ADVERTISEMENT

ದುಡಿಮೆ ಎಲ್ಲಿದೆ...? ಕೊರೊನಾ ಅಬ್ಬರದಲ್ಲಿ ಧ್ವನಿ ಕಳೆದುಕೊಂಡ ಮಕ್ಕಳ ಪ್ರಶ್ನೆ

ಮಕ್ಕಳ ಹೊಟ್ಟೆ ಹೊರೆಯುವ ಪ್ರಶ್ನೆಯೂ ಇದರಲ್ಲಿ ಅಡಗಿದೆ

ಜಯಸಿಂಹ ಆರ್.
Published 30 ಏಪ್ರಿಲ್ 2020, 3:15 IST
Last Updated 30 ಏಪ್ರಿಲ್ 2020, 3:15 IST
ಪಂಚಾಯಿತಿ ಕಚೇರಿ ಎದುರು ದುಡಿಯುವ ಮಕ್ಕಳು ಕೆಂಪು ಪಟ್ಟಿ ಕಟ್ಟುತ್ತಿರುವುದು
ಪಂಚಾಯಿತಿ ಕಚೇರಿ ಎದುರು ದುಡಿಯುವ ಮಕ್ಕಳು ಕೆಂಪು ಪಟ್ಟಿ ಕಟ್ಟುತ್ತಿರುವುದು   

ಸಂವಿಧಾನದ ಪ್ರಕಾರ, ಮಕ್ಕಳಿಗೆ 14 ವರ್ಷದವರೆಗೆ ಉಚಿತವಾದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಅಂದರೆ ಈ ಅವಧಿಯಲ್ಲಿ ಅವರು ದುಡಿಯುವ ಹಾಗಿಲ್ಲ, ಮನೆಯ ಕೆಲಸಗಳಲ್ಲಿ ನೆರವಾಗಬಹುದು ಅಷ್ಟೆ. ಮಕ್ಕಳನ್ನು ದುಡಿಮೆಗೆ ದೂಡಬಾರದು ಎಂದು ಕಾನೂನು ಹೇಳಿದರೂ ವಾಸ್ತವ ಸ್ಥಿತಿ ಬೇರೆಯೇ ಇದೆ.ಬಡತನದ ಕಾರಣ ಲಕ್ಷಾಂತರ ಮಕ್ಕಳು ಶಿಕ್ಷಣ ಪೂರೈಸದೆ ದುಡಿಮೆಗೆ ಹೋಗಬೇಕಿದೆ.

14ರಿಂದ 18 ವರ್ಷದ ಮಕ್ಕಳನ್ನು ಅಪಾಯಕಾರಿಯಲ್ಲದ ಸ್ಥಳದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬಹುದು ಎಂದು ಕಾನೂನು ಹೇಳುತ್ತದೆ. ಬಡತನವು ಈ ಮಕ್ಕಳ ಶಿಕ್ಷಣವನ್ನೂ ಕಿತ್ತುಕೊಂಡಿದೆ. ಆದರೆ, ಲಾಕ್‌ಡೌನ್ ಈಗ ಈ ಮಕ್ಕಳ ದುಡಿಮೆಯನ್ನು ಸಹ ಕಸಿದುಕೊಂಡಿದ್ದು, ಅವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಹೊಲ, ಇಟ್ಟಿಗೆಗೂಡು, ಸೈಕಲ್ ಶಾಪ್, ದಿನಸಿ ಅಂಗಡಿ ಕೆಲಸಕ್ಕೆ ಹೋಗುತ್ತಿದ್ದ ಮಕ್ಕಳು ಕೆಲಸ ಕಳೆದುಕೊಂಡಿದ್ದಾರೆ.

ADVERTISEMENT

‘ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಈಗ ಕೆಲಸವೇ ಇಲ್ಲ. ಮನೆಯಲ್ಲಿ ಸುಮ್ಮನೆ ಕೂತಿದ್ದೇನೆ’ ಎನ್ನುತ್ತಾಳೆ ಬಳ್ಳಾರಿಯ ಹೂವಿನಹಡಗಲಿ ತಾಲ್ಲೂಕಿನ ಹಿರೇಮಲ್ಲನಕೇರಿಯ ಸುಧಾ (16). ‘ಎರಡು ವರ್ಷದ ಹಿಂದೆ ಅಪ್ಪನಿಗೆ ಎತ್ತು ಗುದ್ದಿ, ಬೆನ್ನುಮೂಳೆ ಮುರಿದಿದೆ. ಅವರಿಗೆ ಚಿಕಿತ್ಸೆ ಕೊಡಿಸಲು ₹ 1 ಲಕ್ಷ ಸಾಲ ಮಾಡಿದ್ದೇವೆ. ಅದನ್ನು ತೀರಿಸಲೇಬೇಕು. ಹೀಗಾಗಿ ಒಂಬತ್ತನೇ ತರಗತಿ ಓದುವಾಗಲೇ ಶಾಲೆಬಿಟ್ಟು, ಕೂಲಿ ಕೆಲಸಕ್ಕೆ ಹೋದೆ’ ಎನ್ನುತ್ತಾಳೆ ಆಕೆ.

‘ದಿನಾ ಎಂಟು ತಾಸು ಕೆಲಸ ಮಾಡಿದರೆ ₹150 ಕೂಲಿ ಕೊಡುತ್ತಿದ್ದರು. ಅಮ್ಮನೂ ದುಡಿಯುತ್ತಾರೆ. ಅಜ್ಜ–ಅಜ್ಜಿ, ಅಂಗವಿಕಲ ಅಕ್ಕ ಮತ್ತು ತಮ್ಮ–ತಂಗಿಯನ್ನು ಸಾಕಬೇಕು. ಮೊದಲು ಕೂಲಿಯಾದರೂ ಸಿಗುತ್ತಿತ್ತು. ಈಗ ಕೆಲಸವೇ ಇಲ್ಲ. ಸರ್ಕಾರ ಅಕ್ಕಿ ಮಾತ್ರ ನೀಡಿದೆ.
ದಿನದ ಊಟ ಮಾಡಲೂ ಸಾಲ ಮಾಡಿಕೊಂಡಿದ್ದೇವೆ. ಕೊರೊನಾ ಬಂದರೂ ಊಟ ಬಿಡಲಾಗದು ಅಲ್ಲವೇ’ ಎಂದು ಪ್ರಶ್ನಿಸುತ್ತಾಳೆ ಸುಧಾ.

ಬಳ್ಳಾರಿಯ ಫಾತಿಮಾಳ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಚೆನ್ನಾಗಿ ಓದುತ್ತಿದ್ದ ಅಕ್ಕನನ್ನು, ಓದಿಸಲೆಂದೇ ಫಾತಿಮಾ ಶಾಲೆ ಬಿಟ್ಟದ್ದು. ‘ಅಪ್ಪ ಇಲ್ಲ. ಅಕ್ಕ ಪಿಯುಸಿ ಓದಿದ್ದಾಳೆ. ತಮ್ಮ, ತಂಗಿ ಓದುತ್ತಿದ್ದಾರೆ.ನಾನು, ಅಮ್ಮ ದುಡೀತೀವಿ. ಬೆಳಿಗ್ಗೆ 9ರಿಂದ ಸಂಜೆ ಆರರವರೆಗೆ ದುಡಿದರೆ ₹100 ಕೂಲಿ ಸಿಗುತ್ತದೆ. ಅದರಲ್ಲೇ ಜೀವನ ನಡೀಬೇಕು. ಆದರೆ, ಈಗ ಕೂಲಿ ಸಿಗುತ್ತಿಲ್ಲ’ – ಇದು ಫಾತಿಮಾಳ ಕಥೆ.

ಬೆಂಗಳೂರಿನ ಸುಂಕದಕಟ್ಟೆ ಸಮೀಪ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುವ ಒಂಬತ್ತು ವರ್ಷದ ಆರ್ಮುಗಂ ಸಹ ಈಗ ಕೆಲಸವಿಲ್ಲದೆ ಕುಳಿತಿದ್ದಾನೆ. ಅವನಿಗೆ ಕೆಲಸ ಕೊಟ್ಟಿದ್ದ ಪರಿಚಯಸ್ಥರ ಅಂಗಡಿ ಲಾಕ್‌ಡೌನ್‌ನ ಕಾರಣದಿಂದ ಮುಚ್ಚಿದೆ.‘ನಾನು ವೆಲ್ಡಿಂಗ್ ‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಕಸ ಗುಡಿಸೋದು, ನೀರ್ ಹಾಕೋದು, ಕಬ್ಬಿಣ ಹಿಡ್ಕೋಳ್ಳೋದು ನನ್ನ ಕೆಲಸ. ದಿನಾ 50 ರೂಪಾಯಿ ಕೊಡುತ್ತಿದ್ದರು. ಈಗ ಶಾಪ್ ಮುಚ್ಚಿದ್ದಾರೆ. ಕೆಲಸ ಇಲ್ಲ’ ಎಂದು ಮಾತು ನಿಲ್ಲಿಸುತ್ತಾನೆ ಆರ್ಮುಗಂ. ಅಂಗಡಿ ಏಕೆ ಮುಚ್ಚಿದ್ದಾರೆ ಎಂಬ ಪ್ರಶ್ನೆಗೆ ಆತ, ‘ಕೊರೊನಾ’ ಎಂದಷ್ಟೇ ಉತ್ತರಿಸಬಲ್ಲ.

‘ಸಾರ್, ಈ ಹುಡುಗನಿಗೆ ಅಪ್ಪ ಇಲ್ಲ, ನಮ್ಮ ಅಂಗಡೀಲೇ ಅದೂ ಇದೂ ಕೆಲಸ ಮಾಡುತ್ತಿದ್ದ. ಈಗ ನಮಗೇ ಕೆಲಸ ಇಲ್ಲ. ಅಂಗಡಿ ಮುಚ್ಚಿದೀನಿ, ನನಗೇ ಕಷ್ಟ ಇದೆ. ಇನ್ನು ಇಂಥಾ ಹುಡುಗರು ಏನು ಮಾಡುತ್ತಾರೋ’ ಎಂಬ ಪ್ರಶ್ನೆ ಆರ್ಮುಗಂಗೆ ಕೆಲಸ ಕೊಟ್ಟಿದ್ದ ಶಂಕರ್ ಅವರದ್ದು.

ನಗರದ ಗೆಳೆಯರ ಬಳಗದ ಆಟೊಮೊಬೈಲ್ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 13 ವರ್ಷದ ರಾಜು ಈಗ ಕೆಲಸ ಇಲ್ಲದೆ ಕೂತಿದ್ದಾನೆ. ‘ಸಾರ್, ತುಂಬಾ ದಿನಗಳಿಂದ ಇದೇ ಕೆಲಸ ಮಾಡ್ತಿದೀನಿ. ನಮ್‌ ಓನರ್ 6 ಸಾವಿರ ಕೊಡ್ತಿದ್ರು. ಈಗ ನಂಗೆ ಕೆಲಸ ಇಲ್ಲ. ಅಕ್ಕನ ಮದ್ವೆಗೆ ಸಾಲ ಮಾಡಿದ್ವಿ. ಬಡ್ಡಿ ಕಟ್ಬೇಕು, ಚೀಟಿ ಕಟ್ಬೇಕು, ಮನೆ ಬಾಡಿಗೆ ಕಟ್ಬೇಕು. ಯಾವ್ದಕ್ಕೂ ದುಡ್ಡಿಲ್ಲ. ನಿಮ್‌ ಕಾರಿನ ಕೆಲಸ ಇದ್ರೆ ಹೇಳಿ, ಮನೆ ಹತ್ರಾನೇ ಬಂದು ಮಾಡ್ಕೊಡ್ತೀನಿ’ ಎನ್ನುತ್ತಾನೆ ರಾಜು.

‘ಸರ್ಕಾರ ತನ್ನ ಹೊಣೆ ನಿಭಾಯಿಸಲು ವಿಫಲವಾಗಿದ್ದರಿಂದ ಮಕ್ಕಳು ಶಾಲೆಬಿಟ್ಟು ಕೂಲಿಗೆ ಹೋಗುತ್ತಾರೆ. ದುಡಿಯುವ ಈ ಮಕ್ಕಳನ್ನೂ
ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಸರ್ಕಾರ ಕಡೆಗಣಿಸಿದೆ’ ಎನ್ನುತ್ತಾರೆ ಸರ್ಕಾರಿ ಶಾಲೆಯ ಶಿಕ್ಷಕ ದಿನೇಶ್. 2019–20ನೇ ಸಾಲಿನಲ್ಲಿ ಅವರ ಶಾಲೆಯಲ್ಲಿ ಎಂಟು ಮಕ್ಕಳು, ವರ್ಷದ ಮಧ್ಯದಲ್ಲೇ ಶಾಲೆಬಿಟ್ಟು ದುಡಿಮೆಗೆ ಹೋಗಿದ್ದಾರೆ. ಈಗ ಅಷ್ಟೂ ಮಕ್ಕಳು ಕೆಲಸವೂ ಇಲ್ಲದೆ ಕೂತಿದ್ದಾರೆ.

-ಫಾತಿಮಾ, ಸುಧಾ, ಹನುಮಂತು ಮತ್ತು ಭೀಮಣ್ಣ ‘ಭೀಮ ಸಂಘ’ದ ಸದಸ್ಯರು. ಸಿಡಬ್ಲ್ಯುಸಿ ನೆರವಿನಿಂದ ಇವರನ್ನು ಸಂಪರ್ಕಿಸಲಾಯಿತು

ಈ ಕೈಗಳಿಗೂ 'ನರೇಗಾ'ದಲ್ಲಿ ಕೆಲಸ ಕೊಡಿ

‘ಮಕ್ಕಳನ್ನು ದುಡಿಮೆಗೆ ದೂಡುವುದು ಸರಿಯಲ್ಲ. ಆದರೆ, ನಮ್ಮಲ್ಲಿ ಪರಿಸ್ಥಿತಿ ಹಾಗಿಲ್ಲವಲ್ಲ. ಹದಿಹರೆಯದ ಮಕ್ಕಳನ್ನು ಕೆಲವು ಕೆಲಸಗಳಿಗೆ ಕಳುಹಿಸಬಹುದು ಎಂದು ಕಾನೂನೇ ಹೇಳುತ್ತದೆ. ಜೀವನ ನಡೆಸಲು ಕಷ್ಟವಾದ ಕಾರಣ ಅನಿವಾರ್ಯವಾಗಿ ದುಡಿಮೆಗೆ ಹೋಗುತ್ತಿದ್ದ ಮಕ್ಕಳು ಲಾಕ್‌ಡೌನ್‌ನ ಕಾರಣದಿಂದ ಖಾಲಿ ಕುಳಿತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತೆ ಕವಿತಾರತ್ನ ಹೇಳುತ್ತಾರೆ. ಕವಿತಾರತ್ನ ಅವರ ಸಂಘಟನೆ ‘ಕನ್ಸರ್ನ್ಡ್‌ ಫಾರ್ ವರ್ಕಿಂಗ್ ಚಿಲ್ಡ್ರನ್–ಸಿಡಬ್ಲ್ಯುಸಿ’, ದುಡಿಯುವ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ.

‘ಅಪಾಯವಲ್ಲದ ಕೆಲಸಕ್ಕೆ ಈ ಮಕ್ಕಳನ್ನು ಕಳುಹಿಸಬಹುದು. ನರೇಗಾ ಅಡಿ ಸಣ್ಣ–ಪುಟ್ಟ ಕಾಮಗಾರಿಗಳಿಗೆ ಈ ಮಕ್ಕಳನ್ನೂ ಬಳಸಿಕೊಳ್ಳಬಹುದು. 18 ವರ್ಷ ಆಗದ ಕಾರಣ ನರೇಗಾ ಅಡಿ ಇವರಿಗೆ ಕೆಲಸ ನೀಡುವಂತಿಲ್ಲ ಎಂಬ ನಿಯಮವನ್ನು ಈ ಅಸಾಮಾನ್ಯ ಸಂದರ್ಭದಲ್ಲಿ ಸಡಿಲಿಸಬೇಕು’ ಎಂದು ಅವರು ಹೇಳುತ್ತಾರೆ.

ದುಡಿಯುವ ಮಕ್ಕಳ ಸಂಘಟನೆಯಾದ, ‘ಭೀಮ ಸಂಘ’ದ ಜತೆ ಸಿಡಬ್ಲ್ಯುಸಿ ಸಹಯೋಗ ಹೊಂದಿದೆ. ದುಡಿಯುವ ಮಕ್ಕಳು ತಮ್ಮ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಕೆಲಸಕ್ಕೆ ಭೀಮ ಸಂಘ ಉತ್ತೇಜಿಸುತ್ತದೆ. ಇದರ ಕಾರ್ಯವೈಖರಿಯನ್ನು ಬಳ್ಳಾರಿಯ ಸುಧಾ ಮತ್ತು ಫಾತಿಮಾ ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

‘ಊರಲ್ಲಿ ಏನೇನು ಕೆಲಸ ಆಗಬೇಕು ಅಂತ ಪಟ್ಟಿ ಮಾಡಿ ಪಂಚಾಯ್ತಿಗೆ ಕೊಡ್ತೀವಿ. ಯಾವ ಕೆಲಸ ಆಗಿಲ್ಲ ಅಂದ್ರೆ, ಪಂಚಾಯಿತಿ ಎದುರು ಒಂದು ಕೆಂಪುಪಟ್ಟಿ ಕಟ್ತೀವಿ. ಕೆಲಸ ಮಾಡಿಕೊಟ್ರೆ ಬಿಳಿಪಟ್ಟಿ ಕಟ್ತೀವಿ. ಕೆಂಪು ಪಟ್ಟಿ ಕಟ್ಟೋಕೆ ಶುರು ಮಾಡಿದ ಮೇಲೆ, ಕೆಲಸಗಳು ಬೇಗ ಆಗ್ತಿವೆ. ನಮ್ಮೂರಿಗೆ ರಸ್ತೆ, ಚರಂಡಿ ಎಲ್ಲಾ ಮಾಡ್ಸಿಕೊಂಡಿದೀವಿ’ ಎಂದು ಅವರು ಹೇಳುತ್ತಾರೆ.

ಬಾಲ ಕಾರ್ಮಿಕರಿಗೆ ಅಗತ್ಯ ಮಾರ್ಗದರ್ಶನ ಬೇಕು

'ಸದ್ಯದ ಪರಿಸ್ಥಿಯಲ್ಲಿ ಬಾಲಕಾರ್ಮಿಕರು ಮಾನಸಿಕವಾಗಿ ಸಾಕಷ್ಟು ಕುಗ್ಗಿರುತ್ತಾರೆ. ಏನು ಮಾಡಬೇಕೆಂದು ದಿಕ್ಕು ತೋಚದೇ ಅಡ್ಡ ದಾರಿ ಹಿಡಿಯುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಅಂತವರನ್ನು ಗುರುತಿಸಿ, ಅಗತ್ಯ ಮಾರ್ಗದರ್ಶನ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈಜೋಡಿಸಬೇಕು' ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ( ನಿಮ್ಹಾನ್ಸ್ ) ಮನೋವೈದ್ಯ ಡಾ.ಎಚ್.ಎನ್. ಶಶಿಧರ್ ತಿಳಿಸಿದರು.

' ವಿದ್ಯೆ ಹಾಗೂ ಊಟ ಇಲ್ಲದ ಪರಿಣಾಮ ಅವರು ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಅವರ ಬಗ್ಗೆ ಕಾಳಜಿ ವಹಿಸಲು ತಮ್ಮವರು ಎಂಬುವರು ಯಾರೂ ಇರುವುದಿಲ್ಲ. ಬಾಲಕಾರ್ಮಿಕರು ಹದಿಹರೆಯದ ವಯಸ್ಸಿನವರಾಗಿರುತ್ತಾರೆ. ಈ ವಯಸ್ಸಿನಲ್ಲಿ ಉಡಾಫೆ ಮನೋಭಾವ ಜಾಸ್ತಿ. ಹಾಗಾಗಿ ಅವರು ತಮ್ಮ ಆರೋಗ್ಯದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ. ಪ್ರತಿಕ್ಷಣಕ್ಕೂ ಅವರ ಮನೋಪ್ರವೃತ್ತಿ ಬದಲಾಗುತ್ತಿರುತ್ತದೆ. ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತಪ್ಪು ಹಾದಿ ಹಿಡಿಯುವ ಸಾಧ್ಯತೆಗಳಿರುತ್ತವೆ. ಕೆಲವರು ವ್ಯಸನಕ್ಕೆ ಕೂಡ ಒಳಗಾಗುತ್ತಾರೆ' ಎಂದರು.

'12ರಿಂದ 16 ವಯಸ್ಸಿನವರ ಮಿದುಳು ಪಕ್ವ ಕೊಂಡಿರುವುದಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ಜೀವಕ್ಕೆ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಇಂತಹ ಪರಿಸ್ಥಿತಿ ಎದುರಿಸಲು ಅವರು ಶಿಸ್ತುಬದ್ಧ ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅದೇ ರೀತಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಕಾರಾತ್ಮಕ ಚಿಂತನೆ ಜೊತೆಗೆ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಶಾಸನಾತ್ಮಕ ರಕ್ಷಣೆ

ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಬಾಲಕಾರ್ಮಿಕ ಪದ್ಧತಿ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಸಾಂವಿಧಾನಿಕ ಹಾಗೂ ಶಾಸನಬದ್ಧ ಕ್ರಮಗಳನ್ನು ತೆಗೆದುಕೊಂಡಿದೆ.ಬಾಲಕಾರ್ಮಿಕ ಸಮಸ್ಯೆ ನಿವಾರಣೆಗೆ ವಿವಿಧ ಸಮಿತಿ ಹಾಗೂ ಆಯೋಗಗಳನ್ನು ರಚಿಸಿದೆ

*1966ರಲ್ಲಿ ರಾಷ್ಟ್ರೀಯ ಕಾರ್ಮಿಕ ಆಯೋಗ ಸ್ಥಾಪನೆ

*ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನ) ಕಾಯ್ದೆ 1976 ಜಾರಿ

*1979ರಲ್ಲಿ ಗುರುಪಾದಪ್ಪ ಸಮಿತಿ ರಚನೆ

*1984ರಲ್ಲಿ ಸನತ್ ಮೆಹ್ತಾ ಸಮಿತಿ ರಚನೆ

*1987ರಲ್ಲಿ ಬಾಲಕಾರ್ಮಿಕರನ್ನು ಕುರಿತ ರಾಷ್ಟ್ರೀಯ ಆಯೋಗ ಸ್ಥಾಪನೆ

*ರಾಷ್ಟ್ರೀಯ ಬಾಲಕಾರ್ಮಿಕ ನೀತಿ ಅಡಿಯಲ್ಲಿ 1988ರಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ (ಎನ್‌ಸಿಎಲ್‌ಪಿ) ಜಾರಿ

*ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) 1991ರಲ್ಲಿ ‘ಜಾಗತಿಕವಾಗಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕಾರ್ಯಕ್ರಮ’ ಜಾರಿಗೊಳಿಸಿತು. ಇದಕ್ಕೆ ಸಹಿ ಹಾಕಿದ ಮೊದಲ ದೇಶ ಭಾರತ

*ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾರ್ಯತಂತ್ರ

ಗುರುಪಾದಪ್ಪ ಸಮಿತಿ

*‘ಬಡತನವೇ ಇದಕ್ಕೆ ಮೂಲ ಕಾರಣ. ಬಡತನ ತೊಲಗಿಸದೇ ಪರಿಹಾರ ಕಷ್ಟ. ಅಪಾಯಕಾರಿ ಕೆಲಸಗಳಿಂದ ಮಕ್ಕಳನ್ನು ದೂರವಿಡಬೇಕು’ ಎಂದು ಸಮಿತಿ ಶಿಫಾರಸು

*ಗುರುಪಾದಪ್ಪ ಸಮಿತಿ ಶಿಫಾರಸಿನಂತೆ 1986ರಲ್ಲಿ ಬಾಲ ಕಾರ್ಮಿಕ ಕಾಯ್ದೆ (ನಿಷೇಧ ಮತ್ತು ನಿಯಂತ್ರಣ) ಜಾರಿ

*ಅಪಾಯಕಾರಿ ಸ್ಥಳಗಳಲ್ಲಿ 14 ವರ್ಷದೊಳಗಿನ ಮಕ್ಕಳು ಕೆಲಸ ಮಾಡುವಂತಿಲ್ಲ

*ಅಪಾಯಕಾರಿ ಅಲ್ಲದ ಉದ್ಯೋಗದ ಸ್ಥಳಗಳಲ್ಲಿ ಕೆಲಸದ ಸ್ಥಿತಿಯಲ್ಲಿ ಸುಧಾರಣೆಗೆ ನಿರ್ದೇಶನ

*2015ರಲ್ಲಿ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಯಿತು. ಆ ತಿದ್ದುಪಡಿ ಪ್ರಕಾರ ಮನರಂಜನೆ ವಲಯ ಹೊರತುಪಡಿಸಿ 5–14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸನ್ನು ನಿಯೋಜಿಸುವಂತಿಲ್ಲ

ಸಾಂವಿಧಾನಿಕ ರಕ್ಷಣೆ

*ಆರ್ಟಿಕಲ್ 21ಎ

6–14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ

*ಆರ್ಟಿಕಲ್ 24

14 ವರ್ಷದೊಳಗಿನ ಮಕ್ಕಳು ಯಾವುದೇ ಕಾರ್ಖಾನೆ, ಗಣಿ ಅಥವಾ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವುದಕ್ಕೆ ನಿಷೇಧ

*ಆರ್ಟಿಕಲ್ 39

ಎಳೆಯ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿಲ್ಲ ಎಂಬುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು

*ಆರ್ಟಿಕಲ್ 23

ಮಾನವ ಕಳ್ಳಸಾಗಣೆ, ಒತ್ತಾಯದಿಂದ ಉದ್ಯೋಗ ತಳ್ಳುವುದು ಅಪರಾಧ

ಆಧಾರ: ಕೇಂದ್ರ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯ ಜಾಲತಾಣ,2011ರ ಜನಗಣತಿ, ಯುನಿಸೆಫ್

ದೇಶದಲ್ಲಿರುವ ಬಾಲ ಕಾರ್ಮಿಕರು (5-14 ವರ್ಷದೊಳಗೆ)

1.26 ಕೋಟಿ (2001ರ ಜನಗಣತಿ)

43.53 ಲಕ್ಷ (2011ರ ಜನಗಣತಿ)

ಜಗತ್ತಿನಲ್ಲಿರುವ ಬಾಲ ಕಾರ್ಮಿಕರ ಸಂಖ್ಯೆ

15 ಕೋಟಿ

*ಜಗತ್ತಿನಲ್ಲಿ 10 ಮಕ್ಕಳ ಪೈಕಿ ಒಂದು ಮಗು ಬಾಲಕಾರ್ಮಿಕ

*ಬಾಲಕಾರ್ಮಿಕರು ಗ್ರಾಮೀಣ ಭಾಗದಲ್ಲೇ ಅಧಿಕ

ಕರ್ನಾಟಕದ ಸ್ಥಿತಿ

ವರ್ಷ ಬಾಲಕಾರ್ಮಿಕರ ಸಂಖ್ಯೆ

1971 8,08,719

1981 11,31,530

1991 9,76,247

2001 8,22,615

2011 2,49,432

ದೇಶದ ಸ್ಥಿತಿ

ರಾಜ್ಯ ಜನಗಣತಿ 2001 ಜನಗಣತಿ 2011

ಆಂಧ್ರಪ್ರದೇಶ 13,63,339 4,04,851

ಅರುಣಾಚಲ ಪ್ರದೇಶ 18,482 5,766

ಅಸ್ಸಾಂ 3,51,416 99,512

ಬಿಹಾರ 1117500 451590

ಚಂಡೀಗಡ 3,779 3,135

ಛತ್ತೀಸಗಡ 3,64,572 63,884

ದೆಹಲಿ 41,899 26,473

ಗೋವಾ 4,138 6,920

ಗುಜರಾತ್ 4,85,530 2,50,318

ಹರಿಯಾಣ 2,53,491 53,492

ಹಿಮಾಚಲ ಪ್ರದೇಶ 1,07,774 15,001

ಜಮ್ಮುಕಾಶ್ಮೀರ 1,75,630 25,528

ಜಾರ್ಖಂಡ್ 4,07,200 90,996

ಕರ್ನಾಟಕ 8,22,615 2,49,432

ಕೇರಳ 26,156 21,757

ಮಧ್ಯಪ್ರದೇಶ 10,65,259 2,86,310

ಮಹಾರಾಷ್ಟ್ರ 7,64,075 4,96,916

ಮಣಿಪುರ 28,836 11,805

ಮೇಘಾಲಯ 53940 18839

ಮಿಜೋರಾಂ 26,265 2,793

ನಾಗಾಲ್ಯಾಂಡ್ 45,874 11,062

ಒಡಿಶಾ 3,77,594 92,087

ಪಂಜಾಬ್ 1,77,268 90,353

ರಾಜಸ್ಥಾನ 12,62,570 2,52,338

ಸಿಕ್ಕಿಂ 16,457 2,704

ತಮಿಳುನಾಡು 4,18,801 1,51,437

ತ್ರಿಪುರಾ 21,756 4,998

ಉತ್ತರ ಪ್ರದೇಶ 19,27,997 8,96,301

ಉತ್ತರಾಖಂಡ 70,183 28,098

ಪಶ್ಚಿಮ ಬಂಗಾಳ 8,57,087 2,34,275

ಒಟ್ಟು (ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ)

2001 1,26,66,377

2011 43,53,247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.