ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ಇಂದಿನಿಂದ ನಡೆಯಲಿದೆ. 12 ವರ್ಷಗಳಿಗೊಮ್ಮೆ ಬರುವ ಈ ಮೇಳಕ್ಕೆ ಪೌರಾಣಿಕ ಮತ್ತು ಸಾಂಸ್ಕೃತಿಕ ಮಹತ್ವ ಇದೆ. ಹಾಗಾಗಿ, ಇದನ್ನು ಭಾರತದ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಪ್ರವಾಸೋದ್ಯಮದ ಚಟುವಟಿಕೆಯನ್ನಾಗಿಯೂ ರೂಪಿಸಬೇಕೆಂದು ರಾಜ್ಯ ಸರ್ಕಾರ ಹಲವು ವ್ಯವಸ್ಥೆ ಮಾಡಿಕೊಂಡಿದೆ. ಈ ಬಾರಿಯ ಮೇಳದಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನೂ ಬಳಸಿಕೊಂಡಿರುವುದು ವಿಶೇಷ
ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮವಾದ ಮಹಾಕುಂಭ ಮೇಳ ಪ್ರಯಾಗ್‌ರಾಜ್‌ನಲ್ಲಿ (ಹಿಂದಿನ ಅಲಹಾಬಾದ್) ಇಂದು ವಿಧ್ಯುಕ್ತವಾಗಿ ಆರಂಭವಾಗಲಿದೆ. 45 ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಕೋಟ್ಯಂತರ ಮಂದಿ ಇಲ್ಲಿ ಸೇರಿದ್ದಾರೆ. ಇದು ಗಂಗಾ, ಯಮುನಾ ನದಿಗಳ ಸಂಗಮ ಸ್ಥಳ. ಗುಪ್ತಗಾಮಿನಿಯಾದ ಸರಸ್ವತಿ ನದಿಯೂ ಇಲ್ಲಿ ಸಂಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಪುಷ್ಯ ಪೂರ್ಣಿಮೆಯ ಪವಿತ್ರ ದಿನದಂದು ಶಾಹೀ (ಪವಿತ್ರ) ಸ್ನಾನ ಮಾಡುವುದು ಭಕ್ತಾದಿಗಳ ಬಯಕೆ.
2019ರಲ್ಲಿ ಕುಂಭ ಮೇಳ ನಡೆದಿತ್ತು. ಈ ಬಾರಿ ನಡೆಯುತ್ತಿರುವುದು 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ. ಹಿಂದಿನ ಬಾರಿ ಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು. ಈ ಬಾರಿ ಮಹಾಕುಂಭ ಮೇಳದಲ್ಲಿ 45 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಉತ್ತರ ಪ್ರದೇಶ ಸರ್ಕಾರವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಳೆದ ಬಾರಿ 7,900 ಎಕರೆ ಜಾಗದಲ್ಲಿ ಕುಂಭ ಮೇಳ ಆಯೋಜಿಸಲಾಗಿತ್ತು. ಈ ಬಾರಿ ಶೇ 25ರಷ್ಟು ಹೆಚ್ಚು ಸ್ಥಳವನ್ನು ಮಹಾಕುಂಭ ಮೇಳಕ್ಕಾಗಿ ಬಳಸಿಕೊಳ್ಳಲಾಗಿದೆ. ಕಳೆದ ಬಾರಿ ₹3,500 ಕೋಟಿ ವೆಚ್ಚದಲ್ಲಿ ಕುಂಭಮೇಳ ನಡೆದಿತ್ತು; ಈ ಬಾರಿ ಮಹಾಕುಂಭ ಮೇಳದ ವೆಚ್ಚ ಅದರ ಎರಡರಷ್ಟಿದೆ. 2019ರಲ್ಲಿ ಘಾಟ್‌ಗಳ ಉದ್ದ 8 ಕಿ.ಮೀ.ಇತ್ತು. ಈ ಬಾರಿ ಅದನ್ನು 12 ಕಿ.ಮೀ.ಗೆ ಹೆಚ್ಚಿಸಲಾಗಿದೆ. ರೈಲು, ಹೆದ್ದಾರಿ ಪ್ರಯಾಣದ ವ್ಯವಸ್ಥೆಯಲ್ಲೂ ಇದೇ ರೀತಿಯ ಹೆಚ್ಚಳವಾಗಿದೆ.
ಮಹಾಕುಂಭ ಮೇಳಕ್ಕಾಗಿ ಮಹಾಕುಂಭ ನಗರ ಎನ್ನುವ ತಾತ್ಕಾಲಿಕ ನಗರವನ್ನೇ ಸೃಷ್ಟಿಸಲಾಗಿದ್ದು, ಈ ಪ್ರದೇಶವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿದೆ. ಪ್ರತಿ ದಿನ ಇಲ್ಲಿ 50 ಲಕ್ಷದಿಂದ 1 ಕೋಟಿ ಭಕ್ತರಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ.
ಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಲಾಗಿದೆ. ಜಗತ್ತಿನ ವಿವಿಧೆಡೆಯಿಂದ ಬರುತ್ತಿರುವ ಜನರಿಗಾಗಿ ರೈಲು, ಬಸ್ ಹಾಗೂ ವಿಮಾನ ಸಂಚಾರದ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಾರತದ ವಿವಿಧ ನಗರಗಳಿಂದ ಪ್ರಯಾಗ್‌ರಾಜ್‌ಗೆ ವಿಮಾನ ಸೌಕರ್ಯ ಕಲ್ಪಿಸಲಾಗಿದೆ. ವಿದೇಶದಿಂದ ಬರುವ ಪ್ರವಾಸಿಗರು, ವಿದ್ವಾಂಸರು, ಸಂಶೋಧಕರು ಮುಂತಾದವರಿಗಾಗಿ 5,000 ಚದರ ಅಡಿ ಜಾಗದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಪ್ರವಾಸಿಗರು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿರಿಮೆಯನ್ನು ಹಾಗೂ ಕುಂಭಮೇಳದ ಹಿನ್ನೆಲೆಯನ್ನು ತಿಳಿಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಭಾರತದಲ್ಲಿ ಅವರ ನೆಚ್ಚಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲೂ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಟೋಲ್ ಫ್ರೀ ನಂಬರ್ ಅನ್ನು ಸಜ್ಜುಗೊಳಿಸಲಾಗಿದೆ. ಅದು 10 ವಿದೇಶಿ ಭಾಷೆಗಳು ಮತ್ತು ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಮಾಹಿತಿ ನೀಡಲಿದೆ.
ಮೇಳ ಆರಂಭಕ್ಕೂ ಎರಡು ದಿನ ಮುಂಚೆ– ಶನಿವಾರ– 25 ಲಕ್ಷ ಮಂದಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಭಾನುವಾರವೂ ಪುರುಷರು, ಮಹಿಳೆಯರು ಮಕ್ಕಳೆನ್ನದೇ ಭಾರಿ ಸಂಖ್ಯೆಯಲ್ಲಿ ಭಕ್ತರು ಶಾಹೀ ಸ್ನಾನ ಮಾಡಿದ್ದಾರೆ.
ಪಾವಿತ್ರ್ಯ, ಧಾರ್ಮಿಕತೆಯ ಜತೆಗೆ ಈ ಬಾರಿ ಕುಂಭ ಮೇಳದಲ್ಲಿ ಆಧುನಿಕತೆಯೂ ಮೇಳೈಸಿದೆ. ನೈರ್ಮಲ್ಯ, ರಕ್ಷಣೆ ಮತ್ತು ಆಧುನಿಕತೆ ಬೆರೆತ ಕಾರ್ಯಕ್ರಮ ಇದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿದೆ. ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ವ್ಯಾಪಕವಾಗಿ ಬಳಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಡಿಜಿಟಲ್ ಪ್ರವಾಸಿ ನಕ್ಷೆಗಳನ್ನು ರೂಪಿಸಲಾಗಿದೆ. ಎಐ ಮೂಲಕ ಶೌಚಾಲಯಗಳ ನೈರ್ಮಲ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಜತೆಗೆ, ಎಐ ಪ್ರೇರಿತ ಸ್ಮಾರ್ಟ್‌ಫೋನ್‌ಗಳ ಮೂಲಕ ರಕ್ಷಣಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.
ಈ ಮೇಳವು ಭಾರತದ ಪ್ರಾಚೀನ ಧಾರ್ಮಿಕ ಪರಂಪರೆಯನ್ನು ಜಗತ್ತಿಗೆ ಸಾರಲಿದೆ. ಇದು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ; ಬದಲಿಗೆ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಏಕತೆಯ ಸಂಕೇತ ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿಪಾದಿಸಿದೆ.
ಪ್ರಮುಖ ಪವಿತ್ರ ಸ್ನಾನದ ದಿನಗಳು
ಮಹಾ ಕುಂಭಮೇಳ ನಡೆಯುವ ಎಲ್ಲ ದಿನಗಳಲ್ಲೂ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಬಹುದು. ಹಾಗಿದ್ದರೂ, ಕೆಲವು ಪ್ರಮುಖ ದಿನಗಳು ಪುಣ್ಯ ಸ್ನಾನ ಮಾಡುವುದಕ್ಕೆ ಹೆಚ್ಚು ಮಂಗಳಕರ ಎಂದು ನಂಬಲಾಗಿದೆ. ಈ ಬಾರಿಯ ಕುಂಭ ಮೇಳದಲ್ಲಿ ಇಂತಹ ಆರು ದಿನಗಳು ಬರುತ್ತವೆ. ಆ ದಿನಗಳಂದು ಸಂಗಮದಲ್ಲಿ ಶಾಹೀ ಸ್ನಾನ ಮಾಡುವ ಸಾಧುಗಳು, ಅಘೋರಿಗಳು ಸೇರಿದಂತೆ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.
ಜನವರಿ 13: ಪುಷ್ಯ ಪೂರ್ಣಿಮಾ (ಹುಣ್ಣಿಮೆ)
ಜನವರಿ 14: ಮಕರ ಸಂಕ್ರಾಂತಿ
ಜನವರಿ 29: ಮೌನಿ ಅಮಾವಾಸ್ಯೆ
ಫೆಬ್ರುವರಿ 3: ಬಸಂತ್ ಪಂಚಮಿ
ಫೆಬ್ರುವರಿ 12: ಮಾಘ ಪೂರ್ಣಿಮಾ (ಹುಣ್ಣಿಮೆ)
ಫೆಬ್ರುವರಿ 26: ಮಹಾ ಶಿವರಾತ್ರಿ
12 ವರ್ಷಕ್ಕೆ ಒಂದು ಬಾರಿ
ಮಹಾಕುಂಭ ಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕಳೆದ ಬಾರಿ 2013ರಲ್ಲಿ ಪ್ರಯಾಗ್‌ರಾಜ್‌ನಲ್ಲಿಯೇ ಮಹಾಕುಂಭ ಮೇಳ ನಡೆದಿತ್ತು. ಪ್ರಯಾಗ್‌ರಾಜ್ ಸೇರಿದಂತೆ ದೇಶದ ಪ್ರಮುಖ ನಾಲ್ಕು ಧಾರ್ಮಿಕ ಸ್ಥಳಗಳಲ್ಲಿ ಮೂರು ವರ್ಷಗಳಿಗೊಮ್ಮೆ ಸರದಿಯಲ್ಲಿ ಕುಂಭಮೇಳ ನಡೆಯುತ್ತದೆ.
ಉತ್ತರಾಖಂಡದ ಹರಿದ್ವಾರದ ಗಂಗಾ ನದಿ ತೀರದಲ್ಲಿ, ಮಧ್ಯಪ್ರದೇಶದ ಉಜ್ಜಯಿನಿಯ ಶಿಪ್ರಾ ನದಿ ತೀರದಲ್ಲಿ, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋದಾವರಿ ನದಿ ತೀರದಲ್ಲಿ ಮತ್ತು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ (ಯಮುನೆ, ಗಂಗಾ ಮತ್ತು ಗುಪ್ತಗಾಮಿನಿಯಾಗಿ ಹರಿಯುವ ಸರಸ್ವತಿ ನದಿಗಳು ಕೂಡುವ ಪ್ರದೇಶ) ಕುಂಭ ಮೇಳ ನಡೆಯುತ್ತದೆ.
ಈ ನಾಲ್ಕು ಪ್ರದೇಶಗಳಲ್ಲೇ ಯಾಕೆ ಕುಂಭಮೇಳ ನಡೆಯುತ್ತದೆ ಎನ್ನುವುದಕ್ಕೆ ಪುರಾಣದ ಕಥೆಯೊಂದಿದೆ. ಸಮುದ್ರ ಮಥನದ ವೇಳೆ ಬಂದ ಅಮೃತ ಕಲಶವನ್ನು ವಿಷ್ಣುವು ಮೋಹಿನಿಯ ರೂಪದಲ್ಲಿ ಹೊತ್ತುಕೊಂಡು ಹೋಗುವಾಗ ಸಂಭವಿಸಿದ ಘರ್ಷಣೆಯಲ್ಲಿ ಅಮೃತದ ನಾಲ್ಕು ಹನಿಗಳು ಪ್ರಯಾಗ, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಗಳಲ್ಲಿರುವ ತೀರ್ಥದಲ್ಲಿ ಬಿದ್ದವು. ಈ ನಾಲ್ಕು ತೀರ್ಥಗಳು ಪವಿತ್ರವಾಗಿದ್ದು, ಇಲ್ಲಿ ಪವಿತ್ರ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ.
ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. 2019ರಲ್ಲಿ ಪ್ರಯಾಗ್‌ರಾಜ್‌ನಲ್ಲೇ ಅರ್ಧ ಕುಂಭಮೇಳ ನಡೆದಿತ್ತು. ಹಿಂದೂ ಕ್ಯಾಲೆಂಡರ್ ಅನುಸಾರ ಸೂರ್ಯ, ಚಂದ್ರ ಮತ್ತು ಗುರುಗ್ರಹದ ಚಲನೆಯನ್ನು ಆಧರಿಸಿ ಕುಂಭಮೇಳ ನಡೆಯುವ ಸ್ಥಳ, ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.
ಐತಿಹಾಸಿಕ ಹಿನ್ನೆಲೆ
ಪೌರಾಣಿಕ ಹಿನ್ನೆಲೆ ಹೊರತಾಗಿ, ಕ್ರಿ.ಪೂ 4ನೇ ಶತಮಾನದಲ್ಲಿ ಮೌರ್ಯ, ಗುಪ್ತರ ಆಡಳಿತದಲ್ಲಿ ಕುಂಭ ಮೇಳ ನಡೆದಿರುವ ಬಗ್ಗೆ ದಾಖಲೆಗಳಿವೆ ಎಂದು ಹೇಳುತ್ತದೆ ಉತ್ತರ ಪ್ರದೇಶ ಸರ್ಕಾರ ರೂಪಿಸಿರುವ ಕುಂಭ ಮೇಳಕ್ಕೆ ಸಂಬಂಧಿಸಿದ ವೆಬ್‌ಸೈಟ್. ನಂತರ ಬಂದ ರಾಜರು ಕೂಡ ಕುಂಭ ಮೇಳಕ್ಕೆ ಪ್ರೋತ್ಸಾಹ ನೀಡುತ್ತಾ ಬಂದರು. ಮೊಘಲರ ಆಡಳಿತದಲ್ಲೂ ಕುಂಭ ಮೇಳ ನಡೆಯುತ್ತಿತ್ತು. ಅಕ್ಬರ್ ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದ ಎಂಬುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಬ್ರಿಟಿಷ್ ಆಡಳಿತ ಕೂಡ ಈ ಉತ್ಸವಕ್ಕೆ ಪ್ರೋತ್ಸಾಹ ನೀಡಿತ್ತು.
ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಕುಂಭ ಮೇಳದಲ್ಲಿ ಹೆಚ್ಚೆಚ್ಚು ಸಾಧು ಸಂತರು ಒಟ್ಟಾಗಿ ಪಾಲ್ಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು ಎಂದೂ ಹೇಳಲಾಗುತ್ತಿದೆ.
1947ರಲ್ಲಿ ಸ್ವಾತಂತ್ರ್ಯ ಬಂದ ನಂತರ, ಸರ್ಕಾರವೇ ಕುಂಭ ಮೇಳವನ್ನು ಆಯೋಜಿಸುತ್ತಿದೆ. ಕುಂಭ ಮೇಳದಲ್ಲಿ ಸಾಧು ಸಂತರ 13 ಆಖಾಡಾಗಳು (ಗುಂಪು) ಸಕ್ರಿಯವಾಗಿ ಭಾಗವಹಿಸುತ್ತವೆ. ನಾಗಾ–ಸಾಧುಗಳು, ಅಘೋರಿಗಳು ಸೇರಿದಂತೆ ದೇಶದಾದ್ಯಂತ ವಿವಿಧ ರಾಜ್ಯಗಳ ಸಾಧು ಸಂತರು ಈ ಕುಂಭಮೇಳದಲ್ಲಿ ಭಾಗವಹಿಸುವುದು ವಿಶೇಷ.
ಕುಂಭ ಮೇಳದಲ್ಲಿ ‘ಒಟ್ಟಿಗೆ ಚುನಾವಣೆ’ ಬಗ್ಗೆ ಉಪನ್ಯಾಸ
ಕುಂಭ ಮೇಳದಲ್ಲಿ ಹರಿದ್ವಾರ ಮೂಲದ ‘ದಿವ್ಯ ಪ್ರೇಮ ಸೇವಾ ಮಿಷನ್’ ಸಂಸ್ಥೆ ಏಳು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಿದೆ. ಅವುಗಳ ಪೈಕಿ ವಿವಾದಾತ್ಮಕವಾದ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯೂ ಒಂದು ವಿಷಯವಾಗಿದೆ.
ಮಹಾಕುಂಭ ಮೇಳದ ಮುನ್ನಾ ದಿನವಾದ ಭಾನುವಾರದಂದು ಉಪನ್ಯಾಸ ಸರಣಿ ಆರಂಭವಾಗಿದ್ದು, ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ‘ಸ್ವಾಮಿ ವಿವೇಕಾನಂದ: ಸನಾತನ ಧರ್ಮದ ವಿಶ್ವ ದೃಷ್ಟಿ’ (ಸನಾತನ್ ಧರ್ಮಕಿ ವೈಶ್ವಿಕ್ ದೃಷ್ಟಿ) ಎನ್ನುವ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜನವರಿ 18ರಂದು ‘ಒಂದು ರಾಷ್ಟ್ರ, ಒಂದು ಚುನಾವಣೆ: ವಿಕಸಿತ ಭಾರತ ಮತ್ತು ಆರ್ಥಿಕ, ರಾಜನೀತಿ ಸುಧಾರಣೆ’ ಬಗ್ಗೆ ಉಪನ್ಯಾಸವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುವಂತೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಹ್ವಾನ ಪತ್ರ ಕಳಿಸಲಾಗಿದೆ ಎಂದು ‘ದಿವ್ಯ ಪ್ರೇಮ ಸೇವಾ ಮಿಷನ್’ ತಿಳಿಸಿದೆ.
ಕೋವಿಂದ್ ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದರು.
ಜಾಲತಾಣದಲ್ಲಿ ಮಹಾ ಕುಂಭ ಮೇಳ
ಸಾಮಾಜಿಕ ಜಾಲತಾಣಗಳಲ್ಲಿ ಮಹಾ ಕುಂಭ ಮೇಳ ರಾರಾಜಿಸುತ್ತಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂದಿಸಿದ ವಿವಿಧ ರೀತಿಯ ಮಾಹಿತಿ, ಚಿತ್ರ, ವಿಡಿಯೊಗಳನ್ನು ಭಕ್ತರು ತಮ್ಮ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕೆಲವರು ಮನೆಗಳಲ್ಲಿರುವ ತಮ್ಮ ಕುಟುಂಬಗಳ ಸದಸ್ಯರಿಗೆ ಸ್ಮಾರ್ಟ್‌ಫೋನ್‌ಗಳ ಮೂಲಕ ಸಂಗಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ವರ್ಚುಯಲ್ ದರ್ಶನ ಮಾಡಿಸುತ್ತಿದ್ದಾರೆ.
ಅಹಿತಕರ ಘಟನೆಗಳು ನಡೆಯದಂತೆ ಸಾಮಾಜಿಕ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಅನಪೇಕ್ಷಿತ ಪೋಸ್ಟ್‌ಗಳನ್ನು ಪತ್ತೆ ಹಚ್ಚಿ, ಅವು ಹರಡದಂತೆ ತಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ನಡುವೆ ಅತ್ಯುತ್ತಮ ಸಮನ್ವಯ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಧಾರ:ಪಿಟಿಐ, ಮಹಾಕುಂಭಮೇಳ ವೆಬ್‌ಸೈಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.