ADVERTISEMENT

ಉತ್ತರ ಕರ್ನಾಟಕದಲ್ಲಿ ಮೈಸೂರು ಗದೆಗಳು...

ಪ್ರವೀಣ ಕುಲಕರ್ಣಿ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಶತಮಾನಗಳ ಹಿಂದೆ ದಸರೆ ಎಂದೊಡನೆ ತಟ್ಟನೆ ನೆನಪಾಗುತ್ತಿದ್ದುದು ವಿಜಯನಗರ ಸಾಮ್ರಾಜ್ಯದ ಅಖಾಡಾದಲ್ಲಿ ನಡೆಯುತ್ತಿದ್ದ ನಾಡಕುಸ್ತಿ ವೈಭವ. ಹಂಪಿಯಲ್ಲಿ ಈಗಲೂ ಕಾಣಸಿಗುವ ಮಹಾನವಮಿ ದಿಬ್ಬದ ಮೇಲೆ ಕುಳಿತುಕೊಳ್ಳುತ್ತಿದ್ದ ಅರಸರು ಮಲ್ಲರ ಯುದ್ಧವನ್ನು ಕಣ್ತುಂಬಿಕೊಳ್ಳುತ್ತಿದ್ದರಂತೆ.
 
ಸಾಹಸ ಮೆರೆಯುತ್ತಿದ್ದ ಜಗಜಟ್ಟಿಗಳಿಗೆ ಆಸ್ಥಾನದಲ್ಲಿ ಮಂತ್ರಿಗಳಿಗೆ ಸಮಾನವಾದ ಗೌರವ ಸಿಗುತ್ತಿತ್ತಂತೆ. ವಿಜಯನಗರದ ದೊರೆಗಳಲ್ಲಿ ಅತ್ಯಂತ ಖ್ಯಾತಿ ಗಳಿಸಿದ್ದ ಶ್ರೀಕೃಷ್ಣದೇವರಾಯನ ಕಾಲದಲ್ಲಂತೂ ನೂರಾರು ಮಹಿಳಾ ಕುಸ್ತಿಪಟುಗಳೂ ಇದ್ದರು ಎಂಬ ಮಾಹಿತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ವಿಜಯನಗರ ಸಾಮ್ರಾಜ್ಯ ಹಾಳು ಹಂಪಿಯಾಗಿ ಪರಿವರ್ತನೆಗೊಂಡ ಮೇಲೆ ಅಲ್ಲಿಯ ದಸರಾ ಕುಸ್ತಿ ವೈಭವವೂ ಮಾಯವಾಗಿದೆ. ಪೈಲ್ವಾನರ ಸಂಖ್ಯೆಯೇ ಕಡಿಮೆ ಆಗಿದೆಯೇನೋ ಎನ್ನುವಷ್ಟು ಈ ಭಾಗದಲ್ಲಿ ಕುಸ್ತಿ ಸ್ಪರ್ಧೆಗಳು ಕುಂಠಿತಗೊಂಡಿವೆ. ಈ ಕೊರತೆಯನ್ನು ನೀಗಿಸುವ ಸಲುವಾಗಿಯೇ ಹಂಪಿ ಉತ್ಸವದಲ್ಲಿ ಕುಸ್ತಿ ಸ್ಪರ್ಧೆಯನ್ನು ನಡೆಸಲಾಗುತ್ತದೆ.
 
ಸುತ್ತಲೂ ಗುಡ್ಡಗಳಿಂದ ಆವೃತವಾದ ಇಲ್ಲಿಯ ನೈಸರ್ಗಿಕ ಅಖಾಡಾ ಪೈಲ್ವಾನರು ತೊಡೆ ತಟ್ಟುವಾಗ ಖಚಾಖಚ್ ಭರ್ತಿಯಾಗಿರುತ್ತದೆ. ಲಕ್ಷಾಂತರ ಕುಸ್ತಿಪ್ರಿಯರು ಕಿಕ್ಕಿರಿಯುವುದರಿಂದ ನೂಕುನುಗ್ಗಲು ಹೆಚ್ಚಾಗಿ ಪೊಲೀಸರು ಲಾಠಿ ಬೀಸುವ ಪ್ರಮೇಯವೂ ಬಂದೊದಗುತ್ತದೆ. ಇಂತಹ ಕುಸ್ತಿಪ್ರೇಮದ ಈ ನಾಡಿನಲ್ಲಿ ದಸರೆ ಸಮಯದಲ್ಲಿ ಅಖಾಡಾ ಭಣಗುಡುತ್ತಿರುತ್ತದೆ.

ಹಂಪಿ ಮಾತ್ರವಲ್ಲದೆ ಉತ್ತರ ಕರ್ನಾಟಕದ ಬಹುತೇಕ ಕುಸ್ತಿ ಅಖಾಡಾಗಳ ಸ್ಥಿತಿ ಹೀಗೇ ಇರುತ್ತದೆ. ಮೈಸೂರಿನಲ್ಲಿ ನಾಡಹಬ್ಬದ ಕುಸ್ತಿ ನಡೆಯುವುದರಿಂದ ಎಲ್ಲ ಕುಸ್ತಿಪಟುಗಳು `ಅರಮನೆ ನಗರಿ~ಯತ್ತ ದಂಡಯಾತ್ರೆ ಹೊರಟಿರುತ್ತಾರೆ.

ರಾಜರ ಕಾಲದಿಂದಲೂ ಜಮಖಂಡಿಯಲ್ಲಿ ಕುಸ್ತಿ ಸ್ಪರ್ಧೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದರೂ ದಸರಾ ಸಂದರ್ಭದಲ್ಲಿ ಹೇಳಿಕೊಳ್ಳುವಂತಹ ಬೆಳವಣಿಗೆಗಳು ಇಲ್ಲಿಯ ಗರಡಿ ಮನೆ ಇಲ್ಲವೆ ಅಖಾಡಾಗಳಲ್ಲಿ ನಡೆಯುವುದಿಲ್ಲ. ಉತ್ತರ ಕರ್ನಾಟಕದ ಕುಸ್ತಿ ಜೀವಕಳೆ ತುಂಬಿಕೊಳ್ಳುವುದು ಸಾಮಾನ್ಯವಾಗಿ ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ. ತೇರು ಎಳೆದ ಊರಿನ ಅಂಗಳದಲ್ಲಿ ಪೈಲ್ವಾನರು ತೊಡೆತಟ್ಟಲೇ ಬೇಕು ಎನ್ನುವುದು ಈ ಭಾಗದಲ್ಲಿ ಅಲಿಖಿತ ನಿಯಮವಾಗಿದೆ.

ದಸರಾದಿಂದ ಯುಗಾದಿವರೆಗಿನ ಅವಧಿಯಲ್ಲಿ ಈ ಭಾಗದ ನೂರಾರು ಗ್ರಾಮಗಳಲ್ಲಿ ಜಾತ್ರಾ ಮಹೋತ್ಸವಗಳು ನಡೆಯುತ್ತವೆ. ಪ್ರತಿ ಜಾತ್ರೆಯಲ್ಲೂ ಕುಸ್ತಿ ಸ್ಪರ್ಧೆಗಾಗಿಯೇ ಉತ್ಸವ ಸಮಿತಿಗಳು ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತವೆ. ಮೈಸೂರಿನ ಅರಮನೆ ತೊಟ್ಟಿ ಅಖಾಡಾದಲ್ಲಿ ನಡೆಯುವಂತೆ ಉತ್ತರ ಕರ್ನಾಟಕದ ಯಾವ ಭಾಗದಲ್ಲೂ ವಜ್ರಮುಷ್ಟಿ ಕಾಳಗಗಳು ನಡೆಯುವುದಿಲ್ಲ ಎಂಬುದು ನಿಜವಾದರೂ ಇಲ್ಲಿಯ ಹಣಾಹಣಿಗಳು ಅಲ್ಲಿಯಷ್ಟೇ ರೋಚಕವಾಗಿರುತ್ತವೆ.

ದಸರಾ ಸಮಯದಲ್ಲಿ ಈ ಭಾಗದ ಹಿರಿ-ಕಿರಿಯ ಪೈಲ್ವಾನರೆಲ್ಲ ಮೈಸೂರಿನ ಕಡೆಗೆ ದೃಷ್ಟಿ ಬೀರಿರುತ್ತಾರೆ. ಅಲ್ಲಿ ಸಿಗುವ ಬೆಳ್ಳಿಗದೆ, ದಸರಾ ಕಂಠೀರವ, ದಸರಾ ಕಿಶೋರ, ದಸರಾ ಕುಮಾರ ಬಿರುದುಗಳನ್ನು ಪಡೆಯಲು ಅವರೆಲ್ಲ ಹಾತೊರೆಯುತ್ತಾರೆ.

ಅಂದಹಾಗೆ, ಮೈಸೂರು ನಾಡಕುಸ್ತಿಯಲ್ಲಿ ಪಣಕ್ಕಿದ್ದ ನೂರಾರು ಬೆಳ್ಳಿಗದೆಗಳು ಉತ್ತರ ಕರ್ನಾಟಕದ ಪೈಲ್ವಾನರ ಮನೆಗಳಲ್ಲಿ ಅವರ ಸಾಧನೆಯ ಕಥೆಗಳನ್ನು ಹೇಳುತ್ತಾ ಕುಳಿತ್ತಿವೆ. ಪ್ರತಿವರ್ಷ ಬೆಳಗಾವಿ ಮತ್ತು ಬಾಗಲಕೋಟೆ ಭಾಗದ ಜನ ಒಂದಿಲ್ಲೊಂದು ಪ್ರಶಸ್ತಿಯನ್ನು ಬಾಚಿಕೊಳ್ಳದೆ ಮರಳಿ ಊರಿನ ಬಸ್ಸು ಹತ್ತುವುದಿಲ್ಲ. ಇದೇ ಕಾರಣಕ್ಕೆ ಮೈಸೂರಿನ ಅಖಾಡಾ ಮಂದಿಗೆ ಉತ್ತರ ಕರ್ನಾಟಕದ ಪೈಲ್ವಾನರನ್ನು ಕಂಡರೆ ಅಪಾರ ಪ್ರೀತಿ ಹಾಗೂ ಗೌರವ.

ಧಾರವಾಡದಲ್ಲೂ ಇದೀಗ ಖಾಸಗಿ ಸಂಘಟನೆಗಳಿಂದ ಜಂಬೂ ಸವಾರಿ ನಡೆಸಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ. ಮೈಸೂರಿನ ನಾಡಹಬ್ಬವನ್ನೇ ಧಾರವಾಡಕ್ಕೆ ತರುವ ಉದ್ದೇಶದಿಂದ ಆನೆ ಮತ್ತು ಕುದುರೆಗಳನ್ನೆಲ್ಲ ಕರೆಸಲಾಗುತ್ತದೆ. ಅದೇ ರೀತಿ ಕುಸ್ತಿ ಸ್ಪರ್ಧೆಗೂ ಚಾಲನೆ ನೀಡಲಾಗಿದೆ. ಆದರೆ, ಅರಮನೆನಗರಿಯ ಸಾಹುಕಾರ ಚನ್ನಯ್ಯ ಅಖಾಡಾದಲ್ಲಿ ನಡೆಯುವಂತೆ ಇಲ್ಲಿಯ ಕುಸ್ತಿ ಇನ್ನೂ ಜನಪ್ರಿಯವಾಗಿಲ್ಲ. ಅಲ್ಲದೆ, ಈ ಭಾಗದ ಬಹುತೇಕ ಪೈಲ್ವಾನರಿಗೆ ಈಗಲೂ ಮೈಸೂರು ನಗರವೇ ನೆಚ್ಚಿನ ತಾಣ ಎನಿಸಿದೆ.

ಶಿರಗಾಂವ, ಯಕ್ಸಂಬಾ, ತೇರದಾಳ, ಜಮಖಂಡಿ, ಮಹಾಲಿಂಗಪುರ, ಖಾನಾಪುರ, ಬೆಳಗಾವಿ ಭಾಗದಲ್ಲಿ ವರ್ಷದುದ್ದಕ್ಕೂ ಕುಸ್ತಿ ಅಖಾಡಾಗಳು ಚಟುವಟಿಕೆಯಿಂದಲೇ ಇರುತ್ತವೆ. ಅದಕ್ಕೆ ದಸರಾ ಹಬ್ಬವೇ ಆಗಬೇಕೆಂದೇನೂ ಇಲ್ಲ ಮತ್ತು ಈ ಸಂದರ್ಭದಲ್ಲಿ ವಿಶೇಷ ಕುಸ್ತಿ ನಡೆಯುವುದೂ ಇಲ್ಲ.

`ದಸರಾ ಸಂದರ್ಭದಲ್ಲಿ ಕುಸ್ತಿ ಎಂದರೆ ಅದು ಮೈಸೂರು ಕುಸ್ತಿ ಮಾತ್ರ. ಅಲ್ಲಿಯೂ ಮೊದಲಿನ ವೈಭವ ಮಾಯವಾಗಿದೆ ಎಂಬ ಕೊರಗಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಕುಸ್ತಿ ನಳನಳಿಸುತ್ತಿದ್ದು, ಜಾತ್ರೆಗಳೇ ಅದಕ್ಕೆ ಜೀವನಾಡಿಗಳಾಗಿವೆ~ ಎನ್ನುತ್ತಾರೆ ಜಮಂಖಂಡಿಯಲ್ಲಿ ಕುಸ್ತಿ ಶಾಲೆ ನಡೆಸುತ್ತಿರುವ ಹಿರಿಯ ಪೈಲ್ವಾನ ರತ್ನಕುಮಾರ ಮಠಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.