ಗೀಲನ್ ಬಾ ಸಿಂಡ್ರೋಮ್
ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೀಲನ್ ಬಾ ಸಿಂಡ್ರೋಮ್ ಕಾಣಿಸಿಕೊಂಡಿದೆ. ಹಲವೆಡೆ ಸಾವುಗಳು ಕೂಡ ಸಂಭವಿಸಿವೆ. ಬ್ಯಾಕ್ಟೀರಿಯಾ, ಕಲುಷಿತ ನೀರು ಹೀಗೆ ಹಲವು ಕಾರಣಗಳಿಂದ ತಗಲುವ ಈ ಸೋಂಕು ದೇಶದ ಹಲವೆಡೆ ಪ್ರತಿವರ್ಷ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಕೆಲವೊಮ್ಮೆ ತೀವ್ರ ಸ್ವರೂಪ ಪಡೆಯುತ್ತದೆ. ದೇಹದ ನರಮಂಡಲವನ್ನು ದುರ್ಬಲಗೊಳಿಸಿ, ಪಾರ್ಶ್ವವಾಯು ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುವ ಈ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ತಜ್ಞರು ಹೇಳಿದ್ದಾರೆ
ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್) ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಜಿಬಿಎಸ್‌ನಿಂದ ಇದುವರೆಗೆ ಪುಣೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. 203 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಣೆಯಲ್ಲಿ ಜಿಬಿಎಸ್ ಹರಡಲು ಪ್ರಮುಖ ಕಾರಣ, ಕ್ಯಾಂಫಿಲೊಬ್ಯಾಕ್ಟರ್ ಜೆಜುನಿ ಎನ್ನುವ ಬ್ಯಾಕ್ಟೀರಿಯಾ. ಸೋಂಕಿತರ ಪೈಕಿ ಶೇ 20–ಶೇ 30ರಷ್ಟು ಮಂದಿಯ ಮಾದರಿಗಳಲ್ಲಿ ಈ ಬ್ಯಾಕ್ಟೀರಿಯಾ ಪತ್ತೆಯಾಗಿದೆ.
ಪುಣೆಯ ನಾಂದೇಡ್ ಸೋಂಕಿನ ಕೇಂದ್ರಸ್ಥಳವಾಗಿದೆ. ಇಲ್ಲಿನ ಸೋಂಕಿತರ ಮನೆಗಳಿಗೆ ಪೂರೈಕೆಯಾಗುತ್ತಿರುವ ನೀರನ್ನು ಪರೀಕ್ಷೆ ಮಾಡಿದಾಗ, ಸೋಂಕಿತರ ಪೈಕಿ 26 ಮಂದಿಯ ಮನೆಗಳ ನೀರಿನಲ್ಲಿ ಕ್ಲೋರಿನ್ ಇರಲಿಲ್ಲ ಎನ್ನುವ ಅಂಶ ಪತ್ತೆಯಾಗಿದೆ. ಮನೆಗಳಿಗೆ ಪೂರೈಸುವ ನೀರಿನಲ್ಲಿ 0.2 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಕ್ಲೋರಿನ್ ಇರುವಂತೆ ನೋಡಿಕೊಳ್ಳಬೇಕು ಎಂದು ಪುಣೆಯ ಮಹಾನಗರ ಪಾಲಿಕೆಗೆ ಸೂಚಿಸಿದೆ.
ಕೇಂದ್ರದಿಂದ ತಜ್ಞರ ತಂಡ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಮಹಾರಾಷ್ಟ್ರ ಆರೋಗ್ಯ ಇಲಾಖೆ ಜಂಟಿಯಾಗಿ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿವೆ. ಜಿಬಿಎಸ್‌ಗೆ ಕಲುಷಿತ ನೀರು ಕೂಡ ಕಾರಣವಾಗಿದ್ದು, ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವ ಕಾರ್ಖಾನೆ ಮತ್ತು ಉದ್ಯಮಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಸರ್ಕಾರ ಹೇಳಿದೆ.
ನಿಮ್ಹಾನ್ಸ್ ಅಧ್ಯಯನ: ಭಾರತಕ್ಕೆ ಜಿಬಿಎಸ್ ಹೊಸದೇನಲ್ಲ. ಬೆಂಗಳೂರಿನ ನಿಮ್ಹಾನ್ಸ್‌ನ ಮನೋಜಿತ್ ದೇಬನಾಥ್ ಮತ್ತು ಮಧು ನಾಗಪ್ಪ 2014–2019ರ ನಡುವೆ 150 ಜಿಬಿಎಸ್ ರೋಗಿಗಳನ್ನು ಅಧ್ಯಯನ ಮಾಡಿದ್ದರು. ಈ ಪೈಕಿ ಶೇ 79 ಮಂದಿಗೆ ಈ ಕಾಯಿಲೆ ಹಿಂದೆಯೇ ಬಂದುಹೋಗಿದೆ ಎನ್ನುವುದು ತಿಳಿದುಬಂದಿತ್ತು. ರೋಗಿಗಳ ಪೈಕಿ ಶೇ 65 ಮಂದಿಯಲ್ಲಿ ಇತರೆ ಸೋಂಕುಗಳು ಕೂಡ ಕಂಡುಬಂದಿದ್ದವು.
ಆಂಧ್ರ ಪ್ರದೇಶದಲ್ಲಿ ಸದ್ಯ 17 ಮಂದಿ ಸೋಂಕಿತರಿದ್ದು, ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2024ರ ನ.1ರಿಂದ 2025ರ ಫೆ.14ರವರೆಗೆ ಒಟ್ಟು 53 ಜಿಬಿಎಸ್ ಪ್ರಕರಣಗಳು ವರದಿಯಾಗಿದ್ದು, ಶ್ರೀಕಾಕುಳಂನಲ್ಲಿ 10 ವರ್ಷದ ಬಾಲಕನೊಬ್ಬ ಮೃತಪಟ್ಟಿರುವುದಾಗಿ ಆಂಧ್ರ ಪ್ರದೇಶದ ಮುಖ್ಯ ಕಾರ್ಯದರ್ಶಿ ಎಂ.ಟಿ.ಕೃಷ್ಣಬಾಬು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಮತ್ತು ಹೂಗ್ಲಿಯಲ್ಲಿ ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಜಿಬಿಎಸ್ ಕಾರಣ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ. ಆದರೆ, ಆರೋಗ್ಯ ಇಲಾಖೆ ಅದನ್ನು ದೃಢಪಡಿಸಿಲ್ಲ. ರಾಜ್ಯದ ಹಲವು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಫೆಬ್ರುವರಿ 1ರಂದು ಗುವಾಹಟಿಯಲ್ಲಿ 17 ವರ್ಷದ ಯುವತಿ ಮೃತಪಟ್ಟಿದ್ದಾರೆ. ಅದಕ್ಕೆ ಜಿಬಿಎಸ್ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಆರೋಗ್ಯ ಇಲಾಖೆ ಅದನ್ನು ದೃಢಪಡಿಸಿರಲಿಲ್ಲ. ಜಾರ್ಖಂಡ್‌ನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
ಪ್ರತಿ ವರ್ಷ ಪ್ರಕರಣಗಳ ವರದಿ: ಪ್ರತಿ ವರ್ಷ ಹಲವು ರಾಜ್ಯಗಳಲ್ಲಿ ಬಿಜಿಎಸ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಸಾಮಾನ್ಯವಾಗಿ ಅದು ಗಂಭೀರ ಸ್ವರೂಪ ಪಡೆಯುವುದಿಲ್ಲ. ಕೆಲವರು ಮಾತ್ರ ಪಾರ್ಶ್ವವಾಯು ಪೀಡಿತರಾಗುವುದುಂಟು. ಸೂಕ್ತ ಚಿಕಿತ್ಸೆಯ ನಂತರ ಅವರು ಗುಣಮುಖರಾಗುತ್ತಾರೆ. ಸಂಪೂರ್ಣವಾಗಿ ಮೊದಲಿನಂತೆ ಆಗದಿದ್ದರೂ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳಲು ಶಕ್ತರಾಗುತ್ತಾರೆ. ಹೀಗಾಗಿ ಸೋಂಕಿನ ಬಗ್ಗೆ ಭಯಪಡುವ ಅಗತ್ಯವೇನಿಲ್ಲ ಎಂದು ತಜ್ಞರು ಹೇಳಿದ್ದಾರೆ.
ದೇಹದ ಪ್ರತಿರೋಧ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಇದು. ಪಾದಗಳು ಮತ್ತು ಕೈಗಳು ಜೋಮು ಹಿಡಿಯುವುದರೊಂದಿಗೆ ಜಿಬಿಎಸ್ ಆರಂಭವಾಗುತ್ತದೆ. ನಂತರದಲ್ಲಿ ಸ್ನಾಯು ದೌರ್ಬಲ್ಯ ಉಂಟಾಗಿ, ಕೀಲುಗಳಲ್ಲಿ ಭಾರಿ ನೋವು ಕಾಣಿಸಿಕೊಳ್ಳುತ್ತದೆ. ಎರಡರಿಂದ ನಾಲ್ಕು ವಾರಗಳಲ್ಲಿ ಭುಜ ಮತ್ತು ಕಾಲುಗಳಿಗೆ ನೋವು ಹರಡುವುದರೊಂದಿಗೆ ಲಕ್ಷಣಗಳು ತೀವ್ರಗೊಳ್ಳುತ್ತವೆ. ರೋಗದ ತೀವ್ರತೆ, ಚಿಕಿತ್ಸೆಯ ಲಭ್ಯತೆ ಮತ್ತು ಗುಣಮಟ್ಟವನ್ನು ಆಧರಿಸಿ ಮರಣದ ಪ್ರಮಾಣವು ಶೇ 3ರಿಂದ ಶೇ 7ರವರೆಗೆ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಮಳೆಗಾಲದಲ್ಲಿ, ಕೋಳಿಗಳು ಮತ್ತು ಬಾತುಕೋಳಿಗಳ ಹಿಕ್ಕೆಗಳಿಂದ ಮಲಿನಗೊಂಡಿದ್ದ ನೀರಿನಲ್ಲಿ ಆಡಿದ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡ ನಿದರ್ಶನಗಳಿವೆ. ಕಲುಷಿತ ನೀರಿನಲ್ಲಿ ತಯಾರಿಸಿದ ಆಹಾರ, ತಿಂಡಿ ತಿನ್ನವುದು, ಕೋಳಿ ಮಾಂಸವನ್ನು ಅರೆಬರೆ ಬೇಯಿಸಿ ತಿನ್ನುವುದು ಕೂಡ ಸೋಂಕಿಗೆ ಕಾರಣವಾಗಬಹುದು ಎಂದಿದ್ದಾರೆ ವೈದ್ಯರು.
ಇದು ತೀರಾ ಅಪಾಯಕಾರಿ ಕಾಯಿಲೆ ಅಲ್ಲ. ಆದರೆ, ಈ ರೋಗಕ್ಕೆ ನಿರ್ದಿಷ್ಟ ಔಷಧ ಇಲ್ಲದಿರುವುದರಿಂದ ಜನ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು ಎನ್ನುವುದು ತಜ್ಞರ ಎಚ್ಚರಿಕೆ.
ಜಿಬಿಎಸ್ ಕಾಯಿಲೆ ಹಿಂದಿನಿಂದಲೂ ಇದ್ದರೂ ಅದನ್ನು ಮೊದಲು ಗುರುತಿಸಿದ್ದು 1916ರಲ್ಲಿ. ಫ್ರಾನ್ಸ್‌ನ ನರರೋಗ ತಜ್ಞರಾದ ಜಾರ್ಜಸ್ ಗೀಲನ್, ಜೀನ್ ಅಲೆಕ್ಸಾಂಡರ್ ಬಾ ಮತ್ತು ಆಂಡ್ರೆ ಸ್ಟ್ರೋಲ್ ಅವರು ಇಬ್ಬರು ಯೋಧರಲ್ಲಿ ಈ ಕಾಯಿಲೆಯನ್ನು ಗುರುತಿಸಿದರು. ಅದೇ ಕಾರಣಕ್ಕೆ ಈ ಕಾಯಿಲೆಗೆ ಗೀಲನ್ ಬಾ ಸಿಂಡ್ರೋಮ್ ಎಂದು ಹೆಸರಿಡಲಾಗಿದೆ
ಜಾಗತಿಕ ಮಟ್ಟದಲ್ಲಿ ಇಲ್ಲಿಯವರೆಗೆ ವರದಿಯಾಗಿರುವ ಪ್ರಕರಣಗಳ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. 2019ರಲ್ಲಿ ಒಂದೇ ವರ್ಷ 1.50 ಲಕ್ಷ ಪ್ರಕರಣಗಳು ದೃಢಪಟ್ಟಿರುವ ಮಾಹಿತಿ ಇದೆ
ಜಾಗತಿಕ ಮಟ್ಟದಲ್ಲಿ ವಾರ್ಷಿಕವಾಗಿ ಪ್ರತಿ ಲಕ್ಷ ಜನರಲ್ಲಿ ಒಬ್ಬರು ಅಥವಾ ಇಬ್ಬರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. 2013-14ರಲ್ಲಿ ಫ್ರೆಂಚ್ ಪಾಲಿನೇಸಿಯಾ ದ್ವೀಪ ಸಮೂಹ, ಲ್ಯಾಟಿನ್ ಅಮೆರಿಕ, ಕೆರೀಬಿಯನ್ ರಾಷ್ಟ್ರಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು
2019, 2023ರಲ್ಲಿ ಪೆರುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಬಿಎಸ್ ಪ್ರಕರಣಗಳು ದೃಢಪಟ್ಟಿದ್ದವು. 2023ರ ಮೇ 20 ಮತ್ತು ಜುಲೈ 27ರ ನಡುವೆ 683 ಮಂದಿಗೆ ಈ ಕಾಯಿಲೆ ಬಂದಿತ್ತು
ಒಬ್ಬ ವ್ಯಕ್ತಿಯು ತನ್ನ ಜೀವಮಾನದಲ್ಲಿ ಈ ಕಾಯಿಲೆಗೆ ಒಳಗಾಗುವ ಸಾಧ್ಯತೆ ಶೇ 1ರಷ್ಟು ಮಾತ್ರ. ಈ ಕಾಯಿಲೆಗೆ ಒಳಗಾದವರಲ್ಲಿ ಶೇ 20ರಷ್ಟು ರೋಗಿಗಳು ಉಸಿರಾಟಕ್ಕೆ ಸಂಬಂಧಿಸಿದ ಸ್ನಾಯುಗಳಲ್ಲಿ ದೌರ್ಬಲ್ಯವನ್ನು ಅನುಭವಿಸುತ್ತಾರೆ. ಅಂತಹವರಿಗೆ ಕೃತಕ ಉಸಿರಾಟದ ವ್ಯವಸ್ಥೆಯ ಅಗತ್ಯವಿದೆ. ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದರೂ ಶೇ 3ರಿಂದ 7ರಷ್ಟು ರೋಗಿಗಳು ಈ ಕಾಯಿಲೆಯಿಂದಾಗಿ ಮೃತಪಡುತ್ತಾರೆ
ಕ್ಯಾಂಪಿಲೊಬ್ಯಾಕ್ಟರ್ ಜೆಜುನಿ ಎಂಬ ರೋಗಕಾರಕ ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬ್ಯಾಕ್ಟೀರಿಯಾ ಕೋಳಿಗಳಲ್ಲಿ ಕಂಡುಬರುತ್ತದೆ. ಝೀಕಾ, ಡೆಂಗಿ ಸೇರಿದಂತೆ ಇತರೆ ಸೋಂಕುಕಾರಕ ವೈರಸ್‌ಗಳೊಂದಿಗೆ ಈ ಬ್ಯಾಕ್ಟೀರಿಯಾವೂ ಸೇರಿಕೊಂಡಿರುತ್ತದೆ.
ವ್ಯಕ್ತಿಗೆ ಸೋಂಕು ತಗುಲಿದ ನಂತರದ ಎರಡರಿಂದ ಆರು ವಾರಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಹಾರ ಮತ್ತು ನೀರಿನಿಂದ ಬರುವ ಕಾಯಿಲೆಯಾಗಿದ್ದು, ಭೇದಿ ಇದರ ಪ್ರಮುಖ ಲಕ್ಷಣವಾಗಿದೆ. ಸ್ನಾಯು ದೌರ್ಬಲ್ಯ, ಕಾಲು ಮತ್ತು ಕೈಗಳು ಸ್ಪರ್ಶಜ್ಞಾನ ಕಳೆದುಕೊಳ್ಳುವುದು, ನುಂಗುವುದಕ್ಕೆ ಕಷ್ಟವಾಗುವುದು, ಉಸಿರಾಡಲು ತೊಂದರೆಯಾಗುವುದು ಇದರ ಮುಖ್ಯ ಲಕ್ಷಣಗಳು. ಕೈಕಾಲು ಮರಗಟ್ಟುವುದು, ಒಮ್ಮೊಮ್ಮೆ ಕೈಕಾಲು ಪಾದಗಳಲ್ಲಿ ಚುಚ್ಚಿದಂತಾಗುವುದು, ನಿಶ್ಯಕ್ತಿ ಕಾಣಿಸಿಕೊಳ್ಳುವುದು, ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಏರುಪೇರಾಗುವುದು ಕೂಡ ಇದರ ಲಕ್ಷಣಗಳಾಗಿವೆ.
ಎಲ್ಲ ವಯಸ್ಸಿನವರಿಗೂ ಈ ಕಾಯಿಲೆ ಕಾಡಬಹುದು. ಆದರೆ, ವಯಸ್ಸು ಹೆಚ್ಚಾದಂತೆ ರೋಗಕ್ಕೆ ಒಳಗಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಮಹಿಳೆಯರಿಗೆ ಹೋಲಿಸಿದರೆ, ಪುರುಷರಲ್ಲಿ ಜಿಬಿಎಸ್ ಹೆಚ್ಚು ಕಂಡುಬರುತ್ತದೆ. ನೈರ್ಮಲ್ಯದ ಕೊರತೆ, ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುವ ಸಾಧ್ಯತೆ ಇರುವ ಬಡ, ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುವ ಸಂಭವ ಹೆಚ್ಚು.
ಮಹಾರಾಷ್ಟ್ರದ ಪಂಢರಾಪುರ ಜಾತ್ರೆಗೆ ಹೋಗಿ ಅಲ್ಲಿಂದ ಮರಳಿದ ಬಳಿಕ ಕೆಲವು ಗ್ರಾಮಸ್ಥರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದ್ದರಿಂದ ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ಕುಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜೀವಾಡ ಮತ್ತು ಮಜ್ಜಿಗೆಹಳ್ಳದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
‘ಈ ಗ್ರಾಮಗಳ ಸುಮಾರು 28 ಜನರಿಗೆ ಫೆ.12ರಂದು ವಾಂತಿ–ಭೇದಿ ಕಾಣಿಸಿಕೊಂಡಿತ್ತು. ಅವರೆಲ್ಲ
ಫೆ.4 ರಂದು ಪಂಢರಾಪುರಕ್ಕೆ ಹೋಗಿದ್ದರು. ಅಸ್ವಸ್ಥಗೊಂಡಿದ್ದವರ ಪೈಕಿ 25 ಜನರು ಯಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದಾರೆ. ಆದರೆ, ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪೈಕಿ 65 ವರ್ಷದ ವ್ಯಕ್ತಿಯೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
‘ಪಂಢರಾಪುರಕ್ಕೆ ಹೋಗಿದ್ದವರಲ್ಲಿ ಮಾತ್ರ ವಾಂತಿ–ಭೇದಿ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಈಗಲೂ ಆರೋಗ್ಯ ಸಿಬ್ಬಂದಿ ನಿಯೋಜಿಸಿದ್ದೇವೆ’ ಎಂದು ಯಲ್ಲಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ. ವಾಂತಿ ಮತ್ತು ಭೇದಿ ಕಾಣಿಸಿಕೊಂಡವರಿಗೆ ಜಿಬಿಎಸ್ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ರೋಗಿಗಳ ಬಗ್ಗೆ ನಿಗಾವಹಿಸಲಾಗಿದೆ.
ಆಧಾರ: ಪಿಟಿಐ, ಬಿಬಿಸಿ, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.