ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಬಹುಮುಖ್ಯ ಮಾಹಿತಿಯೊಂದು ಅಮೆರಿಕದಿಂದ ಬಂದಿದೆ. ಫೇಸ್‌ಬುಕ್, ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಂ, ಥ್ರೆಡ್ಸ್ ಒಡೆತನ ಹೊಂದಿರುವ ಮೆಟಾ ಕಂಪನಿಯು ಅಮೆರಿಕದ ಮಟ್ಟಿಗೆ ಫ್ಯಾಕ್ಟ್ ಚೆಕ್ ವ್ಯವಸ್ಥೆಯಿಂದ ಹೊರಬರುತ್ತಿರುವುದಾಗಿ ಅದರ ಸಿಇಒ ಮಾರ್ಕ್ ಜುಕರ್‌ಬರ್ಗ್ ಇದೇ 7ರಂದು ಘೋಷಿಸಿದ್ದಾರೆ. ತಮ್ಮ ವೇದಿಕೆಗಳಲ್ಲಿ ಪ್ರಕಟ ಮಾಡುವ ಮಾಹಿತಿಗಳ ಬಗೆಗಿನ ನಿರ್ಬಂಧಗಳನ್ನು ಸಡಿಲಗೊಳಿಸಿ, ನಿಯಮಗಳನ್ನು ಸರಳಗೊಳಿಸಿರುವುದಾಗಿ ತಿಳಿಸಿದ್ದಾರೆ. ಬಳಕೆದಾರರಿಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವುದಾಗಿ ಹೇಳಿದ್ದಾರೆ. ತಮ್ಮ ವೇದಿಕೆಗಳು ‘ಮುಖ್ಯವಾಹಿನಿಯ ಚರ್ಚೆಗಳಿಂದ ದೂರ ಸರಿದಿರುವುದು’ ಈ ಬದಲಾವಣೆಗೆ ಕಾರಣ ಎಂದಿದ್ದಾರೆ.
ಫ್ಯಾಕ್ಟ್ ಚೆಕ್ ವ್ಯವಸ್ಥೆಯು ‘ಅತಿಯಾದ ರಾಜಕೀಯ ಪಕ್ಷಪಾತ’ ಅನುಸರಿಸಿ, ವಿಶ್ವಾಸ ಮೂಡಿಸಿದ್ದಕ್ಕಿಂತಲೂ ಹೆಚ್ಚಿನ ಮಟ್ಟದ ಅಪನಂಬಿಕೆಗೆ ಕಾರಣವಾಗಿವೆ. ಹೀಗಾಗಿ, ಕಂಪನಿಯು ತನ್ನ ಮೂಲ ಸಿದ್ಧಾಂತಕ್ಕೆ ಹಿಂದಿರುಗುತ್ತಿದೆ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಜತೆಗೆ, ಪೋಸ್ಟ್‌ಗಳ ವಾಸ್ತವಾಂಶ ಬಯಲಿಗೆ ತರಲು ‘ಸಮುದಾಯದಿಂದ ಟಿಪ್ಪಣಿ’ ಪದ್ಧತಿ ಅಳವಡಿಸಿಕೊಂಡಿರುವುದಾಗಿ ಜುಕರ್‌ಬರ್ಗ್ ಹೇಳಿದ್ದಾರೆ. ಸಮುದಾಯದಿಂದ ಟಿಪ್ಪಣಿ ಎಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿ/ಮಾಹಿತಿಯ ಸತ್ಯಾಸತ್ಯತೆಯನ್ನು ಬಳಕೆದಾರರೇ ನಿರ್ಧರಿಸುವುದು (ಬಳಕೆದಾರರ ಪ್ರತಿಕ್ರಿಯೆ). ಒಂದು ಪೋಸ್ಟ್‌ಗೆ ಸಂಬಂಧಿಸಿದಂತೆ ಅದು ವಾಸ್ತವವೋ, ಸುಳ್ಳೋ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಲು ಬಳಕೆದಾರರಿಗೆ ಅವಕಾಶವಿರುತ್ತದೆ. ಎಲಾನ್ ಮಸ್ಕ್ ಅವರ ‘ಎಕ್ಸ್’ ವೇದಿಕೆಯಲ್ಲಿ ಈ ಮಾದರಿಯನ್ನು ಜಾರಿಗೆ ತಂದಿದ್ದಾರೆ.
ಟ್ರಂಪ್ ಕಾರಣವೇ?: ಆದರೆ, ಸಾಮಾಜಿಕ ಜಾಲತಾಣಗಳ ತಜ್ಞರು ಮತ್ತು ವಿಶ್ಲೇಷಕರು ಹೇಳುತ್ತಿರುವ ವಿಚಾರ ಬೇರೆಯೇ ಇದೆ. ಮೆಟಾ ಕಂಪನಿಯು 2016ರಲ್ಲಿ ಫ್ಯಾಕ್ಟ್ ಚೆಕ್ ನೀತಿಯನ್ನು ಅಳವಡಿಸಿಕೊಳ್ಳುವುದಕ್ಕೆ ಮತ್ತು ಇಂದು ಅದರಿಂದ ಹೊರಬರುತ್ತಿರುವುದಕ್ಕೆ ಕಾರಣ ಡೊನಾಲ್ಡ್ ಟ್ರಂಪ್ ಎನ್ನಲಾಗಿದೆ. 2016ರ ಅಮೆರಿಕದ ಸಾರ್ವತ್ರಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆರಿಸಿ ಬಂದಿದ್ದರು. ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ಪರವಾದ ಪೋಸ್ಟ್‌ಗಳನ್ನು ಹೆಚ್ಚಾಗಿ ಹರಡಿ, ಫಲಿತಾಂಶ ಅವರಿಗೆ ಅನುಕೂಲಕರವಾಗಿ ಬರಲು ನೆರವು ನೀಡಿದೆ ಎಂದು ಫೇಸ್‌ಬುಕ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆ ಅಪಖ್ಯಾತಿಯನ್ನು ಹೋಗಲಾಡಿಸುವ ಸಲುವಾಗಿ ಫೇಸ್‌ಬುಕ್ ಜಾಗತಿಕ ಮಟ್ಟದಲ್ಲಿ ಫ್ಯಾಕ್ಟ್ ಚೆಕ್ ಮಾಡುವ ನೀತಿಯನ್ನು ಜಾರಿಗೆ ತಂದು, ಮೂರನೇ ವ್ಯಕ್ತಿ/ಸಂಸ್ಥೆಯಿಂದ ಫ್ಯಾಕ್ಟ್ ಚೆಕ್ ಮಾಡಿಸುವ ಕ್ರಮವನ್ನು ಅನುಸರಿಸತೊಡಗಿತು. ಅಪಾಯಕಾರಿ ಪೋಸ್ಟ್‌ಗಳನ್ನು ತೆಗೆದುಹಾಕುವಂಥ ತಂತ್ರಜ್ಞಾನ ಅಳವಡಿಸಿಕೊಂಡಿತು. ಈಗ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಅವರಿಗೆ ಅನುಕೂಲ ಮಾಡಿಕೊಡಲು ಕಂಪನಿ ಈ ನಿರ್ಧಾರ ತಳೆದಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಜಗತ್ತಿನ ಅಗ್ರ 10 ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕು ಮೆಟಾ ಕಂಪನಿಗೆ ಸೇರಿವೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗುತ್ತಿದೆ. ವಿಶ್ವದ ಮೂರನೇ ಎರಡರಷ್ಟು ಜನರು ಇಂಟರ್‌ನೆಟ್ ಬಳಸುತ್ತಿದ್ದಾರೆ; ಅಂದಾಜು 500 ಕೋಟಿ ಜನ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಪ್ಯೂ ರಿಸರ್ಚ್ ಸಂಸ್ಥೆಯು 27 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಿತಾಗಿದೆ ಎಂದು 20 ರಾಷ್ಟ್ರಗಳ ಬಹುತೇಕ ಮಂದಿಯು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣವು ಸುಳ್ಳು ಸುದ್ದಿಯ ಪ್ರಮುಖ ಮೂಲವೂ ಆಗಿದೆ. ಈ ವೇದಿಕೆಗಳಲ್ಲಿ ಹರಿಯುತ್ತಿರುವ ಮಾಹಿತಿ ಪ್ರವಾಹದ ನಡುವೆ ಸುಳ್ಳು ಸುದ್ದಿ ಯಾವುದು, ವಿಶ್ವಾಸಾರ್ಹ ಮಾಹಿತಿ ಯಾವುದು ಎಂಬುದರ ಬಗ್ಗೆ ಶೇ 59ರಷ್ಟು ಬಳಕೆದಾರರಿಗೆ ಗೊಂದಲ ಇದೆ ಎಂದು ರಾಯಿಟರ್ಸ್ ಇನ್‌ಸ್ಟಿಟ್ಯೂಟ್‌ನ ವರದಿಯೊಂದು ಹೇಳಿದೆ. ಉದ್ದೇಶಪೂರ್ವಕವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ಸುಳ್ಳು ಮಾಹಿತಿ ಹರಡುವುದು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಅಪಾಯವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಗ್ಲೋಬಲ್ ರಿಸ್ಕ್ಸ್‌ರಿಪೋರ್ಟ್ ಉಲ್ಲೇಖಿಸಿದೆ.
ಸುಳ್ಳು ಸುದ್ದಿಯ ಮೂಲಕ ಒಂದು ದೇಶದ ಮತದಾರರ ಮೇಲೆ ವಿದೇಶಿ ಸಂಸ್ಥೆಗಳು ಪ್ರಭಾವ ಬೀರುವುದು, ಬಿಕ್ಕಟ್ಟಿನ ವಲಯಗಳಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಗೊಂದಲ ಸೃಷ್ಟಿಸುವುದು, ಮತ್ತೊಂದು ದೇಶದ ವಸ್ತು, ಸೇವೆಗಳ ಬಗ್ಗೆ ಅನುಮಾನ ಮೂಡಿಸುವುದು ಮಾಡಬಹುದಾಗಿದೆ. ಇಂಥ ಅಪಾಯಗಳನ್ನು ಎದುರಿಸಲು ಫ್ಯಾಕ್ಟ್ ಚೆಕ್ ಮಾಡುವ ವ್ಯವಸ್ಥೆ ಅತ್ಯವಶ್ಯಕ ಎಂದು ಡಬ್ಲ್ಯುಇಎಫ್ ವರದಿ ಹೇಳಿದೆ. ಮೆಟಾ ಸದ್ಯ ಅಮೆರಿಕದ ಮಟ್ಟಿಗೆ ಫ್ಯಾಕ್ಟ್ ಚೆಕ್ ಮಾಡುವುದಿಲ್ಲ ಎಂದಿದ್ದರೂ ಮುಂದೆ ಇದನ್ನು ವಿಶ್ವದ ಇತರೆಡೆಯೂ ವಿಸ್ತರಿಸುವ ಸಾಧ್ಯತೆ ಇದೆ.
ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್, ಫ್ಯಾಕ್ಟ್ ಚೆಕ್ ಸಂಸ್ಥೆಗಳು, ವಿವಿಧ ವಲಯಗಳ ತಜ್ಞರು ಮೆಟಾ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ದ್ವೇಷ ಭಾಷಣ, ಸುಳ್ಳು ಸುದ್ದಿ, ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಹೆಚ್ಚಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.
ಮೆಟಾವು ಸ್ವತಂತ್ರ ಫ್ಯಾಕ್ಟ್ ಚೆಕ್ ಸಂಸ್ಥೆಗಳಿಂದ ಫ್ಯಾಕ್ಟ್‌ಚೆಕ್ ಮಾಡಿಸುತ್ತಿದ್ದು, 119 ರಾಷ್ಟ್ರಗಳಲ್ಲಿ ಈ ವ್ಯವಸ್ಥೆಯನ್ನು ಹೊಂದಿದೆ. ಅಂತರರಾಷ್ಟ್ರೀಯ ಫ್ಯಾಕ್ಟ್ ಚೆಕ್ ನೆಟ್‌ವರ್ಕ್‌ನ (ಐಎಫ್‌ಸಿಎನ್)90 ಸಂಸ್ಥೆಗಳೊಂದಿಗೆ ಮೆಟಾ ಸಹಯೋಗ ಹೊಂದಿದ್ದು, 60 ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ. ಮೆಟಾ ಯೂರೋಪಿಯನ್ ಫ್ಯಾಕ್ಟ್ ಚೆಕಿಂಗ್ ಸ್ಟ್ಯಾಂಡರ್ಡ್ಸ್ ನೆಟ್‌ವರ್ಕ್ ಸೇವೆಯನ್ನೂ ಬಳಸುತ್ತಿದೆ. ಇದರ ಹೊರತಾಗಿಯೂ ಫ್ಯಾಕ್ಟ್ ಚೆಕ್ ಸಂಸ್ಥೆಗಳು ಹಣಕಾಸಿನ ಕೊರತೆ ಎದುರಿಸುತ್ತಿವೆ ಎಂದು ಐಎಫ್‌ಸಿಎನ್ ಹೇಳಿದೆ. ಈಗ ಮೆಟಾ ಫ್ಯಾಕ್ಟ್ ಚೆಕ್ ಮಾಡುವುದಿಲ್ಲ ಎಂದಿರುವುದರಿಂದ ಈ ಸಂಸ್ಥೆಗಳಿಗೆ ಮತ್ತಷ್ಟು ಹಣಕಾಸಿನ ಮುಗ್ಗಟ್ಟಿನ ಆತಂಕ ಉಂಟಾಗಿದ್ದು, ಅವು ಬೇರೆ ಆದಾಯ ಮೂಲಗಳನ್ನು ಹುಡುಕಿಕೊಳ್ಳಬೇಕಾಗಿದೆ.
ಆರ್ಥಿಕ ಸ್ಥಿರತೆ: ಫ್ಯಾಕ್ಟ್ ಚೆಕ್ ಸಂಸ್ಥೆಗಳ ಸವಾಲು
ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿ ಮಹಾಪೂರದಲ್ಲಿ ಸುಳ್ಳು ಯಾವುದು, ಸತ್ಯ ಯಾವುದು ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ ಇಂಟರ್‌ನ್ಯಾಷನಲ್ ಫ್ಯಾಕ್ಟ್ ಚೆಕಿಂಗ್ ನೆಟ್‌ವರ್ಕ್ (ಐಎಫ್‌ಸಿಎನ್) ಎಂಬ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ. ವಿವಿಧ ರಾಷ್ಟ್ರಗಳ 138 ಸಂಸ್ಥೆಗಳು ಈ ಜಾಲದ ಸದಸ್ಯತ್ವ ಹೊಂದಿವೆ. ಇಲ್ಲಿನ ಅರ್ಧಕ್ಕೂ ಹೆಚ್ಚು ಸಂಸ್ಥೆಗಳು (ಶೇ 53ರಷ್ಟು) ಲಾಭರಹಿತ ಸಂಸ್ಥೆಗಳು. ಇವುಗಳು ಆದಾಯಕ್ಕಾಗಿ ತಂತ್ರಜ್ಞಾನ ಕಂಪನಿಗಳು ನೀಡುವ ಆರ್ಥಿಕ ನೆರವು, ತರಬೇತಿ ಕಾರ್ಯಕ್ರಮಗಳು, ಸದಸ್ಯತ್ವ ಶುಲ್ಕ ಅಥವಾ ಬಳಕೆದಾರರ ದೇಣಿಗೆಯನ್ನು ಅವಲಂಬಿಸಿವೆ.
ಮೆಟಾವು 2016ರಿಂದ ಇಲ್ಲಿಯವರೆಗೆ ಫ್ಯಾಕ್ಟ್ ಚೆಕಿಂಗ್‌ಗಾಗಿ 10 ಕೋಟಿ ಡಾಲರ್ (₹865 ಕೋಟಿ) ವ್ಯಯಿಸಿದ್ದು, ಅದರಲ್ಲಿ ಸಿಂಹಪಾಲು ಈ ಜಾಲದ ಸಂಸ್ಥೆಗಳಿಗೆ ಹೋಗಿವೆ. ಈಗ ಮೆಟಾವು ಫ್ಯಾಕ್ಟ್ ಚೆಕಿಂಗ್ ನೀತಿ ಬದಲಾಯಿಸುತ್ತಿರುವುದರಿಂದ ಸ್ವತಂತ್ರವಾಗಿ ಫ್ಯಾಕ್ಟ್ ಚೆಕ್ ಮಾಡುವ ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗುವ ಕಳವಳ ವ್ಯಕ್ತವಾಗಿದೆ.
ಐಎಫ್‌ಸಿಎನ್ ಪ್ರತಿ ವರ್ಷ ಫ್ಯಾಕ್ಟ್ ಚೆಕ್ ಮಾಡುವವರ ಸ್ಥಿತಿಗತಿ ವರದಿಯನ್ನು ಪ್ರಕಟಿಸುತ್ತದೆ. ಅದರ ಭಾಗವಾಗಿ ಸಂಸ್ಥೆಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. 2023ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸಂಸ್ಥೆಗಳು ಎದುರಿಸುತ್ತಿರುವ ದೊಡ್ಡ ಸವಾಲುಗಳು ಯಾವುವು ಎಂಬ ಪ್ರಶ್ನೆ ಕೇಳಲಾಗಿತ್ತು. 136 ಸಂಸ್ಥೆಗಳು ಇದಕ್ಕೆ ಉತ್ತರಿಸಿವೆ. ಈ ಪೈಕಿ ಶೇ 83.70ರಷ್ಟು ಸಂಸ್ಥೆಗಳು ಹಣಕಾಸಿನ ನೆರವು ಪಡೆಯುವುದು ಮತ್ತು ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವುದು ಅತ್ಯಂತ ದೊಡ್ಡ ಸವಾಲು ಎಂದು ಹೇಳಿವೆ. ಕಾನೂನು ತೊಡಕುಗಳು, ನಂಬಲರ್ಹ ಮಾಹಿತಿಗಳ ಲಭ್ಯತೆ, ಫ್ಯಾಕ್ಟ್ ಚೆಕ್ ಮಾಡುವ ತಂತ್ರಜ್ಞಾನ ಟೂಲ್‌ಗಳ ಅಲಭ್ಯತೆ ಇನ್ನಿತರ ಸವಾಲುಗಳು ಎಂದು ಅವು ತಿಳಿಸಿವೆ.
ಸುದ್ದಿ ವಿಶ್ವಾಸಾರ್ಹತೆ: ಅರ್ಧಕ್ಕೂ ಹೆಚ್ಚು ಬಳಕೆದಾರರಲ್ಲಿ ಗೊಂದಲ
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಯಿಟರ್ಸ್ ಇನ್‌ಸ್ಟಿಟ್ಯೂಟ್ ಫಾರ್ ಜರ್ನಲಿಸಂನ ಅಧ್ಯಯನಕಾರರು ಕಳೆದ ವರ್ಷ (2024) ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಸುದ್ದಿಗಳು, ಅವುಗಳ ವಿಶ್ವಾಸಾರ್ಹತೆಯ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ಭಾರತ ಸೇರಿದಂತೆ ಆರು ಖಂಡಗಳ 47 ರಾಷ್ಟ್ರಗಳ 94,943 ಸಾಮಾಜಿಕ ಜಾಲತಾಣ ಬಳಕೆದಾರರನ್ನು ಆನ್‌ಲೈನ್‌ನಲ್ಲಿ ಸಂದರ್ಶಿಸಿ ವರದಿ ಸಿದ್ಧಪಡಿಸಿದೆ (ಭಾರತದಲ್ಲಿ 2,016 ಮಂದಿಯ ಅಭಿಪ್ರಾಯ ಸಂಗ್ರಹಿಸಿದೆ). ಇದರ ಪ್ರಕಾರ, ಆನ್‌ಲೈನ್ ಸುದ್ದಿಗಳಲ್ಲಿ ಯಾವುದು ಸುಳ್ಳು, ಯಾವುದು ನಿಜ ಎಂಬ ಗೊಂದಲ ಜಾಗತಿಕವಾಗಿ ಪ್ರತಿ 10 ಜನರ ಪೈಕಿ ಆರು ಮಂದಿಯಲ್ಲಿದೆ. ಸುದ್ದಿಗಳ ವಿಶ್ವಾಸಾರ್ಹತೆ ಬಗ್ಗೆ ಕಳವಳ ಇದೆ ಎಂದು ಶೇ 59 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2023ಕ್ಕೆ ಹೋಲಿಸಿದರೆ ಈ ನಿಲುವು ಹೊಂದಿರುವವರ ಪ್ರಮಾಣದಲ್ಲಿ ಶೇ 3ರಷ್ಟು ಹೆಚ್ಚಳವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಶೇ 81ರಷ್ಟು ಮಂದಿಗೆ ಗೊಂದಲ ಇದ್ದರೆ, ಅಮೆರಿಕದಲ್ಲಿ ಶೇ 72ರಷ್ಟು ಜನ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಈ ಪ್ರಮಾಣ ಶೇ 58ರಷ್ಟಿದೆ. 2023ಕ್ಕೆ ಹೋಲಿಸಿದರೆ ಮೂರು ರಾಷ್ಟ್ರಗಳ ಪ್ರಮಾಣದಲ್ಲಿ ಕ್ರಮವಾಗಿ ಶೇ 6, ಶೇ 8 ಮತ್ತು ಶೇ 5ರಷ್ಟು ಏರಿಕೆಯಾಗಿದೆ.
ಆಧಾರ: ಪಿಟಿಐ, ಮೆಟಾ ವೆಬ್‌ಸೈಟ್, ಸ್ಟೇಟ್ ಆಫ್ ಫ್ಯಾಕ್ಟ್ ಚೆಕರ್ಸ್ ರಿಪೋರ್ಟ್–2023, ರಾಯಿಟರ್ಸ್ ಇನ್‌ಸ್ಟಿಟ್ಯೂಟ್ ಆಫ್ ಡಿಜಿಟಲ್ ನ್ಯೂಸ್ ರಿಪೋರ್ಟ್–2024, ಸ್ಟ್ಯಾಟಿಸ್ಟಾ.ಕಾಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.