ್ಬ ಆಚರಿಸಲಾಗುತ್ತದೆ. ವೀರನಪುರ, ಮಾಡ್ರಹಳ್ಳಿ, ಬನ್ನಿತಾಳಪುರ, ಇಂಗಲವಾಡಿ, ನೆನೆಕಟ್ಟೆ ಮತ್ತು ಮಳವಳ್ಳಿಯಲ್ಲಿ ಈ ವಿಶಿಷ್ಟ ಆಚರಣೆ ಚಾಲ್ತಿಯಲ್ಲಿದೆ. ದೀಪಾವಳಿಯಷ್ಟೇ ಅಲ್ಲ ಯುಗಾದಿ ಹಬ್ಬಕ್ಕೂ ಇದು ಅನ್ವಯವಾತ್ತದೆ. ಬುಧವಾರ ಬಿಟ್ಟು ಉಳಿದ ದಿನಗಳಲ್ಲಿ ಹಬ್ಬ ಆಚರಿಸಿದರೆ ಜಾನುವಾರುಗಳಿಗೆ ತೊಂದರೆ ಆಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದ್ದು, ಈ ಕಾರಣಕ್ಕೆ ಬುಧವಾರದ ದಿನ ಬರುವ ದೀಪಾವಳಿಗಾಗಿ ಅವರು ಕಾಯುತ್ತಾರೆ.
ಚಾಮರಾಜನಗರದ ಗಡಿಭಾಗದಲ್ಲಿರುವ, ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಗುಮಟಾಪುರದಲ್ಲಿ ಪ್ರತಿ ವರ್ಷ ದೀಪಾವಳಿಯ ಮರು ದಿನ ಸಗಣಿಯಲ್ಲಿ ಹೊಡೆದಾಡುವ ‘ಗೊರೆ ಹಬ್ಬ’ ನಡೆಯುತ್ತದೆ. ಕನ್ನಡಿಗರೇ ಹೆಚ್ಚಿರುವ ಗುಮಟಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಇದರಲ್ಲಿ ಅತ್ಯಂತ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಾರೆ. ಜನರು ದೊಡ್ಡ ದೊಡ್ಡ ಸೆಗಣಿ ಉಂಡೆಗಳನ್ನು ಪರಸ್ಪರ ಎಸೆದು ಹೊಡೆದಾಡಿಕೊಳ್ಳುತ್ತಾರೆ. ಇದಕ್ಕೂ ಮೊದಲು ಚಾಡಿಕೋರರು ಎಂದು ಕರೆಸಿಕೊಳ್ಳುವ ಪಾತ್ರಧಾರಿಗಳನ್ನು ಕತ್ತೆಯಲ್ಲಿ ಕೂರಿಸಿಕೊಂಡು ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಜಾತಿ ಮತ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುವುದು ಈ ಆಚರಣೆಯ ವಿಶೇಷ.
ಹೋರಿ ಬೆದರಿಸುವ ಸ್ಪರ್ಧೆ
ಅರೆಮಲೆನಾಡು ಭಾಗದ ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ತಾಲ್ಲೂಕುಗಳಲ್ಲಿ ಹೋರಿ ಬೆದರಿಸುವ ಹಬ್ಬ ಬಹು ಜನಪ್ರಿಯ. ದೀಪಾವಳಿ ಆರಂಭದ ದಿನದಿಂದ ಕಾರ್ತಿಕ ಮಾಸದವರೆಗೆ ಬೇರೆ ಬೇರೆ ಗ್ರಾಮಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ವರ್ಷಗಳ ಕಾಲ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೋರಿಗಳನ್ನು ಬೆಳೆಸಲಾಗುತ್ತದೆ. ಸ್ಪರ್ಧೆ ವೀಕ್ಷಣೆಗೂ ಸಾವಿರಾರು ಮಂದಿ ಬರುವುದು ವಿಶೇಷ. ಅಲಂಕೃತಗೊಂಡ ಹೋರಿಯ ಬೆನ್ನತ್ತಿ, ಬೆದರಿಸಿ ಹಿಡಿಯಲು ಮುಂದಾಗುವುದು ಸ್ಪರ್ಧೆಯ ರೀತಿ.
ಮುಂದಿನ ಶುಕ್ರವಾರ ಹಬ್ಬ
ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಜಗಳೂರು, ಹೊನ್ನಾಳಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಚಿತ್ರದುರ್ಗ ಜಲ್ಲೆಯ ಕೆಲವು ಗ್ರಾಮಗಳಲ್ಲಿ ನಾಡೆಲ್ಲ ದೀಪಾವಳಿ ಆಚರಿಸಿದ ನಂತರ ಬರುವ ಮೊದಲ ಶುಕ್ರವಾರ ಅಥವಾ ಮುಂದಿನ ಹುಣ್ಣಿಮೆಯ ದಿನದಂದು ದೀಪಾವಳಿ ಆಚರಿಸುವುದು ಪದ್ಧತಿ. ಕೆಲವೆಡೆ ಅದಕ್ಕೆ ಕಿರು ದೀಪಾವಳಿ ಎಂದೂ ಕರೆಯಲಾಗುತ್ತದೆ.
ಬಂಗಾಳದಲ್ಲಿ ಕಾಳಿ ಆರಾಧನೆ
ದೀಪಾವಳಿ ಸಮಯದಲ್ಲಿ ದೇಶದ ಎಲ್ಲ ಕಡೆಗಳಲ್ಲೂ ಲಕ್ಷ್ಮಿಗೆ ಪೂಜೆ ಸಲ್ಲಿಸಿದರೆ, ಪಶ್ಚಿಮ ಬಂಗಾಳದಲ್ಲಿ ಮಹಾ ಕಾಳಿಯನ್ನು ಆರಾಧಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್ ಹಾಕಿ ದುಷ್ಟಶಕ್ತಿಯನ್ನು ಸಂಹರಿಸುವ ಕಾಳಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.
ಒಡಿಶಾದಲ್ಲಿ ಪೂರ್ವಜರ ಸ್ಮರಣೆ
ಒಡಿಶಾದಲ್ಲಿ ದೀಪಾವಳಿ ಸಮಯದಲ್ಲಿ ವಿಶಿಷ್ಟವಾದ ಆಚರಣೆಯೊಂದು ಚಾಲ್ತಿಯಲ್ಲಿದೆ. ಇದಕ್ಕೆ ಕೌಂರಿಯಾ ಕಾಠೀ ಮತ್ತು ಬಡಾಬದುವಾ ಡಕಾ ಎಂದು ಕರೆಯಲಾಗಿದೆ. ಗತಿಸಿದ ಪೂರ್ವಜರನ್ನು ಸ್ಮರಿಸಿ ಅವರನ್ನು ಗೌರವಿಸುವ ಆಚರಣೆ ಇದು. ರಾತ್ರಿಯಾಗುತ್ತಿದ್ದಂತೆಯೇ ಮನೆಯಿಂದ ಹೊರಗೆ ಬರುವ ಜನರು, ‘ಕೌಂರಿಯಾ ಕಾಠೀ’ ಎಂದು ಕರೆಯಲಾಗುವ ಸೆಣಬಿನ ಕೋಲನ್ನು ಎಣ್ಣೆಯಲ್ಲಿ ಅದ್ದಿ, ತುದಿಗೆ ಬೆಂಕಿ ಹಚ್ಚಿ ಅದನ್ನು ಮೇಲಕ್ಕೆ ಎತ್ತಿ ಹಿಡಿದು, ‘ಬಡಾ ಬದುವಾ ಹೋ, ಅಂಧಾರಾ ರೇ ಆಸಾ, ಅಲುವಾ ರೇ ಜಾ’ (ಪೂರ್ವಜರೇ, ಕತ್ತಲಲ್ಲಿ ಬಂದು, ದೀಪ ಬೆಳಗಿರುವ ಹಾದಿಯಲ್ಲಿ ಹಿಂದಿರುಗಿ) ಎಂದು ಕೂಗುತ್ತಾರೆ.
ಗೋವಾದಲ್ಲಿ ನರಕಾಸುರನ ವಧೆ
ಗೋವಾದಲ್ಲಿ ಆಚರಿಸಲಾಗುವ ದೀಪಾವಳಿ ಇಡೀ ರಾಷ್ಟ್ರದ ಗಮನಸೆಳೆಯುತ್ತದೆ. ದೇಶದ ಹಲವೆಡೆ ದಸರಾ ಸಮಯದಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸುವ ರೂಢಿ ಇರುವಂತೆ, ಪಣಜಿ ಸೇರಿದಂತೆ ಗೋವಾದ ವಿವಿಧ ಕಡೆಗಳಲ್ಲಿ ನರಕಾಸುರನ ಬೃಹತ್ ಪ್ರತಿಕೃತಿಯನ್ನು ದಹಿಸುವ ಪದ್ಧತಿ ಇದೆ. ನರಕಾಸುರ ವಧೆಯನ್ನು ಇದು ಬಿಂಬಿಸುತ್ತದೆ. ದಹನಕ್ಕೂ ಮುನ್ನ ನರಕಾಸುರನ ಪ್ರತಿಕೃತಿಯ ಮೆರವಣಿಗೆಯನ್ನು ಭರ್ಜರಿಯಾಗಿ ನಡೆಸಲಾಗುತ್ತದೆ. ನರಕ ಚತುರ್ದಶಿಯಂದು ಈ ಆಚರಣೆ ನಡೆಯುತ್ತದೆ.
ವಿದೇಶಗಳಲ್ಲೂ ಸಂಭ್ರಮ
ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ನೆಲಸಿರುವ ಭಾರತೀಯರು ದೀಪಾವಳಿಯನ್ನು ಆಚರಿಸುತ್ತಾರೆ. ಆದರೆ, ಕೆಲವು ದೇಶಗಳಲ್ಲಿ ಭಾರತದಲ್ಲಿ ಆಚರಿಸುವ ಮಾದರಿಯಲ್ಲೇ ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಕೆಲವು ದೇಶಗಳಲ್ಲಿ ಸರ್ಕಾರಿ ರಜೆ ನೀಡುವ ಪದ್ಧತಿಯೂ ಇದೆ.
ನೇಪಾಳ: ನೆರೆಯ ನೇಪಾಳದಲ್ಲಿ ‘ತಿಹಾರ್’ ಎಂಬ ಹೆಸರಿನಲ್ಲಿ ಐದು ದಿನ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿ ದಿನವೂ ಭಿನ್ನ ಆಚರಣೆಗಳಿರುತ್ತವೆ. ಗೋವು, ಲಕ್ಷ್ಮಿ ಮಾತ್ರವಲ್ಲದೇ ಕಾಗೆ, ಶ್ವಾನಗಳನ್ನು ಪೂಜಿಸುವ ಪದ್ಧತಿಯೂ ಇಲ್ಲಿದೆ
ಶ್ರೀಲಂಕಾ: ಲಂಕಾದ ತಮಿಳು ಸಮುದಾಯ ಅದ್ದೂರಿಯಾಗಿ ದೀಪಾವಳಿಯನ್ನು ಆಚರಿಸುತ್ತದೆ. ಸರ್ಕಾರ ರಜೆಯನ್ನೂ ಘೋಷಿಸುತ್ತದೆ. ಹಬ್ಬದ ಆಚರಣೆಯಲ್ಲಿ ಭಾರತದ ಸಂಪ್ರದಾಯವನ್ನೇ ಲಂಕನ್ನರೂ ಅನುಸರಿಸುತ್ತಾರೆ
ಮಲೇಷ್ಯಾ: ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಮಲೇಷ್ಯಾದಾದ್ಯಂತ ದೀಪಾವಳಿಗೆ ಸರ್ಕಾರಿ ರಜೆ ನೀಡಲಾಗುತ್ತದೆ. ಭಾರತೀಯರ ಬಾಹುಳ್ಯ ಇರುವ ಪ್ರದೇಶಗಳಲ್ಲಿ ಹಬ್ಬದ ಆಚರಣೆ ಜೋರಾಗಿರುತ್ತದೆ
ಸಿಂಗಪುರ: ಪುಟ್ಟ ಶ್ರೀಮಂತ ರಾಷ್ಟ್ರ ಸಿಂಗಪುರದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬ ಇದು. ದೀಪಾಲಂಕಾರಗಳಿಂದ ಕಂಗೊಳಿಸುವ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರಮುಖ ನಗರಗಳ ರಸ್ತೆಗಳು, ಕಟ್ಟಡಗಳು ಕೂಡ ಆಲಂಕಾರಿಕ ದೀಪಗಳಿಂದ ಮಿನುಗುತ್ತವೆ. ಇಲ್ಲೂ ದೀಪಾವಳಿಗೆ ಸರ್ಕಾರಿ ರಜೆ ಇದೆ
ಫಿಜಿ: ದ್ವೀಪಗಳ ಸಮೂಹ ಫಿಜಿಯಲ್ಲಿ ಅದ್ದೂರಿಯಾಗಿ ದೀಪಾವಳಿ ಆಚರಿಸಲಾಗುತ್ತದೆ. ಇಲ್ಲೂ ಸರ್ಕಾರ ರಜೆ ಘೋಷಿಸುತ್ತದೆ. ಆಚರಣೆಯು ಭಾರತದಲ್ಲಿನ ಆಚರಣೆಯನ್ನೇ ಹೋಲುತ್ತದೆ
ಮಾರಿಷಸ್: ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮಾರಿಷಸ್‌ನಲ್ಲಿ ದೀಪಾವಳಿಗೆ ತುಂಬಾ ಮಹತ್ವ ಇದೆ. ಅದ್ದೂರಿತನಕ್ಕೆ ಈ ಹಬ್ಬ ಹೆಸರುವಾಸಿ
ಮ್ಯಾನ್ಮಾರ್: ಪುಟ್ಟ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಸರ್ಕಾರಿ ಶಾಲೆಗಳು, ಕಚೇರಿಗಳಿಗೆ ರಜೆ ಇರುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.