ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರು ಯಾವ ಮಟ್ಟಕ್ಕೆ ಇಳಿಯಬಲ್ಲರು ಎನ್ನುವುದು ನಟಿ ರಮ್ಯಾ ಅವರ ಪ್ರಕರಣದಲ್ಲಿ ಸಾಬೀತಾಗಿದೆ. ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರಿಗೆ ಜಾಮೀನು ನೀಡಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಅದನ್ನು ಉಲ್ಲೇಖಿಸಿದ್ದ ರಮ್ಯಾ ಅವರು, ‘ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ’ ಎಂದು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದರು. ಅಷ್ಟಕ್ಕೇ ದರ್ಶನ್ ಅಭಿಮಾನಿಗಳು ಎನ್ನಿಸಿಕೊಂಡ ಕೆಲವರು ರಮ್ಯಾ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಮುಗಿಬಿದ್ದರು. ಅತ್ಯಂತ ಅಶ್ಲೀಲ, ಅಸಭ್ಯ, ನಿಂದನಾತ್ಮಕ ಭಾಷೆಯಲ್ಲಿ ಅವರನ್ನು ಟೀಕೆ, ಗೇಲಿ ಮಾಡಿದರು. ಅತ್ಯಾಚಾರ, ಕೊಲೆಯ ಬೆದರಿಕೆಗಳನ್ನೂ ಹಾಕಿದರು.
‘ಸೆಲೆಬ್ರಿಟಿಯಾಗಿ ನನಗೆ ಟ್ರೋಲಿಂಗ್ ಹೊಸದೇನಲ್ಲ. ಆದರೆ, ಈ ಪ್ರಮಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದು ಇದೇ ಮೊದಲು. ರೇಣುಕಸ್ವಾಮಿ ಅವರು ಪವಿತ್ರ ಗೌಡ ಅವರಿಗೆ ಕಳಿಸಿದ್ದರು ಎನ್ನಲಾದ ಅಶ್ಲೀಲ ಸಂದೇಶಗಳಿಗೂ ಈ ಟ್ರೋಲ್‌ಗಳಿಗೂ ವ್ಯತ್ಯಾಸವೇನಿಲ್ಲ’ ಎಂದು ರಮ್ಯಾ ಹೇಳಿದ್ದಾರೆ. ಅಷ್ಟೇ ಅಲ್ಲ, ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಅಂತರ್ಜಾಲ ಕಿರುಕುಳದಿಂದ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯರ ಪರವಾಗಿ ತಾನು ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ.
ಚಿತ್ರರಂಗದ ಅನೇಕ ನಟ ನಟಿಯರು ಈ ಹಿಂದೆ ಟ್ರೋಲ್‌ಗೆ ಒಳಗಾಗಿದ್ದಾರೆ. ರಶ್ಮಿಕಾ ಅವರ ಕನ್ನಡಪ್ರೇಮ ಮತ್ತು ಭಾಷಾ ನಿಷ್ಠೆ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದೆ. ರಶ್ಮಿಕಾ ಮಂದಣ್ಣ ಅವರು ಟ್ರೋಲ್‌ಗೆ ಒಳಗಾಗಿದ್ದಾಗ ನಟಿ ರಮ್ಯಾ ಅವರು ರಶ್ಮಿಕಾ ನೆರವಿಗೆ ಧಾವಿಸಿದ್ದರು. ಈಗ ರಮ್ಯಾ ಅವರೇ ಟ್ರೋಲ್‌ಗೆ ಗುರಿಯಾಗಿದ್ದು, ವಿವಿಧ ಸಾಮಾಜಿಕ ಜಾಲತಾಣಗಳ 43 ಖಾತೆಗಳ ವಿರುದ್ಧ ದೂರು ನೀಡಿದ್ದಾರೆ.
ಟ್ರೋಲಿಂಗ್ ಎನ್ನುವುದು ಮುಖರಹಿತ ಡಿಜಿಟಲ್ ದಾಳಿಯಾಗಿದೆ. ಹೀಗೆ ದಾಳಿ ಮಾಡುವವರ ಪೈಕಿ ಬಹುತೇಕರು ನಕಲಿ ಹೆಸರು ಮತ್ತಿತರ ಮಾಹಿತಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಆರಂಭಿಸಿರುವವರೇ ಆಗಿರುತ್ತಾರೆ. ಕೆಲವು ಸಮಾನ ಮನಸ್ಕರು ಸಮಾನ ಹಿತಾಸಕ್ತಿಗಾಗಿ ಜಾಲತಾಣಗಳಲ್ಲಿ ಗುಂಪುಗಳನ್ನೂ ರಚಿಸಿಕೊಂಡಿರುತ್ತಾರೆ. ತಮ್ಮ ಧರ್ಮ, ಭಾಷೆ, ಲಿಂಗ, ಅಭಿಪ್ರಾಯ, ಪಂಥವೇ ಶ್ರೇಷ್ಠ ಎಂದು ಪ್ರತಿಪಾದಿಸುವವರು, ಎಲ್ಲೆ ಮೀರಿ ಅದರ ಸಮರ್ಥನೆಗೆ ಅಥವಾ ವಿರೋಧಿಗಳ ದಮನಕ್ಕೆ ಮುಂದಾದಾಗ, ಅದು ಡಿಜಿಟಲ್ ದಾಳಿಯ ರೂಪ ಪಡೆಯುತ್ತಿದೆ. ಅವರ ಹಿತಾಸಕ್ತಿಗಳನ್ನು ಯಾರಾದರೂ ವಿರೋಧಿಸಿದರೆ, ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ, ಅವರ ವಿರುದ್ಧ ಸಂಘಟಿತ ಮತ್ತು ವ್ಯಾಪಕ ದಾಳಿ ನಡೆಸುತ್ತಾರೆ. ಕೆಲವರಂತೂ ಹೀಗೆ ಮಾಡುವ ಭರದಲ್ಲಿ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಾರೆ. ಹೀಗೆ ಮಾಡುವ ಮೂಲಕ ಅನೇಕ ಬಾರಿ ಮಹಿಳೆಯರು, ದಲಿತರು, ಲಿಂಗತ್ವ ಅಲ್ಪಸಂಖ್ಯಾತರು, ಧಾರ್ಮಿಕ ಅಲ್ಪಸಂಖ್ಯಾತರು, ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತಿದೆ, ಅವರ ಬಾಯಿ ಮುಚ್ಚಿಸಲಾಗುತ್ತಿದೆ.
ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇದೆಯಾದರೂ, ಇನ್ನೊಬ್ಬರ ಅಭಿಪ್ರಾಯವನ್ನು ಸಂವಾದದ ಚೌಕಟ್ಟು ಮೀರಿ ಟೀಕಿಸುವುದು, ವಿರೋಧಿಸುವುದು, ದಮನ ಮಾಡಲು ಯತ್ನಿಸುವುದು ಅಸಾಂವಿಧಾನಿಕವಾಗುತ್ತದೆ. ಟ್ರೋಲರ್‌ಗಳು ಯಥಾಸ್ಥಿತಿವಾದಿಗಳಾಗಿದ್ದು, ಬದಲಾವಣೆಯ ವಿರೋಧಿಗಳಾಗಿರುತ್ತಾರೆ; ಹೀಗಾಗಿಯೇ ಮಹಿಳೆಯರು, ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿರುವವರು ಹೆಚ್ಚು ಟ್ರೋಲ್‌ಗಳಿಗೆ ಗುರಿಯಾಗುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಮಹಿಳೆಯರು ಮತ್ತು ಪುರುಷರ ನಡುವಿನ ಡಿಜಿಟಲ್ ಅಂತರ ಹೆಚ್ಚಾಗಿರುವುದು ಕೂಡ ಮಹಿಳೆಯರ ಮೇಲೆ ಹೆಚ್ಚು ಡಿಜಿಟಲ್ ದಾಳಿ ನಡೆಯಲು ಒಂದು ಕಾರಣ. ಟ್ರೋಲಿಂಗ್ ಬಗ್ಗೆ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ 2020ರಲ್ಲಿ ಒಂದು ಅಧ್ಯಯನ ನಡೆಸಿತ್ತು. 95 ಮಹಿಳಾ ರಾಜಕಾರಣಿಗಳ ಬಗ್ಗೆ ಚುನಾವಣಾ ಸಮಯದಲ್ಲಿ 1.14 ಲಕ್ಷ ಟ್ವೀಟ್‌ಗಳು ಪ್ರಕಟವಾಗಿದ್ದವು; ಅವುಗಳಲ್ಲಿ ಶೇ 13.8ರಷ್ಟು ಪೋಸ್ಟ್‌ಗಳು ನಿಂದನಾತ್ಮಕವಾಗಿದ್ದವು ಎಂದು ಆ ವರದಿ ಉಲ್ಲೇಖಿಸಿದೆ.
ಆನ್‌ಲೈನ್ ವೇದಿಕೆಗಳು ಒಂದು ರೀತಿಯ ಮುಖರಹಿತ ವೇದಿಕೆಗಳಾಗಿಯೇ ಉಳಿದಿವೆ. ಜತೆಗೆ, ಈ ವೇದಿಕೆಗಳಲ್ಲಿ ತಮ್ಮ ವಾದ, ಅನಿಸಿಕೆ, ಅಭಿಪ್ರಾಯವನ್ನು ವ್ಯಕ್ತಪಡಿಸುವ ಅನಿಯಂತ್ರಿತ ಹಾಗೂ ಮುಕ್ತ ಅವಕಾಶ ಇದೆ. ಈ ಕಾರಣದಿಂದಲೇ ಕೆಲವರು ಮನಸೋಇಚ್ಛೆ ವರ್ತಿಸುತ್ತಿದ್ದು, ಹಲವು ಬಾರಿ ಅದು ವಿಕೃತ ದಾಳಿಯ ರೂಪ ಪಡೆಯುತ್ತಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎನ್ನುವ ಒತ್ತಾಯವಿದೆ.
ಆನ್‌ಲೈನ್‌ನಲ್ಲಿ (ಸಾಮಾಜಿಕ ಜಾಲತಾಣಗಳಲ್ಲಿ) ಇತರರಿಗೆ ಕಿರುಕುಳ ನೀಡುವ/ಕೇಡು ಬಗೆಯುವ ಉದ್ದೇಶದಿಂದ ಪ್ರತಿಕ್ರಿಯೆಗಳನ್ನು ಹಾಕುವುದೇ ಟ್ರೋಲಿಂಗ್. ಈ ಪ್ರತಿಕ್ರಿಯೆಗಳು ಬೆದರಿಕೆ ಹಾಕುವ ರೂಪದಲ್ಲಿ ಅಥವಾ ಬೇರೊಬ್ಬರ ಗೌರವ/ಘನತೆಗೆ ಚ್ಯುತಿ ತರುವಂತೆ ಇರುತ್ತವೆ. ಡಿಜಿಟಲ್ ರೂಪದಲ್ಲಿರುವ ವರ್ಚುವಲ್ ಲೋಕದಲ್ಲಿ ಯಾರು ಬೇಕಾದರೂ ಟ್ರೋಲಿಂಗ್‌ಗೆ ಒಳಗಾಗಬಹುದು. ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಇದಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ. ಮಹಿಳೆಯರಲ್ಲೂ ಚಿತ್ರ ನಟಿಯರು ಹೆಚ್ಚು ಸಂತ್ರಸ್ತರು.
ಸಾಮಾಜಿಕ ಜಾಲತಾಣ ಕಂಪನಿಗಳು ಟ್ರೋಲಿಂಗ್‌ಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ನಿಯಮಗಳನ್ನು ಹೊಂದಿಲ್ಲ. ಆದರೆ, ಬಳಕೆದಾರರ ಅನುಚಿತ ವರ್ತನೆ, ಬೇರೆಯವರಿಗೆ ಕಿರುಕುಳ ನೀಡುವುದು, ಸಮಾಜದ ಸ್ವಾಸ್ಥ್ಯ ಹಾಳುಮಾಡುವಂತಹ ಅಭಿಪ್ರಾಯಗಳ ವಿರುದ್ಧ, ಜಾತಿ, ಧರ್ಮದ ಅವಹೇಳನ, ದ್ವೇಷಕಾರುವ ಸಾಹಿತ್ಯದ ಪ್ರಕಟಣೆಯಂತಹ ನಡವಳಿಕೆಗಳ ವಿರುದ್ಧ ನಿಯಮಗಳನ್ನು ಹೊಂದಿವೆ. ಈ ನಿಯಮಗಳು ‘ಕಮ್ಯುನಿಟಿ ಸ್ಟ್ಯಾಂಡರ್ಡ್ಸ್’ ಅಡಿಯಲ್ಲಿ ಬರುತ್ತವೆ. ಪೋಸ್ಟ್ ಬರೆದ ಅಥವಾ ಕಮೆಂಟ್ ಮಾಡಿದ ತಕ್ಷಣವೇ ಅವು ಕಮ್ಯುನಿಟಿ ಸ್ಟ್ಯಾಂಡರ್ಡ್‌ಗೆ ಅನುಸಾರವಾಗಿದೆಯೇ ಎಂಬುದನ್ನು ಸಾಮಾಜಿಕ ಜಾಲತಾಣಗಳು ಪರಿಶೀಲಿಸುವುದಿಲ್ಲ. ಜನರು ಅದನ್ನು ರಿಪೋರ್ಟ್ ಮಾಡಿದ ನಂತರ ಅದರ ಆಧಾರದಲ್ಲಿ ಪರಿಶೀಲಿಸುತ್ತವೆ.
ತಮ್ಮ ವೇದಿಕೆಯಲ್ಲಿ ಜನರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬಹುದು ಎಂಬುದು ಬಹುತೇಕ ಸಾಮಾಜಿಕ ಜಾಲತಾಣ ಕಂಪನಿಗಳ ಘೋಷಣೆ. ಏಕಾಏಕಿಯಾಗಿ ಟ್ರೋಲಿಂಗ್ ಅನ್ನು ನಿರ್ಬಂಧಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದ ಕ್ರಮವಾಗಬಹುದು ಎಂಬುದು ಅವುಗಳ ನಿಲುವು.
* ನಕಲಿ ಖಾತೆದಾರರು. ತಮ್ಮ ಗುರುತನ್ನು ಮುಚ್ಚಿಟ್ಟು ಮನಸೋಇಚ್ಛೆ ಕಮೆಂಟ್‌ಗಳನ್ನು ಮಾಡುತ್ತಾರೆ
* ನಟ, ಕ್ರಿಕೆಟಿಗ ಅಥವಾ ಇನ್ಯಾವುದೇ ಸೆಲೆಬ್ರಿಟಿಯ ಕಟ್ಟಾ ಅಭಿಮಾನಿಗಳು. ತಾವು ಮೆಚ್ಚಿರುವ ಸೆಲೆಬ್ರಿಟಿಯ ಬಗ್ಗೆ ಬೇರೆ ಯಾರಾದರೂ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರೆ ಇವರು ಅವರಿಗೆ ಬೆದರಿಕೆ ಒಡ್ಡುವುದು, ಹೀಯಾಳಿಸುವುದು, ಗೌರವಕ್ಕೆ ಚ್ಯುತಿ ತರುವಂತೆ ಪ್ರತಿಕ್ರಿಯಿಸುತ್ತಾರೆ
* ತಮಾಷೆಯ ಉದ್ದೇಶದಿಂದ ಮಾಡುವವರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಾಕಿ ತಮಾಷೆ ನೋಡುವ ಬಳಕೆದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಂತಹ ಪ್ರತಿಕ್ರಿಯೆಗಳನ್ನು ಹಾಕುವಾಗ ತಮಗೆ ಯಾವುದೇ ದುರುದ್ದೇಶ ಇಲ್ಲದಂತೆ ಅವರು ನಟಿಸುತ್ತಾರೆ
* ಇನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸುವ ಮನೋಧರ್ಮ ಉಳ್ಳವರು
* ಬೇರೆಯರ ಬಗ್ಗೆ ಹೊಟ್ಟೆಕಿಚ್ಚು ಪಡುವವರು ಮತ್ತು ಹತಾಶರಾಗಿರುವವರು
* ಬೇರೆಯವರ ಗಮನ ಸೆಳೆಯುವ ಉದ್ದೇಶದವರು. ಎಲ್ಲರಿಗಿಂತ ಭಿನ್ನವಾದ ಪ್ರತಿಕ್ರಿಯೆ ಹಾಕಿದರೆ ತಮ್ಮನ್ನು ಜನ ಗುರುತಿಸುತ್ತಾರೆ ಎಂಬ ಲೆಕ್ಕಾಚಾರ ಇವರದ್ದು
* ಜೀವನದಲ್ಲಿ ಗಂಭೀರವಾದ ಉದ್ಯೋಗ ಯಾವುದೂ ಇಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ದಿನಪೂರ್ತಿ ಕಾಲ ಕಳೆಯುವವರು ಟ್ರೋಲಿಂಗ್‌ನಲ್ಲಿ ತೊಡಗುವುದು ಹೆಚ್ಚು
* ಸಾಮಾಜಿಕ ಸಭ್ಯತೆ ಅರಿಯದವರು. ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು, ನಡೆದುಕೊಳ್ಳಬೇಕು, ತಮ್ಮ ಮಾತು ಅಥವಾ ಪ್ರತಿಕ್ರಿಯೆ ಇನ್ನೊಬ್ಬರನ್ನು ಗಾಸಿಗೊಳಿಸುವಂತೆ ಇರಬಾರದು ಎಂಬ ಸಾಮಾನ್ಯ ಪ್ರಜ್ಞೆ ಇವರಿಗೆ ಇರುವುದಿಲ್ಲ
* ಕಾನೂನಿನ ಭಯ/ ಅರಿವು ಇಲ್ಲದವರು. ಬೇರೆಯವರಿಗೆ ಬೆದರಿಕೆ ಹಾಕುವುದು, ಹೀಯಾಳಿಸುವುದು, ಪ್ರತಿಕ್ರಿಯೆಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವುವುದು ಮಾಡಿದರೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂಬ ಅರಿವು ಇಲ್ಲದವರೂ ಇದ್ದಾರೆ; ಇದರ ಬಗ್ಗೆ ತಿಳಿವಳಿಕೆ ಇದ್ದು, ನೆಲದ ಕಾನೂನನ್ನು ಉಲ್ಲಂಘಿಸುವವರೂ ಇದ್ದಾರೆ
* ಟ್ರೋಲ್‌ಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಟ್ರೋಲ್‌ಗಳಿಂದ ಆಗುವ ಅವಮಾನದಿಂದ ಒತ್ತಡಕ್ಕೆ ಒಳಗಾಗುವ, ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ದುರ್ಬಲ ಮನಸ್ಸಿನವರಾದರೆ ಆತ್ಮಹತ್ಯೆ
ಯಂತಹ ನಿರ್ಧಾರವನ್ನೂ ತೆಗೆದುಕೊಳ್ಳಬಹುದು
* ನಿರಂತರ ಟ್ರೋಲ್‌ಗಳು ವ್ಯಕ್ತಿಯೊಬ್ಬರ ಮೇಲೆ ಇಟ್ಟ ನಂಬಿಕೆಗೆ ಗಾಸಿ ಉಂಟುಮಾಡಬಹುದು
* ಒಬ್ಬ ವ್ಯಕ್ತಿಯ ಕುರಿತಾಗಿ ಭಿನ್ನ ಅಭಿಪ್ರಾಯಗಳನ್ನು ರೂಪಿಸಬಹುದು. ಇದು ಸಾಮಾಜಿಕವಾಗಿ ಆ ವ್ಯಕ್ತಿಯ ವರ್ಚಸ್ಸಿಗೆ ಧಕ್ಕೆ ಉಂಟುಮಾಡಬಹುದು
* ಭಯಪಡಬೇಕಾಗಿಲ್ಲ, ಒತ್ತಡಕ್ಕೂ ಒಳಗಾಗಬೇಕಾಗಿಲ್ಲ. ಧೈರ್ಯವಾಗಿರಿ
* ಟ್ರೋಲ್ ಮಾಡುವವರಿಗೆ ಪ್ರತಿಕ್ರಿಯಿಸುವುದು ಜಾಣತನವಲ್ಲ. ದಿಟ್ಟವಾಗಿ ಪ್ರತಿಕ್ರಿಯಿಸಿದರೂ ಟ್ರೋಲಿಗರು ಮತ್ತಷ್ಟು ತೀವ್ರವಾಗಿ ಪ್ರತಿಕ್ರಿಯಿಸುವ
ಸಾಧ್ಯತೆ ಇರುತ್ತದೆ
* ಟ್ರೋಲ್ ಮಾಡಿದವರ ಮಾಹಿತಿ ಕಲೆ ಹಾಕಿ. ಅವರು ನೀಡಿರುವ ಪ್ರತಿಕ್ರಿಯೆಗಳು, ಸಂದೇಶಗಳ ಸ್ಕ್ರೀನ್‌ಶಾಟ್ ತೆಗೆದಿಡಿ
* ಅವರ ಪ್ರೊಫೈಲ್ ಬ್ಲಾಕ್ ಮಾಡಿ ಅಥವಾ ರಿಪೋರ್ಟ್ ಮಾಡಿ
* ಧೈರ್ಯವಾಗಿ ಪೊಲೀಸರಿಗೆ ದೂರು ನೀಡಿ. ಪೂರಕವಾಗಿ ಟ್ರೋಲಿಗರು ಹಾಕಿದ ಕಮೆಂಟ್‌ಗಳ ವಿವರಗಳನ್ನು ನೀಡಿ
* ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಚಟುವಟಿಕೆ ಸ್ನೇಹಿತರ ವ್ಯಾಪ್ತಿಗೆ ಸೀಮಿತವಾಗಿರಲಿ. ಅಂದರೆ, ಅಭಿಪ್ರಾಯಗಳು, ಚರ್ಚೆಗಳು ಸ್ನೇಹಿತರ ನಡುವೆ ಮಾತ್ರ ಇರಲಿ. ಅದಕ್ಕಾಗಿ ನಿಮ್ಮ ಖಾತೆಯ ಪ್ರೈವೆಟ್ ಸೆಟ್ಟಿಂಗ್ ಅನ್ನು ಬದಲಾಯಿಸಿಕೊಳ್ಳಿ
* ಕುಟುಂಬ, ಮಕ್ಕಳಿರುವ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುವುದನ್ನು ಕಡಿಮೆ ಮಾಡಿ. ಕಿಡಿಗೇಡಿಗಳು ಫೋಟೊ, ವಿಡಿಯೊಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ
* ಹಾಕುವ ಪೋಸ್ಟ್‌ಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ಘನತೆಯಿಂದ ಮತ್ತು ವೃತ್ತಿಪರತೆಯಿಂದ ಕೂಡಿರಲಿ
* ವಿವಾದಿತ ಸಂಗತಿಗಳ ಬಗ್ಗೆ ಪೋಸ್ಟ್ ಮಾಡುವುದನ್ನು
ಆದಷ್ಟೂ ತಪ್ಪಿಸಿ
* ಕಮೆಂಟ್‌ಗಳು ಬಾರದಂತೆ ಮಾಡುವುದಕ್ಕೆ ಅಥವಾ ಯಾರು ನಿಮ್ಮ ಪೋಸ್ಟ್‌ಗೆ ಕಮೆಂಟ್ ಮಾಡಬಹುದು ಎಂದು ಸೆಟ್ಟಿಂಗ್ ಮಾಡುವುದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಅವಕಾಶ ಇದೆ
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಬ್ಬರನ್ನು ಹೀಗಳೆಯುವ, ಕೆಟ್ಟದಾಗಿ ಸಂದೇಶ ಕಳುಹಿಸುವ ಹಾಗೂ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಅವಕಾಶವಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಬಂಧಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ತಂಡಗಳಿವೆ. ಆ ತಂಡಗಳ ಸಿಬ್ಬಂದಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತಾರೆಎಂ.ಎ.ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ
ಆಧಾರ: ಪಿಟಿಐ, ಅಮ್ನೆಸ್ಟಿ ಇಂಟರ್‌ನ್ಯಾಷನಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.