ADVERTISEMENT

ಆಳ–ಅಗಲ | ರಾಜ್ಯದ ಪ್ರಮುಖ ಘಾಟಿಗಳ ಸ್ಥಿತಿಗತಿ; ‘ದೇವಿಮನೆ’ಗೆ ಅಪಾಯ ತಪ್ಪಿದ್ದಲ್ಲ

ಗಣಪತಿ ಹೆಗಡೆ
Published 27 ಮೇ 2025, 23:30 IST
Last Updated 27 ಮೇ 2025, 23:30 IST
<div class="paragraphs"><p>ರಾಷ್ಟ್ರೀಯ ಹೆದ್ದಾರಿ 766ಇ ದಲ್ಲಿ ದೇವಿಮನೆ ಘಾಟಿಗೆ ಸಮೀಪದಲ್ಲಿರುವ ಶಿರಸಿ ತಾಲ್ಲೂಕಿನ ಬೆಣ್ಣೆಹೊಳೆಗೆ ಸೇತುವೆ ನಿರ್ಮಾಣದ ಸಲುವಾಗಿ, ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯು ಭಾರಿ ಮಳೆಗೆ ಕೊಚ್ಚಿಹೋಗಿದೆ.</p></div>

ರಾಷ್ಟ್ರೀಯ ಹೆದ್ದಾರಿ 766ಇ ದಲ್ಲಿ ದೇವಿಮನೆ ಘಾಟಿಗೆ ಸಮೀಪದಲ್ಲಿರುವ ಶಿರಸಿ ತಾಲ್ಲೂಕಿನ ಬೆಣ್ಣೆಹೊಳೆಗೆ ಸೇತುವೆ ನಿರ್ಮಾಣದ ಸಲುವಾಗಿ, ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯು ಭಾರಿ ಮಳೆಗೆ ಕೊಚ್ಚಿಹೋಗಿದೆ.

   

ಕಾರವಾರ: ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಬಂಡೆಗಲ್ಲುಗಳನ್ನು ಸ್ಫೋಟಿಸುವುದರ ಜೊತೆಗೆ, ಅರಣ್ಯ ನಾಶದ ಕಾರಣದಿಂದ ಭೂಕುಸಿತದ ಭೀತಿ ಎದುರಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಘಾಟಿಗಳು ಅಪಾಯದ ಸ್ಥಿತಿಯಲ್ಲಿವೆ.

ಕರಾವಳಿ ಮತ್ತು ಮಲೆನಾಡು ಬೆಸೆಯುವ ಹೆದ್ದಾರಿಗಳು ಹಾದುಹೋಗಿರುವ ಘಾಟಿಗಳಲ್ಲಿ ಭೂಕುಸಿತ ಸಂಭವಿಸಿ ಕಳೆದ ಮಳೆಗಾಲದಲ್ಲಿ ಹಲವು ದಿನ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇ ನಲ್ಲಿರುವ ದೇವಿಮನೆ ಘಟ್ಟವು ಇಂತಹ ಸ್ಥಿತಿಯನ್ನು ಎದುರಿಸಿತ್ತು. ಇಲ್ಲಿ ಹೆದ್ದಾರಿ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ.

ADVERTISEMENT

ಘಟ್ಟದ ಪ್ರದೇಶದಲ್ಲಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಬೃಹತ್ ಗಾತ್ರದ ಯಂತ್ರಗಳ ಮೊರೆತದ ಪರಿಣಾಮ ಮಣ್ಣು, ಕಲ್ಲು ಸಡಿಲಗೊಂಡು ಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಪರಿಸರ ತಜ್ಞರದ್ದು. ಈಚೆಗೆ ಸುರಿದ ಮಳೆಗೆ ದೇವಿಮನೆ ಘಟ್ಟದಲ್ಲಿ ಕೆಲವೆಡೆ ಬಂಡೆಕಲ್ಲು, ಮಣ್ಣು ಕುಸಿದಿದೆ.

ಹುಬ್ಬಳ್ಳಿ–ಅಂಕೋಲಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಯಲ್ಲಾಪುರ ತಾಲ್ಲೂಕಿನ ಅರೆಬೈಲ್ ಘಟ್ಟದಲ್ಲಿ ಮೂರು ವರ್ಷದ ಹಿಂದೆ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿತ್ತು. ಅರಣ್ಯ ಇಲಾಖೆ ಇಲ್ಲಿ ಭೂಕುಸಿತ ತಡೆಗೆ ಗಿಡಗಳನ್ನು ಬೆಳೆಸಿದ್ದರೂ ಆಗಾಗ ಹೆದ್ದಾರಿ ಅಂಚು ಕುಸಿಯುತ್ತಲೇ ಇದೆ.

ಹೊನ್ನಾವರ–ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–69ರಲ್ಲಿ ಹೊನ್ನಾವರ ತಾಲ್ಲೂಕಿನ ಮಲೆಮನೆ ಘಟ್ಟವಿದೆ. ಇಲ್ಲಿಯೂ ಕಳೆದ ಮಳೆಗಾಲದಲ್ಲಿ ಭೂಕುಸಿತದ ಸಮಸ್ಯೆ ಎದುರಾಗಿತ್ತು. ಸದ್ಯ ಅಲ್ಲಿ ಗಂಭೀರ ಸಮಸ್ಯೆ ಇರದಿದ್ದರೂ, ಸಮೀಪದಲ್ಲಿರುವ ಭಾಸ್ಕೇರಿ, ಅಪ್ಸರಕೊಂಡದ ಬಳಿ ಭೂಕುಸಿತದ ಸಮಸ್ಯೆ ತೀವ್ರವಾಗಿದೆ.

‘ಜಿಲ್ಲೆಯ ಹೆದ್ದಾರಿಯಂಚಿನಲ್ಲಿರುವ 19 ಸ್ಥಳಗಳಲ್ಲಿ ಭೂಕುಸಿತ ಸಂಭವಿಸಬಹುದು ಎಂದು ತಜ್ಞರು ವರದಿ ನೀಡಿದ್ದಾರೆ. ಇವುಗಳಲ್ಲಿ ಘಟ್ಟ ಪ್ರದೇಶವೂ ಸೇರಿದೆ. ಅಂತಹ ಸ್ಥಳಗಳಲ್ಲಿ ಜೀವಹಾನಿಯಾಗದಂತೆ ನೋಡಿಕೊಳ್ಳಲು ಸ್ಪಾಟರ್ಸ್ ನಿಯೋಜಿಸಲಾಗುತ್ತಿದೆ. ಕುಸಿತ ಸಂಭವಿಸಿದರೂ ತಕ್ಷಣ ಮಣ್ಣು, ಕಲ್ಲಿನ ರಾಶಿ ತೆರವುಗೊಳಿಸಲು ಯಂತ್ರೋಪಕರಣ, ಸಿಬ್ಬಂದಿ ಸಿದ್ಧವಿಟ್ಟುಕೊಳ್ಳಲಾಗಿದೆ. ಕುಸಿತ ತಡೆಗೆ ಗ್ಯಾಬ್ರಿಯನ್ ವಾಲ್ ನಿರ್ಮಿಸುವ ಯೋಚನೆ ಇದ್ದು, ಅದಕ್ಕೆ ಇನ್ನಷ್ಟು ಸಮಯ ಹಿಡಿಸಲಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

ಶಿರೂರು ಭೂಕುಸಿತದ ದುಃಸ್ವಪ್ನ
2024ರ ಜುಲೈ 16 ರಂದು ಭೂಕುಸಿತ ದುರಂತ ಸಂಭವಿಸಿ 11 ಜನರು ಮೃತಪಟ್ಟಿದ್ದ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಈಗಲೂ ಗುಡ್ಡವು ಅಪಾಯಕಾರಿ ಸ್ಥಿತಿಯಲ್ಲಿಯೇ ಇದೆ. ಅವಘಡ ನಡೆದರೂ ಭೂಕುಸಿತ ತಡೆಗೆ ಇಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಈಚೆಗೆ ಮಳೆ ಸುರಿದ ಬಳಿಕ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಶಿರೂರಿನ 1.5 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಮಾಡದಂತೆ ಪಕ್ಕದಲ್ಲಿ ಹರಿಯುವ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸದಂತೆ ನಿಷೇಧ ಹೊರಡಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.