ADVERTISEMENT

ಆಳ-ಅಗಲ | ಜಾನುವಾರುಗಳಿಗೆ ಚರ್ಮಗಂಟು ರೋಗದ ಕಾಟ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 19:30 IST
Last Updated 26 ಸೆಪ್ಟೆಂಬರ್ 2022, 19:30 IST
ರೋಗಪೀಡಿತ ಹಸು
ರೋಗಪೀಡಿತ ಹಸು   

‘ಮಾನವರಿಗೆ ಕೊರೊನಾವೈರಸ್‌ ಎಷ್ಟು ಅಪಾಯಕಾರಿಯೋ, ಜಾನುವಾರುಗಳಿಗೆ ಚರ್ಮಗಂಟು ರೋಗವು ಅಷ್ಟೇ ಅಪಾಯಕಾರಿ’ ಎಂದು ಕೇಂದ್ರ ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವ ಧರ್ಮಪಾಲ್‌ ಹೇಳಿದ್ದಾರೆ. ಈ ರೋಗದ ಭೀಕರತೆಯನ್ನು ಅವರ ಈ ಹೇಳಿಕೆ ಬಿಂಬಿಸುತ್ತದೆ.ದೇಶದ 16 ರಾಜ್ಯಗಳ 251 ಜಿಲ್ಲೆಗಳಿಗೆ ಹರಡಿರುವ ಚರ್ಮಗಂಟು ರೋಗವು ಈವರೆಗೆ 1 ಲಕ್ಷಕ್ಕಿಂತಲೂ ಹೆಚ್ಚು ಜಾನುವಾರುಗಳನ್ನು ಬಲಿತೆಗೆದುಕೊಂಡಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ ಮೂರನೇ ವಾರದವರೆಗಿನ ದತ್ತಾಂಶಗಳು ಮಾತ್ರ ಲಭ್ಯವಿದ್ದು, ರೋಗ ಹರಡಿರುವ ಸ್ಥಿತಿಯ ಬಗ್ಗೆ ಪೂರ್ಣ ಚಿತ್ರಣ ಲಭ್ಯವಿಲ್ಲ. ಪ್ರತಿ ರಾಜ್ಯದಲ್ಲಿ ಎಷ್ಟು ಜಾನುವಾರುಗಳಿಗೆ ಈ ರೋಗ ಹರಡಿದೆ ಎಂಬುದರ ನಿಖರ ಮಾಹಿತಿ ಲಭ್ಯವಾಗಿಲ್ಲ.

* ಬೇರೆ ರಾಜ್ಯಗಳಿಂದ ಜಾನುವಾರುಗಳ ಸಾಗಾಟ ಮತ್ತು ಮಾಂಸದ ಸರಬರಾಜನ್ನು ಉತ್ತರ ಪ್ರದೇಶ ಸರ್ಕಾರ ನಿಷೇಧಿಸಿದೆ

* ಜಮ್ಮು–ಕಾಶ್ಮೀರವೂ ಬೇರೆ ರಾಜ್ಯಗಳಿಂದ ಮಾಂಸದ ಸರಬರಾಜನ್ನು ನಿಷೇಧಿಸಿದೆ

ADVERTISEMENT

* ಬಿಹಾರವು ಅಕ್ಕಪಕ್ಕದ ರಾಜ್ಯಗಳಿಂದ ಮಾಂಸ ಮತ್ತು ಜಾನುವಾರಗಳ ಸಾಗಾಟವನ್ನು ನಿಷೇಧಿಸಿದೆ

* ಮಹಾರಾಷ್ಟ್ರದಲ್ಲಿ ಆಯ್ದ ಜಿಲ್ಲೆಗಳ ಮಧ್ಯೆಮಾಂಸ ಮತ್ತು ಜಾನುವಾರಗಳ ಸಾಗಾಟವನ್ನು ನಿಷೇಧಿಸಲಾಗಿದೆ

* ಗುಜರಾತ್ ಸರ್ಕಾರವು ಬೇರೆ ರಾಜ್ಯಗಳಿಂದ ಜಾನುವಾರಗಳ ಸಾಗಾಟವನ್ನು ನಿಷೇಧಿಸಿದೆ

1929ರಲ್ಲಿ ಮೊದಲು ಪತ್ತೆ

ಚರ್ಮಗಂಟು ರೋಗವನ್ನು ಆಫ್ರಿಕಾದ ನಮೀಬಿಯಾದಲ್ಲಿ ಮೊದಲ ಬಾರಿಗೆ 1929ರಲ್ಲಿ ಪತ್ತೆ ಮಾಡಲಾಗಿತ್ತು. ಈ ರೋಗವು ಆಫ್ರಿಕಾ ಖಂಡದ ಬಹುತೇಕ ರಾಷ್ಟ್ರಗಳಲ್ಲಿ ಈಗಾಗಲೇ ಹಲವು ಬಾರಿ ಮತ್ತು ರಷ್ಯಾದಲ್ಲಿ ಹತ್ತು ವರ್ಷಗಳಲ್ಲಿ ಹಲವು ಬಾರಿ ಪತ್ತೆಯಾಗಿದೆ. ಆದರೆ, 2020ರಿಂದ ಈ ರೋಗವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಿಗೂ ವ್ಯಾಪಿಸಿದೆ. ಚೀನಾ, ಭಾರತ, ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್‌, ಇಂಡೊನೇಷ್ಯಾ ಸೇರಿ ಹಲವು ದೇಶಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡಿದೆ.

ಪರಿಣಾಮಗಳು

lಒಂದರಿಂದ ಮತ್ತೊಂದಕ್ಕೆ ಹರಡುವ ಕಾರಣ, ಒಂದಿಡೀ ಪ್ರದೇಶದ ಜಾನುವಾರುಗಳಿಗೆ ಈ ರೋಗ ಹರಡುವ ಅಪಾಯ ಇರುತ್ತದೆ

lರೋಗಪೀಡಿತ ಹಸು, ಎಮ್ಮೆಗಳ ಹಾಲಿನ ಇಳುವರಿ ಶೇ 40ರಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು, ಹಾಲಿನ ಉತ್ಪಾದನೆ ತಗ್ಗುತ್ತದೆ; ಹಾಲಿನ ಉಪ ಉತ್ಪನ್ನಗಳ ತಯಾರಿಕೆಗೂ ಹೊಡೆತ ಬೀಳುತ್ತದೆ

lರೋಗಪೀಡಿತ ದನಗಳು ಮೃತಪಡುವ ಸಾಧ್ಯತೆಯಿದ್ದು, ದನದ ಮಾಂಸ ಉತ್ಪಾದನೆ ಕುಂಠಿತಗೊಳ್ಳುತ್ತದೆ

lಚರ್ಮೋದ್ಯಮ ಹಾಗೂ ಜಾನುವಾರುಗಳನ್ನು ಒಳಗೊಳ್ಳುವ ಸಂಬಂಧಿತ ಉದ್ಯಮಗಳಲ್ಲಿ ನಷ್ಟ ಎದುರಾಗುವ ಸಾಧ್ಯತೆಯಿದೆ

lಜಾನುವಾರುಗಳನ್ನು ಬಳಸಿ ಉಳುಮೆ ಮಾಡುವ ಹಾಗೂ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿರುವ ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಾಗುತ್ತದೆ

lರೋಗಪೀಡಿತ ದನಗಳ ಆರೈಕೆ, ಲಸಿಕೆ, ಚೇತರಿಕೆಗೆ ಸಾಕಷ್ಟು ಹಣ ಹಾಗೂ ಸಮಯ ಬೇಕಾಗುತ್ತದೆ

ಹಾಲು ಸುರಕ್ಷಿತ

ಚರ್ಮ ಗಂಟು ರೋಗವು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ರೋಗ ಇರುವ ಹಸುವಿನ ಹಾಲು ಕುಡಿಯುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹಾಲನ್ನು ಕುದಿಸಿ ಕುಡಿಯಬಹುದು ಇಲ್ಲವೇ ಕುದಿಸದೆಯೂ ಕುಡಿಯಬಹುದು ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆಯು ಹೇಳಿದೆ.

ನಿಯಂತ್ರಣ ಹೇಗೆ?

lರೋಗಪೀಡಿತ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ತಕ್ಷಣ ಬೇರ್ಪಡಿಸಬೇಕು, ರೋಗಪೀಡಿತ ಜಾನುವಾರುಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು

lಜಾನುವಾರು ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಬೇಕು, ಸೋಂಕು ನಿವಾರಕಗಳನ್ನು ಪಶು ವೈದ್ಯರ ಸಲಹೆಯಂತೆ ಸಿಂಪಡಿಸಬೇಕು

lರೋಗಕ್ಕೆ ಚಿಕಿತ್ಸೆ ನೀಡುವುದರ ಜತೆಗೆ, ಖನಿಜಾಂಶವುಳ್ಳ ಔಷಧ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ನೀಡಬೇಕು. ಇದರಿಂದ ಜಾನುವಾರುಗಳು ನಿಶ್ಶಕ್ತವಾಗುವುದನ್ನು ತಪ್ಪಿಸಬಹುದು

lಜಾನುವಾರು ಸಾವನ್ನಪ್ಪಿದರೆ ಅವುಗಳಿಗೆಸೋಂಕು ನಿವಾರಕ ಸಿಂಪಡಿಸಿ, ಆಳವಾದಗುಂಡಿ ತೋಡಿ ಹೂಳಬೇಕು

lನಾಲ್ಕು ತಿಂಗಳಿಗಿಂತ ಹೆಚ್ಚು ವಯಸ್ಸಾದ ಎಲ್ಲ ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆ ಲಸಿಕೆ ಹಾಕಬಹುದು

lಸೋಂಕು ಕಾಣಿಸಿಕೊಂಡ ಊರಿನ ಸುತ್ತಲು ಐದು ಕಿ.ಮೀ. ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನ ನಡೆಸಿ ಸೋಂಕು ಹರಡುವುದನ್ನು ತಡೆಯಬಹುದು

lಸೋಂಕು ಪೀಡಿತ ‍ಪ್ರದೇಶದ ಜಾನುವಾರುಗಳನ್ನು ಸೋಂಕು ಇಲ್ಲದ ಪ್ರದೇಶಕ್ಕೆ ಒಯ್ಯಬಾರದು. ಸೋಂಕು ಇಲ್ಲದ ಪ್ರದೇಶದ ಜಾನುವಾರುಗಳನ್ನು ಸೋಂಕು ಇರುವ ಪ್ರದೇಶಕ್ಕೆ ಕರೆತರಬಾರದು

lರೋಗಪೀಡಿತ ಜಾನುವಾರುಗಳ ಆರೈಕೆ ಮಾಡುತ್ತಿರುವವರು ಆರೋಗ್ಯವಂತ ಜಾನುವಾರುಗಳಿಂದ ದೂರ ಇರಬೇಕು. ರೋಗ ಇರುವ ಪ್ರದೇಶದ ಜನರು ರೋಗ ಇಲ್ಲದ ಕಡೆಗೆ ಹೋಗುವುದರ ಮೇಲೆ ನಿರ್ಬಂಧ ಹೇರಬೇಕು

lರೋಗ ಕಾಣಿಸಿಕೊಂಡ ಪ್ರದೇಶದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುವ ಜಾನುವಾರು ಸಂತೆಗಳನ್ನು ರದ್ದುಪಡಿಸಬೇಕು

ಲಸಿಕೆ

ಚರ್ಮಗಂಟು ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆಸೋಂಕು ತಡೆಗಟ್ಟಲು ಗೋಟ್‌ಪಾಕ್ಸ್ ಮತ್ತು ಶೀಪ್‌ಪಾಕ್ಸ್‌ ಲಸಿಕೆಯನ್ನು ಈಗ ನೀಡಲಾಗುತ್ತಿದೆ. ಈ ಲಸಿಕೆಗಳು ಚರ್ಮಗಂಟು ರೋಗವನ್ನು ಶೇಕಡ ನೂರರಷ್ಟು ತಡೆಯುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಲ್ಲಿವರೆಗೆ ಸುಮಾರು 1 ಕೋಟಿ ಜಾನುವಾರುಗಳಿಗೆ ಗೋಟ್‌ಪಾಕ್ಸ್ ಮತ್ತು ಶೀಪ್‌ಪಾಕ್ಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚರ್ಮಗಂಟು ರೋಗವನ್ನು ತಡೆಯಲೆಂದೇ ಪ್ರತ್ಯೇಕ ಲಸಿಕೆಯನ್ನು ಹರಿಯಾಣದ ಹಿಸ್ಸಾರ್‌ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧಿಪಡಿಸಿದೆ. ಮಂಡಳಿಯ ನ್ಯಾಷನಲ್ ಯುನೀಕ್ ರಿಸರ್ಚ್ ಸೆಂಟರ್‌(ಎನ್‌ಇಆರ್‌ಸಿ) ಹಾಗೂ ಬರೇಲಿಯಲ್ಲಿರುವ ಭಾರತೀಯ ಪಶು ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಜಂಟಿ ಸಹಯೋಗದಲ್ಲಿ ‘ಲಂಪಿ ಪ್ರೊವ್ಯಾಕ್ ಇಂಡ್’ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಕೆಲವು ತಿಂಗಳಲ್ಲಿ ತಯಾರಿಕೆ ಶುರುವಾಗುವ ನಿರೀಕ್ಷೆಯಿದೆ. ಲಸಿಕೆ ತಯಾರಿಕೆಗೆ ಮೂರು ಸಂಸ್ಥೆಗಳು ಮುಂದೆ ಬಂದಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ದೇಶದಲ್ಲಿ ಸುಮಾರು 30 ಕೋಟಿ ಜಾನುವಾರುಗಳಿದ್ದು, ಹಂತಹಂತವಾಗಿ ಎಲ್ಲ ಜಾನುವಾರುಗಳನ್ನು ಲಸಿಕಾ ಕಾರ್ಯಕ್ರಮಕ್ಕೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ.

ಆಧಾರ: ಪಿಟಿಐ, ರಾಯಿಟರ್ಸ್‌, ಕೇಂದ್ರ ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯ, ಕರ್ನಾಟಕ ಪಶುಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.