ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಜೀವನದ ಹಾದಿ
1951ರ ಮಾರ್ಚ್ 9ರಿಂದ 2024ರ ಡಿಸೆಂಬರ್ 16ರ ವರೆಗೆ
* 1951, ಮಾರ್ಚ್ 9ರಂದು ಮುಂಬೈನಲ್ಲಿ ಜನನ. ತಂದೆ ಖ್ಯಾತ ತಬಲಾ ವಾದಕ ಉಸ್ತಾದ್ ಅಲ್ಲಾ ರಖಾ
* ಬಾಲ್ಯದಲ್ಲೇ ಸಂಗೀತ ವೃತ್ತಿ ಜೀವನ ಶುರು. 7 ವರ್ಷ ವಯಸ್ಸಿನಲ್ಲಿ ಮೊದಲ ಪ್ರದರ್ಶನ ನೀಡಿದ ಪೋರ. 12 ವರ್ಷಕ್ಕೆ ಸಂಗೀತ ಕಛೇರಿ ನೀಡಲು ಆರಂಭ
* ಮುಂಬೈನ ಸೇಂಟ್ ಮೈಕೆಲ್ ಪ್ರೌಢಶಾಲೆಯಲ್ಲಿ ಆರಂಭಿಕ ಶಿಕ್ಷಣ. ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ಪದವಿ. ವಾಷಿಂಗ್ಟನ್ ವಿವಿಯಲ್ಲಿ ಸಂಗೀತ ವಿಷಯದಲ್ಲಿ ಪಿಎಎಚ್‌ಡಿ
* ವೃತ್ತಿ ಜೀವನದ ಆರಂಭದಲ್ಲಿ ಸಂಗೀತದ ವಿವಿಧ ಕ್ಷೇತ್ರಗಳ ಸಾಮ್ರಾಟರಾದ ರವಿಶಂಕರ್, ಅಲಿ ಅಕ್ಬರ್ ಖಾನ್ ಮತ್ತು ಶಿವಕುಮಾರ್ ಶರ್ಮಾ ಸೇರಿದಂತೆ ಹಲವರ ಜೊತೆ ಸೇರಿ ಪ್ರದರ್ಶನ ನೀಡಿದ ಅಗ್ಗಳಿಕೆ
* 1973ರಲ್ಲಿ ಅವರು ಹುಟ್ಟುಹಾಕಿದ ‘ಪಾಜೆಕ್ಟ್ ಶಕ್ತಿ’ಯಿಂದ ಜನಪ್ರಿಯತೆ ಉತ್ತುಂಗಕ್ಕೆ. ಈ ಬ್ಯಾಂಡ್‌ನ ಅಡಿಯಲ್ಲಿ ಭಾರತ ಮತ್ತು ಪಾಶ್ಚಿಮಾತ್ಯ ಸಂಗೀತದ ಸಮ್ಮಿಶ್ರಣವನ್ನು ಸಂಗೀತ ಪ್ರೇಮಿಗಳಿಗೆ ಉಣಪಡಿಸಿದ ಜಾಕಿರ್ ಹುಸೇನ್, ಬ್ರಿಟನ್ ಗಿಟಾರ್ ವಾದಕ ಜಾನ್ ಮ್ಯಾಕ್‌ಲಾಗ್ಲಿನ್, ಪಿಟೀಲು ವಾದಕ ಎಲ್ ಶಂಕರ್ ಮತ್ತು ಲಯವಾದ್ಯಗಾರ ಟಿ.ಎಚ್.ವಿಕ್ಕು ವಿನಾಯಕ್ರಂ ತಂಡ
* ಪಾಶ್ಚಿಮಾತ್ಯ ಸಂಗೀತಗಾರರಾದ ಚೆಲೋವಾದಕ (ಸೆಲ್ಲಿಸ್ಟ್) ಯೊ–ಯೊ ಮಾ, ಜಾಸ್ ಸಂಗೀತಗಾರ ಚಾರ್ಲ್ಸ್ ಲಾಯ್ಡ್, ಬ್ಯಾಂಜೋ (ಕೈವೀಣೆ) ವಾದಕ ಬೆಆ ಫ್ಲೆಕ್, ಬೇಸ್ ವಾದ್ಯಗಾರ ಎಡ್ಗರ್ ಮೆಯರ್, ಲಯವಾದ್ಯಗಾರ ಮಿಕಿ ಹಾರ್ಟ್ ಮತ್ತು ದಿ ಬೀಟಲ್ಸ್‌ನ ಜಾರ್ಜ್ ಹಾರಿಸನ್ ಅವರೊಂದಿಗೆ ಸೇರಿ ಮಾಡಿದ ಸಂಗೀತ ಪ್ರಯೋಗಗಳಿಂದಾಗಿ ಭಾರತದ ಶಾಸ್ತ್ರೀಯ ಸಂಗೀತ ಅಂತರರಾಷ್ಟ್ರೀಯ ಮಟ್ಟಕ್ಕೆ. ಹುಸೇನ್ ಅವರಿಗೆ ‘ಜಾಗತಿಕ ಸಾಂಸ್ಕೃತಿಕ ರಾಯಭಾರಿ’ ಎಂಬ ಸ್ಥಾನಮಾನದ ಗೌರವ
* 1988ರಲ್ಲಿ ಬ್ರೂಕ್‌ಬಾಂಡ್‌ನ ‘ತಾಜ್ ಮಹಲ್’ ಚಹಾ ಬ್ರ್ಯಾಂಡ್‌ನ ಜಾಹೀರಾತಿಗೆ ಸಂಗೀತ ಸಂಯೋಜಿಸಿ ನಟಿಸಿ ಗಮನ ಸೆಳೆದ ಉಸ್ತಾದ್
* ಸಿನಿಮಾಗಳಲ್ಲೂ ಮಿಂಚಿದ ಸಂಗೀತ ತಾರೆ. ‘ಇನ್ ಕಸ್ಟಡಿ’, ‘ದಿ ಮಿಸ್ಟಿಕ್ ಮ್ಯಾಸರ್’, ‘ಮಿಸ್ಟರ್ ಆ್ಯಂಡ್ ಮಿಸೆಸ್ ಅಯ್ಯರ್’, ‘ಸಾಜ್’ (ಹಿಂದಿ ಚಿತ್ರ), ‘ಹೀಟ್ ಆ್ಯಂಡ್ ಡಸ್ಟ್’, ‘ಮಿಸ್ ಬಿಟ್ಟೀಸ್ ಚಿಲ್ಡ್ರನ್’ ಮತ್ತು ‘ಮಾಂಟೋ’ ಚಿತ್ರಗಳಿಗೆ ಸಂಗೀತ ನಿರ್ದೇಶನ. ‘ಹೀಟ್ ಆ್ಯಂಡ್ ಡಸ್ಟ್’, ‘ದಿ ಪರ್ಫೆಕ್ಟ್ ಮರ್ಡರ್’, ‘ಜಾಸ್’ ಸಿನಿಮಾಗಳಲ್ಲಿ ನಟನೆ
* 1990ರಲ್ಲಿ ಸಂಗೀತ ನಾಟಕ ಅಕಾಡೆಮಿ ಗೌರವ, 2018ರಲ್ಲಿ ಅಕಾಡೆಮಿ ಫೆಲೋಶಿಪ್
* 1996ರಲ್ಲಿ ಅಟ್ಲಾಂಟದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ಸಂಗೀತ ಸಂಯೋಜನೆ
* 1999ರಲ್ಲಿ ಅಮೆರಿಕದ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್‌ನ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್‌ಗೆ ಭಾಜನ (ಕಲಾವಿದರೊಬ್ಬರಿಗೆ ಅಮೆರಿಕದಲ್ಲಿ ಕೊಡಮಾಡುವ ಜೀವಮಾನದ ಅತ್ಯುನ್ನತ ಗೌರವ ಇದು)
* ಪ್ರತಿಷ್ಠಿತ ಪ್ರಿನ್ಸ್‌ಟನ್ ವಿವಿ ಮತ್ತು ಸ್ಟ್ಯಾನ್‌ಫೋರ್ಡ್ ವಿವಿ ಸೇರಿದಂತೆ ಜಾಗತಿಕ ಮಟ್ಟದಲ್ಲಿ ವಿವಿಧ ಕಡೆಗಳಲ್ಲಿ ತಬಲಾ ತರಬೇತಿ ಕಾರ್ಯಾಗಾರ ನೀಡಿ ನೂರಾರು ಶಿಷ್ಯರಿಗೆ ಮಾರ್ಗದರ್ಶನ ನೀಡಿದ ಕಲಾವಿದ
* 2016ರಲ್ಲಿ ಅಮೆರಿಕದ ಶ್ವೇತಭವನದಲ್ಲಿ ‘ಆಲ್ ಸ್ಟಾರ್ ಗ್ಲೋಬಲ್’ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧ್ಯಕ್ಷ ಬರಾಕ್ ಒಬಾಮ ಆಮಂತ್ರಣ. ಈ ಆಹ್ವಾನ ಪಡೆದ ಭಾರತದ ಮೊದಲ ಸಂಗೀತಗಾರ ಎಂಬ ಹೆಗ್ಗಳಿಕೆ
* ಜಾಗತಿಕ ಸಂಗೀತ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಾಗಿ 2017ರಲ್ಲಿ ‘ಎಸ್‌ಎಫ್ ಜಾಸ್ ಜೀವಮಾನ ಸಾಧನೆ ಪ್ರಶಸ್ತಿ’ಯ ಗೌರವ
* ಸಂಗೀತ ಕ್ಷೇತ್ರದಲ್ಲಿ ಮಾಡಿದ ಜೀವಮಾನ ಸಾಧನೆಗಾಗಿ ಒಮಾನ್‌ನಲ್ಲಿ 2022ರಲ್ಲಿ ಆಗಾ ಖಾನ್ ಪ್ರಶಸ್ತಿಯ ಗರಿ
* ವಿಜ್ಞಾನ ಮತ್ತು ಕಲಾ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ನೀಡಲಾಗುವ ಜಪಾನಿನ ಪ್ರತಿಷ್ಠಿತ ಕ್ಯೋಟೋ ಬಹುಮಾನಕ್ಕೆ 2022ರಲ್ಲಿ ಆಯ್ಕೆ
* ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಭಾಜನರಾದ ಹಿರಿಮೆ. 1998ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ 2023ರಲ್ಲಿ ಪದ್ಮ ವಿಭೂಷಣದ ಗೌರವ
* ನಾಲ್ಕು ಗ್ರ್ಯಾಮಿ ಪುರಸ್ಕಾರಗಳ ಗೌರವ. 1991ರಲ್ಲಿ ಆಲ್ಬಂ ಪ್ಲಾನೆಟ್ ಡ್ರಮ್‌ಗಾಗಿ ಮೊದಲ ಬಾರಿ ಪುರಸ್ಕಾರ. ಈ ವರ್ಷ (2024) ಮೂರು ಗ್ರ್ಯಾಮಿ ಪುರಸ್ಕಾರಗಳಿಗೆ (ಉತ್ತಮ ಜಾಗತಿಕ ಸಂಗೀತ ಪ್ರದರ್ಶನ ವಿಭಾಗದಲ್ಲಿ ‘ಪಾಶ್ಟೊ’ಗೆ, ‘ಆ್ಯಸ್ ವಿ ಸ್ಪೀಕ್‌ಗೆ’ ಉತ್ತಮ ಸಮಕಾಲೀನ ಸಂಗೀತ ವಾದ್ಯ ಆಲ್ಬಂ ವಿಭಾಗದಲ್ಲಿ ಮತ್ತು ‘ದಿಸ್ ಮೊಮೆಂಟ್’ಗೆ ಉತ್ತಮ ಜಾಗತಿಕ ಸಂಗೀತ ಆಲ್ಬಂ ವಿಭಾಗದಲ್ಲಿ) ಭಾಜನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.