ADVERTISEMENT

ಆಳ–ಅಗಲ: ವಿಶ್ವ ಚೆಸ್‌ನಲ್ಲಿ ಭಾರತದ ‘ಪ್ರಮೀಳೆ’ಯರ ಪ್ರಾಬಲ್ಯ

ನಾಗೇಶ್ ಶೆಣೈ ಪಿ.
Published 29 ಜುಲೈ 2025, 23:35 IST
Last Updated 29 ಜುಲೈ 2025, 23:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

38 ವರ್ಷ ವಯಸ್ಸಿನ ಕೋನೇರು ಹಂಪಿ, 34 ವರ್ಷ ವಯಸ್ಸಿನ ದ್ರೋಣವಲ್ಲಿ ಹಾರಿಕಾ ಅವರ ಬಳಿಕವೂ ದೇಶದ ಚೆಸ್‌ ಭವಿಷ್ಯ ಉಜ್ವಲವಾಗಿರಲಿದೆ ಎಂಬ ಭರವಸೆಯನ್ನು ಯುವ ಆಟಗಾರ್ತಿಯರಾದ ದಿವ್ಯಾ ದೇಶಮುಖ್‌, ವೈಶಾಲಿ ಆರ್‌., ವಂತಿಕಾ ಅಗರವಾಲ್ ಅವರು  ಮೂಡಿಸಿದ್ದಾರೆ. ಮಹಿಳಾ ವಿಶ್ವಕಪ್‌ ಗೆದ್ದ ಭಾರತದ ಮೊದಲ ಆಟಗಾರ್ತಿಯಾಗಿ ದಿವ್ಯಾ ಇತಿಹಾಸ ನಿರ್ಮಿಸಿದ್ದಾರೆ 

ಎರಡು ವರ್ಷಗಳ ಹಿಂದೆ– 2023ರ ಜೂನ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ದ್ರೋಣವಲ್ಲಿ ಹಾರಿಕಾ ಅವರು ಸುದ್ದಿಸಂಸ್ಥೆಯ ಜೊತೆ ಸಂದರ್ಶನದಲ್ಲಿ ದೇಶದ ಮಹಿಳಾ ಚೆಸ್‌ ಸ್ಥಿತಿಗತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಭಾರತದ ಚೆಸ್‌ನಲ್ಲಿ ಪುರುಷರ ವಿಭಾಗದ ಸಾಧನೆ ಮತ್ತು ಮಹಿಳಾ ವಿಭಾಗದ ಸಾಧನೆಯ ನಡುವೆ ದೊಡ್ಡ ಕಂದರ ಏರ್ಪಟ್ಟಿದೆ, ಈ ನಿರ್ವಾತವನ್ನು ತುಂಬಬೇಕಾಗಿದೆ ಎಂದಿದ್ದರು. ಯುವತಾರೆಗಳಾದ ಅರ್ಜುನ್‌ ಇರಿಗೇಶಿ, ಪ್ರಜ್ಞಾನಂದ ರಮೇಶಬಾಬು, ಗುಕೇಶ್ ದೊಮ್ಮರಾಜು ಅವರು ಓಪನ್ ವಿಭಾಗದಲ್ಲಿ ದೊಡ್ಡ ಸಾಧನೆಗಳಿಂದ ವಿಶ್ವದ ಗಮನಸೆಳೆದಿದ್ದರು. ಮಹಿಳಾ ವಿಭಾಗದಲ್ಲಿ ಆ ಮಟ್ಟದ ಯುವ ಆಟಗಾರ್ತಿಯರು ಮೂಡಿಬರುತ್ತಿಲ್ಲ ಎಂಬುದು ಅವರ ಹೇಳಿಕೆಯ ಮರ್ಮವಾಗಿತ್ತು.

ADVERTISEMENT

ಆದರೆ, ಈ ಅಲ್ಪಅಂತರದಲ್ಲೇ ಹಾರಿಕಾ ಅವರ ಆತಂಕ ದೂರಮಾಡುವ ರೀತಿಯಲ್ಲಿ ಯುವ ಆಟಗಾರ್ತಿಯರು ಪ್ರವರ್ಧಮಾನಕ್ಕೆ ಬಂದಿದ್ದಾರೆ, ಪ್ರಮುಖ ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ವೈಶಾಲಿ ರಮೇಶಬಾಬು (ಪ್ರಜ್ಞಾನಂದ ಅವರ ಅಕ್ಕ), ದಿವ್ಯಾ ದೇಶಮುಖ್‌, ವಂತಿಕಾ ಅಗರವಾಲ್‌, ಸವಿತಾಶ್ರೀ ಮೊದಲಾದ ಆಟಗಾರ್ತಿಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಜಾರ್ಜಿಯಾದ ಬಟುಮಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ದಿವ್ಯಾ ಅವರು ಚಾಂಪಿಯನ್‌ ಕಿರೀಟ ಧರಿಸಿರುವುದು ಮಹಿಳಾ ವಿಭಾಗದಲ್ಲೂ ಭಾರತ ಪ್ರಬಲವಾಗುತ್ತಿದೆ ಎನ್ನುವುದನ್ನು ವಿಶ್ವ ಒಪ್ಪಿಕೊಳ್ಳುವಂತಾಗಿದೆ. ಚೀನಾದ ಆಟಗಾರ್ತಿಯರು ಸೆಮಿಫೈನಲ್‌ನಲ್ಲಿ ಹೊರಬಿದ್ದಾಗಲೇ ಭಾರತಕ್ಕೆ ಈ ಪ್ರತಿಷ್ಠಿತ ಕಿರೀಟ ಖಚಿತವಾಗಿತ್ತು.

2022ರ ಮಹಾಬಲಿಪುರಂ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಮಹಿಳೆಯರ ತಂಡ, ಎರಡು ವರ್ಷಗಳ ನಂತರ ಹಂಗರಿಯ ಬುಡಾಪೆಸ್ಟ್‌ ಒಲಿಂಪಿಯಾಡ್‌ನಲ್ಲಿ ಅದನ್ನು ಚಿನ್ನಕ್ಕೆ ಪರಿವರ್ತಿಸಿತು. ಓಪನ್‌ ವಿಭಾಗದಲ್ಲೂ ಭಾರತ ಚಾಂಪಿಯನ್ ಆಗಿದ್ದು ಚೆಸ್‌ ಜಗತ್ತು ಭಾರತದತ್ತ ಗಮನಿಸುವಂತೆ ಮಾಡಿತು.

ಗಮನಾರ್ಹ ಎಂದರೆ, ಮಹಿಳಾ ತಂಡದ ಯಶಸ್ಸಿನಲ್ಲಿ ಯುವ ಆಟಗಾರ್ತಿಯರ ಪಾತ್ರ  ನಿರ್ಣಾಯಕವಾಗಿತ್ತು. ನಾಗ್ಪುರದ ದಿವ್ಯಾ ದೇಶಮುಖ್, ನೋಯ್ಡಾದ ವಂತಿಕಾ ಅಗರವಾಲ್ ಅವರು ಒಂದೂ ಪಂದ್ಯ ಸೋಲಲಿಲ್ಲ. ಮೊದಲ ಬಾರಿ ಭಾರತ ಚಿನ್ನ ಗೆಲ್ಲಲು ಇವರ ಆಟವೇ ನಿರ್ಣಾಯಕವಾಯಿತು. ಇಬ್ಬರೂ ತಮ್ಮ ಅಮೋಘ ಆಟಕ್ಕಾಗಿ ವೈಯಕ್ತಿಕ ಚಿನ್ನದ ಪದಕಗಳನ್ನು (ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಬೋರ್ಡ್‌) ಗೆದ್ದರು. ದಿವ್ಯಾ 11 ಸುತ್ತುಗಳಿಂದ 9.5 ಅಂಕ ಗಳಿಸಿದ್ದು ಅಮೋಘ ಸಾಧನೆ. 9 ಪಂದ್ಯಗಳನ್ನು ಆಡಿದ ವಂತಿಕಾ 7.5 ಅಂಕ ಕಲೆಹಾಕಿದ್ದು ಕಡಿಮೆಯೇನೂ ಅಲ್ಲ. ಹಾರಿಕಾ, ವೈಶಾಲಿ ಅವರು ಕೆಲವು ಪಂದ್ಯಗಳಲ್ಲಿ ಹಿನ್ನಡೆ ಕಂಡರೂ ಅದನ್ನು ದಿವ್ಯಾ ಮತ್ತು ವಂತಿಕಾ ಸರಿದೂಗಿಸಿದ್ದರು. ಅನುಭವಿ ಆಟಗಾರ್ತಿ ಹಂಪಿ ಆ ಒಲಿಂಪಿಯಾಡ್‌ನಲ್ಲಿ ಆಡಿರಲಿಲ್ಲ.

23 ವರ್ಷ ವಯಸ್ಸಿನ ವಂತಿಕಾ 2023ರಲ್ಲಿ ಮೆನೊರ್ಕಾ (ಸ್ಪೇನ್‌) ಟೂರ್ನಿ, ನಾರ್ವೆಯ  ಟೂರ್ನಿಗಳಲ್ಲಿ ವಿಜೇತರಾಗಿ ಅಷ್ಟರಲ್ಲೇ ಛಾಪು ಮೂಡಿಸಿದ್ದರು.

24 ವರ್ಷ ವಯಸ್ಸಿನ ವೈಶಾಲಿ ಅವರು ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆದ ಮೂರನೇ ಆಟಗಾರ್ತಿ ಎನಿಸಿದರು. 2024ರ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಟೂರ್ ಚಾಂಪಿಯನ್ ಆಗುವ ಮೂಲಕ ಅವರು ಎಂಟು ಮಂದಿಗಷ್ಟೇ ಅವಕಾಶವಿರುವ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲೂ  ಆಡಿದ್ದರು. 2024ರ ವಿಶ್ವ ಬ್ಲಿಟ್ಝ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದುಕೊಂಡಿದ್ದರು. ಬಟುಮಿ ವಿಶ್ವಕಪ್‌ನಲ್ಲೂ ಅವರು ಪ್ರೀಕ್ವಾರ್ಟರ್‌ಫೈನಲ್‌ ತಲುಪಿದ್ದರು.

ಈಗ ದಿವ್ಯಾ ದೇಶಮುಖ್ ವಿಶ್ವಕಪ್‌ ಚಾಂಪಿಯನ್ ಆಗುವ ಜೊತೆಯಲ್ಲೇ ದೇಶದ 88ನೇ ಗ್ರ್ಯಾಂಡ್‌ಮಾಸ್ಟರ್‌ ಹಾಗೂ ಈ ಬಿರುದು ಪಡೆದ ದೇಶದ ನಾಲ್ಕನೇ ಆಟಗಾರ್ತಿಯಾಗಿದ್ದಾರೆ.

ಹಾಲಿ ವಿಶ್ವಕಪ್‌ನಲ್ಲೂ ಭಾರತದ ಆಟಗಾರ್ತಿಯರ ಆಟ ಮೆಚ್ಚುವಂತೆ ಇತ್ತು. 19 ವರ್ಷ ವಯಸ್ಸಿನ ದಿವ್ಯಾ ಜೊತೆ 38ರ ವಯಸ್ಸಿನಲ್ಲೂ ಹಂಪಿ ಫೈನಲ್ ತಲುಪಿದರು. ಈ ಹಿಂದೆ ಭಾರತದ ಯಾವುದೇ ಆಟಗಾರ್ತಿ ಈ ಹಂತ ತಲುಪಿರಲಿಲ್ಲ.

ವಂತಿಕಾ ಅಗರವಾಲ್‌ ಮೂರನೇ ಸುತ್ತಿನಲ್ಲಿ ಹೊರಬೀಳುವ ಮೊದಲು ತಮಗಿಂತ ಮೇಲಿನ ಕ್ರಮಾಂಕದ ಆಟಗಾರ್ತಿಯರನ್ನು ಮಣಿಸಿದ್ದರು. ಮಾಜಿ ವಿಶ್ವ ಚಾಂಪಿಯನ್ ಅನ್ನಾ ಉಶೇನಿನಾ (ಉಕ್ರೇನ್‌) ಅವರನ್ನು ಸೋಲಿಸಿದ್ದು, ಇದರಲ್ಲಿ ಗಮನಾರ್ಹ. ಅವರು ಮೂರನೇ ಸುತ್ತಿನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಹಾಗೂ ಮೂರು ಬಾರಿಯ ವಿಶ್ವ ಬ್ಲಿಟ್ಝ್ ಚಾಂಪಿಯನ್ ಕ್ಯಾತರಿನಾ ಲಾಗ್ನೊ (ರಷ್ಯಾ) ಅವರನ್ನು ಮೊದಲ ಕ್ಲಾಸಿಕಲ್ ಆಟದಲ್ಲಿ ಸೋಲಿಸಿದ್ದು ಟೂರ್ನಿಯ ಅನಿರೀಕ್ಷಿತಗಳಲ್ಲಿ ಒಂದೆನಿಸಿತ್ತು. ಆದರೆ ಎರಡನೇ ಆಟ ಮತ್ತು ಟೈಬ್ರೇಕರ್‌ನಲ್ಲಿ ಸೋತರು.

ದಿವ್ಯಾ ಅವರಂತೂ ವಿಶ್ವಕಪ್‌ನಲ್ಲಿ ‘ಜೈಂಟ್‌ ಕಿಲ್ಲರ್’ ಎನಿಸಿದರು. ತಮಗಿಂತ ಪ್ರಬಲ ಕ್ರಮಾಂಕದ ಆಟಗಾರ್ತಿಯರನ್ನು ಮಣಿಸಿ ಹಂಪಿ ಅವರಿಗಿಂತ ಮೊದಲೇ ಫೈನಲ್‌ಗೇರಿದರು. ಅವರು ಫೈನಲ್‌ಗೇರುವ ಹಾದಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ತಾನ್‌ ಝೊಂಗ್‌ಯಿ (ಸೆಮಿಫೈನಲ್‌), ಹಾರಿಕಾ (ಕ್ವಾರ್ಟರ್‌ಫೈನಲ್‌), ಚೀನಾದ ಝು ಜಿನೆರ್‌ (ಪ್ರೀಕ್ವಾರ್ಟರ್‌ಫೈನಲ್‌) ಅವರನ್ನು ಮಣಿಸಿದ್ದರು.

2026ರ ಕ್ಯಾಂಡಿಡೇಟ್ಸ್ ಟೂರ್ನಿಗೆ ಹಂಪಿ ಮತ್ತು ದಿವ್ಯಾ ಅರ್ಹತೆ ಪಡೆದಿದ್ದಾರೆ. ಹೀಗಾಗಿ ನಿರೀಕ್ಷೆಗಳು ಗರಿಗೆದರಿವೆ. ಭಾರತದ ಇತರ ಆಟಗಾರ್ತಿಯರಿಗೂ ಎಂಟು ಮಂದಿ ಮಾತ್ರ ಆಡುವ ಈ ಟೂರ್ನಿಯಲ್ಲಿ ಸ್ಥಾನ ಪಡೆಯಲು ಅವಕಾಶವಿದೆ.

ಹಂಪಿ ಯಶಸ್ಸಿನ ಓಟ

ಯುವತಾರೆಗಳ ನಡುವೆ ಹಿರಿಯ ಆಟಗಾರ್ತಿ ಹಂಪಿ ಅವರ ಸಾಧನೆ ಮುಂದುವರಿದೇ ಇದೆ. ಮಹಿಳಾ ವಿಶ್ವ ಕಪ್ ಮತ್ತು ವಿಶ್ವ ಚಾಂಪಿಯನ್ ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ಪ್ರಶಸ್ತಿಗಳನ್ನು ಅವರು ಗೆದ್ದುಕೊಂಡಿದ್ದಾರೆ. ಅವರು ಹಾಲಿ ವಿಶ್ವ ರ‍್ಯಾಪಿಡ್‌ ಚಾಂಪಿಯನ್ ಸಹ. ವಿಶ್ವಕಪ್‌ ಕೂಡ ಹಂಪಿ ಅವರಿಗೆ ಸ್ವಲ್ಪದರಲ್ಲೇ ಕೈತಪ್ಪಿದೆ.

2002ರಲ್ಲಿ ಅವರು ದೇಶದ ಏಳನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದರು. ಆಂಧ್ರಪ್ರದೇಶದ ಗುಡಿವಾಡದ ಆಟಗಾರ್ತಿ ಭಾರತದ ಮೊದಲ ಮಹಿಳಾ ದಿಗ್ಗಜ ಆಟಗಾರ್ತಿಯಾಗಿ ಗುರುತಿಸಿಕೊಂಡವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.