ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಚುನಾವಣಾ ಆಯೋಗವು, ‘ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಅಥವಾ ಸಮಗ್ರ ಪರಿಷ್ಕರಣೆ ನಡೆಸುವ ಬಗ್ಗೆ ಆಯೋಗ ಮಾತ್ರ ನಿರ್ಧಾರ ಕೈಗೊಳ್ಳಬಹುದು. ಅಂತಹ ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರ ಆಯೋಗಕ್ಕೆ ಇದೆ’ ಎಂದು ಹೇಳಿತ್ತು. ಅಲ್ಲದೇ, ‘ಎಸ್‌ಐಆರ್ ಅನ್ನು ಯಾವಾಗ ಮತ್ತು ಹೇಗೆ ನಡೆಸಬೇಕು ಎಂಬ ನಿರ್ಧಾರ ಕೈಗೊಳ್ಳುವ ಸಂಬಂಧ ಆಯೋಗಕ್ಕಿರುವ ‘ವಿಶೇಷ ಅಧಿಕಾರ ವ್ಯಾಪ್ತಿ’ಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬಾರದು’ ಎಂದೂ ಹೇಳಿತ್ತು.
ಸಂವಿಧಾನದ 324ನೇ ವಿಧಿ, 1950ರ ಜನ ಪ್ರಾತಿನಿಧ್ಯ ಕಾಯ್ದೆಯ 21ನೇ ಸೆಕ್ಷನ್ ಮತ್ತು 1960ರ ಮತದಾರರ ನೋಂದಣಿ ನಿಯಮಾವಳಿಗಳು ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ಅಧಿಕಾರವನ್ನು ಆಯೋಗಕ್ಕೆ ನೀಡಿವೆ ಎಂಬುದು ಅದರ ವಾದ.
ಜನ ಪ್ರಾತಿನಿಧ್ಯ ಕಾಯ್ದೆಯ 21ನೇ ಸೆಕ್ಷನ್ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಪರಿಷ್ಕರಣೆ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಿದೆ. ಈ ಸೆಕ್ಷನ್‌ನ 3ನೇ ಉಪ ಸೆಕ್ಷನ್ ವಿಶೇಷ ಪರಿಷ್ಕರಣೆಯ ಬಗ್ಗೆ ಪ್ರಸ್ತಾಪಿಸುತ್ತದೆ. ಆಯೋಗವು ಯಾವಾಗ ಬೇಕಾದರೂ ನಿರ್ದಿಷ್ಟ ಕಾರಣಗಳಿಗಾಗಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಬಹುದು ಎಂದು ಅದು ಹೇಳುತ್ತದೆ.
ಆದರೆ, ಮತದಾರರ ನೋಂದಣಿ ಹಾಗೂ ಇತರ ವಿಚಾರಗಳಲ್ಲಿ ಆಯೋಗವು ನಿಯಮ ಪಾಲನೆ ಮಾಡದೇ ಇದ್ದಾಗ ಸುಪ್ರೀಂ ಕೋರ್ಟ್ ಮಧ್ಯಪ್ರದೇಶಿಸಿದ ಉದಾಹರಣೆಗಳಿವೆ.
– 1978ರ ಮೋಹಿಂದರ್ ಸಿಂಗ್ ಗಿಲ್ ಮತ್ತು ಮುಖ್ಯ ಚುನಾವಣಾ ಆಯುಕ್ತರ ನಡುವಿನ ಪ್ರಕರಣದಲ್ಲಿ ಸಂವಿಧಾನದ 324ರ ವಿಧಿಯ ಅಡಿಯಲ್ಲಿ ಆಯೋಗಕ್ಕೆ ಇರುವ ಅಧಿಕಾರವನ್ನು ನ್ಯಾಯಸಮ್ಮತವಾಗಿ ಮತ್ತು ತರ್ಕಬದ್ಧವಾಗಿ ಬಳಸಬೇಕೇ ವಿನಾ, ಮನಸೋಇಚ್ಛೆ ಅಥವಾ ದುರುದ್ದೇಶಪೂರಿತವಾಗಿ ಬಳಸಬಾರದು ಎಂದು ಹೇಳಿತ್ತು. ಅಲ್ಲದೇ, ಚುನಾವಣಾ ಆಯೋಗಕ್ಕೆ ಸಂವಿಧಾನಬದ್ಧ ಅಧಿಕಾರ ಇದ್ದಾಗ್ಯೂ ಅವುಗಳು ಪರಮಾಧಿಕಾರವಲ್ಲ ಮತ್ತು ಅವು ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತವೆ ಎಂದು ಪ್ರತಿಪಾದಿಸಿತ್ತು.
–1985ರ ಲಕ್ಷ್ಮೀಚರಣ್ ಸೇನೆ ಮತ್ತು ಎ.ಕೆ.ಎಂ. ಹಸನ್ ಉಝ್ಝಾಮನ್ ಪ್ರಕರಣದಲ್ಲಿ, ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ನಡೆಸಬೇಕಾದರೆ ಸಮರ್ಪಕವಾದ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯದ ಬಗ್ಗೆ ಸುಪ್ರೀಂ ಕೋರ್ಟ್ ಒತ್ತಿ ಹೇಳಿತ್ತು. ನಿರ್ದಿಷ್ಟ ಕಾರ್ಯವಿಧಾನಗಳನ್ನು ಅನುಸರಿಸದೇ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಸಾಮೂಹಿಕವಾಗಿ ತೆಗೆದುಹಾಕುವುದು ಸಹಜ ನ್ಯಾಯದ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
– ಲಾಲ್ ಬಾಬು ಹುಸೇನ್ ಮತ್ತು ಚುನಾವಣಾ ನೋಂದಣಿ ಅಧಿಕಾರಿ (1995) ಪ್ರಕರಣದಲ್ಲಿ ಆಯೋಗದ ಕ್ರಮವು ನಿರ್ದಿಷ್ಟ ವರ್ಗಗಳ ಮೇಲೆ ಪರಿಣಾಮ ಬೀರುವಂತಿರಬಾರದು ಎಂದು ಹೇಳಿತ್ತು .
ಎಸ್‌ಐಆರ್ ವಿರುದ್ಧ ಪ್ರಮುಖ ಆಕ್ಷೇಪಗಳು
ವಿದೇಶಗಳಿಂದ ಅಕ್ರಮವಾಗಿ ನುಸುಳುಕೋರರು ದೇಶದೊಳಗೆ ಪ್ರವೇಶಿಸಿರುವುದು ಸೇರಿದಂತೆ ಹಲವು ಕಾರಣಗಳಿಂದ ಎಸ್‌ಐಆರ್ ಅಗತ್ಯ ಎನ್ನುವುದು ಚುನಾವಣಾ ಆಯೋಗದ ಸಮರ್ಥನೆ. ಆದರೆ, ಅದಕ್ಕೆ ಹಲವು ವಲಯಗಳಿಂದ ವಿರೋಧ ವ್ಯಕ್ತವಾಗಿದೆ. ಅವರ ಮುಖ್ಯ ಪ್ರತಿಪಾದನೆಗಳು ಇಂತಿವೆ:
* ಕೇಂದ್ರ ಸರ್ಕಾರವು ಐಸ್‌ಐಆರ್ ಮುಸುಕಿನಲ್ಲಿ ತನ್ನ ಕಾರ್ಯಸೂಚಿಯನ್ನು ಜಾರಿಗೆ ತರಲು ಹೊರಟಿದೆ; ನಿರ್ದಿಷ್ಟ ಧರ್ಮ/ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ
* ಪಶ್ಚಿಮ ಬಂಗಾಳ, ಅಸ್ಸಾಂನಂಥ ಕೆಲವು ರಾಜ್ಯಗಳನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿ ಮಾಡುವ ಪರೋಕ್ಷ ಪ್ರಯತ್ನ ಇದಾಗಿದೆ
* ಅಲ್ಪಸಂಖ್ಯಾತರು, ಅಲಕ್ಷಿತ ಸಮುದಾಯಗಳು, ಗ್ರಾಮೀಣ ಭಾಗದ ಬಡವರು, ಅನಕ್ಷರಸ್ಥರು, ವಲಸೆ ಕಾರ್ಮಿಕರ ಮತದಾನದ ಹಕ್ಕನ್ನು ಕಸಿಯುತ್ತದೆ
* ಸಂಕೀರ್ಣ ಪ್ರಕ್ರಿಯೆ ಮತ್ತು ಹಲವು ದಾಖಲೆಗಳ ಅಗತ್ಯ ಸೃಷ್ಟಿಯ ಮೂಲಕ ಹೆಚ್ಚು ಜನರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವ ಪ್ರಯತ್ನ
* ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಮತದಾರರು ಮತ್ತು ಅವರ ಪೋಷಕರ ದೃಢೀಕರಣದ ದಾಖಲೆಗಳನ್ನು ಕೇಳುವುದು ಸಂವಿಧಾನದ 326ನೇ ವಿಧಿಯ ಉಲ್ಲಂಘನೆಯಾಗಿದೆ
* ಚುನಾವಣಾ ಆಯೋಗವು ಹಲವು ರಾಜ್ಯಗಳಲ್ಲಿ ಹಲವು ಬಾರಿ ಮತದಾರರ ಪಟ್ಟಿಯ ‘ಸಮಗ್ರ ಪರಿಷ್ಕರಣೆ’ (ಇಂಟೆನ್ಸೀವ್ ರಿವಿಷನ್) ಮಾಡಿದ್ದರೂ ಈಗ ‘ವಿಶೇಷ ಸಮಗ್ರ ಪರಿಷ್ಕರಣೆ’ ಮಾಡುತ್ತಿದೆ. ‘ವಿಶೇಷ’ ಎಂದರೆ ಏನು ಮತ್ತು ದೇಶದಾದ್ಯಂತ ಅದು ಏಕೆ ಅಗತ್ಯ ಎನ್ನುವುದನ್ನು ಸೂಕ್ತ ಪುರಾವೆಗಳೊಂದಿಗೆ ಸಾಬೀತುಪಡಿಸುವಲ್ಲಿ ಚುನಾವಣಾ ಆಯೋಗವು ವಿಫಲವಾಗಿದೆ
* ಎಸ್‌ಐಆರ್ ಜನರ ಮತದಾನದ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥದ್ದಾಗಿದ್ದು, ಮುಕ್ತ ಚುನಾವಣೆ ನಡೆಸುವ ಆಶಯಕ್ಕೆ ವಿರುದ್ಧವಾಗಿದೆ
ಬಿಹಾರದಲ್ಲಿ ನಡೆದಿದ್ದೇನು?
ಬಿಹಾರದಲ್ಲಿ ಚುನಾವಣಾ ಆಯೋಗವು 22 ವರ್ಷಗಳ ಬಳಿಕ ಮತದಾರರ ‘ವಿಶೇಷ ಸಮಗ್ರ ಪರಿಷ್ಕರಣೆ’ ಕೈಗೊಂಡಿದೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಹಿಂದೆ, ಅಲ್ಲಿ 2003ರಲ್ಲಿ ಎಸ್‌ಐಆರ್ ನಡೆದಿತ್ತು. ಜುಲೈನಲ್ಲಿ ನಡೆದಿರುವ ಈ ಪರಿಷ್ಕರಣೆಯಲ್ಲಿ ಎಲ್ಲ ಮತದಾರರಿಗೂ ಗಣತಿ ಅರ್ಜಿಯನ್ನು ನೀಡಲಾಗಿತ್ತು. ಮತದಾರರು ಅದರಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಬೇಕಿತ್ತು.
2003ರ ಮತದಾರರ ಪಟ್ಟಿಯಲ್ಲಿದ್ದವರು ತಾವು ರಾಜ್ಯದ ಮತದಾರರು ಎಂಬುದಕ್ಕೆ ಯಾವುದೇ ಆಧಾರ ಅಥವಾ ದಾಖಲೆಯನ್ನು ನೀಡಬೇಕಾಗಿರಲಿಲ್ಲ. 2003ರ ನಂತರ 2024ರವರೆಗೆ ನಡೆದಿದ್ದ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿ ಸಿದವರು ಪೂರಕ ದಾಖಲೆಯನ್ನು ಸಲ್ಲಿಸಬೇಕಾಗಿತ್ತು. ಸಲ್ಲಿಸಬೇಕಾದ 11 ದಾಖಲೆಗಳ ಪಟ್ಟಿಯನ್ನು ಚುನಾವಣಾ ಆಯೋಗ ನೀಡಿತ್ತು. ಇದರಲ್ಲಿ ಆಧಾರ್ ಅನ್ನು ಕೈಬಿಡಲಾಗಿತ್ತು. ಇದು ಹಲವರ ಆಕ್ಷೇಪಕ್ಕೆ ಕಾರಣವಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಆಧಾರ್ ಅನ್ನು ಕೂಡ ಪರಿಗಣಿಸಬೇಕು ಎಂದು ಸೂಚಿಸಿತ್ತು.
ದಾಖಲೆಗಳನ್ನು ಹೊಂದಿಸಲು ಜನರು ವಿಶೇಷವಾಗಿ ಮಹಿಳೆಯರು ಪಡಿಪಾಟಲು ಪಟ್ಟಿರುವ ಬಗ್ಗೆ ವರದಿಯಾಗಿತ್ತು.
ಆಯೋಗವು 65 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟದ್ದಕ್ಕೂ ವಿರೋಧ ವ್ಯಕ್ತವಾಗಿತ್ತು. 65 ಲಕ್ಷ ಜನರ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಆಯೋಗಕ್ಕೆ ಸೂಚಿಸಿತ್ತು.
ಆಧಾರ: ಪಿಟಿಐ, ರಿಸರ್ಚ್‌ಗೇಟ್.ನೆಟ್, ಸುಪ್ರೀಂ ಕೋರ್ಟ್ ಆಬ್ಸರ್ವರ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.