ಡಾಲರ್ ಎದುರು ರೂಪಾಯಿಯ ಮೌಲ್ಯ ದಾಖಲೆಯ ಮಟ್ಟಕ್ಕೆ ಕುಸಿತ ಕಂಡಿದೆ. ಒಂದು ಡಾಲರ್‌ಗೆ ₹85 ಗಡಿ ದಾಟಿ ಮುನ್ನಡೆದಿದೆ. ಸಹಜವಾಗಿಯೇ, ಇದು ದೇಶದ ಆರ್ಥಿಕತೆಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಚರ್ಚೆ ಆರಂಭವಾಗಿದೆ. ರೂಪಾಯಿ ಅಪಮೌಲ್ಯದಿಂದ ಕೆಲವೊಮ್ಮೆ ಸಕಾರಾತ್ಮಕ ಬೆಳವಣಿಗೆಗೆಳು ಘಟಿಸಬಹುದಾದರೂ, ನಕಾರಾತ್ಮಕ ಪರಿಣಾಮಗಳೇ ಹೆಚ್ಚು. ರೂಪಾಯಿ ಅಪಮೌಲ್ಯಕ್ಕೆ ದೇಶದ ಒಳಗಿನ ಮತ್ತು ಹೊರಗಿನ ಬೆಳವಣಿಗೆಗಳೆರಡೂ ಕಾರಣವಾಗಿವೆ.
ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಶುಕ್ರವಾರ ಹಿಂದೆಂದೂ ಇಲ್ಲದ ರೀತಿಯಲ್ಲಿ ಪತನಗೊಂಡಿದ್ದು, ₹85.48ಕ್ಕೆ ಕುಸಿದಿದೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶ ಬಂದ ನಂತರ ಜೂನ್ 4ರಂದು ರೂಪಾಯಿ ಮೌಲ್ಯ ಶೇ 0.3ರಷ್ಟು ಕುಸಿದಿತ್ತು. ಅದಾದ ನಂತರ ಈ ವಾರ ಮತ್ತೆ ಶೇ 0.3 ಕುಸಿದಿದ್ದು, ಎಂಟು ವಾರಗಳಿಂದ ಸತತ ಪತನ ಮುಂದುವರಿದಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದು ನಿರೀಕ್ಷಿತವೇ ಆಗಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ ಶೇ 8–ಶೇ 10ರಷ್ಟು ಕುಸಿಯಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಅಂದಾಜಿಸಿತ್ತು. ಜತೆಗೆ ಅಮೆರಿಕದ ಆರ್ಥಿಕ ಬೆಳವಣಿಗೆ ಉತ್ತಮವಾಗಿದ್ದು, ಫೆಡರಲ್ ರಿಸರ್ವ್ ಕೈಗೊಂಡ ಕೆಲವು ಉಪಕ್ರಮಗಳಿಂದಲೂ ಡಾಲರ್ ಮೌಲ್ಯ ಏರುತ್ತಿದೆ.
ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತಕ್ಕೆ ಹಲವು ದಶಕಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಭಾರತದ ವ್ಯವಹಾರವು ಪೌಂಡ್ ಮೂಲಕ ನಡೆಯುತ್ತಿತ್ತು. ಆಗ ಒಂದು ಪೌಂಡ್‌ಗೆ ₹13 ಮೌಲ್ಯವಿತ್ತು. ಸ್ವಾತಂತ್ರ್ಯ ಗಳಿಸಿದ ನಂತರ ಭಾರತವು ರೂಪಾಯಿ ಮೂಲಕವೇ ವ್ಯವಹಾರ ನಡೆಸತೊಡಗಿತು. 1947ರಲ್ಲಿ ಡಾಲರ್ ಮತ್ತು ರೂಪಾಯಿ ಮೌಲ್ಯಗಳಲ್ಲಿ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಕ್ರಮೇಣ ರೂಪಾಯಿ ಮೌಲ್ಯವನ್ನು ಡಾಲರ್‌ಗೆ ಹೋಲಿಸಿ ನೋಡುವ ಪರಿಪಾಟ ಆರಂಭವಾಯಿತು.
1950ರಿಂದ 1960ರ ನಡುವೆ ಡಾಲರ್ ಎದುರು ಮೊದಲ ಬಾರಿಗೆ ರೂಪಾಯಿಯ ಮೌಲ್ಯ ಕುಸಿತ ಗಮನಾರ್ಹ ಪ್ರಮಾಣದಲ್ಲಿ ನಡೆಯಿತು. ಆಗ ತಾನೇ ಸ್ವಾತಂತ್ರ್ಯ ಪಡೆದಿದ್ದ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಅದಕ್ಕೆ ಅಗತ್ಯವಾದಷ್ಟು ಹಣ ಸರ್ಕಾರದ ಬೊಕ್ಕಸದಲ್ಲಿ ಇರಲಿಲ್ಲ. ಆಗ ಡಾಲರ್ ಎದುರು ರೂಪಾಯಿ ಮೌಲ್ಯ ₹4.75 ಆಗಿತ್ತು.
ಎರಡನೆಯ ಬಾರಿಗೆ ರೂಪಾಯಿ ಮೌಲ್ಯ ಕುಸಿತಕ್ಕೆ ಒಳಗಾಗಿದ್ದು 1962ರಿಂದ 1965ರ ನಡುವೆ. ಆ ಅವಧಿಯಲ್ಲಿ ಭಾರತವು ಚೀನಾ ಮತ್ತು ಪಾಕಿಸ್ತಾನದ ಜತೆಗೆ ಯುದ್ಧ ನಡೆಸಬೇಕಾಗಿ ಬಂತು. ಜತೆಗೆ, ಆಗಲೂ ಸರ್ಕಾರದ ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಅದು ಸಾಲದು ಎಂಬಂತೆ, ದೇಶದ ಹಲವು ಭಾಗಗಳಲ್ಲಿ ಬರ ಕಾಣಿಸಿಕೊಂಡು, ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಇವೆಲ್ಲದರ ಕಾರಣದಿಂದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿದಿತ್ತು.
ಮೂರನೆಯ ಬಾರಿಗೆ, 1973ರಲ್ಲಿ ಅರಬ್ ರಾಷ್ಟ್ರಗಳು ಪೆಟ್ರೋಲಿಯಂ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಮಾಡಿದವು. ಅದೇ ಸಂದರ್ಭದಲ್ಲಿ ದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಪ್ರಧಾನಿ ಆಗಿದ್ದ ಇಂದಿರಾ ಅವರ ಅಂಗರಕ್ಷಕನಿಂದಲೇ ಹತರಾಗಿದ್ದರು. ಅದರ ಬೆನ್ನಲ್ಲೇ ದೇಶದ ಹಲವೆಡೆ ಗಲಭೆಗಳು ಕಾಣಿಸಿಕೊಂಡಿದ್ದವು. ಹೀಗೆ ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿತ ಕಂಡಿತ್ತು.
ಹೀಗೆ ಕಾಲದಿಂದ ಕಾಲಕ್ಕೆ, ಹಲವು ಕಾರಣಗಳಿಂದ ನಿಧಾನಕ್ಕೆ ಡಾಲರ್ ಎದುರು ರೂಪಾಯಿ ದುರ್ಬಲಗೊಳ್ಳುತ್ತಾ ಸಾಗಿತು. ಅಮೆರಿಕವು ಆರ್ಥಿಕವಾಗಿ ಕ್ರಮೇಣ ಬಲಶಾಲಿಯಾಗುತ್ತಾ ಸಾಗಿದ್ದು ಕೂಡ ಒಂದು ಪ್ರಮುಖ ಕಾರಣ. 1990ರ ಹೊತ್ತಿಗೆ ಇದು ದೊಡ್ಡ ಮಟ್ಟದಲ್ಲಿಯೇ ಹೆಚ್ಚಾಗಿ ₹17.50 ಮುಟ್ಟಿತ್ತು. 1990ರ ಆರ್ಥಿಕ ಬಿಕ್ಕಟ್ಟಿನ ನಂತರ ಒಂದು ಡಾಲರ್‌ನ ಮೌಲ್ಯವು ₹25.92ಕ್ಕೆ ಏರಿತ್ತು. ಅಲ್ಲಿಂದ ಡಾಲರ್ ಎದುರು ಸತತವಾಗಿ ಕುಸಿಯುತ್ತಲೇ ಸಾಗಿದ ರೂಪಾಯಿಯ ಮೌಲ್ಯವು ಈಗ ₹85.48 ತಲುಪಿ, ಕುಸಿತದಲ್ಲಿ ದಾಖಲೆಯನ್ನೇ ನಿರ್ಮಿಸಿದೆ.
ರೂಪಾಯಿ ಮೌಲ್ಯ ಕುಸಿದಾಗ ಸರ್ಕಾರ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಂದಾಗಿ ಕೆಲವೊಮ್ಮೆ ಆರ್ಥಿಕತೆಯ ಮೇಲೆ ಒಳ್ಳೆಯ ಪರಿಣಾಮಗಳೂ ಆಗುವುದಿದೆ. ಆದರೆ, ಭಾರತದಲ್ಲಿ ಸದ್ಯ ಅಂಥ ಸಾಧ್ಯತೆ ಕಾಣುತ್ತಿಲ್ಲ. ಡಾಲರ್ ಎದುರು ರೂಪಾಯಿ ಕುಸಿಯಲು ಜಾಗತಿಕ ಮತ್ತು ದೇಶೀಯ ಕಾರಣಗಳೆರಡೂ ಇವೆ. ಭಾರತದ ಆರ್ಥಿಕ ಬೆಳವಣಿಗೆಯು ಮೂರು ತ್ರೈಮಾಸಿಕದಿಂದ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ವ್ಯಾಪಾರದ ಕೊರತೆ ಅಂತರವು ಹಿಗ್ಗಿದೆ.
ಇನ್ನೊಂದೆಡೆ, ಅಮೆರಿಕದ ಫೆಡರಲ್ ರಿಸರ್ವ್, ಹಣದುಬ್ಬರ ಕಡಿಮೆ ಮಾಡಲು ಬಡ್ಡಿ ದರಗಳನ್ನು ಹೆಚ್ಚಿಸುತ್ತಿದೆ. ಇದರಿಂದ ಜಾಗತಿಕ ಹೂಡಿಕೆದಾರರಿಗೆ ಡಾಲರ್ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ. ಜತೆಗೆ ತೆರಿಗೆ ಕಡಿತದಂಥ ನೀತಿಗಳಿಂದ ಅಮೆರಿಕವು ಹೂಡಿಕೆಯನ್ನು ಉತ್ತೇಜಿಸುತ್ತಿದೆ. ಇದು ರೂಪಾಯಿ ಸೇರಿದಂತೆ ಇತರ ದೇಶಗಳ ಕರೆನ್ಸಿಗಳ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಡಾಲರ್ ವಿನಿಮಯಕ್ಕಾಗಿ ಭಾರತವು ಅಪಾರ ಮೊತ್ತದ ಹಣವನ್ನು ವೆಚ್ಚ ಮಾಡುತ್ತಿದೆ. ಅಮೆರಿಕದ ಆರ್ಥಿಕ ಬೆಳವಣಿಗೆಯ ಮುಂದೆ ಇತರ ದೇಶಗಳ ಕರೆನ್ಸಿಗಳ ಮೌಲ್ಯವೂ ಕುಸಿದಿದೆ. ಆದರೆ, ಯೂರೊ ಸೇರಿದಂತೆ ಇತರ ಹಲವು ದೇಶಗಳ ಕರೆನ್ಸಿಗಳ ಎದುರು ಭಾರತದ ರೂಪಾಯಿ ಮೌಲ್ಯವು ಉತ್ತಮವಾಗಿದೆ ಎನ್ನುವುದು ಗಮನಾರ್ಹ. ಮೌಲ್ಯ ಕುಸಿತದ ನಡುವೆಯೂ ಡಾಲರ್ ಎದುರು ರೂಪಾಯಿಯು ಏಷ್ಯಾದ ಕರೆನ್ಸಿಗಳ ನಡುವೆ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಏಕೆ ಕುಸಿಯುತ್ತಿದೆ?
ವ್ಯಾಪಾರ ಕೊರತೆ: ಒಂದು ರಾಷ್ಟ್ರದ ಆಮದು ಮತ್ತು ರಫ್ತಿನ ನಡುವೆ ಇರುವ ಅಂತರ. ಇದು ಆ ದೇಶದ ಕರೆನ್ಸಿಯ ಮೌಲ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರೆನ್ಸಿಯ ಮೌಲ್ಯವನ್ನು ಹೆಚ್ಚಿಸಬೇಕು ಎಂದರೆ, ರಪ್ತು ಹೆಚ್ಚಿಸಬೇಕು. ಭಾರತವು ಕಚ್ಚಾ ತೈಲ ಸೇರಿದಂತೆ ಹಲವು ಪ್ರಮುಖ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಡಾಲರ್‌ಗಳ ಲೆಕ್ಕದಲ್ಲಿ ಅಪಾರ ಹಣ ವಿನಿಯೋಗಿಸುತ್ತಿದೆ. ಭಾರತದ ವ್ಯಾಪಾರ ಕೊರತೆಯು ಹಿಗ್ಗುತ್ತಿದ್ದು, ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಹಣದುಬ್ಬರ: ಹಣದುಬ್ಬರದ ಹೆಚ್ಚಳದಿಂದ ಒಂದು ಕರೆನ್ಸಿಯ ಕೊಳ್ಳುವ ಶಕ್ತಿಯು ಕುಂಠಿತವಾಗುತ್ತದೆ. ಹಣದುಬ್ಬರವನ್ನು ಹತೋಟಿಗೆ ತರಲು ಆರ್‌ಬಿಐ ಬಡ್ಡಿ ದರವನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುತ್ತದೆ. ಅದು ವಿನಿಯಮ ದರದ ಮೇಲೆ ಪರಿಣಾಮ ಬೀರುತ್ತದೆ. ಹಣದುಬ್ಬರ ತಗ್ಗಿಸಲು ಆರ್‌ಬಿಐ ಕೆಲವೊಮ್ಮೆ ನಗದು ಮೀಸಲು ಅನುಪಾತ (ಸಿಆರ್‌ಆರ್) ಕಡಿಮೆ ಮಾಡುವುದೂ ಉಂಟು.
ರಾಜಕೀಯ ಪರಿಸ್ಥಿತಿ: ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ಸ್ಥಿರತೆಯು ಆ ರಾಷ್ಟ್ರದ ಕರೆನ್ಸಿಯ ಮೌಲ್ಯ ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತವೆ. ಒಂದು ದೇಶದ ರಾಜಕೀಯ ಪರಿಸ್ಥಿತಿಯು ಸ್ಥಿರವಾಗಿದ್ದು, ಆರ್ಥಿಕತೆಯ ಅಡಿಪಾಯ ಉತ್ತಮವಾಗಿದ್ದರೆ, ಹೆಚ್ಚು ವಿದೇಶಿ ಬಂಡವಾಳ ಹರಿದುಬರುತ್ತದೆ. ಜತೆಗೆ, ಕರೆನ್ಸಿ ಮೌಲ್ಯವೂ ಹೆಚ್ಚುತ್ತದೆ.
ಬಡ್ಡಿ ದರ: ಯಾವುದೇ ಒಂದು ದೇಶದತ್ತ ಹೂಡಿಕೆದಾರರನ್ನು ಸೆಳೆಯುವ ಅಂಶಗಳಲ್ಲಿ ಅಧಿಕ ಬಡ್ಡಿ ದರವೂ ಒಂದಾಗಿದೆ. ವ್ಯಾಪಾರಿಗಳು ಹೆಚ್ಚಿನ ಲಾಭ ಬಯಸುವುದರಿಂದ ಸಹಜವಾಗಿಯೇ ದೇಶದ ಕರೆನ್ಸಿಗೆ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚುತ್ತಿದ್ದಂತೆಯೇ ಅದರ ಮೌಲ್ಯವೂ ಹೆಚ್ಚುತ್ತದೆ. ವಿದೇಶಿ ವಿನಿಮಯದ ಮಾರುಕಟ್ಟೆಯಲ್ಲಿ ಆ ಕರೆನ್ಸಿಯ ಮೌಲ್ಯ ಹೆಚ್ಚುತ್ತದೆ.
ವಿದೇಶಿ ನೇರ ಬಂಡವಾಳ ಹೂಡಿಕೆ : ಒಂದು ದೇಶವು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಯಾವ ರೀತಿ ಕಾಣುತ್ತದೆ ಎನ್ನವುದು ಕೂಡ ಆ ದೇಶದ ಕರೆನ್ಸಿಯ ಮೌಲ್ಯವನ್ನು ನಿರ್ಧರಿಸುತ್ತದೆ. ಎಫ್‌ಡಿಐ ದರವು ಹೆಚ್ಚಾಗಿದ್ದರೆ ಕರೆನ್ಸಿಯ ಮೌಲ್ಯವು ಹೆಚ್ಚಾಗಬಹುದು. ಎಫ್‌ಡಿಐ ದರವು ಕುಸಿದರೆ, ಕರೆನ್ಸಿ ದರವೂ ಕುಸಿಯಬಹುದು.
ಕುಸಿತ ತಡೆಯುವುದು ಹೇಗೆ?
ರೂಪಾಯಿ ಮೌಲ್ಯದಲ್ಲಿ ಗಣನೀಯ ಕುಸಿತವಾದಾಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಧ್ಯಪ್ರವೇಶ ಮಾಡುವುದಕ್ಕೆ ಅವಕಾಶ ಇದೆ. ರೂಪಾಯಿ ಮೌಲ್ಯದ ಸ್ಥಿರತೆ ಕಾಪಾಡಲು ಅದು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ.
ಸಾಮಾನ್ಯವಾಗಿ ತನ್ನ ವಿದೇಶಿ ವಿನಿಯಮ ಮೀಸಲು ಸಂಗ್ರಹದಿಂದ ಡಾಲರ್‌ಗಳನ್ನು ಮಾರಾಟ ಮಾಡಿ ರೂಪಾಯಿ ಮೌಲ್ಯದ ಬಲವರ್ಧನೆಗೆ ಯತ್ನಿಸುತ್ತದೆ. ಡಾಲರ್‌ಗಳ ಮಾರಾಟದಿಂದ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಹೆಚ್ಚಾಗಿ, ಅದಕ್ಕಿರುವ ಬೇಡಿಕೆ ಕಡಿಮೆಯಾಗುತ್ತದೆ. ಆ ಮೂಲಕ ಅದರ ಮೌಲ್ಯದಲ್ಲಿ ಇಳಿಕೆಯಾಗುತ್ತದೆ.
ಅಕ್ಟೋಬರ್‌ನಿಂದೀಚೆಗೆ ಭಾರತದ ವಿದೇಶಿ ವಿನಿಮಯ ಮೀಸಲು ಮೊತ್ತ ಕಡಿಮೆಯಾಗುತ್ತಿದ್ದು, ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ತಡೆಯಲು ಆರ್‌ಬಿಐ ಮಧ್ಯಪ್ರವೇಶಿಸಿರುವುದನ್ನುಇದು ತೋರಿಸುತ್ತದೆ ಎಂದು ಕರೆನ್ಸಿ ತಜ್ಞರು ಪ್ರತಿಪಾದಿಸುತ್ತಿದ್ದಾರೆ.
ಈ ವರ್ಷದ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಭಾರತದ ವಿದೇಶಿ ವಿನಿಮಯ ಮೀಸಲು ಮೊತ್ತ ಸಾರ್ವಕಾಲಿಕ ಗರಿಷ್ಠ 70,488 ಕೋಟಿ ಡಾಲರ್‌ಗೆ (₹59 ಲಕ್ಷ ಕೋಟಿ) ಏರಿತ್ತು. ಡಿಸೆಂಬರ್ 20ರ ವೇಳೆಗೆ ಇದು 64,439 ಕೋಟಿ ಡಾಲರ್‌ಗೆ (₹54.78 ಲಕ್ಷ ಕೋಟಿ) ಇಳಿಕೆಯಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ (ಡಿ.13) ವಿದೇಶಿ ವಿನಿಮಯ ಮೀಸಲು ಮೊತ್ತ198 ಕೋಟಿ ಡಾಲರ್ ಕಡಿಮೆಯಾಗಿದೆ. ಈ ಮೀಸಲಿನಲ್ಲಿ ವಿದೇಶಿ ಕರೆನ್ಸಿ ಆಸ್ತಿಗಳು ಸಿಂಹಪಾಲನ್ನು ಹೊಂದಿದ್ದು, ಡಿಸೆಂಬರ್ 13ರ ಅಂಕಿ ಅಂಶಗಳಿಗೆ ಹೋಲಿಸಿದರೆ (56,257 ಕೋಟಿ ಡಾಲರ್ (₹47.70 ಲಕ್ಷ ಕೋಟಿ)) ಡಿ.20ರ ವೇಳೆಗೆ ಈ ಮೊತ್ತವು 55,656 ಕೋಟಿ ಡಾಲರ್‌ಗೆ (₹47.32 ಲಕ್ಷ ಕೋಟಿ) ಇಳಿದಿದೆ.
ಡಾಲರ್ ಮಾರಾಟವು ಒಂದು ಕ್ರಮವಾದರೆ, ರೂಪಾಯಿಯನ್ನು ಹೆಚ್ಚು ಖರೀದಿಸುವುದರ ಮೂಲಕ ಭಾರತದ ಕರೆನ್ಸಿಗೆ ಬೇಡಿಕೆ ಹೆಚ್ಚಿಸಬಹುದು. ಇದು ರೂಪಾಯಿಯ ಬಲವರ್ಧನೆಗೆ ಸಹಾಯ ಮಾಡುತ್ತದೆ.
ಬಡ್ಡಿದರದಲ್ಲಿ ಬದಲಾವಣೆ ತರುವುದು ಇನ್ನೊಂದು ಕ್ರಮ. ಬಡ್ಡಿದರ ಹೆಚ್ಚಳವಾದರೆ ವಿದೇಶಿ ಹೂಡಿಕೆದಾರರು ದೇಶದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಇದು ಕೂಡ ರೂಪಾಯಿಗೆ ಬೇಡಿಕೆ ಸೃಷ್ಟಿಸುತ್ತದೆ.
ಪರಿಣಾಮ ಏನೇನು?
ರೂಪಾಯಿ ಮೌಲ್ಯ ಕುಸಿತದಿಂದಾಗಿ ಕಚ್ಚಾ ತೈಲದಂತಹ ಅತ್ಯಂತ ಅವಶ್ಯಕವಾದ ಸರಕುಗಳ ಆಮದು ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಹಣದುಬ್ಬರ ಏರಿಕೆಯಾಗುತ್ತದೆ. ಇದು ಜನರ ಜೇಬಿಗೆ
ಹೊರೆ ಉಂಟು ಮಾಡುತ್ತದೆ.
ವಿದೇಶದ ಸೇವೆಗಳಿಗೂ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಉದಾಹರಣೆಗೆ ಅಮೆರಿಕ ಅಥವಾ ಬೇರೆ ದೇಶಗಳಿಗೆ ಪ್ರವಾಸ ಹೋಗುವವರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅದೇ ರೀತಿ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ವೆಚ್ಚದಲ್ಲೂ ಏರಿಕೆಯಾಗುತ್ತದೆ.
ವಿದೇಶದಿಂದ ಸಾಲ ಪಡೆದ ಭಾರತೀಯ ಕಂಪನಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಡಾಲರ್ ಮೌಲ್ಯ ಏರಿಕೆಯಿಂದ ಸಾಲದ ಕಂತಿನ ಮೊತ್ತ ಹೆಚ್ಚಾಗುತ್ತದೆ. ಇದರಿಂದಾಗಿ ಕಂಪನಿಯ ಬ್ಯಾಲೆನ್ಸ್ ಶೀಟ್ ಮೇಲೆ ಮತ್ತು ಅವುಗಳು ಮಾಡುವ ಹೂಡಿಕೆಯ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತವೆ.
ರೂಪಾಯಿ ಮೌಲ್ಯ ಕುಸಿತದಿಂದ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುವ ಸಂದರ್ಭವೂ ಇರುತ್ತದೆ. ಇದು ವಿದೇಶಿ ನೇರ ಬಂಡವಾಳ ಹೂಡಿಕೆ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಣದುಬ್ಬರದ ಹೆಚ್ಚಳ, ಬಂಡವಾಳ ಹೂಡಿಕೆ ಕಡಿಮೆಯಾಗುವುದರಿಂದ ಒಟ್ಟಾರೆಯಾಗಿ ದೇಶದ ಅರ್ಥಿಕ ಪ್ರಗತಿ ಕುಂಠಿತವಾಗುತ್ತದೆ. ಈ ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿಯು ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯಲು ಪ್ರಮುಖ ಕಾರಣ ಹಣದುಬ್ಬರ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ರಫ್ತು ವಲಯಕ್ಕೆ ಅನುಕೂಲ
ರೂಪಾಯಿ ದುರ್ಬಲಗೊಳ್ಳುವುದು ದೇಶದ ಅರ್ಥವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಜವಾದರೂ, ಇದರಿಂದ ರಫ್ತು ವಲಯಕ್ಕೆ ಅನುಕೂಲವಾಗುತ್ತದೆ ಎಂಬುದು ಆರ್ಥಿಕ ತಜ್ಞರ ವಾದ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಬಹುದು. ಇದರಿಂದಾಗಿ ಭಾರತದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ದೇಶಗಳ ನಡುವಿನ ವ್ಯಾಪಾರ ಕೊರತೆಯ ಅಂತರ ಕಡಿಮೆಯಾಗುತ್ತದೆ. ವಿದೇಶಿ ಕಂಪನಿಗಳು ಡಾಲರ್‌ನಲ್ಲಿ ಹಣ ಪಾವತಿ ಮಾಡುವುದರಿಂದ ಭಾರತದ ಕಂಪನಿಗಳು ರೂಪಾಯಿ ಲೆಕ್ಕದಲ್ಲಿ ಹೆಚ್ಚು ಹಣ ಗಳಿಸುತ್ತವೆ. ಭಾರತೀಯ ಐಟಿ ವಲಯ, ವಾಹನ ಉದ್ಯಮ, ಫಾರ್ಮಾ, ಆಭರಣ, ಬೆಲೆಬಾಳುವ ರತ್ನಗಳನ್ನು ರಫ್ತು ಮಾಡುವ ಕಂಪನಿಗಳು ಹೆಚ್ಚು ಲಾಭ ಪಡೆಯುತ್ತವೆ.
ರೂಪಾಯಿ ಮೌಲ್ಯ ಕಡಿಮೆಯಾದರೆ ವಿದೇಶದಲ್ಲಿ ನೆಲಸಿರುವ ಭಾರತೀಯರಿಗೆ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಹಣ ಸಿಗುತ್ತದೆ. ಆ ಹಣ ಭಾರತಕ್ಕೆ ರವಾನೆಯಾದರೆ, ದೇಶದ ಅರ್ಥವ್ಯವಸ್ಥೆಗೂ ಒಳ್ಳೆಯದು ಎನ್ನುವ ವಾದವೂ ಇದೆ.
ಆಧಾರ: ಪಿಟಿಐ, ರಾಯಿಟರ್ಸ್, ಆರ್‌ಬಿಐ ವೆಬ್‌ಸೈಟ್, ರಾಜ್ಯಸಭೆಯಲ್ಲಿ ಸಚಿವರ ಉತ್ತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.