ಭಾರತೀಯ ಅಂಚೆಯು ರಿಜಿಸ್ಟರ್ಡ್ ಪೋಸ್ಟ್ (ನೋಂದಾಯಿತ ಅಂಚೆ) ಸೇವೆಯನ್ನು ಸ್ಪೀಡ್ ಪೋಸ್ಟ್ ಸೇವೆಯೊಂದಿಗೆ ವಿಲೀನ ಮಾಡಿರುವುದಕ್ಕೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಜಿಸ್ಟರ್ಡ್ ಪೋಸ್ಟ್‌ನಿಂದ ಇದ್ದಂಥ ಕೆಲವು ಅನುಕೂಲಗಳು ಸ್ಪೀಡ್ ಪೋಸ್ಟ್‌ಗೆ ಇಲ್ಲ ಎನ್ನುವುದು ಕೆಲವರ ವಾದ.
ರಿಜಿಸ್ಟರ್ಡ್ ಪೋಸ್ಟ್ ಸೇವೆಯು ವ್ಯಕ್ತಿ ನಿರ್ದಿಷ್ವವಾಗಿದ್ದು, ಪೋಸ್ಟ್ ಸ್ವೀಕರಿಸಿದವರ ಸಹಿ ಇರುವ ಸ್ವೀಕೃತಿ ರಸೀದಿಯು ಅದರ ಭಾಗವಾಗಿರುತ್ತದೆ. ಪೋಸ್ಟ್ ಅನ್ನು ನಿಗದಿತ ವ್ಯಕ್ತಿಗೇ ತಲುಪಿಸಿ, ಅವರಿಂದ ಸಹಿ ಪಡೆದು, ಅಂಚೆ ಸಂದಾಯವಾಗಿರುವುದನ್ನು ದೃಢೀಕರಿಸಬೇಕಾಗುತ್ತದೆ. ನ್ಯಾಯಾಲಯಗಳು, ಸರ್ಕಾರಿ ಕಚೇರಿ ಮತ್ತಿತರ ಕಡೆಗಳಲ್ಲಿ ಅದನ್ನು ಸಾಕ್ಷ್ಯವಾಗಿಯೂ ಪರಿಗಣಿಸಲಾಗುತ್ತಿದೆ. ರಿಜಿಸ್ಟರ್ಡ್ ಪೋಸ್ಟ್ ನೇಪಥ್ಯಕ್ಕೆ ಸರಿಯುವುದರಿಂದ ಇನ್ನು ಮುಂದೆ ಈ ಸೌಲಭ್ಯ ಗ್ರಾಹಕರಿಗೆ ಸಿಗುವುದಿಲ್ಲ.
ಆದರೆ, ಸ್ಪೀಡ್ ಪೋಸ್ಟ್ ವಿಳಾಸ ನಿರ್ದಿಷ್ಟವಾಗಿದೆ. ಪೋಸ್ಟ್‌ನಲ್ಲಿ ನಮೂದಿಸಿದ ವಿಳಾಸದಲ್ಲಿ ಇರುವ ವ್ಯಕ್ತಿ, ಅವರ ಕುಟುಂಬ ಸದಸ್ಯರು, ನೆರೆಹೊರೆಯವರು, ಕಾವಲುಗಾರರು ಹೀಗೆ ಆ ಸಂದರ್ಭದಲ್ಲಿ ಯಾರು ಲಭ್ಯರಿರುತ್ತಾರೋ ಅವರಿಗೆ ಪೋಸ್ಟ್ ಅನ್ನು ತಲುಪಿಸಲಾಗುತ್ತದೆ.
ಕಾಯ್ದೆಗಳಲ್ಲಿಯೇ ಉಲ್ಲೇಖ: ಭಾರತದ ಕೆಲವು ಕಾಯ್ದೆಗಳಲ್ಲಿ ರಿಜಿಸ್ಟರ್ಡ್ ಪೋಸ್ಟ್ ಅನ್ನು ಪತ್ರ ರವಾನೆಯ ಅಧಿಕೃತ ಮಾರ್ಗ ಎಂದೇ ಉಲ್ಲೇಖಿಸಲಾಗಿದೆ. ದೇಶದ ಕಾನೂನಿನಲ್ಲಿ ಮಹತ್ವದ ಸ್ಥಾನ ಹೊಂದಿರುವ ‘ದಿ ಜನರಲ್ ಕ್ಲಾಸಸ್ ಆ್ಯಕ್ಟ್’ನ ಸೆಕ್ಷನ್ 27ರಲ್ಲಿ, ‘ಕೇಂದ್ರದ ಯಾವುದೇ ಕಾಯ್ದೆಗೆ ಸಂಬಂಧಿಸಿದ ದಾಖಲೆಗಳನ್ನು ಅಂಚೆ ಮೂಲಕ ಕಳುಹಿಸಬೇಕಾದಲ್ಲಿ, ರಿಜಿಸ್ಟರ್ಡ್ ಪೋಸ್ಟ್ ಮೂಲಕ ರವಾನಿಸಿದರೆ ಮಾತ್ರವೇ ಅದನ್ನು ಮಾನ್ಯ ಮಾಡಲಾಗುವುದು’ ಎಂದು ಉಲ್ಲೇಖಿಸಲಾಗಿದೆ. ಕೆಲವು ಕಾಯ್ದೆಗಳಲ್ಲಿ ನಿರ್ದಿಷ್ಟವಾಗಿ ಸ್ಪೀಡ್ ಪೋಸ್ಟ್ ಮತ್ತು ಇತರ ವಿಧಾನಗಳನ್ನು ಉಲ್ಲೇಖಿಸಲಾಗಿದ್ದು, ಅಂಥ ಕಾಯ್ದೆಗಳ ಸಂಖ್ಯೆ ಕಡಿಮೆ ಇದೆ.
ಕೇಂದ್ರದ 13 ಕಾಯ್ದೆಗಳು ರಿಜಿಸ್ಟರ್ಡ್ ಪೋಸ್ಟ್ ಅನ್ನು ಅಧಿಕೃತ ರವಾನೆಯ ಮಾರ್ಗವಾಗಿ ಉಲ್ಲೇಖಿಸಿದ್ದರೆ, ನಾಲ್ಕರಲ್ಲಿ ಸ್ಪೀಡ್ ಪೋಸ್ಟ್ ಅನ್ನು ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರದಲ್ಲಿ 15 ಕಾಯ್ದೆಗಳಲ್ಲಿ, ಉತ್ತರ ಪ್ರದೇಶದ 8 ಕಾಯ್ದೆಗಳಲ್ಲಿ ರಿಜಿಸ್ಟರ್ಡ್ ಪೋಸ್ಟ್ ಉಲ್ಲೇಖವಾಗಿದ್ದರೆ, ಈ ರಾಜ್ಯಗಳ ಯಾವ ಕಾಯ್ದೆಯಲ್ಲೂ ಸ್ಪೀಡ್ ಪೋಸ್ಟ್‌ನ ಉಲ್ಲೇಖವಾಗಿಲ್ಲ. ‘ಕಂಪನಿಗಳ ಕಾಯ್ದೆ 2013’ ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಎಂದು ಉಲ್ಲೇಖಿಸಿದೆ.
ಎರಡರ ನಡುವಿನ ವ್ಯತ್ಯಾಸ: ರಾಜಸ್ಥಾನ ಹೈಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳು ರಿಜಿಸ್ಟರ್ಡ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್‌ನ ವ್ಯತ್ಯಾಸದ ಬಗ್ಗೆ ಪ್ರಸ್ತಾಪಿಸಿವೆ. ‘ಭಾರತೀಯ ಅಂಚೆ ಕಚೇರಿ ನಿಯಮಗಳು 1933’ರ ನಿಯಮ 63ರ ಪ್ರಕಾರ, ರಿಜಿಸ್ಟರ್ಡ್ ಪೋಸ್ಟ್ ಅನ್ನು ನಿಗದಿತ ವ್ಯಕ್ತಿ ಅಥವಾ ಅವರ ಪ್ರತಿನಿಧಿಗೆ ಮಾತ್ರವೇ ತಲುಪಿಸಬೇಕು ಮತ್ತು ಅವರಿಂದ ಅಂಚೆ ಇಲಾಖೆಯ ಮಹಾನಿರ್ದೇಶಕರು (ಡೈರೆಕ್ಟರ್ ಜನರಲ್) ನಿಗದಿಪಡಿಸಿದ ದಾಖಲೆಯಲ್ಲಿ ಸಹಿ ಪಡೆದು, ಸ್ವೀಕೃತಿ ರಸೀದಿಯನ್ನು ಪಡೆಯಬೇಕು. ಇದೇ ರೀತಿ, ‘ಭಾರತೀಯ ಅಂಚೆ ಕಚೇರಿ ನಿಯಮಗಳು 1933’ರ ನಿಯಮ 66ಬಿ ಅನ್ವಯ, ಸ್ಪೀಡ್ ಪೋಸ್ಟ್‌ನ ಮುಖ್ಯ ಉದ್ದೇಶವು ಅಂಚೆಯನ್ನು ತ್ವರಿತವಾಗಿ ಮುಟ್ಟಿಸುವುದಾಗಿದೆ. ಈ ಎರಡು ನಿಯಮಗಳ ಬಗ್ಗೆ ವಿಶ್ಲೇಷಿಸಿದ್ದ ರಾಜಸ್ಥಾನ ಹೈಕೋರ್ಟ್, ಎರಡೂ ಒಂದೇ ಅಲ್ಲ ಎಂದು ಹೇಳಿದೆ.
ರಿಜಿಸ್ಟರ್ಡ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್ ಅನ್ನು ವಿಲೀನಗೊಳಿಸಲಾಗಿದ್ದರೂ ಕಾನೂನಿನ ಪ್ರಕ್ರಿಯೆಯಲ್ಲಿ ಆಗಬೇಕಿರುವ ಬದಲಾವಣೆಗಳು ಮತ್ತು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಾನೂನು ಸಚಿವಾಲಯ ಆಗಲಿ ಅಥವಾ ಕಾನೂನು ವ್ಯವಹಾರಗಳ ಇಲಾಖೆ ಆಗಲಿ ಯಾವುದೇ ಪ್ರಕಟಣೆ ನೀಡಿಲ್ಲ ಎಂದು ಕಾನೂನು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕ್ರಿಯೆಗಳ ಮಟ್ಟಿಗಾದರೂ ಭಾರತೀಯ ಅಂಚೆಯು ರಿಜಿಸ್ಟರ್ಡ್ ಪೋಸ್ಟ್ ಅನ್ನು ಮುಂದುವರಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
‘ಸ್ಥಗಿತ ಅಲ್ಲ, ವಿಲೀನ’
‘ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸ್ಥಗಿತಗೊಳಿಸುತ್ತಿಲ್ಲ. ಸ್ಪೀಡ್ ಪೋಸ್ಟ್ ಸೇವೆ ಜೊತೆ ವಿಲೀನಗೊಳಿಸಲಾಗುತ್ತಿದೆ’ ಎಂಬುದು ಅಂಚೆ ಇಲಾಖೆಯ ಸ್ಪಷ್ಟನೆ.
ಅಂಚೆ ಸೇವೆಯನ್ನು ಇನ್ನಷ್ಟು ಸುಧಾರಿಸಲು, ಸರಳೀಕರಣಗೊಳಿಸಲು ಮತ್ತು ದೇಶದಾದ್ಯಂತ ಎಲ್ಲ ಪ್ರದೇಶಗಳಲ್ಲೂ ಪರಿಣಾಮಕಾರಿಯಾಗಿ ನೀಡಲು ಈ ಬದಲಾವಣೆ ಮಾಡಲಾಗಿದೆ ಎಂಬುದು ಅದರ ಹೇಳಿಕೆ.
ಆನ್‌ಲೈನ್ ಟ್ರ್ಯಾಕಿಂಗ್, ಒಟಿಪಿ ಆಧಾರಿತ ಸುರಕ್ಷಿತ ಸೇವೆ ಸೇರಿದಂತೆ ಇನ್ನಿತರ ಆಧುನಿಕ ತಂತ್ರಜ್ಞಾನ ಆಧಾರಿತ ಸೇವೆಗಳು ಇದರಲ್ಲಿ ಲಭ್ಯವಿವೆ ಎಂದು ಅಂಚೆ ಇಲಾಖೆ ಹೇಳಿದೆ.
ಸ್ಥಗಿತ ಅಲ್ಲ ವಿಲೀನ’
‘ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸ್ಥಗಿತಗೊಳಿಸುತ್ತಿಲ್ಲ. ಸ್ಪೀಡ್ ಪೋಸ್ಟ್ ಸೇವೆ ಜೊತೆ ವಿಲೀನಗೊಳಿಸಲಾಗುತ್ತಿದೆ’ ಎಂಬುದು ಅಂಚೆ ಇಲಾಖೆಯ ಸ್ಪಷ್ಟನೆ. ಅಂಚೆ ಸೇವೆಯನ್ನು ಇನ್ನಷ್ಟು ಸುಧಾರಿಸಲು ಸರಳೀಕರಣಗೊಳಿಸಲು ಮತ್ತು ದೇಶದಾದ್ಯಂತ ಎಲ್ಲ ಪ್ರದೇಶಗಳಲ್ಲೂ ಪರಿಣಾಮಕಾರಿಯಾಗಿ ನೀಡಲು ಈ ಬದಲಾವಣೆ ಮಾಡಲಾಗಿದೆ ಎಂಬುದು ಅದರ ಹೇಳಿಕೆ. ಆನ್‌ಲೈನ್ ಟ್ರ್ಯಾಕಿಂಗ್ ಒಟಿಪಿ ಆಧಾರಿತ ಸುರಕ್ಷಿತ ಸೇವೆ ಸೇರಿದಂತೆ ಇನ್ನಿತರ ಆಧುನಿಕ ತಂತ್ರಜ್ಞಾನ ಆಧಾರಿತ ಸೇವೆಗಳು ಇದರಲ್ಲಿ ಲಭ್ಯವಿವೆ ಎಂದು ಅಂಚೆ ಇಲಾಖೆ ಹೇಳಿದೆ.
ಆಧಾರ: ಇಂಡಿಯಾ ಪೋಸ್ಟ್ ವೆಬ್‌ಸೈಟ್, ಪಿಐಬಿ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.