ADVERTISEMENT

ಆಳ–ಅಗಲ: ಬೂಕರ್‌ ಪ್ರಶಸ್ತಿ ಏನು? ಎತ್ತ?

​ಪ್ರಜಾವಾಣಿ ವಾರ್ತೆ
Published 21 ಮೇ 2025, 23:30 IST
Last Updated 21 ಮೇ 2025, 23:30 IST
   

ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ

ಬೇರೆ ಭಾಷೆಗಳಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡಲಾದ ಸೃಜನಶೀಲ ಸಾಹಿತ್ಯ ಅಥವಾ ಸಣ್ಣ ಕಥೆಗಳಿಗೆ ಕೊಡಮಾಡುವ ಜಗತ್ತಿನ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಇದು. ಬ್ರಿಟನ್‌ನ ಬೂಕರ್‌ ಪ್ರಶಸ್ತಿ ಫೌಂಡೇಷನ್‌ ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ನೀಡುತ್ತದೆ. ಬ್ರಿಟನ್‌ ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾದ ಕೃತಿಗಳನ್ನು ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯ ಬಹುಮಾನ ಮೊತ್ತ 50 ಸಾವಿರ ಪೌಂಡ್‌ (₹57.34 ಲಕ್ಷ). 2005ರಲ್ಲಿ ಈ ಪ್ರಶಸ್ತಿ ಆರಂಭಿಸಲಾಗಿತ್ತು. ಆಗ ಇದಕ್ಕೆ ಮ್ಯಾನ್‌ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಎಂದು ಹೆಸರಿಡಲಾಗಿತ್ತು. 2015ರಲ್ಲಿ ನಿಯಮ ಬದಲಾವಣೆ ಆದ ನಂತರ ಪ್ರಶಸ್ತಿ ಹೆಸರನ್ನು ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಎಂದು ಬದಲಾಯಿಸಲಾಯಿತು.

ಬಾನು‌ ಮುಷ್ತಾಕ್‌ ಅವರು ಈ ಪ್ರಶಸ್ತಿಗೆ ಭಾಜನರಾದ ಭಾರತದ ಎರಡನೇ ಲೇಖಕಿ. 2022ರಲ್ಲಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್‌ ಸ್ಯಾಂಡ್‌’ (ಹಿಂದಿ ಕಾದಂಬರಿ) ಕೃತಿಗೆ ಈ ಪ್ರಶಸ್ತಿ ಬಂದಿತ್ತು. ದೀಪಾ ಭಾಸ್ತಿ ಅವರು ಈ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಮೊದಲ ಅನುವಾದಕಿ.

ADVERTISEMENT

2013ನೇ ಸಾಲಿನಲ್ಲಿ ಕನ್ನಡದ ಯು.ಆರ್‌.ಅನಂತಮೂರ್ತಿ ಅವರು ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದ ಲೇಖಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆ ಪಟ್ಟಿಯಲ್ಲಿದ್ದ ದೇಶದ ಏಕೈಕ ಸಾಹಿತಿ ಅವರಾಗಿದ್ದರು.   

ಬೂಕರ್‌ ಪ್ರಶಸ್ತಿ

ಬೂಕರ್‌ ಪ್ರಶಸ್ತಿ ಫೌಂಡೇಷನ್‌, ‘ಬೂಕರ್‌ ಪ್ರಶಸ್ತಿ’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ ಕಾದಂಬರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ಘೋಷಿಸುತ್ತದೆ. ಇದಕ್ಕೆ ಮೊದಲು ಮ್ಯಾನ್‌ ಬೂಕರ್‌ ಪ್ರಶಸ್ತಿ ಎಂಬ ಹೆಸರಿತ್ತು. ಬ್ರಿಟನ್‌ ಮತ್ತು ಐರ್ಲೆಂಡ್‌ನಲ್ಲಿ ಪ್ರಕಟಗೊಂಡ ಕೃತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. 1969ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಏಳು ಮಂದಿಯನ್ನೊಳಗೊಂಡ ತೀರ್ಪುಗಾರರ ಸಮಿತಿ ಕೃತಿಯನ್ನು ಆಯ್ಕೆ ಮಾಡುತ್ತದೆ. ಈ ಪ್ರಶಸ್ತಿಯ ಬಹುಮಾನ ಮೊತ್ತ 50 ಸಾವಿರ ಪೌಂಡ್‌ (₹57.34 ಲಕ್ಷ ).

1997ರಲ್ಲಿ ಭಾರತದ ಅರುಂಧತಿ ರಾಯ್‌ (ಕೃತಿ: ಗಾಡ್‌ ಆಫ್‌ ಸ್ಮಾಲ್‌ ಥಿಂಗ್ಸ್‌ ), 2008ರಲ್ಲಿ ಅರವಿಂದ ಅಡಿಗ (ದಿ ವೈಟ್‌ ಟೈಗರ್‌) ಅವರು ಬೂಕರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಭಾರತ ಮೂಲದ ವಿ.ಎಸ್‌.ನೈಪಾಲ್‌ ಅವರು 1971ರಲ್ಲಿ (ಕೃತಿ:ಇನ್‌ ಎ ಫ್ರೀ ಸ್ಟೇಟ್‌) ಬೂಕರ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅನಿವಾಸಿ ಭಾರತೀಯ ಸಲ್ಮಾನ್‌ ರಶ್ದಿ ಅವರ ‘ಮಿಡ್‌ನೈಟ್ಸ್‌ ಚಿಲ್ಡ್ರನ್‌’ ಕೃತಿಯು 1981ರಲ್ಲಿ ಬೂಕರ್ ಪ್ರಶಸ್ತಿಗೆ ಭಾಜನವಾಗಿತ್ತು. ಮತ್ತೊಬ್ಬ ಅನಿವಾಸಿ ಭಾರತೀಯ ಸಾಹಿತಿ ಕಿರಣ್‌ ದೇಸಾಯಿ (ಕೃತಿ: ದಿ ಇನ್‌ಹೆರಿಟೆನ್ಸ್‌ ಆಫ್‌ ಲಾಸ್‌) ಅವರು 2006ರಲ್ಲಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.