ವರ್ಷಪೂರ್ತಿ ಇಟ್ಟು ಸಾಗಿದ ಸದೃಢ ಹೆಜ್ಜೆಯನ್ನು ಮೆಲುಕುಹಾಕುತ್ತಲೇ ಮತ್ತೆ ಹೊಸ ಹುಡುಕಾಟದ ತವಕ ಹೊತ್ತು ಮುನ್ನಡೆಯತ್ತ ಚಿಮ್ಮುವುದು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತವರ ಸಂಕಲ್ಪವಾಗಬೇಕು. ಮಾಧ್ಯಮ ಯಾವತ್ತೂ ಜನರಿಗೆ ಉತ್ತರದಾಯಿಯಾಗಬೇಕು, ನಾಡವರು ಅನುಭವಿಸುವ ಸಂಕಟಗಳಿಗೆ ಧ್ವನಿಯಾಗಬೇಕು ಎನ್ನುವ ಪತ್ರಿಕಾಧರ್ಮವನ್ನು ಪಾಲಿಸುತ್ತಾ, ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ‘ಪ್ರಜಾವಾಣಿ’ಗೆ ಹಲವು ಪರಿವರ್ತನೆಗಳಿಗೆ ಕಾರಣವಾದ ಖುಷಿ. ನಿಮ್ಮ ಪ್ರೀತಿಯ ಪತ್ರಿಕೆ ಸಮಾಜದಲ್ಲಿ ಅಂತಹ ಸಕಾರಾತ್ಮಕ ಬದಲಾವಣೆಗೆ ಕಾರಣವಾದ ಕೆಲವು ಹೆಜ್ಜೆ ಗುರುತುಗಳು ಇಲ್ಲಿವೆ. ಜನರ ದನಿಗೆ ಕಿವಿಯಾಗಿ, ಬಾಯಾಗುವ ತನ್ನ ಕರ್ತವ್ಯಪರತೆಯನ್ನು ಪತ್ರಿಕೆ ಎಂದಿನಂತೆ ಮುಂದುವರಿಸಲಿದೆ.
ಕೆಪಿಎಸ್‌ಸಿಯು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಸಿದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಭಾರಿ ಎಡವಟ್ಟುಗಳನ್ನು ಮಾಡಿತ್ತು. ಈ ಬಗ್ಗೆ ಪತ್ರಿಕೆ ಆಗಸ್ಟ್ 28ರಂದು ‘ಕೆಪಿಎಸ್‌ಸಿ ಪರೀಕ್ಷೆ ಎಡವಟ್ಟು: ‘ಗುಟೇಶನ್ ಟ್ರಾನ್ಸ್‌ಫಿರೇಷನ್ ಪುಲ್ಗೆ ಕಾರಣ’ ಎನ್ನುವ ವರದಿ ಪ್ರಕಟಿಸಿತ್ತು. ಅದರ ನಂತರವೂ ಈ ಸಂಬಂಧ ಸರಣಿ ವರದಿಗಳನ್ನು ಪ್ರಕಟಿಸಿತು. ಸರ್ಕಾರ ತಪ್ಪಿತಸ್ಥರ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಮೌನ ವಹಿಸಿದ್ದರ ಬಗ್ಗೆಯೂ ವರದಿ ಮಾಡಲಾಯಿತು. ಕೊನೆಗೆ ಎಚ್ಚೆತ್ತ ಸರ್ಕಾರ, ಮರುಪರೀಕ್ಷೆಯ ನಿರ್ಧಾರ ಪ್ರಕಟಿಸಿತ್ತು. ಜತೆಗೆ, ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ರಾಕೇಶ್‌ಕುಮಾರ್ ಅವರನ್ನು ವರ್ಗಾವಣೆ ಮಾಡಿತ್ತು.
ಚಿಕ್ಕಬಳ್ಳಾಪುರದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರು ರಾಜ್ಯ, ರಾಷ್ಟ್ರದಲ್ಲಿ ಗೌರವಕ್ಕೆ ಪಾತ್ರರಾಗಿರುವಂಥವರು. ಅವರಿಗೆ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಮಂಜೂರು ಮಾಡಲಾಗಿತ್ತಾದರೂ, ಕೊಳವೆ ಬಾವಿ ಕೊರೆಸಿರಲಿಲ್ಲ. ಈ ಬಗ್ಗೆ ‘ಗಂಗಾಕಲ್ಯಾಣಕ್ಕೆ ತಬರನಾದ ಕಲಾವಿದ’ ಎಂದು ಪತ್ರಿಕೆಯಲ್ಲಿ ಮೇ 19ರಂದು ವರದಿ ಪ್ರಕಟವಾಗಿತ್ತು. ವರ್ಷಗಳಿಂದ ಕೊಳವೆ ಬಾವಿಗೆ ಅಲೆಯುತ್ತಿದ್ದ ಮುನಿವೆಂಕಟಪ್ಪ ಅವರಿಗೆ ವರದಿಯಿಂದ ಒಂದೇ ದಿನದಲ್ಲಿ ಸೌಲಭ್ಯ ದೊರೆಯಿತು.
ರಾಜ್ಯದ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ತಮಗೆ ನಿಗದಿಯಾದ ಕಾಲೇಜುಗಳಿಗೆ ಪ್ರವೇಶ ಪಡೆಯದ 2348 ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಟಿಸ್ ಜಾರಿ ಮಾಡಿತ್ತು. ಈ ಬಗ್ಗೆ ಮೊದಲು ವರದಿ ಪ್ರಕಟಿಸಿದ್ದು ಪ್ರಜಾವಾಣಿ (ಅಕ್ಟೋಬರ್ 24ರಂದು ‘ಸೀಟ್ ಬ್ಲಾಕಿಂಗ್ ದಂಧೆ: ಶಂಕೆ’). ವರದಿಯ ಫಲಶ್ರುತಿಯಾಗಿ ಸರ್ಕಾರವು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ ನಂತರ ಅಂಗನವಾಡಿಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದ್ದವು. ಈ ಬಗ್ಗೆ ಪತ್ರಿಕೆಯಲ್ಲಿ ಜೂನ್ 16ರಂದು ‘ಪೂರ್ವ ಪ್ರಾಥಮಿಕಕ್ಕೆ ಒತ್ತು; ಅಂಗನವಾಡಿಗೆ ಕುತ್ತು?’ ಎನ್ನುವ ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಸರ್ಕಾರವು, ಅಂಗನವಾಡಿಗಳಲ್ಲೂ ಎಲ್‌ಕೆಜಿ ಆರಂಭಕ್ಕೆ ಆದೇಶ ನೀಡಿತು.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಆಹಾರ ಧಾನ್ಯ ಖರೀದಿ ಗಡುವು ಮುಗಿಯುತ್ತಾ ಬಂದಿದ್ದರೂ ಖರೀದಿ ಪ್ರಕ್ರಿಯೆ ಆರಂಭಿಸಿರಲೇ ಇಲ್ಲ. ಈ ಸಂಬಂಧ ಪತ್ರಿಕೆಯು ‘ಖರೀದಿ ವಿಳಂಬ: ರೈತರು ಕಂಗಾಲು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ತಕ್ಷಣ ಎಚ್ಚೆತ್ತಿದ್ದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು 16 ಜಿಲ್ಲೆಗಳಲ್ಲಿ ರಾಗಿ, ಜೋಳ ಮತ್ತು ಭತ್ತ ಖರೀದಿಗೆ ದಿಢೀರ್ ಚಾಲನೆ ನೀಡಿದ್ದರು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಗೇರುಮರಡಿ ಗೊಲ್ಲರಹಟ್ಟಿಗೆ ಮಾದಿಗ ಸಮುದಾಯದ ಯುವಕ ಮಾರುತಿ ಪ್ರವೇಶ ಮಾಡಿದ ಕಾರಣಕ್ಕೆ ಹಟ್ಟಿಯಲ್ಲಿರುವ ಎರಡು ದೇಗುಲಗಳಿಗೆ ಬೀಗ ಜಡಿಯಲಾಗಿತ್ತು. ‘ಪ್ರಜಾವಾಣಿ’ಯ ಜನವರಿ 5ನೇ ತಾರೀಖಿನ ಸಂಚಿಕೆಯಲ್ಲಿ ಈ ಬಗ್ಗೆ ವಿಶೇಷ ವರದಿ ಪ್ರಕಟವಾದ ನಂತರ, ಜಿಲ್ಲಾಡಳಿತ ಅಲ್ಲಿಗೆ ತೆರಳಿ ದೇವಸ್ಥಾನದ ಬೀಗ ತೆಗೆಯಿಸಿ ದಲಿತರಿಗೆ ಪ್ರವೇಶ ಕೊಡಿಸಿತು.
ಸೆಪ್ಟೆಂಬರ್ 30ರ ಸಂಚಿಕೆಯಲ್ಲಿ ‘ಬಿಪಿಎಲ್ ಕಾರ್ಡ್ ಕಸಿದ ಐಟಿ ಪಟ್ಟಿ’ ಎಂಬ ತಲೆಬರಹದಲ್ಲಿ ಪ್ರಕಟವಾದ ವಿಶೇಷ ವರದಿ ರಾಜ್ಯದ ಗಮನ ಸೆಳೆಯಿತು. ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದವು. ಸರ್ಕಾರ ಕೊನೆಗೆ ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆಯನ್ನು ಕೈಬಿಟ್ಟು ರದ್ದಾಗಿದ್ದ ಅರ್ಹರ ಕಾರ್ಡುಗಳನ್ನು ವಾಪಸ್ ಕೊಟ್ಟಿತು. ಸರ್ಕಾರಿ ನೌಕರರು ಪಡೆದಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ರದ್ದುಪಡಿಸಲಾಗಿತ್ತು.
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪಡೆದ ಸಾಲ ಮರುಪಾವತಿಸಿಲ್ಲ ಎಂದು ದೇವನಹಳ್ಳಿಯ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ವಿಜಯಪುರದ ಚೌಡೇಶ್ವರಿ ಸರ್ಕಲ್ ಸಮೀಪ ವಾಸಿಸುತ್ತಿರುವ 65 ವರ್ಷದ ಜಯಲಕ್ಷ್ಮಮ್ಮ ಹಾಗೂ ಎಂಟನೇ ತರಗತಿ ಓದುತ್ತಿರುವ ಅವರ ಮೊಮ್ಮಗಳನ್ನು ಮನೆಯಿಂದ ಹೊರ ಹಾಕಿ ಬೀಗ ಜಡಿದಿದ್ದರು. ಕುರಿ, ಮೇಕೆಗಳು ಮನೆಯ ಒಳಗಡೆಯೇ ಇದ್ದವು. ಅವುಗಳಿಗೆ ಚಾವಣಿಯಿಂದ ಮೇವು ಹಾಕುತ್ತಿದ್ದ ಬಗ್ಗೆ ಆಗಸ್ಟ್ 14ರಂದು ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಮುಖ್ಯಮಂತ್ರಿ ಕಚೇರಿ ಸ್ಪಂದಿಸಿತು. ಬಳಿಕ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ತೆರಳಿ ಮನೆಯ ಬೀಗ ತೆಗೆಸಿದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಟೆಂಡರ್ ಅಂತಿಮಗೊಳಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಜುಲೈ 8ರಂದು ‘ಎಸ್‌ಎಚ್‌ಡಿಪಿ ಟೆಂಡರ್‌ಗೆ ಗ್ರಹಣ’ ತಲೆಬರಹದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಬಳಿಕ ಸಚಿವರ ಮಧ್ಯ ಪ್ರವೇಶದಿಂದ ಟೆಂಡರ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಯಿತು.
ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳು, ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ
ವರದಿಗಳನ್ನು ಸಲ್ಲಿಸದೇ ಇರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರು ತಿಂಗಳು ಕಳೆದರೂ 15ನೇ ಹಣಕಾಸು ಆಯೋಗದ ಅನುದಾನವೇ ರಾಜ್ಯಕ್ಕೆ ಬಿಡುಗಡೆಯಾಗದೆ, ಸ್ವಂತ ವರಮಾನವಿಲ್ಲದ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಅಕ್ಟೋಬರ್ 3ರಂದು ವಿಶೇಷ ವರದಿ ಪ್ರಕಟವಾಗಿತ್ತು. ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೇಂದ್ರ ಸರ್ಕಾರಕ್ಕೆ ತರಾತುರಿಯಲ್ಲಿ ದಾಖಲೆ ಸಲ್ಲಿಸಿ ಮೊದಲ ಕಂತಿನ ಅನುದಾನ ಪಡೆಯಿತು.
15ನೇ ಹಣಕಾಸು ಆಯೋಗದ ಅನುದಾನದ ಮೊದಲ ಕಂತು ಬಿಡುಗಡೆಯಾಗಿದ್ದರೂ, ಹಣ ತಂತ್ರಾಂಶದಲ್ಲೇ ಲಾಕ್ ಮಾಡಿದ್ದರಿಂದ ₹448.29 ಕೋಟಿ ವಿನಿಯೋಗ ಆಗದಿರುವ ಕುರಿತು ಡಿ.26ರಂದು ಪ್ರಕಟವಾಗಿದ್ದ ವಿಶೇಷ ವರದಿಯು ಪರಿಣಾಮ ಬೀರಿತು. ಅದೇ ದಿನ ಲಾಕ್ ತೆರೆದು ಅನುದಾನ ಬಳಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುಮತಿ ನೀಡಿತು.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿರುವ ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲರ ಸ್ವಗ್ರಾಮ ಹೂಡದಳ್ಳಿಗೆ ಬಸ್ಸಿನ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಪ್ರತಿ ನಿತ್ಯ ಏಳು ಕಿ.ಮೀ ಕಾಲ್ನಡಿಗೆಯಲ್ಲೇ ತೆರಳಬೇಕಾದ ಬಗ್ಗೆ ಮತ್ತು ನಾಗಾಈದಲಾಯಿ ತಾಂಡದ ಮಕ್ಕಳು ಕೂಡ 4.5 ಕಿ.ಮೀ ನಡೆಯಬೇಕಾದ ಅನಿವಾರ್ಯತೆ ಬಗ್ಗೆ ಜುಲೈ 14ರಂದು ‘ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ ನಡಿಗೆ ಶಿಕ್ಷೆ’ ಎಂಬ ತಲೆಬರಹದ ಅಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿಯವರು ಬಸ್ ಸೌಲಭ್ಯ ಕಲ್ಪಿಸುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದ್ದರು. ನಂತರ ಬಸ್ ಬಂದು ಮಕ್ಕಳ ಸಂಕಷ್ಟ ದೂರವಾಯಿತು.
ರೈತರಿಗೆ ಸಾಲ ನೀಡುವ ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ನಬಾರ್ಡ್ ಕಡಿತಗೊಳಿಸಿದ್ದರಿಂದಾಗಿ ರಾಜ್ಯದಲ್ಲಿ ಕೃಷಿ ಸಾಲ ವಿತರಣೆಗೆ ಹಣದ ಕೊರತೆ ಉಂಟಾಗಿರುವ ಬಗ್ಗೆ ನವೆಂಬರ್ 12ರಂದು ವರದಿ ಪ್ರಕಟವಾಗಿತ್ತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಕೇಂದ್ರದ ಗಮನ ಸೆಳೆಯಿತು.
ಬೆಳಗಾವಿಯ ಕಾರ್ಖಾನೆಯಲ್ಲಿ ಆಗಸ್ಟ್ 7ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಕಾರ್ಮಿಕರೊಬ್ಬರು ಸಜೀವ ದಹನವಾದರು. ಸುಟ್ಟ ಬೂದಿಯನ್ನು ಜಿಲ್ಲಾಡಳಿತವು ಕೈಚೀಲದಲ್ಲಿ ಹಾಕಿ ಅವರ ತಂದೆಯ ಕೈಗೆ ಕೊಟ್ಟಿತು. ಇದರ ಚಿತ್ರವನ್ನು ‘ಪ್ರಜಾವಾಣಿ’ ಮಾತ್ರ ಮುಖಪುಟದಲ್ಲಿ ಪ್ರಕಟಿಸಿತು. ಈ ಚಿತ್ರ ಹಾಗೂ ವರದಿಗೆ ರಾಜ್ಯದಾದ್ಯಂತ ಮಾನವೀಯ ಸ್ಪಂದನೆ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.