ಆಧಾರ್, ಪಾನ್ ಅಥವಾ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದರೆ ದೇಶದ ಪೌರತ್ವ ಪಡೆದಂತೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಇದು ದೇಶದ ಪೌರತ್ವವನ್ನು ನಿರೂಪಿಸುವ ವಿಧಾನ ಮತ್ತು ದಾಖಲೆಗಳ ಬಗ್ಗೆ ನ್ಯಾಯಾಲಯದ ಮಹತ್ವದ ಹೇಳಿಕೆಯಾಗಿದೆ. ಭಾರತದ ಪೌರರು ಅನ್ನಿಸಿಕೊಳ್ಳಲು ಯಾವ ಅರ್ಹತೆ ಹೊಂದಿರಬೇಕು ಮತ್ತು ಯಾವ ಮಾನದಂಡಗಳನ್ನು ಪೂರೈಸಬೇಕು ಎನ್ನುವುದನ್ನು ಪೌರತ್ವ ಕಾಯ್ದೆ–1955ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾಲದಿಂದ ಕಾಲಕ್ಕೆ ಅದಕ್ಕೆ ಹಲವು ತಿದ್ದುಪಡಿಗಳನ್ನು ತರಲಾಗಿದ್ದು, ಕೆಲವು ತಿದ್ದುಪಡಿಗಳು ಕೋರ್ಟ್ ಮೆಟ್ಟಿಲನ್ನೂ ಏರಿವೆ. ಕೆಲವು ತಿದ್ದುಪಡಿಗಳಿಗೆ ವಿರೋಧವೂ ವ್ಯಕ್ತವಾಗಿದೆ. ಆದರೆ, ಪೌರತ್ವ ಕಾಯ್ದೆ–1955ರ ಮೂಲ ಅಂಶಗಳು ಹಾಗೆಯೇ ಉಳಿದಿವೆ
ಭಾರತದ ಪೌರತ್ವಕ್ಕೆ ಯಾರು ಅರ್ಹರು ಎನ್ನುವುದನ್ನು ‘ಪೌರತ್ವ ಕಾಯ್ದೆ– 1955’ ವಿವರಿಸುತ್ತದೆ. ಕಾಯ್ದೆಯ 3, 4, 5, 6 ಮತ್ತು 7ನೇ ಸೆಕ್ಷನ್‌ಗಳು ಪೌರತ್ವ ಪ್ರಾಪ್ತವಾಗುವ ಬಗೆಯನ್ನು ಒಳಗೊಂಡಿವೆ.
ಸೆಕ್ಷನ್ 3– ಜನನದ ಆಧಾರದಲ್ಲಿ ಪೌರತ್ವ: ಕಾಯ್ದೆಯ ಸೆಕ್ಷನ್ 3ರಲ್ಲಿ ಹುಟ್ಟಿನ ಆಧಾರದಲ್ಲಿ ಪೌರತ್ವ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಎ) ವ್ಯಕ್ತಿಯು 1950ರ ಜ. 26 ಅಥವಾ 1987ರ ಜುಲೈ 1ಕ್ಕೂ ಮೊದಲು ಜನಿಸಿರಬೇಕು. ಬಿ) 1987ರ ಜುಲೈ 1ರಂದು ಅಥವಾ ನಂತರ, ಅಂದರೆ 2003ರ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೂ ಮುನ್ನ ಜನಿಸಿರಬೇಕು. ಮತ್ತು ಅವರು ಹುಟ್ಟಿದಾಗ ಅವರ ತಂದೆ–ತಾಯಿ ಪೈಕಿ ಯಾರಾದರೂ ಭಾರತದ ಪೌರರಾಗಿರಬೇಕು. ಸಿ) 2003ರ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯಾದ ನಂತರ ಜನಿಸಿದವರಾಗಿದ್ದು, ಅವರ ತಂದೆ–ತಾಯಿ ಇಬ್ಬರೂ ಭಾರತದ ಪೌರರಾಗಿರಬೇಕು; ಇಲ್ಲವೇ ಇಬ್ಬರ ಪೈಕಿ ಒಬ್ಬರು ಪೌರರಾಗಿದ್ದು, ಇನ್ನೊಬ್ಬರು ಅಕ್ರಮ ವಲಸಿಗರಾಗಿಲ್ಲದಿದ್ದರೆ, ಆ ವ್ಯಕ್ತಿಗೆ ಹುಟ್ಟಿನ ಮೂಲಕ ಪೌರತ್ವ ಸಿಗುತ್ತದೆ.
ಸೆಕ್ಷನ್ 4– ವಂಶಪಾರಂಪರ್ಯದ ಆಧಾರಲ್ಲಿ ಪೌರತ್ವ: ಇದರಲ್ಲಿ ವಂಶಪಾರಂಪರ್ಯವಾಗಿ ಹೇಗೆ ಪೌರತ್ವ ದಕ್ಕುತ್ತದೆ ಎನ್ನುವುದನ್ನು ವಿವರಿಸಲಾಗಿದೆ. 4(ಎ) ಪ್ರಕಾರ, 1950ರ ಜನವರಿ 26ರಂದು ಅಥವಾ ನಂತರದಲ್ಲಿ (1992ರ ಡಿ.10ಕ್ಕೂ ಮುಂಚೆ) ಜನಿಸಿರಬೇಕು. ವ್ಯಕ್ತಿಯು ಜನಿಸಿದಾಗ ಅವರ ತಂದೆಯು ಭಾರತದ ಪೌರರಾಗಿರಬೇಕು. 4(ಬಿ) ಪ್ರಕಾರ, 1992ರ ಡಿ.10ರ ನಂತರ ಜನಿಸಿದವರಾಗಿದ್ದು, ಆ ಸಂದರ್ಭದಲ್ಲಿ ಅವರ ತಂದೆ–ತಾಯಿ ಯಾರಾದರೂ ಭಾರತದ ಪೌರರಾಗಿದ್ದರೆ, ಅವರಿಗೆ ವಂಶಪಾರಂಪರ್ಯವಾಗಿ ಭಾರತದ ಪೌರತ್ವ ಸಿಗುತ್ತದೆ.
ಸೆಕ್ಷನ್ 5–ನೋಂದಣಿ ಮೂಲಕ ಪೌರತ್ವ: ಈ ಸೆಕ್ಷನ್‌ನಲ್ಲಿ ನೋಂದಣಿ ಮೂಲಕ ಪೌರತ್ವ ಪಡೆಯುವ ಬಗೆಗಳನ್ನು ವಿವರಿಸಲಾಗಿದೆ. ಹುಟ್ಟಿನ ಮೂಲದಿಂದ ಆಗಲಿ ಅಥವಾ ವಂಶಪಾರಂಪರ್ಯವಾಗಿ ಆಗಲಿ ವ್ಯಕ್ತಿಗೆ ಪೌರತ್ವ ಸಿಗದೇ ಇದ್ದರೆ, ಅವರು ಅಕ್ರಮ ವಲಸಿಗರಲ್ಲದಿದ್ದರೆ, ನೋಂದಣಿಯ ಮೂಲಕ ಭಾರತದ ಪೌರರಾಗಲು ಸಾಧ್ಯವಿದೆ. ಅದಕ್ಕೆ ಹಲವು ನಿಯಮ ನಿಬಂಧನೆಗಳಿದ್ದು, ಅವುಗಳನ್ನು ಈ ಸೆಕ್ಷನ್‌ನ ವಿವಿಧ ಉಪಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ
ಸೆಕ್ಷನ್ 6– ದೇಶೀಕರಣದ ಮೂಲಕ ಪೌರತ್ವ : ದೇಶೀಕರಣದ (ನ್ಯಾಚುರಲೈಸೇಷನ್) ಮೂಲಕ ಭಾರತದ ಪೌರರಾಗಲು ಈ ಸೆಕ್ಷನ್ ಅವಕಾಶ ನೀಡುತ್ತದೆ. ಸೆಕ್ಷನ್ 6ರ ಉಪಸೆಕ್ಷನ್ 1ರ ಪ್ರಕಾರ, ಯಾವುದೇ ವಯಸ್ಕ ವ್ಯಕ್ತಿ ಅಕ್ರಮ ವಲಸಿಗನಲ್ಲದಿದ್ದರೆ ನಿಗದಿತ ರೀತಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ನಿಯಮಗಳ ಅನುಸಾರ ಅರ್ಜಿದಾರನು ದೇಶೀಕರಣಕ್ಕೆ ಅರ್ಹ ಎಂದು ಕೇಂದ್ರ ಸರ್ಕಾರಕ್ಕೆ ಮನದಟ್ಟಾದರೆ, ಅವರಿಗೆ ಪೌರತ್ವ (ದೇಶೀಕರಣ ಪ್ರಮಾಣಪತ್ರ) ನೀಡಲಾಗುತ್ತದೆ. ಅರ್ಜಿದಾರನು ತತ್ವಶಾಸ್ತ್ರ, ಕಲೆ, ವಿಜ್ಞಾನ, ವಿಶ್ವಶಾಂತಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರೆ, ಅವರಿಗೆ ಕೇಂದ್ರ ಸರ್ಕಾರವು ನಿಯಮಗಳಲ್ಲಿ ವಿನಾಯಿತಿಯನ್ನೂ ನೀಡಬಹುದು.
ಸೆಕ್ಷನ್ 6ಎ, 6(1): ಕೇಂದ್ರ ಸರ್ಕಾರ ಮತ್ತು ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ನಡುವಿನ ‘ಅಸ್ಸಾಂ ಒಪ್ಪಂದ’ದಂತೆ 1985ರಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು, ಕಾಯ್ದೆಯ ಸೆಕ್ಷನ್ 6ಕ್ಕೆ ಉಪ ಸೆಕ್ಷನ್ ‘ಎ’ ಅನ್ನು ಸೇರಿಸಲಾಯಿತು. 1966ರ ಜ.1ರಿಂದ 1971ರ ಮಾರ್ಚ್ 25ರ ನಡುವೆ ಅಸ್ಸಾಂಗೆ ವಲಸೆ ಬಂದವರಿಗೆ ಭಾರತದ ಪೌರತ್ವ ನೀಡಲು ಈ ಸಬ್‌ಸೆಕ್ಷನ್ ಅವಕಾಶ ಕಲ್ಪಿಸುತ್ತದೆ. 2024ರಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ ‘6ಎ’ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು.
ದೇಶೀಕರಣ ಮೂಲಕ ಪೌರತ್ವ ನೀಡುವ ಕಾಯ್ದೆಯ ಸೆಕ್ಷನ್ 6ರ ಉಪ ಸೆಕ್ಷನ್ 1ರ ಪ್ರಕಾರ, ದೇಶದಲ್ಲಿ ಕನಿಷ್ಠ 12 ವರ್ಷಗಳಿಂದ ನೆಲಸಿರುವ ವಯಸ್ಕ ವಿದೇಶಿ ಪ್ರಜೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಅವರು ಅಧಿಕೃತ ವಿದೇಶಿ ಪಾಸ್‌ಪೋರ್ಟ್ ಪ್ರತಿ, ವಾಸಕ್ಕಾಗಿ ನೀಡಲಾದ ಪರವಾನಗಿ ಪತ್ರದ ಪ್ರತಿ, ಪೌರತ್ವ ಕಾಯ್ದೆಯ ಅಡಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ₹1,500 ಠೇವಣಿ ಇಟ್ಟಿರುವ ಬ್ಯಾಂಕ್ ಚಲನ್ ಪ್ರತಿ, ಅರ್ಜಿದಾರರ ಸ್ವಯಂ ದೃಢೀಕರಣ ಪ್ರಮಾಣಪತ್ರ ಮತ್ತು ಅರ್ಜಿದಾರರ ಉತ್ತಮ ನಡವಳಿಕೆಗೆ ಸಂಬಂಧಿಸಿದಂತೆ ಇಬ್ಬರು ಭಾರತೀಯರು ನೀಡಿರುವ ದೃಢೀಕರಣಗಳು, ಭಾರತದಲ್ಲಿ ಚಾಲ್ತಿಯಲ್ಲಿ ರುವ ಯಾವುದೇ ಭಾಷೆಯ ಬಗ್ಗೆ ಅರ್ಜಿದಾರರಿಗೆ ತಿಳಿವಳಿಕೆ ಇದೆ ಎಂದು ದೃಢೀಕರಿಸಿರುವ ಎರಡು ಭಾಷಾ ಪ್ರಮಾಣಪತ್ರಗಳು, ಪೌರತ್ವಕ್ಕಾಗಿ ಮನವಿ ಮಾಡುವ ಕುರಿತು ಅರ್ಜಿದಾರರ ಉದ್ದೇಶಕ್ಕೆ ಸಂಬಂಧಿಸಿದಂತೆ ಎರಡು ದಿನಪತ್ರಿಕೆ ಗಳಲ್ಲಿ ಭಿನ್ನ ದಿನಾಂಕಗಳಲ್ಲಿ ಪ್ರಕಟವಾಗಿರುವ ಪ್ರಕಟಣೆಗಳನ್ನು ದಾಖಲೆಯಾಗಿ ಸಲ್ಲಿಸಬೇಕಾಗುತ್ತದೆ.
ಸೆಕ್ಷನ್ 7– ದೇಶದ ವ್ಯಾಪ್ತಿಗೆ ಒಳಪಟ್ಟ ಪ್ರದೇಶದವರಿಗೆ ಪೌರತ್ವ: ಒಂದು ಪ್ರದೇಶವನ್ನು ದೇಶದ ಭಾಗವನ್ನಾಗಿಸಿಕೊಳ್ಳುವ ಮೂಲಕ, ಆ ಪ್ರದೇಶದಲ್ಲಿರುವವರಿಗೆ ಪೌರತ್ವ ನೀಡುವುದನ್ನು ಈ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಯಾವುದೇ ಒಂದು ಪ್ರದೇಶವು ದೇಶದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿದರೆ, ಆ ಪ್ರದೇಶಕ್ಕೆ ಸಂಬಂಧಿಸಿದ ವ್ಯಕ್ತಿಗಳು ಆದೇಶವು ಜಾರಿಯಾದ ದಿನದಿಂದ ಭಾರತದ ಪೌರರಾಗುತ್ತಾರೆ.
ಪೌರತ್ವ ಕಾಯ್ದೆ–1955ಕ್ಕೆ ಈವರೆಗೆ ಆರು ಬಾರಿ ತಿದ್ದುಪಡಿ ಮಾಡಲಾಗಿದೆ. 1986, 1992, 2003, 2005, 2015, ಮತ್ತು 2019ರಲ್ಲಿ ಕಾಯ್ದೆಯಲ್ಲಿನ ಕೆಲವು ಸೆಕ್ಷನ್, ಉಪಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗಿದೆ.
2019ರಲ್ಲಿ ಮಾಡಲಾದ ತಿದ್ದುಪಡಿ ಪ್ರಮುಖವಾದುದು. ಈ ತಿದ್ದುಪಡಿಗೆ ವಿರೋಧ ಪಕ್ಷಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ವಿರೋಧವ್ಯಕ್ತವಾಗಿತ್ತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನಗಳಿಂದ 2014ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಇಲ್ಲಿನ ಪೌರತ್ವ ಹೊಂದಲು ಈ ತಿದ್ದುಪಡಿ ಅನುಕೂಲ ಕಲ್ಪಿಸಿತ್ತು. ಈ ಮೂರು ದೇಶಗಳ ಆರು ಧರ್ಮಗಳಿಗೆ ಸೇರಿದ ಜನರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಭಾರತದಲ್ಲಿ ನೆಲಸಿರುವ ಅವಧಿಯ ಮಿತಿಯನ್ನು ಈ ತಿದ್ದುಪಡಿಯಲ್ಲಿ 11 ವರ್ಷಗಳಿಂದ ಐದು ವರ್ಷಗಳಿಗೆ ಇಳಿಸಲಾಗಿತ್ತು.
ಕೇಂದ್ರ ಸರ್ಕಾರ ಮತ್ತು ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ನಡುವಿನ ‘ಅಸ್ಸಾಂ ಒಪ್ಪಂದ’ದಂತೆ 1985ರಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಕಾಯ್ದೆಯ ಸೆಕ್ಷನ್ 6ಕ್ಕೆ ಉಪ ಸೆಕ್ಷನ್ ‘ಎ’ ಅನ್ನು ಸೇರಿಸಲಾಯಿತು. 1966ರ ಜ.1ರಿಂದ 1971ರ ಮಾರ್ಚ್ 25ರ ನಡುವೆ ಅಸ್ಸಾಂಗೆ ವಲಸೆ ಬಂದವರಿಗೆ ಭಾರತದ ಪೌರತ್ವ ನೀಡಲು ಈ ಸಬ್‌ಸೆಕ್ಷನ್ ಅವಕಾಶ ಕಲ್ಪಿಸುತ್ತದೆ. 2024ರಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ ‘6ಎ’ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು.
ದೇಶೀಕರಣ ಮೂಲಕ ಪೌರತ್ವ ನೀಡುವ ಕಾಯ್ದೆಯ ಸೆಕ್ಷನ್ 6ರ ಉಪ ಸೆಕ್ಷನ್ 1ರ ಪ್ರಕಾರ ದೇಶದಲ್ಲಿ ಕನಿಷ್ಠ 12 ವರ್ಷಗಳಿಂದ ನೆಲಸಿರುವ ವಯಸ್ಕ ವಿದೇಶಿ ಪ್ರಜೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಅವರು ಅಧಿಕೃತ ವಿದೇಶಿ ಪಾಸ್‌ಪೋರ್ಟ್ ಪ್ರತಿ ವಾಸಕ್ಕಾಗಿ ನೀಡಲಾದ ಪರವಾನಗಿ ಪತ್ರದ ಪ್ರತಿ ಪೌರತ್ವ ಕಾಯ್ದೆಯ ಅಡಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ₹1500 ಠೇವಣಿ ಇಟ್ಟಿರುವ ಬ್ಯಾಂಕ್ ಚಲನ್ ಪ್ರತಿ ಅರ್ಜಿದಾರರ ಸ್ವಯಂ ದೃಢೀಕರಣ ಪ್ರಮಾಣಪತ್ರ ಮತ್ತು ಅರ್ಜಿದಾರರ ಉತ್ತಮ ನಡವಳಿಕೆಗೆ ಸಂಬಂಧಿಸಿದಂತೆ ಇಬ್ಬರು ಭಾರತೀಯರು ನೀಡಿರುವ ದೃಢೀಕರಣಗಳು ಭಾರತದಲ್ಲಿ ಚಾಲ್ತಿಯಲ್ಲಿ ರುವ ಯಾವುದೇ ಭಾಷೆಯ ಬಗ್ಗೆ ಅರ್ಜಿದಾರರಿಗೆ ತಿಳಿವಳಿಕೆ ಇದೆ ಎಂದು ದೃಢೀಕರಿಸಿರುವ ಎರಡು ಭಾಷಾ ಪ್ರಮಾಣಪತ್ರಗಳು ಪೌರತ್ವಕ್ಕಾಗಿ ಮನವಿ ಮಾಡುವ ಕುರಿತು ಅರ್ಜಿದಾರರ ಉದ್ದೇಶಕ್ಕೆ ಸಂಬಂಧಿಸಿದಂತೆ ಎರಡು ದಿನಪತ್ರಿಕೆ ಗಳಲ್ಲಿ ಭಿನ್ನ ದಿನಾಂಕಗಳಲ್ಲಿ ಪ್ರಕಟವಾಗಿರುವ ಪ್ರಕಟಣೆಗಳನ್ನು ದಾಖಲೆಯಾಗಿ ಸಲ್ಲಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.