
ಪಶ್ಚಿಮ ಬಂಗಾಳದ ವಿದ್ಯಾಸಾಗರ ವಿಶ್ವವಿದ್ಯಾಲಯವು ‘ವಿದ್ಯಾಸಾಗರ ಪುರಸ್ಕಾರ’ವನ್ನು ಪ್ರತಿವರ್ಷ ನೀಡುತ್ತದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳ ಸಾಧಕರಿಗೇ ಹೆಚ್ಚಾಗಿ ಸಲ್ಲುತ್ತಿದ್ದ ಪ್ರಶಸ್ತಿಯು 2025ನೇ ಸಾಲಿನಲ್ಲಿ ಒಬ್ಬ ಐಎಎಸ್ ಅಧಿಕಾರಿಗೆ ಸಂದಿದೆ. ಇಲ್ಲೊಂದು ವಿಶೇಷವಿದೆ. ಆ ಐಎಎಸ್ ಅಧಿಕಾರಿ ಅಂಧ. ನೂರರಷ್ಟು ದೃಷ್ಟಿದೋಷ ಇರುವವರು. ಮತ್ತೊಂದು ವಿಶೇಷವೂ ಇದೆ. ಆ ಐಎಎಸ್ ಅಧಿಕಾರಿ ಕನ್ನಡಿಗರು. ಅವರೇ ಕೆಂಪಹೊನ್ನಯ್ಯ. ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜಾರಿ ಮಾಡಿದ ಯೋಜನೆಗಳಿಗಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆಯ ಬಡ ರೈತ ಕುಟುಂಬದ ಕೆಂಪಹೊನ್ನಯ್ಯ ಅವರ ಹೋರಾಟವು ಬಾಲ್ಯದಿಂದಲೇ ಆರಂಭವಾಯಿತು. ಐದನೇ ತರಗತಿಯಲ್ಲಿದ್ದಾಗ ರೆಟಿನಾ ಡಿಟ್ಯಾಚ್‌ಮೆಂಟ್‌ನಿಂದ ದೃಷ್ಟಿಹೀನರಾದರು. ತಂದೆ ಹೊನ್ನಯ್ಯ ತೀರಿಕೊಂಡಿದ್ದರು. ಸಂಸಾರದ ನೊಗವನ್ನು ತಾಯಿ ಮುನಿಯಮ್ಮ ಹೊತ್ತರು; ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕತೊಡಗಿದರು. ಅಂಧನಾಗಿದ್ದ ಮಗ ಶಾಲೆಯನ್ನು ತ್ಯಜಿಸಿ ಮನೆಯಲ್ಲಿ ಕೂತದ್ದು ತಾಯಿಕರುಳು ಜೀರ್ಣಿಸಿಕೊಳ್ಳಲಿಲ್ಲ. ಅಂಧ ಶಿಕ್ಷಕರೊಬ್ಬರು ಕುಟುಂಬದ ನೆರವಿಗೆ ಬಂದರು. ಅವರ ನೆರವಿನಿಂದ ಮೈಸೂರಿನ ಅಂಧ ಮಕ್ಕಳ ಶಾಲೆಗೆ ಮಗನನ್ನು ಸೇರಿಸಿದರು. ಕೆಂಪಹೊನ್ನಯ್ಯ ಅವರಿಗೆ ಅಲ್ಲಿ ಬ್ರೈಲ್ ಲಿಪಿ ಪರಿಚಯವಾಯಿತು. ಮುಂದಿನ ಅವರ ವಿದ್ಯಾಭ್ಯಾಸಕ್ಕೆ ಅದೇ ಅವರ ಕಣ್ಣಾಯಿತು.
ಎಸ್‌ಎಸ್‌ಎಲ್‌ಸಿವರೆಗೆ ಮೈಸೂರಿನಲ್ಲಿ ಓದಿದ ಕೆಂಪಹೊನ್ನಯ್ಯ ಅವರು ಪಿಯುಸಿಗೆ ಮತ್ತೆ ಕುಣಿಗಲ್‌ಗೆ ಬಂದರು. ಆದರೆ, ಅವರಿಗೆ ಮೈಸೂರಿನಲ್ಲಿ ಸಿಕ್ಕ ನೆರವು ಇಲ್ಲಿ ಸಿಗಲಿಲ್ಲ. ಪದವಿಗೆ ಮೈಸೂರಿಗೇ ಹಿಂದಿರುಗಿ, ಮಹಾರಾಜ ಕಾಲೇಜು ಸೇರಿದರು. ಉನ್ನತ ಶ್ರೇಣಿಯಲ್ಲಿ ಪದವಿ ಪಡೆದರು. ಬೇಗ ಕೆಲಸ ಸಿಗುತ್ತದೆ ಎಂದು ಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಷನ್ ಮಾಡಿಕೊಂಡರು. ತಾನೊಬ್ಬ ಸ್ನಾತಕೋತ್ತರ ಪದವೀಧರ ಆಗಲೇಬೇಕು ಎನ್ನುವ ಛಲ ಹುಟ್ಟಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಪೂರೈಸಿದರು. ಅದರ ಬೆನ್ನಲ್ಲೇ ಕೆಪಿಎಸ್‌ಸಿ ಪರೀಕ್ಷೆ ಬರೆದು ಪಿಯು ಕಾಲೇಜಿನ ಅಧ್ಯಾಪಕರೂ ಆದರು.
ಎಚ್.ಡಿ.ಕೋಟೆ ತಾಲ್ಲೂಕಿನ ಕಾಡಂಚಿನ ಬಿ.ಮಟಕೆರೆಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಮೈಸೂರಿನಿಂದ 70 ಕಿ.ಮೀ.ಓಡಾಟ. ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾ ಜನಪ್ರಿಯ ಅಧ್ಯಾಪಕರಾದರು. ವಿದ್ಯಾರ್ಥಿಗಳಿಂದ ಪ್ರತಿನಿತ್ಯ ‘ಪ್ರಜಾವಾಣಿ’ ಓದಿಸುತ್ತಿದ್ದರು. ಅಲ್ಲಿಂದ ಮೈಸೂರಿನ ಒಂಟಿಕೊಪ್ಪಲ್‌ನ ಸರ್ಕಾರಿ ಕಾಲೇಜಿಗೆ ವರ್ಗಾವಣೆಯಾಯಿತು. ಮೈಸೂರಿಗೆ ಬಂದ ಮೇಲೆ ಓಡಾಟ ಕಡಿಮೆಯಾಗಿ ಹೆಚ್ಚು ಸಮಯ ಸಿಗುತ್ತಿತ್ತು. ಅವರ ಬದುಕು ಬೇರೊಂದು ಮಗ್ಗುಲಿಗೆ ಹೊರಳಿತು.
ಅಂಧರಾಗಿದ್ದ ಗೋಪಾಲಕೃಷ್ಣ ತಿವಾರಿ ಐಎಎಸ್ ಮಾಡಲು ಪಟ್ಟ ಪಾಡು, ಎದುರಿಸಿದ ಸವಾಲುಗಳು ಕಡಿಮೆ ಏನು ಅಲ್ಲ. ಅಂಧರೂ ಐಎಎಸ್ ಅಧಿಕಾರಿಗಳಾಗಲು ಸಾಧ್ಯವಾಗುವ ದಿಸೆಯಲ್ಲಿ ತಿವಾರಿ ಅವರು ಸುಪ್ರೀಂ ಕೋರ್ಟ್‌ವರೆಗೆ ಹೋಗಿ ಕೇಸು ಗೆದ್ದಿದ್ದರು. ಅದನ್ನು ಓದಿದ ಬಳಿಕ ಐಎಎಸ್ ಗುಂಗೀಹುಳು ಕೆಂಪಹೊನ್ನಯ್ಯ ಅವರ ತಲೆ ಹೊಕ್ಕಿತು. ಸರಿ, ಶುರುವಾಯಿತು ತಯಾರಿ.
ಒಂದನೇ ತರಗತಿಯಿಂದ ಎಂಎವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದ ಅವರು, ಐಎಎಸ್ ಅನ್ನೂ ಕನ್ನಡ ಮಾಧ್ಯಮದಲ್ಲಿಯೇ ಮಾಡಲು ಮುಂದಾದರು. ಮನೆಯೇ ಕೋಚಿಂಗ್ ಅಕಾಡೆಮಿಯಾಯಿತು. ಹೆಂಡತಿಯೇ ಕೋಚ್ ಆದರು.
ಮೊದಲೆರಡು ಪ್ರಯತ್ನಗಳಲ್ಲಿ ಪ್ರಿಲಿಮ್ಸ್ ಕೂಡ ದಾಟಲು ಸಾಧ್ಯವಾಗಿಲಿಲ್ಲ. ಮಾಡು ಇಲ್ಲವೇ ಮಡಿ ಎಂದು ಹಟ ತೊಟ್ಟು ಅಧ್ಯಯನ ಮಾಡಿದರು. ಮೂರನೇ ಪ್ರಯತ್ನದಲ್ಲಿ 344ನೇ ರ್‍ಯಾಂಕ್ ಪಡೆದರು. 2017ರಲ್ಲಿ ಪಶ್ಚಿಮ ಬಂಗಾಳ ಕೇಡರ್ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಐಎಎಸ್ ಅಧಿಕಾರಿಯಾದ ಮೇಲೆ ಅವರು ನಡೆದುಬಂದ ಹಾದಿಯನ್ನು ಮರೆಯಲಿಲ್ಲ. ಮಿಡ್ನಾಪುರ ಪ್ರದೇಶದಲ್ಲಿ ಬಾಲ್ಯ ವಿವಾಹ, ಶಾಲೆ ತೊರೆಯುವುದು, ಮಕ್ಕಳ ಅಪೌಷ್ಟಿಕತೆಯಂಥ ಸಮಸ್ಯೆಗಳು ಹೆಚ್ಚಾಗಿದ್ದವು. ಅವುಗಳ ತಡೆಗೆ ಶ್ರಮಿಸಿದ್ದಲ್ಲದೇ, ಅರ್ಹರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ನರೇಗಾ, ರೈತರೊಂದಿಗೆ ಕೆಲಸ, ಕಾಲೇಜು ವಿದ್ಯಾರ್ಥಿಗಳಿಗೆ ನೆರವು, ಕೌಶಲಾಭಿವೃದ್ಧಿ ಹೀಗೆ ಹತ್ತಾರು ಸವಲತ್ತು ಅರ್ಹರಿಗೆ ಸಿಗುವಂತೆ ಮಾಡಿದರು. ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದರು. ಹಿಂದುಳಿದ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವನ್ನೇ ಆರಂಭಿಸಿದರು. ಪಶ್ಚಿಮ ಬಂಗಾಳದಲ್ಲಿ ಮನೆಮಾತಾದರು.
ಸಾಧನೆಗೆ ಕುಟುಂಬದ ಬಡತನ ಅಂಗವಿಕಲತೆಯೇ ಪ್ರೇರಣೆ. ರಕ್ತಸಂಬಂಧದಲ್ಲಿ ಮದುವೆಯಾಗಿದ್ದರಿಂದಲೋ ಏನೋ ಅಮ್ಮ ಅಪ್ಪನಿಗೆ ಹುಟ್ಟಿದ ಮಕ್ಕಳ ಪೈಕಿ ನಾನು ಅಂಧನಾದೆ. ಅಣ್ಣನೂ ಅಂಗವಿಕಲನಾದ; ಅಕಾಲಿಕವಾಗಿ ಸತ್ತೂ ಹೋದ. ಇಬ್ಬರು ಅಕ್ಕಂದಿರು ಚಿಕ್ಕಂದಿನಲ್ಲೇ ತೀರಿಹೋದರು. ನನ್ನ ಪರಿಸ್ಥಿತಿಗಳು ನೋವುಗಳೇ ನನ್ನನ್ನು ರೂಪಿಸಿದವು.– ಕೆಂಪಹೊನ್ನಯ್ಯ, ಐಎಎಸ್ ಅಧಿಕಾರಿ
ಕುವೆಂಪು ಕವಿತೆ ಚೈತನ್ಯದ ಒರತೆ
ಸಾಹಿತ್ಯದ ವಿದ್ಯಾರ್ಥಿ ಅಧ್ಯಾಪಕರಾಗಿದ್ದ ಕೆಂಪಹೊನ್ನಯ್ಯ ಅವರಿಗೆ ಕುವೆಂಪು ಸಾಹಿತ್ಯ ಎಂದರೆ ಅಚ್ಚುಮೆಚ್ಚು. ‘ಓ ನನ್ನ ಚೇತನ ಆಗು ನೀ ಅನಿಕೇತನ..’ ಕವಿತೆ ಅವರನ್ನು ಅಪಾರವಾಗಿ ಪ್ರಭಾವಿಸಿದೆ. ‘ಎಲ್ಲಿಯೂ ನಿಲ್ಲದಿರು..’ ಎನ್ನುವ ಕುವೆಂಪು ಅವರ ನುಡಿಯು ಮನುಷ್ಯ ಚೈತನ್ಯ ಅಮಿತವಾದದ್ದು ಎನ್ನುವ ಸಂದೇಶದೊಂದಿಗೆ ಜೀವನದಲ್ಲಿ ಮುನ್ನುಗ್ಗಲು ನನಗೆ ಸ್ಫೂರ್ತಿಯಾಗಿದೆ’ ಎನ್ನುತ್ತಾರೆ.
ಇವರನ್ನು ಮರೆಯೋದುಂಟೆ...
ಕೆಂಪಹೊನ್ನಯ್ಯ ಜೀವನದಲ್ಲಿ ಸಾಧಿಸಿದ್ದೆಲ್ಲವನ್ನೂ ಇಬ್ಬರು ಮಹಿಳೆಯರಿಗೆ ಅರ್ಪಿಸುತ್ತಾರೆ. ಒಬ್ಬರು ತಾಯಿ ಮತ್ತೊಬ್ಬರು ಹೆಂಡತಿ.
‘ದೃಷ್ಟಿ ಕಳೆದುಕೊಂಡು ದಿಕ್ಕುಗಾಣದೇ ಮನೆಯಲ್ಲಿ ಕೂತಿದ್ದ ನನ್ನನ್ನು ಅಮ್ಮ ಮೈಸೂರಿಗೆ ಕರೆದುಕೊಂಡು ಹೋಗಿ ಅಂಧರ ಶಾಲೆಗೆ ಸೇರಿಸದೇ ಇದ್ದಿದ್ದರೆ ಬಹುಶಃ ಭಿಕ್ಷೆ ಬೇಡಿ ಬದುಕಬೇಕಾದ ಸ್ಥಿತಿಯಲ್ಲಿರುತ್ತಿದ್ದೆ. ಅನಕ್ಷರಸ್ಥೆಯಾಗಿದ್ದ ಆಕೆಯ ಆ ನಿರ್ಧಾರ ನನ್ನ ಬದುಕು ಬದಲಿಸಿತು’ ಎನ್ನುತ್ತಾರೆ ಅವರು. ಕೂಲಿ ಮಾಡುತ್ತಿದ್ದರೂ ‘ನಿನಗೆ ಎಷ್ಟು ಬೇಕೋ ಅಷ್ಟು ಓದು ಎನ್ನುತ್ತಿದ್ದರೇ ಹೊರತು ಕೆಲಸಕ್ಕೆ ಸೇರು ಎನ್ನುತ್ತಿರಲಿಲ್ಲ’ ಎಂದು ಗದ್ಗದಿತರಾಗುತ್ತಾರೆ.
ಒಮ್ಮೆ ಕೆಂಪಹೊನ್ನಯ್ಯ ಮೈಸೂರು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅವರ ಬಳಿ ಬಂದ ಮಹಿಳೆಯೊಬ್ಬರು ‘ನಿಮಗೆ ಏನಾದರೂ ಸಹಾಯ ಬೇಕೇ’ ಎಂದು ಕೇಳಿದರು. ‘ಹೌದು ಬೇಕು’ ಎಂದರು ಕೆಂಪಹೊನ್ನಯ್ಯ. ತಮ್ಮ ಮನೆ ವಿಳಾಸ ನೀಡಿದರು ಮಹಿಳೆ. ಮುಂದೆ ಆ ಮನೆ ಕೆಂಪಹೊನ್ನಯ್ಯ ಅವರ ಮನೆಯೇ ಆಯಿತು. ಆ ಮಹಿಳೆ ಅವರ ಹೆಂಡತಿಯಾದರು.
ಕೆಂಪಹೊನ್ನಯ್ಯ ಕೆಪಿಎಸ್‌ಸಿ ಪರೀಕ್ಷೆ ಐಎಎಸ್ ಪರೀಕ್ಷೆ ಪಾಸು ಮಾಡಲು ಮುಖ್ಯ ಕಾರಣ ಪತ್ನಿ ಅಚಿಂತಾ. ಮೈಸೂರಿನ ‘ಮೈತ್ರಿ’ ವಿಶೇಷ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರು ಆಡಿಯೋ ರೆಕಾರ್ಡ್ ಮಾಡಿ ಅಧ್ಯಯನ ಸಾಮಗ್ರಿ ಸಿದ್ಧಪಡಿಸಿಕೊಡುತ್ತಿದ್ದರು. ಅನುಕೂಲಸ್ಥ ಕ್ರಿಶ್ಚಿಯನ್ ಕುಟುಂಬದ ಅಚಿಂತಾ ನನ್ನ ಬಾಳಿಗೆ ಬೆಳಕಾದರು ಎನ್ನುತ್ತಾರೆ. ದಂಪತಿಗೆ ಇಬ್ಬರು ಮಕ್ಕಳು: ಪ್ರಬೋಧ್ ನಿಬೋಧ್.