ಹ್ಯೂಮನ್ ಮೆಟಾನ್ಯೂಮೋವೈರಸ್ (ಎಚ್‌ಎಂಪಿವಿ) ಎನ್ನುವ ಈ ವೈರಾಣು ಸೋಂಕಿನ ಎರಡು ಪ್ರಕರಣಗಳು ಕರ್ನಾಟಕದಲ್ಲಿ ದೃಢಪಟ್ಟಿವೆ. ಕೋವಿಡ್ ಕಾಲದ ಸಾವು–ನೋವಿನ ನೆನಪು ಇನ್ನೂ ಕಾಡುತ್ತಿರುವುದರಿಂದ ಸಹಜವಾಗಿಯೇ ಈ ವೈರಸ್ ಬಗ್ಗೆ ಹಲವು ರೀತಿಯ ವದಂತಿ ಹಬ್ಬುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಆದರೆ, ಶ್ವಾಸಕೋಶದ ಸೋಂಕನ್ನು ಉಂಟುಮಾಡುವ ಈ ವೈರಸ್ ಮಾರಣಾಂತಿಕ ಅಲ್ಲ, ಜನ ಆತಂಕ ಪಡುವ ಅಗತ್ಯವೇ ಇಲ್ಲ ಎಂದು ವೈದ್ಯರು ದೃಢವಾಗಿ ಹೇಳಿದ್ದಾರೆ
ಕೋವಿಡ್ ಎರಡು ವರ್ಷಕ್ಕೂ ಹೆಚ್ಚು ಕಾಲ ಜಗತ್ತನ್ನು ನಲುಗಿಸಿಬಿಟ್ಟಿತ್ತು. ಕೊರೊನಾ ವೈರಸ್ ಮೊದಲು ತನ್ನ ಅಬ್ಬರವನ್ನು ತೋರಿದ್ದು ಚೀನಾದಲ್ಲಿ. ಸದ್ಯ, ಹ್ಯೂಮನ್ ಮೆಟಾನ್ಯೂಮೋವೈರಸ್ (ಎಚ್‌ಎಂಪಿವಿ) ಎನ್ನುವ ಶ್ವಾಸಕೋಶದ ಸೋಂಕು ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಮತ್ತು ಅಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಉಂಟಾಗಿದೆ ಎಂದೂ ಕೆಲವರು ವದಂತಿ ಹರಡುತ್ತಿದ್ದಾರೆ. ಆದರೆ, ಅದನ್ನು ವಿಶ್ವ ಆರೋಗ್ಯ ಸಂಸ್ಥೆ ಆಗಲಿ, ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಆಗಲಿ ದೃಢಪಡಿಸಿಲ್ಲ.
ಆದಾಗ್ಯೂ, ಉತ್ತರ ಚೀನಾದಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ, ಎಚ್‌ಎಂಪಿವಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅಲ್ಲಿನ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋಂಕಿನ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು; ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಿಡಿಸಿ ಎಚ್ಚರಿಕೆ ನೀಡಿದೆ ಎಂದೂ ವರದಿಯಾಗಿದೆ.
ಚಳಿಗಾಲದಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುವುದು ಸಹಜ. ಈ ಬಾರಿ ಕಾಣಿಸಿಕೊಂಡಿರುವ ಸೋಂಕು ಕಡಿಮೆ ತೀವ್ರತೆಯಿಂದ ಕೂಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಣ್ಣ ಪ್ರಮಾಣದಲ್ಲಿದೆ. ಆದರೆ, ಹೊಸ ಪರಿಕರಗಳ ಮೂಲಕ ಎಚ್‌ಎಂಪಿವಿ ಸೋಂಕನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ಅದರಿಂದ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ ಎನ್ನಲಾಗಿದೆ.
ಎಚ್‌ಎಂಪಿವಿ ಪ್ರಕರಣಗಳ ಬಗ್ಗೆ ಚೀನಾ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ, ಅಂಕಿಅಂಶ ಬಿಡುಗಡೆ ಮಾಡಿಲ್ಲ. ಆದರೆ, ಮಲೇಷ್ಯಾ ಸೇರಿದಂತೆ ನೆರೆಯ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಎಚ್‌ಎಂಪಿವಿ ಪ್ರಕರಣಗಳು ಹೆಚ್ಚುತ್ತಿವೆ. ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಪ್ರಕಾರ, 2024ರ ಡಿಸೆಂಬರ್ 15ರ ಹೊತ್ತಿಗೆ ಅಲ್ಲಿ ಒಂದೇ ವಾರದಲ್ಲಿ 94,259 ಪ್ರಕರಣಗಳು ವರದಿಯಾಗಿವೆ. ಜಪಾನ್‌ನಲ್ಲಿ ಜನವರಿ 3ರ ಹೊತ್ತಿಗೆ ಒಟ್ಟು 7.18 ಲಕ್ಷ ಪ್ರಕರಣಗಳು ವರದಿಯಾಗಿವೆ ಎಂದು ‘ಡೌನ್ ಟು ಅರ್ಥ್’ ಮಾಹಿತಿ ನೀಡಿದೆ.
ಕೋವಿಡ್–19ಗೆ ಕಾರಣವಾಗಿದ್ದ ಸಾರ್ಸ್–ಕೋವಿಡ್–2 ಹೊಸ ವೈರಾಣು ಆಗಿತ್ತು. ಆದರೆ, ಎಚ್‌ಎಂಪಿವಿ ಈ ಹಿಂದೆಯೇ ಕಂಡುಬಂದಿದ್ದ ವೈರಸ್. 2001ರಲ್ಲಿ ನೆದರ್ಲೆಂಡ್ಸ್‌ನ ಕೆಲವು ಮಕ್ಕಳಲ್ಲಿ ಮೊದಲ ಬಾರಿಗೆ ಇದು ಪತ್ತೆಯಾಗಿತ್ತು. ಅದಕ್ಕೂ ಮೊದಲೇ ಜಗತ್ತಿನ ಹಲವು ಭಾಗಗಳಲ್ಲಿ ಈ ವೈರಸ್ ಸೋಂಕನ್ನು ಉಂಟುಮಾಡಿತ್ತು ಎಂದೂ ಹೇಳಲಾಗಿದೆ. ಇದು ಹಳೆಯ ವೈರಸ್ ಆದ್ದರಿಂದ ಕೊರೊನಾ ವೈರಸ್‌ನಂತೆ ಇದರಿಂದ ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ಉಂಟಾಗುತ್ತದೆ ಎಂದು ಹೇಳಲಾಗದು ಎನ್ನುವುದು ತಜ್ಞರ ಅಭಿಮತ.
ಹಳೆಯ ವೈರಸ್ ಆದರೂ ಎಚ್‌ಎಂಪಿವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆಯನ್ನು ಇದುವರೆಗೂ ಅಭಿವೃದ್ಧಿಪಡಿಸಿಲ್ಲ. ಈ ದಿಸೆಯಲ್ಲಿ ಕೆಲವು ಪ್ರಯೋಗಗಳು ನಡೆಯುತ್ತಿವೆಯಾದರೂ ಯಾವುದೂ ಫಲಪ್ರದವಾಗಿಲ್ಲ. ಜತೆಗೆ, ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ದಿಷ್ಟವಾದ ವೈರಾಣು ನಿರೋಧಕಗಳು (ಆ್ಯಂಟಿವೈರಲ್ಸ್) ಲಭ್ಯವಿಲ್ಲ. ಆದರೆ, ದಶಕಗಳಿಂದ ಈ ಸೋಂಕು ಕೋಟ್ಯಂತರ ಮಂದಿಗೆ ಬಂದುಹೋಗಿರುವ ಸಾಧ್ಯತೆ ಇದ್ದು, ಅವರಲ್ಲಿ ರೋಗನಿರೋಧ ಶಕ್ತಿ ಬೆಳೆದಿರುತ್ತದೆ. ಹಾಗಾಗಿ ಹೆಚ್ಚಿನ ಅಪಾಯ ಇಲ್ಲ. ನವಜಾತ ಶಿಶುಗಳು, ಹದಿಹರೆಯದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವೃದ್ಧರಲ್ಲಿ ವೈರಾಣು ತೀವ್ರ ಕಾಯಿಲೆ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಎಚ್‌ಎಂಪಿವಿ ಮಾರಣಾಂತಿಕ ಅಲ್ಲ. ಹಾಗಾಗಿ ಜನ ಕಳವಳ ಪಡಬೇಕಾದ ಅಗತ್ಯ ಇಲ್ಲ. ಆದರೆ, ರೋಗನಿರೋಧ ಶಕ್ತಿ ಕಡಿಮೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಎಚ್ಎಂಪಿವಿ ಹೊಸ ವೈರಸ್ ಅಲ್ಲ. ಸಾವಿರಾರು ವರ್ಷಗಳಿಂದ ಭೂಮಿಯಲ್ಲಿದೆ. ಆಧುನಿಕ ರೋಗ ಪತ್ತೆ ಪರೀಕ್ಷೆ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ 2001ರಲ್ಲಿ ಈ ವೈರಾಣು ಪತ್ತೆಯಾಗಿದೆಯಷ್ಟೆ. ಈ ವೈರಸ್ ಸೋಂಕಿನಿಂದ ಸಾವು ಸಂಭವಿಸುವುದಿಲ್ಲ. ಜನರು ಅನಗತ್ಯವಾಗಿ ಆತಂಕ ಪಡಬೇಕಾಗಿಲ್ಲ. ಸರ್ಕಾರ, ಮಾಧ್ಯಮಗಳು ಜನರಲ್ಲಿ ಭಯ ಬಿತ್ತುವುದೂ ಬೇಡ. ನಾವೆಲ್ಲ ಈ ಸೋಂಕಿಗೆ ಈಗಾಗಲೇ ಒಳಗಾಗಿದ್ದೇವೆ. ನಾವು ಪರೀಕ್ಷೆ ಮಾಡಿಸಿರಲಿಲ್ಲ. ಹಾಗಾಗಿ, ಗೊತ್ತಾಗಿಲ್ಲ ಅಷ್ಟೆ. ಈಗ ಮಕ್ಕಳಿಗೆ ಮೊದಲ ಬಾರಿಗೆ ವೈರಸ್ ತಗುಲುತ್ತಿರುವುದರಿಂದ ಅವರಲ್ಲಿ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಒಮ್ಮೆ ಸೋಂಕು ಕಾಣಿಸಿಕೊಂಡ ನಂತರ ಅವರಲ್ಲೂ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ. ಮುಂದೆ ಅವರಿಗೂ ವೈರಾಣುವಿನಿಂದ ಸಮಸ್ಯೆ ಕಾಣಿಸದು. ಎಚ್‌ಎಂಪಿವಿಗೆ ನಿರ್ದಿಷ್ಟ ವೈರಸ್ ನಿರೋಧಕ ಔಷಧ ಇಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಕಾಯಿಲೆಯ ಹೆಸರಿನಲ್ಲಿ ಸರ್ಕಾರ ನಿರ್ಬಂಧಗಳನ್ನು ಹೇರಲು ಮುಂದಾಗಬಾರದು. ಶಾಲೆಗಳನ್ನು ಮುಚ್ಚುವುದು, ಶೀತ ನೆಗಡಿ ಕೆಮ್ಮುನಿಂದ ಬಳಲುತ್ತಿರುವ ಮಕ್ಕಳನ್ನು ತರಗತಿಯಿಂದ ಹೊರಗಡೆ ಹಾಕುವಂತಹ ಕ್ರಮಗಳನ್ನು ತೆಗೆದುಕೊಳ್ಳಬಾರದು.
–ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯ
ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯ
ಕೋವಿಡ್–19, ಎಚ್1ಎನ್1 ರೀತಿಯಲ್ಲೇ ಇದೂ ಒಂದು ವೈರಾಣುವಿನಿಂದ ಉಂಟಾಗುವ ಸೋಂಕು. ಇದು ಹೊಸದೇನಲ್ಲ; ರೆಸ್ಪಿರೇಟರಿ ಸಿನ್ಸಿಟಿಯರ್ ವೈರಸ್ (ಆರ್‌ಎಸ್‌ವಿ) ರೀತಿಯ ಮತ್ತೊಂದು ಹಳೆಯ ವೈರಸ್. ಅಕ್ಟೋಬರ್–ನವೆಂಬರ್‌ನಿಂದ ಫೆಬ್ರುವರಿ–ಮಾರ್ಚ್‌ವರೆಗೆ ಫ್ಲೂ ಸೀಸನ್ ಆದ್ದರಿಂದ ವೈರಲ್ ಸೋಂಕುಗಳು ಬರುವುದು ಸಹಜ. ಅವುಗಳಲ್ಲಿ ಇದೂ ಒಂದು. ಹೆಚ್ಚಿನ ಜನರಲ್ಲಿ ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ, ಶ್ವಾಸಕೋಶದ ಸಮಸ್ಯೆ ಇರುವವರು, ಬ್ರಾಂಕೈಟಿಸ್ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಚಿಕ್ಕಮಕ್ಕಳಲ್ಲಿ ತೀವ್ರ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಮ್ಮು, ಶೀತದ ಜತೆಗೆ ಹೊಟ್ಟೆನೋವು, ಭೇದಿ ಕೂಡ ಕಾಣಿಸಿಕೊಳ್ಳಬಹುದು.
ಎಚ್‌ಎಂಪಿವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಲಕ್ಷಣಗಳನ್ನು ಅನುಸರಿಸಿ ಚಿಕಿತ್ಸೆ ಕೊಡಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ಇತರರಿಂದ ಆದಷ್ಟೂ ದೂರ ಇರಬೇಕು, ಮನೆಯಲ್ಲೇ ಉಳಿದು ವಿಶ್ರಾಂತಿ ಮಾಡಬೇಕು. ಸ್ವಯಂ ನಿಯಂತ್ರಣ ಮತ್ತು ರಕ್ಷಣೆ ಬಹಳ ಮುಖ್ಯ. ಪ್ರಯಾಣ ಮಾಡದಿರುವುದು ಉತ್ತಮ. ಎರಡು ಮೂರು ದಿನದಲ್ಲಿ ಲಕ್ಷಣಗಳು ಕಡಿಮೆ ಆಗದಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಆತಂಕ ಪಡುವ ಅಗತ್ಯ ಇಲ್ಲವಾದರೂ, ಉಪೇಕ್ಷೆ ಮಾಡುವುದು ಸಲ್ಲದು.
–ಡಾ.ಹುಲಿರಾಜ್ ನಾರಾಯಣಸ್ವಾಮಿ ಮುಖ್ಯಸ್ಥ, ಶ್ವಾಸಕೋಶ ವಿಭಾಗ, ಕಿಮ್ಸ್ ಬೆಂಗಳೂರು
ಎಚ್ಎಂಪಿವಿ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ಒಬ್ಬರಿಂದ ಇನ್ನೊಬ್ಬರಿಗೆ ವ್ಯತ್ಯಾಸವಿರುತ್ತದೆ. ರೋಗಿಯ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಇದು ಅವಲಂಬಿಸಿದೆ
ಸೌಮ್ಯ ರೂಪದ ಪ್ರಕರಣಗಳಲ್ಲಿ ಸೋಂಕಿತರಲ್ಲಿ ಶೀತ–ನೆಗಡಿ, ಗಂಟಲು ನೋವು, ಕೆಮ್ಮು ಮತ್ತು ಜ್ವರ ಕಂಡು ಬರಬಹುದು
ಮಧ್ಯಮ ತೀವ್ರತೆಯ ಪ್ರಕರಣಗಳಲ್ಲಿ ನಿರಂತರ ಕೆಮ್ಮು, ಉಸಿರಾಟದ ಸಮಸ್ಯೆ/ಉಬ್ಬಸ ಮತ್ತು ಬಳಲಿಕೆ ಕಾಣಿಸಿಕೊಳ್ಳಬಹುದು
ಗಂಭೀರ ಪ್ರಕರಣಗಳಲ್ಲಿ ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್), ನ್ಯುಮೋನಿಯಾ ಕಾಡಬಹುದು
ನವಜಾತ ಶಿಶುಗಳು, ವೃದ್ಧರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಸೇರಿದಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಎಚ್‌ಎಂಪಿವಿ ಕೊಂಚ ತೀವ್ರವಾಗಿ ಕಾಡುತ್ತದೆ. ತೀವ್ರ ಉಸಿರಾಟ ಸಮಸ್ಯೆ (ಸಾರಿ) ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗಿ ಬರಬಹುದು
ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (ಆರ್‌ಎಸ್‌ವಿ), ಶೀತ ಜ್ವರ ನೆಗಡಿಯಂತಹ ಸಾಮಾನ್ಯ ಸಾಂಕ್ರಾಮಿಕ ರೋಗ ಹರಡುವ ಮಾದರಿಯಲ್ಲಿ ಎಚ್‌ಎಂಪಿವಿ ಕೂಡ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ
ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಎಂಜಲು, ಸಿಂಬಳದ ಹನಿಗಳ ಮೂಲಕ ಅಥವಾ ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಂದಾಗ ಅಥವಾ ಎಂಜಲು, ಸಿಂಬಳ ಬಿದ್ದಿರುವ ಸ್ಥಳ, ಬಟ್ಟೆಯನ್ನು ಸ್ಪರ್ಶಿಸುವುದರಿಂದಲೂ ವೈರಸ್ ಹರಡುತ್ತದೆ
ದೇಹದ ಸ್ವಚ್ಛತೆ ಕಾಪಾಡುವುದು, ಅದರಲ್ಲೂ ವಿಶೇಷವಾಗಿ ಕೈಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ (ಸಾಬೂನು ಬಳಸಿ ಕೈ ತೊಳೆಯುವುದು) ಸೋಂಕು ಹರಡುವಿಕೆ ತಡೆಯಬಹುದು
ಸೋಂಕಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಮುಖವನ್ನು ಮುಚ್ಚಿದರೆ, ಇಲ್ಲವೇ ಮಾಸ್ಕ್ ಧರಿಸುವುದರ ಮೂಲಕ ವೈರಸ್ ಹರಡುವುದನ್ನು ನಿಯಂತ್ರಿಸಬಹುದು
ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬರುವುದನ್ನು ತಪ್ಪಿಸುವುದರಿಂದಲೂ ಸೋಂಕು ಪಸರಿಸುವಿಕೆಗೆ ಕಡಿವಾಣ ಹಾಕಬಹುದು
2001–ಮೊದಲ ಬಾರಿಗೆ ನೆದರ್ಲೆಂಡ್ಸ್‌ನಲ್ಲಿ ವೈರಸ್ ಪತ್ತೆ
ಆಧಾರ: ಪಿಟಿಐ, ಡೌನ್ ಟು ಅರ್ಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.