
ಪ್ರಾತಿನಿಧಿಕ ಚಿತ್ರ
ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟರ್ಜಿ ಅವರು ‘ವಂದೇ ಮಾತರಂ’ ಅನ್ನು ಮೊದಲು ಬರೆದಾಗ ಇದ್ದದ್ದು ಎರಡೇ ಪ್ಯಾರಾ. ಹಲವು ವರ್ಷಗಳ ನಂತರ ಅದು ‘ಆನಂದಮಠ’ ಕಾದಂಬರಿಯ ಭಾಗವಾಗಿ ಪ್ರಕಟವಾದಾಗ ಅದರ ಸ್ವರೂಪ ಬದಲಾಗಿತ್ತು; ಮತ್ತಷ್ಟು ಪ್ಯಾರಾಗಳು ಅದಕ್ಕೆ ಸೇರ್ಪಡೆಯಾಗಿದ್ದವು. ತಾಯ್ನೆಲವನ್ನು ದೇವಿ ದುರ್ಗೆಯೊಂದಿಗೆ ಮೂರ್ತೀಕರಿಸಲಾಗಿತ್ತು. ಕಾದಂಬರಿಯ ಸ್ತುತಿಗೀತೆಯು ಸ್ವಾತಂತ್ರ್ಯ ಹೋರಾಟದ ಘೋಷಣೆಯಾಯಿತು; ಹೋರಾಟದ ಹಾಡಾಗಿ ಜನಪ್ರಿಯವಾಯಿತು. ಪಶ್ಚಿಮ ಬಂಗಾಳದ ರಾಜಕಾರಣ ಮತ್ತು ದೇಶದ ರಾಜಕಾರಣ ಬದಲಾದಂತೆ ವಿವಿಧ ಅರ್ಥಗಳನ್ನು, ನಿರ್ದಿಷ್ಟ ಸಾಂಸ್ಕೃತಿಕ ಸ್ವರೂಪವನ್ನು ಪಡೆಯುತ್ತಾ ಸಾಗಿತು. ಚರಿತ್ರೆಯ ವಸ್ತುವೊಂದು ರಾಜಕಾರಣದ ಹುದಲಿನಲ್ಲಿ ಸಿಲುಕಿ ವರ್ತಮಾನದಲ್ಲಿಯೂ ವಿವಾದದ ಜ್ವಾಲೆ ಹೊಮ್ಮಿಸುತ್ತಲೇ ಇದೆ
ಖ್ಯಾತ ಬಂಗಾಳಿ ಲೇಖಕರಾಗಿದ್ದ ಬಂಕಿಮಚಂದ್ರ ಚಟರ್ಜಿ ಅವರು 1874ರಲ್ಲಿ ‘ಬಂಗದರ್ಶನ್’ ಎನ್ನುವ ಸಾಹಿತ್ಯ ಪತ್ರಿಕೆಯಲ್ಲಿ ವಿಗ್ರಹಾರಾಧನೆಯ ಬಗ್ಗೆ ಲೇಖನವೊಂದನ್ನು ಬರೆದಿದ್ದರು. ವಿಗ್ರಹಾರಾಧನೆಯು ಜ್ಞಾನ–ವಿಜ್ಞಾನದ ವಿರೋಧಿ ಎಂದು ಪ್ರತಿಪಾದಿಸಿದ್ದ ಅವರು, ಜ್ಞಾನದ ಬೆಳವಣಿಗೆಯನ್ನು ಉತ್ತೇಜಿಸಿದ ಗ್ರೀಕ್ ತತ್ವಜ್ಞಾನಿಗಳಾಗಲಿ, ವಿಜ್ಞಾನಿಗಳಾಗಲಿ, ಆರ್ಯನ್ ಸಾಧುಗಳಾಗಲಿ ವಿಗ್ರಹಾರಾಧನೆಯ ಪರವಾಗಿರಲಿಲ್ಲ ಎಂದು ಲೇಖನದಲ್ಲಿ ಉಲ್ಲೇಖಿಸಿದ್ದರು. ಸುಮಾರು ಅದೇ ಅವಧಿಯಲ್ಲಿಯೇ (1875) ಅವರು ‘ವಂದೇ ಮಾತರಂ’ (ನಮಿಸುವೆ ಮಾತೆಗೆ) ಗೀತೆಯ ಮೊದಲ ಎರಡು ಪ್ಯಾರಾಗಳನ್ನು ಬರೆದರು. ಅವುಗಳಲ್ಲಿ ಮೂರ್ತಿಪೂಜೆಯ ಉಲ್ಲೇಖ ಇರಲಿಲ್ಲ. ಅದನ್ನು ಅವರು ಎಲ್ಲಿಯೂ ಪ್ರಕಟಿಸಲಿಲ್ಲ.
ಬಂಕಿಮಚಂದ್ರರ ‘ಅನಂದಮಠ’ ಕಾದಂಬರಿಯು 1881ರಲ್ಲಿ ‘ಬಂಗದರ್ಶನ್’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ಅಪಾರ ಜನಪ್ರಿಯತೆ ಪಡೆಯಿತು. ಬಂಗಾಳದಲ್ಲಿ ತೀವ್ರ ಬರಗಾಲ, ರೈತರ ಸಂಕಷ್ಟ ಇದ್ದ ಕಾಲದ (1770) ಕಥಾವಸ್ತುವನ್ನು ಹೊಂದಿದ್ದ ಕಾದಂಬರಿಯು, ಫಕೀರರು–ಸನ್ಯಾಸಿಗಳು ಈಸ್ಟ್ ಇಂಡಿಯಾ ಕಂಪನಿಯ ಗುಲಾಮನಂತಿದ್ದ ನವಾಬನ ವಿರುದ್ಧ ಹೋರಾಡುವುದರ ಕಥನವಾಗಿತ್ತು. ವಿಶೇಷ ಏನೆಂದರೆ, ಅವರು ಈ ಹಿಂದೆ ಬರೆದಿದ್ದ ‘ವಂದೇ ಮಾತರಂ’ ಹಾಡು ಕಾದಂಬರಿಯಲ್ಲಿ ಸ್ಥಾನ ಪಡೆದಿತ್ತು. ಅವರ ಗೀತೆಯಲ್ಲಿ ಮೂಲದ ಎರಡು ಪ್ಯಾರಾಗಳ ಜತೆಗೆ ಹೊಸದಾಗಿ ಎರಡು ಪ್ಯಾರಾ ಸೇರಿದ್ದವು ಮತ್ತು ಮುಖ್ಯವಾಗಿ, ವಿಗ್ರಹಾರಾಧನೆಯ ಉಲ್ಲೇಖವಿತ್ತು. ಕಾದಂಬರಿಯ ಕೊನೆಯಲ್ಲಿ ಸನ್ಯಾಸಿಗಳು ಗೀತೆಯನ್ನು ಹಾಡುತ್ತಾರೆ. ಗದ್ಯ–ಪದ್ಯ ಮಿಶ್ರಿತ ಶೈಲಿಯಲ್ಲಿ, ದೇವಿ ದುರ್ಗೆಯನ್ನು ತಾಯಿಯೊಂದಿಗೆ (ದೇಶ) ಸಮೀಕರಿಸಿ, ಆ ತಾಯಿಯ ಪ್ರಾಕೃತಿಕ ವೈಭವ ಮತ್ತು ಶಕ್ತಿ ಸಾಮರ್ಥ್ಯಗಳನ್ನು ಅವರು ಚಿತ್ರಿಸಿದ್ದರು. ತಾಯಿಯ ಉಗ್ರರೂಪವನ್ನೂ ಗೀತೆಯಲ್ಲಿ ವರ್ಣಿಸಿದ್ದರು. ಬಂಕಿಮಚಂದ್ರರು ತಮ್ಮ ಸ್ವಾತಂತ್ರ್ಯ ಹೋರಾಟದ ಕಥಾವಸ್ತುವಿನ ಕೃತಿಯಲ್ಲಿ ಹಿಂದೂ ಧಾರ್ಮಿಕ ಪ್ರತಿಮೆಗಳಿರುವ ಗೀತೆಯನ್ನು ಬಳಸಿದ್ದರು.
ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದ್ದ, ಸ್ವಾತಂತ್ರ್ಯ ಹೋರಾಟವು ಹಬ್ಬುತ್ತಿದ್ದ ಕಾಲ ಅದು. ಈ ಚಾರಿತ್ರಿಕ ಸಂದರ್ಭದಲ್ಲಿ ಸಹಜವಾಗಿಯೇ ‘ವಂದೇ ಮಾತರಂ’ ಗೀತೆಯೂ ನಿಧಾನಕ್ಕೆ ಜನಪ್ರಿಯವಾಗತೊಡಗಿತ್ತು. 1896ರ ಕಾಂಗ್ರೆಸ್ ಸಮಾವೇಶದಲ್ಲಿ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಬ್ರಿಟಿಷರು 1905ರಲ್ಲಿ ಹಿಂದೂ–ಮುಸ್ಲಿಂ ಜನಸಂಖ್ಯಾ ಬಾಹುಳ್ಯದ ಆಧಾರದಲ್ಲಿ ಬಂಗಾಳವನ್ನು ವಿಭಜಿಸಲು ಮುಂದಾದರು. ಈ ಸಂದರ್ಭದಲ್ಲಿ ‘ವಂದೇ ಮಾತರಂ’ ಮತ್ತಷ್ಟು ಜನಪ್ರಿಯತೆ ಪಡೆಯಿತು. ಜನ ಅದನ್ನು ವ್ಯಾಪಕವಾಗಿ ಹಾಡತೊಡಗಿದರು. 1920ರ ಹೊತ್ತಿಗೆ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದ ಅದು, ರಾಷ್ಟ್ರೀಯವಾದಿಗಳ ನೆಚ್ಚಿನ ಹಾಡಾಗಿ ಬದಲಾಗಿತ್ತು.
ಮುಸ್ಲಿಂ ವಿರೋಧ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ವಂದೇ ಮಾತರಂ’ ಅನ್ನು ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಗೀತೆಯಾಗಿ ಬಳಸುತ್ತಿತ್ತು. ಹಿಂದೂಗಳು ಕೋಮು ಹಿಂಸಾಚಾರದ ಸಂದರ್ಭದಲ್ಲಿ ಈ ಹಾಡನ್ನು ಬಳಸುತ್ತಿದ್ದರು. ಈ ದಿಸೆಯಲ್ಲಿ ಬಂಕಿಮಚಂದ್ರರ ಜೀವಿತಾವಧಿಯಲ್ಲಿಯೇ ಗೀತೆಗೆ ಮುಸ್ಲಿಂ ಸಮುದಾಯದ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಮುಸ್ಲಿಂ ಅರಸರ ವಿರುದ್ಧ ಹಿಂದೂಗಳ ಹೋರಾಟವನ್ನು ‘ಆನಂದಮಠ’ ಕಾದಂಬರಿಯಲ್ಲಿ ವೈಭವೀಕರಿಸಲಾಗಿದೆ ಎನ್ನುವ ವಿಶ್ಲೇಷಣೆಯೂ ಕೇಳಿಬಂದಿತ್ತು. ಜತೆಗೆ, ಹಿಂದೂ ದೇವತೆಯ ಪ್ರಸ್ತಾಪ, ವರ್ಣನೆ ಇರುವ ಗೀತೆಯಲ್ಲಿ ತಾಯ್ನಾಡನ್ನು ದೈವೀಕರಿಸಿರುವುದರ ಬಗ್ಗೆ ಮುಸ್ಲಿಮರಿಂದ ವಿರೋಧದ ಧ್ವನಿಗಳು ಕೇಳಿಬಂದವು. ಸ್ವಾತಂತ್ರ್ಯ ಹೋರಾಟವು ಎಲ್ಲ ಸಮುದಾಯಗಳ ಹೋರಾಟವಾಗಿದ್ದು, ಅಂಥ ಹೋರಾಟದಲ್ಲಿ ಈ ಗೀತೆ ಹಾಡುವುದು ಮುಸ್ಲಿಮರಿಗೆ ಇರಿಸುಮುರುಸು ಉಂಟುಮಾಡುತ್ತದೆ, ಅವರನ್ನು ಹೋರಾಟದಿಂದ ಹೊರಗಿಡುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಆದರೆ, ಶಾಲೆಗಳಲ್ಲಿ ಎಲ್ಲ ಧರ್ಮದ ಮಕ್ಕಳೂ ‘ವಂದೇ ಮಾತರಂ’ ಹಾಡುವುದನ್ನು ಕಾಂಗ್ರೆಸ್ ಕಡ್ಡಾಯ ಮಾಡಿತು. ಇದರಿಂದ ಮುಸ್ಲಿಮರ ಅಸಮಾಧಾನ ಹೆಚ್ಚಾಗುತ್ತಾ ಸಾಗಿ, ಮುಸ್ಲಿಂ ಲೀಗ್ ಪ್ರವೇಶದೊಂದಿಗೆ ಅದು ಮತ್ತಷ್ಟು ಸಂಕೀರ್ಣ ಸ್ವರೂಪ ಪಡೆಯಿತು.
ರಾಜಕೀಯ ಲೇಪ: ‘ವಂದೇ ಮಾತರಂ’ ಗೀತೆಯು ‘ಆನಂದಮಠ’ ಕಾದಂಬರಿಯಲ್ಲಿ ಸ್ಥಾನ ಪಡೆದ ದಿನದಿಂದಲೂ ಆಯಾ ಕಾಲಮಾನದ ರಾಜಕೀಯ, ಆಡಳಿತ ವ್ಯವಸ್ಥೆಗೆ ತಕ್ಕಂತೆ ಹಲವು ಸ್ವರೂಪಗಳನ್ನು ಪಡೆಯುತ್ತಲೇ ಬಂದಿದೆ. ಬಂಕಿಮಚಂದ್ರರು ತಮ್ಮ ಹಿಂದೂ ಧಾರ್ಮಿಕ ಹಿನ್ನೆಲೆಗನುಗುಣವಾಗಿ ಬರೆದ ಸ್ತುತಿಗೀತೆಯು ತನ್ನ ಗೇಯಗುಣ, ಭಾವತೀವ್ರತೆ, ಆಕರ್ಷಕ ಶೈಲಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಸೆಳೆಯಲು ಬಳಕೆಯಾಯಿತು. ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಹುಟ್ಟು ಪಡೆದ ನಂತರ ಅದರ ಕೋಮು ಆಯಾಮಕ್ಕೆ ಹೆಚ್ಚು ಒತ್ತು ಸಿಕ್ಕಿತು.
ಸ್ವಾತಂತ್ರ್ಯಪೂರ್ವದಲ್ಲಿ ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡುವ ಚಿಂತನೆ ಕೆಲವರಲ್ಲಿತ್ತು. ಐದು ಪ್ಯಾರಾಗಳ ಹಾಡನ್ನು ಎರಡು ಪ್ಯಾರಾಗಳಿಗೆ ಇಳಿಸುವ ನಿರ್ಧಾರವನ್ನು ನೆಹರೂ ಅವರನ್ನೊಳಗೊಂಡತೆ ಅಂದಿನ ನಾಯಕರು ಕೈಗೊಂಡಿದ್ದರು. ಅದರ ಜನಪ್ರಿಯತೆ, ಸ್ಫೂರ್ತಿಗುಣವನ್ನು ಅರಿತಿದ್ದ ನೆಹರೂ ಅವರು, ಸ್ವಾತಂತ್ರ್ಯಾ ನಂತರ ಅದನ್ನು ರಾಷ್ಟ್ರೀಯ ಹಾಡನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮುಂದೆ, ಹಾಡಿನ ಸುತ್ತ ಚರ್ಚೆಗಳು ಚಾಲ್ತಿಯಲ್ಲಿದ್ದರೂ, ಅದು ತೀವ್ರಗೊಂಡದ್ದು ರಾಷ್ಟ್ರೀಯವಾದಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ. 2026ರ ಮಾರ್ಚ್–ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಈಗಿನಿಂದಲೇ ನೆಲ ಹದಗೊಳಿಸುವ ಪ್ರಯತ್ನವಾಗಿ ಬಂಕಿಮಚಂದ್ರ ಮತ್ತು ‘ವಂದೇ ಮಾತರಂ’ ಮೂಲಕ ಹಿಂದೂ ಕಾರ್ಯಸೂಚಿಯನ್ನು ಮುನ್ನೆಲೆಗೆ ತರುತ್ತಿದೆ ಎನ್ನುವ ವಿಶ್ಲೇಷಣೆಗಳಿವೆ.
ಕಲ್ಕತ್ತದಲ್ಲಿ 1896ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 12ನೇ ಸಮಾವೇಶದಲ್ಲಿ ರವೀಂದ್ರ ನಾಥ ಟ್ಯಾಗೋರ್ ಅವರು ಮೊದಲ ಬಾರಿಗೆ ಈ ಗೀತೆಯನ್ನು ಹಾಡಿದಾಗ, ರಹೀಮುತುಲ್ಲಾ ಸಯಾನಿ ಅವರು ಆ ಸಮಾವೇಶದ ಅಧ್ಯಕ್ಷರಾಗಿದ್ದರು. 1905ರ ನಂತರ ‘ವಂದೇ ಮಾತರಂ’ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಬದಲಾಯಿತು. ಆದರೆ, ಹಾಡಿನಲ್ಲಿರುವ ದೇವತೆಗಳ ಪ್ರಸ್ತಾಪ ಮತ್ತು ಹಿಂದೂ ಪರವಾದ ಧ್ವನಿ ಮುಸ್ಲಿಮರ ಆಕ್ಷೇಪಕ್ಕೆ ಕಾರಣವಾಯಿತು.
ಬಂಗಾಳ ವಿಭಜನೆಯ ನಂತರ ಜಮಲ್‌ಪುರ (1907) ಸೇರಿದಂತೆ ಬಂಗಾಳದ ಹಲವು ಕಡೆಗಳಲ್ಲಿ ಕೋಮು ಘರ್ಷಣೆಗಳು ನಡೆದವು.
1908ರ ಡಿ.30ರಂದು ಅಮೃತಸರದಲ್ಲಿ ನಡೆದಿದ್ದ ಅಖಿಲ ಭಾರತ ಮುಸ್ಲಿಂ ಲೀಗ್‌ನ ಎರಡನೇ ಸಮಾವೇಶದಲ್ಲಿ ಅಧ್ಯಕ್ಷರಾಗಿದ್ದ ಸೈಯದ್ ಅಲಿ ಇಮಾಮ್ ಅವರು ‘ವಂದೇ ಮಾತರಂ’ ಹಿಂದೂ ರಾಷ್ಟ್ರೀಯವಾದದ ಭಾಗವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು. ನೈಜ ಭಾರತೀಯ ರಾಷ್ಟ್ರೀಯವಾದದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಈ ಗೀತೆ ಮುಸ್ಲಿಮರ ಸಂಪ್ರದಾಯಕ್ಕೆ ವಿರೋಧವಾದುದು ಎಂದೂ ಹೇಳಿದ್ದರು.
1937ರ ಅಕ್ಟೋಬರ್‌ನಲ್ಲಿ ಮಹಮ್ಮದ್ ಅಲಿ ಜಿನ್ನಾ ಅವರ ನೇತೃತ್ವದಲ್ಲಿ ನಡೆದಿದ್ದ ಮುಸ್ಲಿಂ ಲೀಗ್‌ನ 25ನೇ ವಾರ್ಷಿಕ ಸಮಾವೇಶವು ‘ವಂದೇ ಮಾತರಂ’ ವಿರುದ್ಧವಾಗಿ ನಿರ್ಣಯ ಕೈಗೊಂಡಿತ್ತು. ಇದನ್ನು ರಾಷ್ಟ್ರಗೀತೆ ಎಂದು ಘೋಷಿಸುವ ಭಾರತೀಯ ಕಾಂಗ್ರೆಸ್‌ನ ನಿರ್ಧಾರವನ್ನು ಖಂಡಿಸಿತ್ತು. ಅಲ್ಲದೇ, ‘ಇದು ಸಂವೇದನಾರಹಿತ, ಮುಸ್ಲಿಂ ವಿರೋಧಿ. ಕಾಂಗ್ರೆಸ್‌ನ ನಿಲುವು, ಯೋಚನೆಗಳು ವಿಗ್ರಹಾರಾಧನೆಯ ಪರವಾಗಿವೆ. ಇದು ಭಾರತದಲ್ಲಿ ನೈಜ ರಾಷ್ಟ್ರೀಯವಾದದ ಬೆಳವಣಿಗೆಯನ್ನು ಬುಡಮೇಲು ಮಾಡಲಿದೆ’ ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.
ಮುಸ್ಲಿಂ ಸಮುದಾಯದಿಂದ ತೀವ್ರ ವಿರೋಧ ಬಂದ ನಂತರ ಕಲ್ಕತ್ತದಲ್ಲಿ ಜವಾಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ 1937ರ ಅ.26ರಂದು ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಐದು ಪ್ಯಾರಾಗಳನ್ನು ಹೊಂದಿದ್ದ ‘ವಂದೇ ಮಾತರಂ’ ಗೀತೆಯಲ್ಲಿ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಬಳಸುವ ಬಗ್ಗೆ ಚರ್ಚೆ ನಡೆಸಿತ್ತಲ್ಲದೇ, ಈ ಬಗ್ಗೆ ಸುದೀರ್ಘ ಹೇಳಿಕೆಯನ್ನೂ
ಬಿಡುಗಡೆ ಮಾಡಿತ್ತು.
‘ಕಳೆದ 30 ವರ್ಷಗಳಲ್ಲಿ ದೇಶದಾದ್ಯಂತ ಕಂಡುಬಂದಿರುವ ಜನರ ತ್ಯಾಗ ಮತ್ತು ನರಳಾಟದೊಂದಿಗೆ ‘ವಂದೇ ಮಾತರಂ’ ಬೆಸೆದುಕೊಂಡಿದೆ. ಈ ಗೀತೆ ಮತ್ತು ಅದರಲ್ಲಿನ ಪದಗಳು ಬಂಗಾಳ ಮತ್ತು ದೇಶದ ಇತರ ಕಡೆಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ರಾಷ್ಟ್ರೀಯ ಸಂಕೇತವಾಗಿ ರೂಪುಗೊಂಡಿವೆ. ಕ್ರಮೇಣ ಹಾಡಿನ ಮೊದಲೆರಡು ಪ್ಯಾರಾಗಳ ಬಳಕೆಯು ದೇಶದ ಇತರ ಪ್ರಾಂತ್ಯಗಳಿಗೆ ಹರಡಿದೆ ಮತ್ತು ಅವುಗಳಿಗೆ ರಾಷ್ಟ್ರೀಯ ಪ್ರಾಮುಖ್ಯವೂ ಸಿಕ್ಕಿದೆ. ಹಾಡಿನ ಉಳಿದ ಸಾಲುಗಳ ಬಳಕೆ ಅಪರೂಪವಾಗಿದೆ. ಮೊದಲ ಎರಡು ಪ್ಯಾರಾಗಳು ನಮ್ಮ ತಾಯಿನೆಲದ ಸೌಂದರ್ಯ ಮತ್ತು ಆಕೆಯ ಕೊಡುಗೆಗಳನ್ನು ಕೋಮಲವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದೆ. ಧಾರ್ಮಿಕವಾಗಿ ಅಥವಾ ಬೇರೆ ಯಾವುದೇ ದೃಷ್ಟಿಕೋನದಿಂದ ಆಕ್ಷೇಪಿಸಬಹುದಾದ ಯಾವ ಸಂಗತಿಗಳು ಇವುಗಳಲ್ಲಿ ಇಲ್ಲ’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿತ್ತು.
ಮುಸ್ಲಿಮರು ವ್ಯಕ್ತಪಡಿಸಿದ್ದ ಆಕ್ಷೇಪವನ್ನು ಅದರಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ಹೇಳಿಕೆಯನ್ನು ಸಿದ್ಧಪಡಿಸುವಲ್ಲಿ ನೆಹರೂ ಅವರ ಪಾತ್ರವಿತ್ತು. ರವೀಂದ್ರನಾಥ ಟ್ಯಾಗೋರ್ ಅವರು ಇದಕ್ಕೆ ಸಮ್ಮತಿಸಿದ್ದರು. ಕಾಂಗ್ರೆಸ್ ಸಮಿತಿಯು ಮೊದಲೆರಡು ಪ್ಯಾರಾಗಳನ್ನು ಹೊಂದಿದ ‘ವಂದೇ ಮಾತರಂ’ ಅನ್ನು ರಾಷ್ಟ್ರೀಯ ಗೀತೆಯನ್ನಾಗಿ ಘೋಷಿಸಲು ಸಮ್ಮತಿಸಿತ್ತು.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿದ್ದ ಈ ಗೀತೆಯನ್ನು ಎಲ್ಲರೂ ಒಪ್ಪಬೇಕು ಎಂದು ಮಹಾತ್ಮ ಗಾಂಧೀಜಿ ಅವರು ಬಯಸಿದ್ದರು. ಆದರೆ, ಅದರ ಹೇರಿಕೆಯನ್ನು ವಿರೋಧಿಸಿದ್ದರು.
‘ವಂದೇ ಮಾತರಂ’ ಗೀತೆ 19ನೇ ಶತಮಾನದ ಕೊನೆ– 20ನೇ ಶತಮಾನದ ಆರಂಭದಲ್ಲಿ ದೇಶದಾದ್ಯಂತ ಪಸರಿಸಿತು. ಅದೆಷ್ಟು ಖ್ಯಾತಿ ಗಳಿಸಿತು ಎಂದರೆ, 1906 ಆಗಸ್ಟ್ 6ರಂದು ಕಲ್ಕತ್ತದಲ್ಲಿ ‘ವಂದೇ ಮಾತರಂ’ ಹೆಸರಿನಲ್ಲಿ ಇಂಗ್ಲಿಷ್ ಪತ್ರಿಕೆ ಆರಂಭಗೊಂಡಿತು. ವಿಪಿನ್ ಚಂದ್ರಪಾಲ್ (ಲಾಲ್–ಬಾಲ್–ಪಾಲ್ ಎಂದು ಖ್ಯಾತಿ ಗಳಿಸಿದ ಮೂವರಲ್ಲಿ ಒಬ್ಬರು) ಇದರ ಸಂಸ್ಥಾಪಕರು. ಈ ಪತ್ರಿಕೆಯ ವಿರುದ್ಧ ಬ್ರಿಟಿಷ್ ಆಡಳಿತ ದೇಶದ್ರೋಹ ಪ್ರಕರಣವನ್ನೂ ದಾಖಲಿಸಿತ್ತು
ಸ್ವಾತಂತ್ರ್ಯಾನಂತರ ರಾಷ್ಟ್ರಗೀತೆಯನ್ನಾಗಿ ಯಾವ ಹಾಡನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ಸಂವಿಧಾನ ರಚನಾ ಸಭೆಯಲ್ಲಿ ನಡೆದಿತ್ತು.
1948ರ ಆಗಸ್ಟ್ 25ರಂದು ನಡೆದಿದ್ದ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನೆಹರೂ ಅವರು ರವೀಂದ್ರನಾಥ್ ಟ್ಯಾಗೋರ್ ವಿರಚಿತ ‘ಜನ ಗಣ ಮನ’ದ ಪರವಾಗಿ ಮಾತನಾಡಿದ್ದರು. ‘ನೈರುತ್ಯ ಏಷ್ಯಾದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯು ಈ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತ್ತು. ಭಾರತದಲ್ಲೂ ಇದು ಜನಪ್ರಿಯವಾಗಿದೆ. ಜನ ಗಣ ಮನವನ್ನು ಅಥವಾ ಬೇರೆ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಆಯ್ಕೆ ಮಾಡುವ ಬಗ್ಗೆ ಎಲ್ಲ ಪ್ರಾಂತ್ಯಗಳ ರಾಜ್ಯಪಾಲರ ಅಭಿಪ್ರಾಯವನ್ನು ಕೇಳಿದ್ದೆ. ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ‘ಜನ ಗಣ ಮನ’ಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಅಭಿಪ್ರಾಯವನ್ನು ಸಂಪುಟ ಪರಿಗಣಿಸಿದ್ದು, ಸಂವಿಧಾನ ರಚನಾ ಸಭೆಯು ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ಜನ ಗಣ ಮನವನ್ನು ತಾತ್ಕಾಲಿಕವಾಗಿ ರಾಷ್ಟ್ರಗೀತೆಯನ್ನಾಗಿ ಬಳಸಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದರು.
ತಮ್ಮ ಭಾಷಣದಲ್ಲಿ ‘ವಂದೇ ಮಾತರಂ’ನ ಬಗ್ಗೆಯೂ ಪ್ರಸ್ತಾಪಿಸಿದ್ದ ಅವರು, ‘ನಿಜಕ್ಕೂ ಅದು ಪ್ರಮುಖವಾದ ರಾಷ್ಟ್ರೀಯ ಹಾಡು. ನಮ್ಮ ದೇಶ ಮತ್ತು ಸ್ವಾತಂತ್ರ್ಯ ಹೋರಾಟದೊಂದಿಗೆ ಗುರುತಿಸಿಕೊಂಡಿದೆ. ಅದರ ಸ್ಥಾನವನ್ನು ಬೇರೆ ಯಾವ ಹಾಡು ಕೂಡ ತುಂಬಲು ಸಾಧ್ಯವಿಲ್ಲ. ರಾಷ್ಟ್ರಗೀತೆಯ ವಿಚಾರಕ್ಕೆ ಬಂದಾಗ ಪದಗಳಿಗಿಂತಲೂ ರಾಗ/ಧಾಟಿ (ಟ್ಯೂನ್) ಮುಖ್ಯ’ ಎಂದು ಪ್ರತಿಪಾದಿಸಿದ್ದರು.
1950ರ ಜನವರಿ 24ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದ್ದ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರು, ‘ಪದಗಳು ಮತ್ತು ಸಂಗೀತವನ್ನೊಳಗೊಂಡ ಜನ ಗಣ ಮನವು ದೇಶದ ರಾಷ್ಟ್ರಗೀತೆಯಾಗಿದ್ದು, ಸಂದರ್ಭ ಬಂದಾಗ ಸರ್ಕಾರ ಅನುಮತಿಸಿದರೆ ಗೀತೆಯಲ್ಲಿನ ಪದಗಳನ್ನು ಬದಲಾಯಿಸುವುದಕ್ಕೆ ಅವಕಾಶ ಇರುತ್ತದೆ. ಭಾರತದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ‘ವಂದೇ ಮಾತರಂ’ಗೆ ಕೂಡ ‘ಜನ ಗಣ ಮನ’ಕ್ಕೆ ಸಮನಾದ ಗೌರವ, ಅದಕ್ಕೆ ಸರಿಸಮಾನದ ಸ್ಥಾನಮಾನವನ್ನೇ ನೀಡಬೇಕು’ ಎಂದು ಹೇಳಿದ್ದರು.
ಇಡೀ ಸಭೆಯು ಕರತಾಡನದ ಮೂಲಕ ಈ ಹೇಳಿಕೆಯನ್ನು ಅನುಮೋದಿಸಿತ್ತು.
ಜವಾಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್
ಆಧಾರ: ಜ್ಯೂಲಿಯಸ್ ಜೆ.ಲೈಪ್ನರ್ ಭಾಷಾಂತರಿಸಿದ ‘ಆನಂದಮಠ, ಆರ್ ದಿ ಸೇಕ್ರೆಡ್ ಬ್ರದರ್‌ಹುಡ್’ ಕೃತಿ, ಅಮರೇಂದ್ರ ಲಕ್ಷ್ಮಣ್ ಗಾಡ್ಗೀಳ್ ಅವರ ‘ವಂದೇ ಮಾತರಂ’ ಕೃತಿ, ಪಿಐಬಿ, ತಜ್ಞರ ಲೇಖನಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.