‘ಸ್ವಂತ ಮನೆ ಹೊಂದಬೇಕು’ ಎಂಬ ಕನಸು ಪ್ರತಿ ಕುಟುಂಬಕ್ಕೂ ಇರುತ್ತದೆ. ಸರ್ಕಾರದ ನೆರವು ಇಲ್ಲದಿದ್ದರೆ ಬಡವರು, ನಿವೇಶನರಹಿತರಿಗೆ ಈ ಕನಸು ಸಾಕಾರವಾಗುವುದು ಕಷ್ಟ. ಭಾರತದಲ್ಲಿ ವಸತಿರಹಿತರ ಸಂಖ್ಯೆ ದೊಡ್ಡದಿದೆ. ದೇಶದ ಗ್ರಾಮೀಣ ಭಾಗದ ಬಡವರಿಗೆ ವಸತಿ ಸೌಕರ್ಯ ಕಲ್ಪಿಸಲು ನೆರವಾಗುವುದಕ್ಕಾಗಿ ಕೇಂದ್ರ ಸರ್ಕಾರ ಪಿಎಂಎವೈ–ಜಿ ಅನುಷ್ಠಾನಗೊಳಿಸಿದೆ. ‘ಎಲ್ಲರಿಗೂ ಸೂರು’ ಎಂಬುದು ಇದರ ಆಶಯ. ಹಣದುಬ್ಬರ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಯೋಜನೆ ಅಡಿ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವು ಮನೆ ಕಟ್ಟಲು ಸಾಕಾಗುತ್ತಿಲ್ಲ. ಇದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ಪ್ರತಿಪಾದಿಸಿದೆ
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ಸಚಿವಾಲಯದ ಅಧೀನದಲ್ಲಿ ಬರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ತನ್ನ ವರದಿಯನ್ನು ಇದೇ 12ರಂದು ಸಂಸತ್ತಿನಲ್ಲಿ ಮಡಿಸಿದೆ. ಇಲಾಖೆ ಅನುಷ್ಠಾನಗೊಳಿಸುತ್ತಿರುವ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ’ (ಪಿಎಂಎವೈ–ಜಿ) ಬಗ್ಗೆಯೂ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.
‘ಎಲ್ಲರಿಗೂ ಸೂರು’ ಎಂಬ ಘೋಷಣೆಯ ಅಡಿಯಲ್ಲಿ ಗ್ರಾಮೀಣ ಭಾರತದ ವಸತಿರಹಿತರಿಗೆ ಮತ್ತು ಬಡವರಿಗೆ ಕನಿಷ್ಠ ಸೌಕರ್ಯಗಳನ್ನು ಹೊಂದಿರುವ ಮನೆಗಳನ್ನು ನಿರ್ಮಿಸುವ ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಗತಿ, ಅದರಲ್ಲಿನ ಕೊರತೆಗಳನ್ನು ಸಮಿತಿಯು ತನ್ನ ವರದಿಯಲ್ಲಿ ವಿವರಿಸಿದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಅದು ಶಿಫಾರಸು ಮಾಡಿದೆ.
‘ಪಿಎಂಎವೈ–ಜಿ’ಯ ಉದ್ದೇಶ ಈಡೇರಬೇಕಾದರೆ, ಸರ್ಕಾರವು ಫಲಾನುಭವಿಗಳಿಗೆ ನೀಡುತ್ತಿರುವ ಆರ್ಥಿಕ ನೆರವನ್ನು ಹೆಚ್ಚಿಸಬೇಕು ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಕಾ ನೇತೃತ್ವದ ಈ ಸಮಿತಿ ಪ್ರಬಲವಾಗಿ ಪ್ರತಿಪಾದಿಸಿದೆ.
‘ಪ್ರತಿ ಮನೆ ನಿರ್ಮಾಣಕ್ಕೆ ಸರ್ಕಾರ ನೀಡುತ್ತಿರುವ ಹಣಕಾಸು ನೆರವು ಈಗ ₹1.20 ಲಕ್ಷ/₹1.30 ಲಕ್ಷ ಇದೆ. ಹಲವು ವರ್ಷಗಳಿಂದ ಇಷ್ಟೇ ಮೊತ್ತವನ್ನು ನೀಡಲಾಗುತ್ತಿದೆ. ಹಣದುಬ್ಬರ ಹೆಚ್ಚಳದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳ ಬೆಲೆ, ಸಾಗಣೆ ವೆಚ್ಚ, ಕೆಲಸಗಾರರ ಕೂಲಿ ಜಾಸ್ತಿಯಾಗಿದೆ. ಸರ್ಕಾರ ಈಗ ನೀಡುತ್ತಿರುವ ನೆರವಿನಿಂದ ಬಡ ಫಲಾನುಭವಿಗೆ ಎಲ್ಲ ಸೌಕರ್ಯಗಳನ್ನು ಹೊಂದಿರುವ ಮನೆಯನ್ನು ನಿರ್ಮಿಸುವುದು ಅತ್ಯಂತ ಕಠಿಣ ಸವಾಲು. ಸರ್ಕಾರವು ಆರ್ಥಿಕವಾಗಿ ಬಡ ಫಲಾನುಭವಿಯ ‘ಕೈ ಹಿಡಿಯದೇ ಇದ್ದರೆ’, ‘ಎಲ್ಲರಿಗೂ ಸೂರು’ ಎಂಬ ಪರಿಕಲ್ಪನೆ ಸಫಲವಾಗದು’ ಎಂದು ಸ್ಥಾಯಿ ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿದೆ.
ಹಣ ಇಲ್ಲ ಎಂಬ ಕಾರಣಕ್ಕೆ ಹಲವು ಮನೆಗಳ ನಿರ್ಮಾಣ ಅರ್ಧದಲ್ಲೇ ನಿಂತಿರುವುದನ್ನು ಉಲ್ಲೇಖಿಸಿರುವ ಸಮಿತಿಯು, ‘ಹಣದುಬ್ಬರ ಸೇರಿದಂತೆ ಈಗಿನ ಪರಿಸ್ಥಿತಿಗೆ ತಕ್ಕಂತೆ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿರುವ ಆರ್ಥಿಕ ನೆರವಿನ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಶಿಫಾರಸು ಮಾಡಿದೆ.
ಯೋಜನೆಯನ್ನು ಘೋಷಿಸುವ ಸಂದರ್ಭದಲ್ಲಿ 2024ರ ಮಾರ್ಚ್ 31ರ ಹೊತ್ತಿಗೆ ದೇಶದಾದ್ಯಂತ 2.95 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 2.59 ಕೋಟಿ ಮನೆಗಳಷ್ಟೇ ಪೂರ್ಣವಾಗಿತ್ತು. ಈ ಗುರಿ ತಲುಪುವ ಗಡುವನ್ನು ಸರ್ಕಾರ ಒಂದು ವರ್ಷ ವಿಸ್ತರಿಸಿದೆ. ಅಕ್ಟೋಬರ್ 29ರವರೆಗಿನ ಅಂಕಿ ಅಂಶಗಳ ಪ್ರಕಾರ, 2.66 ಕೋಟಿ ಮನೆಗಳು ಪೂರ್ಣಗೊಂಡಿವೆ.
‘ಫಲಾನುಭವಿಗಳು ನಿವೇಶನ ಹೊಂದಿಲ್ಲದೇ ಇರುವುದು, ಮನೆ ನಿರ್ಮಿಸಲು ಮನಸ್ಸು ಮಾಡದಿರುವುದು, ಸರ್ಕಾರ ನೀಡಿದ ಹಣವನ್ನು ಫಲಾನುಭವಿ ದುರ್ಬಳಕೆ ಮಾಡಿರುವುದು, ಶಾಶ್ವತ ವಲಸೆ, ಮೃತಪಟ್ಟ ಫಲಾನುಭವಿಗಳಿಗೆ ವಾರಸುದಾರರು ಇಲ್ಲದೇ ಇರುವುದರಿಂದ ಉಳಿದ ಮನೆಗಳ ನಿರ್ಮಾಣ ವಿಳಂಬವಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿರುವುದನ್ನು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
‘ಇನ್ನೂ 29 ಲಕ್ಷ ಮನೆಗಳು ಕಟ್ಟುವುದಕ್ಕೆ ಬಾಕಿ ಇವೆ. ಇದರೊಂದಿಗೆ ಹೆಚ್ಚುವರಿಯಾಗಿ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಹೀಗಿರುವಾಗ ನಿಗದಿತ ಗುರಿಯನ್ನು ತಲುಪಲು ಸರ್ಕಾರದ ವಿವಿಧ ಸಂಸ್ಥೆಗಳು ಮತ್ತು ಪಾಲುದಾರರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ. ಮನೆ ನಿರ್ಮಾಣಕ್ಕಾಗಿ ಕೌಶಲಭರಿತ ಮಾನವ ಸಂಪನ್ಮೂಲ, ಸಾಮಗ್ರಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕಾಗಿದೆ’ ಎಂದು ವರದಿ ಅಭಿಪ್ರಾಯ ಪಟ್ಟಿದೆ.
‘ಸರ್ಕಾರ ಹಾಕಿಕೊಂಡಿರುವ ಗುರಿಯಷ್ಟು ಮನೆಗಳನ್ನು ನಿರ್ಮಿಸಲು ಎಲ್ಲ ದಾರಿಗಳನ್ನು ಹುಡುಕುವಂತೆ ಈ ಯೋಜನೆ ಅನುಷ್ಠಾನದಲ್ಲಿ ತೊಡಗಿಕೊಂಡಿರುವ ಎಲ್ಲ ಸಂಸ್ಥೆಗಳಿಗೆ ಸೂಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯಕ್ಕೆ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟವು ಪಿಎಂಎವೈ–ಜಿ ಅಡಿ ಮತ್ತೆ 2 ಕೋಟಿ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ. 2029ರ ವೇಳೆಗೆ ಒಟ್ಟಾರೆ 4.95 ಕೋಟಿಯಷ್ಟು ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಇದು ಗ್ರಾಮೀಣ ಭಾರತದ ಬಡ, ವಸತಿರಹಿತ ಫಲಾನುಭವಿಗಳಿಗೆ ಮನೆ ಸೌಲಭ್ಯ ಕಲ್ಪಿಸುವ ಯೋಜನೆ. ದೇಶದ ‘ಎಲ್ಲರಿಗೂ ಸೂರು’ ಎಂಬ ಪರಿಕಲ್ಪನೆಯ ಅಡಿಯಲ್ಲಿ 2016ರ ಏಪ್ರಿಲ್ 1ರಿಂದ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ’ ಜಾರಿಗೆ ಬಂದಿದೆ.
2011ರ ಸಾಮಾಜಿಕ ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ 2011) ಮತ್ತು 2018ರ ಅವಾಸ್ + ಸಮೀಕ್ಷೆಯ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಯೋಜನೆಯ ಅಡಿಯಲ್ಲಿ ಬಯಲು ಪ್ರದೇಶದ ರಾಜ್ಯಗಳ ಪ್ರತಿ ಫಲಾನುಭವಿಗೆ ಮನೆ ನಿರ್ಮಾಣಕ್ಕಾಗಿ ₹1.20 ಲಕ್ಷ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಗುಡ್ಡಗಾಡು ರಾಜ್ಯಗಳು, ನಕ್ಸಲ್ ಪೀಡಿತ/ಸಮಗ್ರ ಕ್ರಿಯಾ ಯೋಜನೆ (ಐಎಪಿ) ಜಿಲ್ಲೆಗಳ ಪ್ರತಿ ಫಲಾನುಭವಿಗೆ ₹1.30 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ.
ಅಡುಗೆ ಕೋಣೆ ಸೇರಿದಂತೆ ಬದುಕಲು ಅವಶ್ಯವಾದ ಎಲ್ಲ ಸೌಕರ್ಯಗಳನ್ನು ಒಳಗೊಂಡ, ಕನಿಷ್ಠ 25 ಚದರ ಮೀಟರ್ ವಿಸ್ತೀರ್ಣದ ಮನೆ ನಿರ್ಮಿಸುವುದು ಯೋಜನೆಯ ಆಶಯ.
ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಅನುದಾನ ಹಂಚಿಕೆ ಅನುಪಾತ 60:40ರಷ್ಟಿದೆ. ಅಂದರೆ, ಫಲಾನುಭವಿಗೆ ನೀಡಲಾಗುತ್ತಿರುವ ಆರ್ಥಿಕ ನೆರವಿನಲ್ಲಿ ಕೇಂದ್ರ ಸರ್ಕಾರ ಶೇ 60ರಷ್ಟು ಭರಿಸಿದರೆ, ರಾಜ್ಯ ಸರ್ಕಾರ ಶೇ 40ರಷ್ಟು ಭರಿಸಬೇಕು. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಿಗೆ ಸಂಬಂಧಿಸಿದಂತೆ ಈ ಅನುಪಾತ 90:10 ರಷ್ಟಿದೆ. ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವೇ ಪೂರ್ಣ ಆರ್ಥಿಕ ನೆರವು ನೀಡುತ್ತದೆ.
ಹಣಕಾಸಿನ ನೆರವಿನೊಂದಿಗೆ ಶೌಚಾಲಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ₹12 ಸಾವಿರ ನೀಡುತ್ತದೆ ಅಥವಾ ಸ್ವಚ್ಛ ಭಾರತ ಮಿಷನ್–ಗ್ರಾಮೀಣ, ನರೇಗಾ ಯೋಜನೆಯಡಿಯಲ್ಲೂ ಶೌಚಾಲಯ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ. ಜೊತೆಗೆ, ನರೇಗಾ ಅಡಿಯಲ್ಲಿ ಮನೆ ನಿರ್ಮಾಣಕ್ಕೆ 90/95 ಮಾನವ ದಿನಗಳ ಕೂಲಿಯನ್ನು ನೀಡುವುದಕ್ಕೂ ಅವಕಾಶ ಇದೆ.
ಮನೆ ನಿರ್ಮಿಸಲು ತಾಂತ್ರಿಕ ನೆರವನ್ನೂ ಸರ್ಕಾರ ನೀಡುತ್ತದೆ. ಒಂದು ವೇಳೆ ಫಲಾನುಭವಿ ಬಯಸಿದಲ್ಲಿ ಹಣಕಾಸು ಸಂಸ್ಥೆಗಳಿಂದ ₹70 ಸಾವಿರದವರೆಗೆ ಸಾಲವನ್ನು ಕೊಡಿಸುತ್ತದೆ.
ಯೋಜನೆ ಅಡಿಯಲ್ಲಿ 5,73,311 ನಿವೇಶನರಹಿತ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ 3,60,837 (ಶೇ 59) ಮಂದಿಗೆ ಮನೆ ನಿರ್ಮಾಣಕ್ಕೆ ನಿವೇಶನ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ 2,12,474 ಬಡವರಿಗೆ ನಿವೇಶನ ನೀಡಬೇಕಾಗಿದೆ. ಮನೆಗಳ ನಿರ್ಮಾಣ ವಿಳಂಬವಾಗುತ್ತಿರುವುದಕ್ಕೆ ನಿವೇಶನಗಳು ಇಲ್ಲದಿರುವುದು ಕೂಡ ಒಂದು ಕಾರಣ. ಈ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಿಸಲು ಅನುಕೂಲ ಕಲ್ಪಿಸುವ ದಿಸೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಹೊಸ ನೀತಿಯನ್ನು ರೂಪಿಸಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.
ಆಧಾರ: ಸಂಸದೀಯ ಸ್ಥಾಯಿ ಸಮಿತಿ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.