ADVERTISEMENT

ಆಳ–ಅಗಲ | ಲೈಂಗಿಕ ದೌರ್ಜನ್ಯ: ಬಾಲ್ಯದಲ್ಲೇ ಸಂತ್ರಸ್ತರು

ಭಾರತದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ* ಲ್ಯಾನ್ಸೆಟ್‌ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
   
ಜಾಗತಿಕ ಮಟ್ಟದಲ್ಲಿ ಮಕ್ಕಳ ಮೇಲೆ ದೊಡ್ಡ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ; ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಮೇಲೆ ಮತ್ತು ಏಳರಲ್ಲಿ ಒಬ್ಬ ಪುರುಷನ ಮೇಲೆ ಬಾಲ್ಯದಲ್ಲೇ (18 ವರ್ಷ ವಯಸ್ಸಿಗೂ ಮೊದಲೇ)  ಲೈಂಗಿಕ ದೌರ್ಜನ್ಯ ನಡೆದಿರುತ್ತದೆ ಎಂದು ‘ದಿ ಲ್ಯಾನ್ಸೆಟ್’ ಅಧ್ಯಯನ ವರದಿ ಹೇಳುತ್ತದೆ. ವಿಶ್ವದ ಇನ್ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಅರ್ಧದಷ್ಟು ಪ್ರಕರಣಗಳು ಸಂತ್ರಸ್ತರಿಗೆ 15 ವರ್ಷ ವಯಸ್ಸಾಗುವ ಮುನ್ನವೇ ನಡೆದಿವೆ ಎಂದು ವರದಿ ಹೇಳಿದೆ. ಜಗತ್ತಿನಲ್ಲಿ ಇಂತಹ ಅಧ್ಯಯನ ಇದೇ ಮೊದಲ ಬಾರಿಗೆ ನಡೆದಿದೆ ಎಂದು ಪ್ರತಿಪಾದಿಸಲಾಗಿದ್ದು, ಅದರಲ್ಲಿರುವ ವಿಚಾರಗಳು ಮಕ್ಕಳ ಹಕ್ಕುಗಳು ಮತ್ತು ಅವರ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದೆನಿಸಿವೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಎಸ್‌ವಿಎಸಿ) ಜಾಗತಿಕ ಮಟ್ಟದಲ್ಲಿ ದೊಡ್ಡ ಪಿಡುಗಾಗಿದ್ದರೂ ಅದರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆದಿಲ್ಲ ಮತ್ತು ಅದಕ್ಕೆ ಸಂಬಂಧಿಸಿದ ಅಂಕಿಅಂಶದ ಲಭ್ಯತೆ ಕೂಡ ಕಡಿಮೆ. ಹೆಣ್ಣು ಹಾಗೂ ಗಂಡು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದು, ಅದು ಅವರ ಭವಿಷ್ಯದ ಮೇಲೂ ಪರಿಣಾಮ ಬೀರುತ್ತಿದೆ. ಇದು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲದೇ, ಜಾಗತಿಕ ಸಮಸ್ಯೆಯಾಗಿದೆ.

‘ದಿ ಲ್ಯಾನ್ಸೆಟ್‌’ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನ ವರದಿಯು ಜಾಗತಿಕ ಮಟ್ಟದಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಸಂಪೂರ್ಣ ನೋಟವನ್ನು ನೀಡುತ್ತಿದೆ.1990ರಿಂದ 2023ರವರೆಗೆ 204 ದೇಶಗಳಲ್ಲಿ ಎಲ್ಲ ವಯೋಮಾನದ ಪುರುಷ ಮತ್ತು ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಲೈಂಗಿಕ ದೌರ್ಜನ್ಯದ ಸಂತ್ರಸ್ತರಲ್ಲಿ ಅರ್ಧದಷ್ಟು
(ಶೇ 50ರಷ್ಟು) ಮಂದಿ 15 ವರ್ಷ ಮತ್ತು ಅದಕ್ಕಿಂತ ಮೊದಲೇ ಮೊದಲ ಬಾರಿಗೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ. 

ಜಗತ್ತಿನಲ್ಲಿ ಐವರಲ್ಲಿ ಒಬ್ಬ ಮಹಿಳೆ (ಶೇ 18.9) ಮತ್ತು ಏಳರಲ್ಲಿ ಒಬ್ಬ ಪುರುಷ (ಶೇ 14.8) 18 ವರ್ಷ ಮುಟ್ಟುವ ಮುನ್ನವೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿರುತ್ತಾರೆ. 13–24 ವರ್ಷ ವಯಸ್ಸಿನ ಸಂತ್ರಸ್ತರ ಪೈಕಿ ಶೇ 67ರಷ್ಟು ಮಹಿಳೆಯರು, ಶೇ 72ರಷ್ಟು ಪುರುಷರು ತಮ್ಮ ಬಾಲ್ಯದಲ್ಲಿ ಅಂದರೆ, 19 ವರ್ಷಕ್ಕೆ ಕಾಲಿಡುವುದಕ್ಕೂ ಮೊದಲು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. 

ADVERTISEMENT

ಸಂತ್ರಸ್ತರ ಪ್ರಮಾಣ ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಭಾರತದಲ್ಲಿ ಶೇ 30.8 ಮಹಿಳೆಯರು ಮತ್ತು ಶೇ 13.5ರಷ್ಟು ಪುರುಷರು ಸಂತ್ರಸ್ತರಾಗಿದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ ಮಹಿಳೆಯರಲ್ಲಿ ಶೇ 27.5 ಮತ್ತು ಪುರುಷರಲ್ಲಿ 16.1 ಇದ್ದರೆ, ಬ್ರಿಟನ್‌ನಲ್ಲಿ ಕ್ರಮವಾಗಿ ಶೇ 24.4 ಮತ್ತು ಪುರುಷರ ಶೇ 16.5 ಸಂತ್ರಸ್ತರಿದ್ದಾರೆ. ಭಾರತದಲ್ಲಿ 20–24 ವರ್ಷ ವಯಸ್ಸಿನವರ ಪೈಕಿ ಶೇ 26.9ರಷ್ಟು ಮಹಿಳೆಯರು ಮತ್ತು ಶೇ 9.4ರಷ್ಟು ಪುರುಷರು ಬಾಲ್ಯದಲ್ಲಿಯೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾರೆ. 

ಸಮಾಜದಲ್ಲಿ ಲೈಂಗಿಕ ದೌರ್ಜನ್ಯ ಪ್ರವೃತ್ತಿ ಗಮನಾರ್ಹ ಪ್ರಮಾಣದಲ್ಲಿ ಇರುವುದು ಮಾತ್ರವಲ್ಲದೇ ಮುಂದುವರಿಯುತ್ತಲೂ ಇದೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದಲ್ಲಿ ಭಾರತವು ಜಗತ್ತಿನಲ್ಲಿ ಇಂತಹ ಕೃತ್ಯಗಳು ಗಮನಾರ್ಹ ಪ್ರಮಾಣದಲ್ಲಿ ನಡೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿದೆ. ಕೋಸ್ಟರಿಕಾ, ಚಿಲಿ, ಸೊಲೋಮನ್ ದ್ವೀಪಗಳಲ್ಲಿ ಈ ಪ್ರಮಾಣ ಜಾಸ್ತಿ ಇದೆ.   

ದೌರ್ಜನ್ಯವು ಮಕ್ಕಳ ಹಕ್ಕುಗಳು ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ದೊಡ್ಡ ಪಿಡುಗಾಗಿದೆ. ಇದು ಅಪರಾಧ ಚಟುವಟಿಕೆ ಮಾತ್ರ ಆಗಿರದೇ ಸಮಾಜದ ಸ್ವಾಸ್ಥದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಇದನ್ನು ಎದುರಿಸುವುದಕ್ಕಾಗಿ ಅರಿವು ಕಾರ್ಯಕ್ರಮಗಳು, ನೀತಿ ನಿಯಮಗಳಲ್ಲಿ ಬದಲಾವಣೆ ಆಗಬೇಕಿದೆ ಎಂದು ಅಧ್ಯಯನಕಾರರು ಪ್ರತಿಪಾದಿಸಿದ್ದಾರೆ.

ಸಂತ್ರಸ್ತರು ಇನ್ನಷ್ಟು ಹೆಚ್ಚು?

ವಾಸ್ತವದಲ್ಲಿ ಸಂತ್ರಸ್ತರ ಪ್ರಮಾಣ ಹಾಗೂ ಸಮಸ್ಯೆಯ ವ್ಯಾಪ್ತಿ ಇನ್ನೂ ಹಿರಿದಾಗಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಮೀಕ್ಷೆಗಳನ್ನು ಮಾಡುವ ರೀತಿಯೂ ಪ್ರಕರಣಗಳು ಹೊರಬರದಿರುವುದಕ್ಕೆ ಕಾರಣ ಆಗಬಹುದು. ನೇರವಾಗಿ ಮಾತನಾಡಿಸಿದಾಗ ಹೇಳಲಾಗದ ಎಷ್ಟೋ ವಿಚಾರಗಳನ್ನು ಕೆಲವರು ಪರೋಕ್ಷ ರೀತಿಗಳಲ್ಲಿ ತಿಳಿಸುತ್ತಾರೆ. 63 ದೇಶಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಮಾಹಿತಿಯೇ ಇರಲಿಲ್ಲ. ಮಾಹಿತಿ ಲಭ್ಯವಿದ್ದ ದೇಶಗಳಲ್ಲಿಯೂ ಒಂದು ವರ್ಷದ ದತ್ತಾಂಶ ಮಾತ್ರ ಲಭ್ಯ ಇತ್ತು. ಇದರಿಂದ ಪ್ರಕರಣಗಳಿಗೆ ಸಂಬಂಧಿಸಿದ ಪ್ರವೃತ್ತಿಗಳನ್ನು, ಅಸ್ತಿತ್ವದಲ್ಲಿರುವ ನೀತಿಗಳಿಗೂ ಪ್ರಕರಣಗಳ ಸಂಖ್ಯೆಗೂ ಇರಬಹುದಾದ ಸಂಬಂಧದ ಬಗ್ಗೆ ಅಧ್ಯಯನ ಮಾಡಲು ಅಡಚಣೆಯಾಯಿತು ಎಂದು ಅಧ್ಯಯನಕಾರರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬಾಲಕರು ಸುರಕ್ಷಿತರಲ್ಲ

ಲೈಂಗಿಕ ದೌರ್ಜನ್ಯ ಎಂದರೆ, ಅದು ಬಾಲಕಿಯರು ಅಥವಾ ಮಹಿಳೆಯರ ಮೇಲೆ ಮಾತ್ರ ನಡೆಯುವಂಥದ್ದು ಎನ್ನುವ ತಿಳಿವಳಿಕೆ ಕೆಲವರಲ್ಲಿದೆ. ಆದರೆ, ಲಭ್ಯ ಇರುವ ದತ್ತಾಂಶ ನೋಡಿದರೆ, ಬಾಲಕರು ಮತ್ತು ಪುರುಷರ ಮೇಲೆಯೂ ಗಮನಾರ್ಹ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. 

ಕೆಲವು ದೇಶಗಳಲ್ಲಿ ಸಂತ್ರಸ್ತರ ಪೈಕಿ ಮಹಿಳೆಯರಿಗಿಂತಲೂ ಪುರುಷರ ಪ್ರಮಾಣವೇ ಹೆಚ್ಚಿದೆ. ಬಾಂಗ್ಲಾದೇಶ ಮತ್ತು ಹೈಟಿಯಲ್ಲಿ ಬಾಲಕಿಯರಿಗಿಂತಲೂ ಬಾಲಕರ ಮೇಲೆಯೇ ಹೆಚ್ಚು ದೌರ್ಜನ್ಯಗಳು ನಡೆದಿವೆ. ಭಾರತದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿರುವ ಬಾಲಕರ ಪ್ರಮಾಣ ಶೇ 13.5 ಆಗಿದ್ದು, ಇದು ಜಾಗತಿಕ ಪ್ರಮಾಣವಾದ ಶೇ 14.8ಕ್ಕಿಂತ ಸ್ವಲ್ಪ ಕಡಿಮೆ ಇದೆ. ಪುರುಷತ್ವದ ಬಗೆಗಿನ ನಂಬಿಕೆಗಳು ಮತ್ತಿತರ ಸಾಮಾಜಿಕ ಕಾರಣಗಳಿಂದ ಬಾಲಕರ ವಿರುದ್ಧದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿಲ್ಲ.

ಪರಿಣಾಮ ಏನೇನು?

  •  ಮಕ್ಕಳ ಸುರಕ್ಷತೆ ಮತ್ತು ಆರೋಗ್ಯಕ್ಕೆ ಧಕ್ಕೆ

  •  ಒತ್ತಡ, ಖಿನ್ನತೆಯಿಂದಾಗಿ ಮಾನಸಿಕ ಆರೋಗ್ಯ ಹಾಳು 

  •  ಮದ್ಯಪಾನ ಸೇರಿದಂತೆ ಇತರ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ

  •  ವೈಯಕ್ತಿಕ ಅಭಿವೃದ್ಧಿಯ ಮೇಲೆ ಪರಿಣಾಮ

  •  ಶಿಕ್ಷಣ, ವೃತ್ತಿ ಜೀವನ, ಆರ್ಥಿಕ ಸಾಧನೆಗೆ ಹಿನ್ನಡೆ

  •  ಸಂತ್ರಸ್ತರು ಮಾತ್ರವಲ್ಲದೆ ಅವರ ಪೋಷಕರು, ಕುಟುಂಬ ಸದಸ್ಯರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ

  •  ದೌರ್ಜನ್ಯಕ್ಕೆ ಒಳಗಾದವರು ಅಪರಾಧ ಕೃತ್ಯಗಳು ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುವ ಅಪಾಯ

ತಡೆಗೆ ಏನಾಗಬೇಕು?

  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ದೇಶ ಮತ್ತು ಜಾಗತಿಕ ಮಟ್ಟದಲ್ಲಿ ನಿಗಾ ವ್ಯವಸ್ಥೆ ಬೇಕು

  •  ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವ ಯೋಜನೆಗಳು ಅಗತ್ಯ

  •  ಆರೋಗ್ಯ, ಶೈಕ್ಷಣಿಕ, ನ್ಯಾಯ ವ್ಯವಸ್ಥೆ ಮತ್ತು ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳ ಸುಧಾರಣೆ

  •  ಸುಸ್ಥಿರ ಅಭಿವೃದ್ಧಿ ಗುರಿಗಳಂತಹ (ಎಸ್‌ಡಿಜಿ) ಜಾಗತಿಕ ಮಟ್ಟದ ಮತ್ತಷ್ಟು ಕಾರ್ಯಕ್ರಮಗಳ
    ಅವಶ್ಯಕತೆ

ಆಧಾರ: ದಿ ಲ್ಯಾನ್ಸೆಟ್, ಡೌನ್ ಟು ಅರ್ಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.