ಗಣಿ ಅಕ್ರಮ
ರಾಜ್ಯದ ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 2006ರಿಂದ 2010ರವರೆಗೆ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ 29 ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ ಸಲ್ಲಿಸಿದ್ದ ‘ಬಿ’ ವರದಿಯನ್ನು ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದ ಗಣಿ ಅಕ್ರಮದ ತನಿಖೆಗೆ ಮರುಜೀವ ಬಂದಂತಾಗಿದೆ.
ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದ ಕರ್ನಾಟಕ ಲೋಕಾಯುಕ್ತ ನೀಡಿದ್ದ ವರದಿಯ ಅನ್ವಯ ತೆಗೆದುಕೊಳ್ಳಬೇಕಾಗಿದ್ದ ಕ್ರಮಗಳ ಬಗ್ಗೆ ಸಚಿವ ಎಚ್.ಕೆ.ಪಾಟೀಲ ನೇತೃತ್ವದ ಸಚಿವ ಸಂಪುಟದ ಉಪಸಮಿತಿಯು ಮಾಡಿರುವ ಶಿಫಾರಸಿನ ಅನ್ವಯ, ‘ಬಿ’ ವರದಿಗಳನ್ನು ವಾಪಸ್ ಪಡೆಯಲು ಸರ್ಕಾರ ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ, ಮಂಗಳೂರು ಮುಂತಾದ ಬಂದರುಗಳಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಹಲವು ಪ್ರಕರಣಗಳು ‘ಬಿ’ ವರದಿ ಸಲ್ಲಿಸಲಾಗಿರುವ ಪ್ರಕರಣಗಳ ಪಟ್ಟಿಯಲ್ಲಿ ಸೇರಿವೆ. ಬಂದರಿನಲ್ಲಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮತ್ತು ಅದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ₹2.65 ಕೋಟಿಯಷ್ಟು ಲಂಚ ನೀಡಿದ ಆರೋಪದಲ್ಲಿ ಅದಾನಿ ಎಂಟರ್‌ಪ್ರೈಸಸ್ ವಿರುದ್ಧ ದಾಖಲಾದ ಪ್ರಕರಣದಲ್ಲೂ (ಮೊಕದ್ದಮೆ ಸಂಖ್ಯೆ 34/2014) ವಿಶೇಷ ತನಿಖಾ ತಂಡ ವಿಚಾರಣಾ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದೆ.
ಸಮಿತಿ ಹೇಳಿದ್ದೇನು?: ಎಚ್.ಕೆ.ಪಾಟೀಲ ನೇತೃತ್ವದ ಉಪ ಸಮಿತಿಯು ತನ್ನ ಮೊದಲ ಶಿಫಾರಸಿನಲ್ಲೇ ‘ಬಿ’ ವರದಿಯ ಬಗ್ಗೆ ಉಲ್ಲೇಖಿಸಿದೆ.
ಹೀಗೆ ‘ಬಿ’ ವರದಿ ನೀಡಲಾದ ಕೆಲವು ಪ್ರಕರಣಗಳನ್ನು ಪರಿಶೀಲಿಸಿದಾಗ, ಅದಕ್ಕೆ ನೀಡಲಾದ ಕಾರಣಗಳು ಮೇಲ್ನೋಟಕ್ಕೆ ಸಮಂಜಸವಾಗಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. ಅಲ್ಲದೇ, ವಿಶೇಷ ತನಿಖಾ ತಂಡವು ಇನ್ನೂ ಎಂಟು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದು, ಸಚಿವ ಸಂಪುಟವು ಈ ಬಗ್ಗೆ ಕ್ರಮ ಕೈಗೊಳ್ಳುವವರೆಗೆ ನ್ಯಾಯಾಲಯ ಈ ವರದಿಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಲೂ ಸಮಿತಿ ಶಿಫಾರಸು ಮಾಡಿದೆ.
‘ಬಿ’ ವರದಿಗೆ ನೀಡಿದ ಕಾರಣ: ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ರಫ್ತು ಮಾಡಿದ ಪೂರ್ಣ ಅದಿರಿಗೆ ಸಂಬಂಧಿಸಿದ ಇಲಾಖೆಗಳಿಂದ (ಗಣಿ, ಅರಣ್ಯ) ಪರವಾನಗಿ ಪಡೆದಿರುವುದು ತನಿಖೆ ವೇಳೆ ಕಂಡುಬಂದಿದ್ದರಿಂದ ನ್ಯಾಯಾಲಯಕ್ಕೆ ‘ಬಿ’ವರದಿ ಸಲ್ಲಿಸಲಾಗಿದೆ ಎಂಬ ಕಾರಣವನ್ನು ಬಹುತೇಕ ಪ್ರಕರಣಗಳಲ್ಲಿ ನೀಡಲಾಗಿದೆ.
ಸಿಬಿಐ ತನಿಖೆ ಅಪೂರ್ಣ
9 ಬಂದರುಗಳ ಮೂಲಕ ರಫ್ತು ಮಾಡಲಾದ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಬೆಂಗಳೂರು ಕಚೇರಿಯಲ್ಲಿ 15 ಪ್ರಕರಣಗಳು ದಾಖಲಾದರೆ, ಚೆನ್ನೈ ಕಚೇರಿಯಲ್ಲಿ 22 ಪ್ರಕರಣಗಳು ದಾಖಲಾಗಿದ್ದವು. ಆದರೆ, ಗೋವಾದ ಪಣಜಿ, ಮರ್ಮಗೋವಾ ಬಂದರುಗಳು, ತಮಿಳುನಾಡಿನ ಚೆನ್ನೈ, ಎಣ್ಣೋರ್ ಬಂದರುಗಳು ಮತ್ತು ಕರ್ನಾಟಕದ ಕಾರವಾರ, ಮಂಗಳೂರು ಬಂದರುಗಳಿಂದ ನಡೆದಿರುವ ಅಕ್ರಮ ಸಾಗಣೆಯ ಬಗ್ಗೆ ವಿವಿಧ ಕಾರಣಗಳಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸಿಬಿಐ ಹೇಳಿದೆ. ಆರು ಬಂದರುಗಳ ಮೂಲಕ ಆಗಿರುವ ಅಕ್ರಮಗಳ ಬಗ್ಗೆ ಮೂರ್ನಾಲ್ಕು ವರ್ಷಗಳವರೆಗೆ ಯಾವುದೇ ತನಿಖೆ ನಡೆಸದೇ ಪ್ರಕರಣಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿದೆ. ಜತೆಗೆ, ಆಂಧ್ರಪ್ರದೇಶದ ಕೃಷ್ಣಪಟ್ಟಣ ಬಂದರಿನಿಂದ ಶೇ 30ರಷ್ಟು ಅದಿರು ಅಕ್ರಮವಾಗಿ ರಫ್ತಾಗಿದ್ದರೂ ಸಿಬಿಐ 10 ವರ್ಷ ಯಾವುದೇ ತನಿಖೆ ನಡೆಸಿಲ್ಲ. ಇದು ಗಂಭೀರ ಲೋಪವಾಗಿದ್ದು, ತನಿಖೆ ಪೂರ್ಣಗೊಳಿಸಲು ಇಲ್ಲವೇ ಪ್ರಕರಣ ವಾಪಸ್ ನೀಡಲು ಸೂಚಿಸುವಂತೆ ಕೇಂದ್ರ ಸರ್ಕಾರವನ್ನು ಕೋರಬಹುದು ಎಂದು ಉಪಸಮಿತಿ ವರದಿ ಉಲ್ಲೇಖಿಸಿದೆ.
ವಸೂಲಾತಿ ಆಯುಕ್ತರ ನೇಮಕಕ್ಕಾಗಿ ಮಸೂದೆ
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಉಂಟಾದ ನಷ್ಟವನ್ನು ವಸೂಲಿ ಮಾಡಲು ರಾಜ್ಯ ವ್ಯಾಪ್ತಿಯಲ್ಲಿ ಒಂದೇ ಪ್ರಾಧಿಕಾರದ ಅಡಿಯಲ್ಲಿ ವಸೂಲಾತಿ ಆಯುಕ್ತರನ್ನು ನೇಮಕ ಮಾಡಲು ಕಾನೂನಿನಲ್ಲಿ ಅವಕಾಶವಿರಲಿಲ್ಲ. ಆದ್ದರಿಂದ ಈ ಸಂಬಂಧ ಹೊಸ ಕಾಯ್ದೆಯನ್ನು ರೂಪಿಸಲು ಉಪಸಮಿತಿಯು ಶಿಫಾರಸು ಮಾಡಿತ್ತು. ಅದರಂತೆ, ಸರ್ಕಾರವು ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತು ತಪ್ಪಿತಸ್ಥರ ಆಸ್ತಿ ಜಪ್ತಿ ಮಾಡಲು ವಸೂಲಿ ಆಯುಕ್ತರ ನೇಮಕಾತಿ ಮಸೂದೆಯನ್ನು ರೂಪಿಸಿದ್ದು, ಅದಕ್ಕೆ ವಿಧಾನಸಭೆಯು ಅಂಗೀಕಾರ ನೀಡಿದೆ.
ಅದಾನಿ ಪ್ರಕರಣವೇನು?
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ವಿರುದ್ಧ 2014ರ ಡಿಸೆಂಬರ್ 19ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬೇಲೆಕೇರಿಯ ಅದಾನಿ ಎಂಟರ್‌ಪ್ರೈಸಸ್ ಮಾತ್ರವಲ್ಲದೆ ಬಂದರು, ಕಸ್ಟಮ್ಸ್, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ, ತೂಕ ಮತ್ತು ಅಳತೆ, ಕೆಎಸ್‌ಪಿಸಿಬಿ, ಕಂದಾಯ, ಕರಾವಳಿ ನಿಯಂತ್ರಣ ವಲಯ, ಲೋಕೋಪಯೋಗಿ ಸೇರಿದಂತೆ ಇತರ ಇಲಾಖೆಗಳ ಅಥವಾ ಅವುಗಳ ಕಚೇರಿಗಳಿಗೆ ಸೇರಿದ ಗೊತ್ತಿಲ್ಲದ ನೌಕರರು, ಶಾಸಕರು, ಸಂಸದರು ಮತ್ತು ನ್ಯಾಯಾಧೀಶರನ್ನೂ ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು.
ಬೇಲೆಕೇರಿ ಬಂದರಿನಲ್ಲಿ ಅದಾನಿ ಎಂಟರ್‌ಪ್ರೈಸಸ್‌ಗೆ ಜಾಗ ನೀಡಲಾಗಿತ್ತು ಮತ್ತು ಹಡಗಿನಿಂದ ಸರಕುಗಳನ್ನು ಇಳಿಸುವ ಜವಾಬ್ದಾರಿಯನ್ನು ಕಂಪನಿಗೆ ವಹಿಸಲಾಗಿತ್ತು.
2004ರಿಂದ 2008ರವರೆಗೆ ಕಂಪನಿಯು ಅಕ್ರಮವಾಗಿ ಅದಿರು ಸಂಗ್ರಹಿಸಿದ್ದಲ್ಲದೇ ಅದನ್ನು ರಫ್ತು ಮಾಡಿದೆ. ಇದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ₹2,65,68,230 ಲಂಚ ನೀಡಲಾಗಿದೆ. ಬೇಲೆಕೇರಿ ಬಂದರಿಗೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್‌ಗಳ ಪರಿಶೀಲನೆಯ ಸಂದರ್ಭದಲ್ಲಿ ಇದು ಗೊತ್ತಾಗಿದೆ. ನಗದು ಖಾತೆಯ ಫೈಲ್‌ಗೆ ಅಟ್ಯಾಚ್ ಮಾಡಿದ್ದ ಇ–ಮೇಲ್ ಒಂದರಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ವಿವರಗಳು ಇದ್ದವು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿತ್ತು.
‘ಬಿ’ ವರದಿ ಏಕೆ?: ಆದರೆ, ತನಿಖೆಯ ಸಂದರ್ಭದಲ್ಲಿ ಇ–ಮೇಲ್ ಒಂದನ್ನು ಬಿಟ್ಟು ಲಂಚ ನೀಡಿರುವುದನ್ನು ಸಾಬೀತು ಪಡಿಸುವ ಬೇರೆ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಅಲ್ಲದೇ ಈ ಆರೋಪಕ್ಕೆ ಸಂಬಂಧಿಸಿದಂತೆ ಹಾಗೂ ಸರ್ಕಾರಿ ಅಧಿಕಾರಿಗಳ ದುರ್ನಡತೆ ಕುರಿತಾಗಿ ಸರ್ಕಾರದ ಆದೇಶದಂತೆ ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಂ.ಎನ್.ಗದಗ್ ಅವರು ತನಿಖೆ ನಡೆಸಿದ್ದು, ಆರೋಪಿತ ಅಧಿಕಾರಿಗಳು ತಪ್ಪಿತಸ್ಥರಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ. ಸರ್ಕಾರ, ಹಾಗೂ ವಿವಿಧ ಇಲಾಖೆಗಳು ಆ ವರದಿಯನ್ನು 2016ರ ಜೂನ್ 20ರಂದು ಅಂಗೀಕರಿಸಿದ್ದು, ಈ ಕಾರಣದಿಂದ ನ್ಯಾಯಾಲಯಕ್ಕೆ 2017ರ ಜುಲೈ 11ರಂದು ಎಸ್‌ಐಟಿ ‘ಬಿ’ ವರದಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.