ADVERTISEMENT

ಐಟಿಎಫ್‌ಗೆ ಗ್ರಾಮೀಣ ಸೊಗಡು

ಹರ್ಷವರ್ಧನ ಪಿ.ಆರ್.
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಗುಲ್ಬರ್ಗ ಓಪನ್ ಮಹಿಳಾ ಐಟಿಎಫ್ ಫ್ಯೂಚರ್ಸ್ ಟೂರ್ನಿಯ ಫೈನಲ್ ದಿನ. ಭಾರತದ ಪ್ರೇರಣಾ ಭಾಂಬ್ರಿ ಪ್ರಶಸ್ತಿ ಮುಡಿಗೇರಿಸಿದರು. ಈ ಆಟಕ್ಕೆ ಸಾವಿರಕ್ಕೂ ಅಧಿಕ ಟೆನಿಸ್ ಪ್ರೇಮಿಗಳು ಸಾಕ್ಷಿಯಾಗಿದ್ದರು. ಪ್ರಶಸ್ತಿ ಪ್ರದಾನದ ಬಳಿಕ ಅಭಿಮಾನಿಗಳು ಆಟೋಗ್ರಾಫ್, ಛಾಯಾಚಿತ್ರಕ್ಕೆ ಆಟಗಾರ್ತಿಯರಿಗೆ ಮುಗಿಬಿದ್ದರು. ಅವರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿ ಬೆದರಿಸಿದರು. ಕೊನೆಗೆ ಹೆಚ್ಚುವರಿ ರಕ್ಷಣೆಯಲ್ಲಿ ಆಟಗಾರ್ತಿಯರನ್ನು ಕರೆದೊಯ್ಯಲಾಯಿತು.

`ಟೆನಿಸ್‌ಗೆ ಈ ರೀತಿ ಅಭಿಮಾನಿಗಳು ಹುಟ್ಟಿಕೊಳ್ಳುವುದು ಹೆಮ್ಮೆಯ ಸಂಗತಿ. ಟೆನಿಸ್ ಉತ್ತೇಜಿಸಲು ಐಟಿಎಫ್ ಟೂರ್ನಿಯನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುತ್ತಿದ್ದೇವೆ. ಭಾರತೀಯ ಆಟಗಾರ್ತಿಯ ಗೆಲುವು ಮತ್ತು ಜನ ಸಾಗರವು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಪ್ರಯತ್ನವು ಯಶಸ್ವಿ ಆಗುತ್ತಿರುವ ಲಕ್ಷಣ~ ಎಂದು ಪ್ರತಿಕ್ರಿಯಿಸಿದರು ಟೂರ್ನಿ ನಿರ್ದೇಶಕ ಸುನೀಲ್   ಯಜಮಾನ್. (2002 ಮತ್ತು 2007ರ ಪುರುಷರ ಐಟಿಎಫ್ ಟೂರ್ನಿ ನಡೆದಿತ್ತು.)

ಇದು ಹಿಂದುಳಿದ ಹೈದರಾಬಾದ್ ಕರ್ನಾಟಕದಲ್ಲಿ `ಐಟಿಎಫ್ ಟೂರ್ನಿ~ ಮೂಡಿಸುತ್ತಿರುವ ಮೋಡಿ. ಹಾಗೆಂದ ಮಾತ್ರಕ್ಕೆ ಈ ಭಾಗಕ್ಕೆ ಟೆನಿಸ್ ಹೊಸತಲ್ಲ. ಅರ್ಧ ಶತಮಾನದ ಇತಿಹಾಸವೇ ಲಭ್ಯವಿದೆ.

ಆದರೆ ಅಂದು ಆಡಳಿತಶಾಹಿ, ಅಧಿಕಾರಿಗಳು, ಪೊಲೀಸರು, ಭೂಮಾಲೀಕರು, ಉದ್ಯಮಿಗಳು ಸೇರಿದಂತೆ ಸಿರಿವಂತರ ಸೊತ್ತಾಗಿದ್ದ ಟೆನಿಸ್ ಈಗ ಸಾಮಾನ್ಯರನ್ನೂ ಸೆಳೆಯುತ್ತಿದೆ. ಕಳೆದ ದಶಕದಲ್ಲಿ ನೆರೆ- ಬರ ಬಂದರೂ ಟೆನಿಸ್ ಜನಮನ್ನಣೆ ಪಡೆಯುತ್ತಿದೆ.

ನೆನಪಿನ ಬುತ್ತಿ: ಸ್ವಾತಂತ್ರ್ಯ ಪೂರ್ವದ ಗುಲ್ಶನ್ ಮೆಹಬೂಬ್ ಉದ್ಯಾನದ  ಟೆನಿಸ್ ಅಂಗಣ 1957ರಲ್ಲಿ `ಗುಲ್ಬರ್ಗ ಕ್ಲಬ್~ ಆಯಿತು. 1956ರಲ್ಲಿ ಹೊಸದಾಗಿ `ಪೊಲೀಸ್ ಟೆನಿಸ್ ಕ್ಲಬ್~ ಅಸ್ತಿತ್ವಕ್ಕೆ ಬಂತು. ಗುಲ್ಬರ್ಗದ ಸರ್ಕಾರಿ ಕಾಲೇಜು ಪ್ರಾಂಶುಪಾಲರಾಗಿದ್ದ ಎಂ.ಎ.ಕೆ.ಖಾಜಮಿ ದಕ್ಷಿಣ ವಿಭಾಗ ಮಟ್ಟದಲ್ಲಿ ಆಡಿದ್ದರು. ಅವರಿಗೆ ಟೆನಿಸ್ ಉಸಿರಾಗಿತ್ತು.

ಅಲ್ಲದೇ ಸರ್ಕಾರಿ ಕಾಲೇಜು, ಎಂಎಸ್‌ಕೆ ಮಿಲ್, ವಿಜಯ ವಿದ್ಯಾಲಯ, ರೋಟರಿ ಕ್ಲಬ್ ಮತ್ತಿತರೆಡೆ ಮಣ್ಣಿನ ಅಂಗಣಗಳು ಇದ್ದವು. ಇಲ್ಲಿಗೆ ಆಗಮಿಸಿದ ಅಧಿಕಾರಿಗಳು, ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಹಾಗೂ ಅವರ ಜೊತೆಗೆ ಇಲ್ಲಿನ ಭೂ ಮಾಲೀಕರು, ಉದ್ಯಮಿಗಳು, ಶ್ರೀಮಂತರು ಆಡುತ್ತಿದ್ದರು. 

ಪುನರುತ್ಥಾನ: 1970ರಿಂದ 1990ರ ತನಕ ಶಿಥಿಲಾವಸ್ಥೆ ತಲುಪಿತ್ತು. ಉದ್ಯಾನದ ಟೆನಿಸ್ ಅಂಗಣದಲ್ಲಿ ಬಾರ್ ನಿರ್ಮಾಣಗೊಂಡಿತ್ತು. ಆದರೆ ಆಗಸ್ಟ್ 2002ರಂದು `ಗುಲ್ಬರ್ಗ ಲಾನ್ ಟೆನಿಸ್ ಕ್ಲಬ್~ನಲ್ಲಿ ಮೂರು ಹಾಗೂ ಪೊಲೀಸ್ ಕ್ಲಬ್‌ನಲ್ಲಿ ಒಂದು `ಸಿಂಥೆಟಿಕ್ ಹಾರ್ಡ್      ಕೋರ್ಟ್~ ನಿರ್ಮಾಣಗೊಂಡಿತು.
 
ಅದೇ ವರ್ಷ ಪುರುಷರ ಐಟಿಎಫ್ ಟೂರ್ನಿ ನಡೆಯಿತು. ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಬಂದರು. ಆ ಬಳಿಕ ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ, ವಿಷ್ಣುವರ್ಧನ ಆಡಿದರು. `ಐಟಿಎಫ್ ಟೂರ್ನಿ~ ಮೋಡಿಯು ಸಾಮಾನ್ಯರನ್ನು ಸೆಳೆಯಲು ಶುರು ಮಾಡಿತು. ಅದು ಪುನರುತ್ಥಾನದ ಅವಧಿ.

2008ರಲ್ಲಿ ಈಶಾನ್ಯ ವಲಯ ಪೊಲೀಸ್ ಮಹಾ ನಿರೀಕ್ಷಕರಾಗಿ ಕೆ.ವಿ. ಗಗನ್‌ದೀಪ್ ಬಂದರು. ಸ್ವತಃ ಟೆನಿಸ್ ಆಟಗಾರರಾದ ಅವರು, ಬೀದರ್, ಲಿಂಗಸುಗೂರ, ಮಸ್ಕಿ, ಯಾದಗಿರಿ ಮತ್ತಿತರ ಕಡೆಗಳಲ್ಲಿ ಅಂಗಣ ನಿರ್ಮಾಣ ಮತ್ತು ಪುನರುಜ್ಜೀವನಕ್ಕೆ ಶ್ರಮಿಸಿದರು. ಲಿಂಗಸುಗೂರಿನ ಕರೆಯ ಬಳಿ ಬ್ರಿಟೀಷರ ಕಾಲದ ಅಂಗಣಕ್ಕೆ ಮರುಜೀವ ನೀಡುವಲ್ಲಿ ಪಾತ್ರ ವಹಿಸಿದರು.
 
ಬೀದರ್‌ನಲ್ಲಿ ಎರಡು ವರ್ಷದ ಹಿಂದೆ ಟೆನಿಸ್ ಅಂಗಣ ನಿರ್ಮಾಣಗೊಂಡಿತು. (ಈ ಬಾರಿ ಐಟಿಎಫ್ ಟೂರ್ನಿಗಾಗಿ ಎರಡು ತಿಂಗಳಲ್ಲಿ ಮತ್ತೊಂದು ಅಂಗಣ ನಿರ್ಮಿಸಲಾಯಿತು.) ಐಜಿಪಿ ಮುತುವರ್ಜಿಯಲ್ಲಿ ಜೊತೆ ಸ್ಥಳೀಯ ಎಸ್ಪಿಗಳ ಪ್ರಯತ್ನದಿಂದ ಹಲವು ಅಂಗಣಗಳು ಬಂದವು ಎಂದು ಮೆಲುಕು ಹಾಕುತ್ತಾರೆ ಹಿರಿಯ ಆಟಗಾರ ಡಿ.ಎಚ್.ಕುಲಕರ್ಣಿ.

ನಿತ್ಯ ನಿರಂತರ: `ಮೊದಲ ಐಟಿಎಫ್ ಟೂರ್ನಿ (2002) ಬಳಿಕ ಗುಲ್ಬರ್ಗ ಲಾನ್ ಟೆನಿಸ್ ಅಸೋಸಿಯೇಶನ್ ಅಂಗಣದಲ್ಲಿ ಪ್ರತಿನಿತ್ಯ ಸುಮಾರು 25 ಮಂದಿ ಅಭ್ಯಾಸ ನಡೆಸುತ್ತಾರೆ. ಈ ಪೈಕಿ 14 ಮಕ್ಕಳು ಇರುತ್ತಾರೆ. ಅವರಿಗೆ ತರಬೇತಿ ನೀಡುತ್ತೇವೆ.

ಅಂದಿನಿಂದ ಇಲ್ಲಿ ತನಕ ಅರವಿಂದ, ಅರ್ಪಿತ, ಅಕ್ಷಯ್, ದೀಪಕ್, ಅನಿಲ್ ಸೇರಿದಂತೆ 16 ಹುಡುಗರು ಮತ್ತು 6 ಹುಡುಗಿಯರು ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ. ಹೆಚ್ಚಿನ ತರಬೇತಿಗೆ ಬೆಂಗಳೂರು ಸೇರಿದವರೂ ಇದ್ದಾರೆ~ ಎನ್ನುತ್ತಾರೆ ತರಬೇತುದಾರ ವಿಶ್ವನಾಥ. ಪೊಲೀಸ್ ಕ್ಲಬ್‌ನಲ್ಲಿ ಸುಮಾರು 15 ಮಂದಿ ನಿತ್ಯ ಅಭ್ಯಾಸ ನಡೆಸುತ್ತಾರೆ.

`ರ‌್ಯಾಕೆಟ್‌ಗೆ ಕನಿಷ್ಠ ಸಾವಿರ ರೂಪಾಯಿ. ಆರು ತಿಂಗಳಿಗೆ ಒಂದು ಜೊತೆ ಷೂ, ತಿಂಗಳಿಗೆ 300 ರೂಪಾಯಿ ಶುಲ್ಕ... ಹೀಗೆ ಸಾಮಾನ್ಯರಿಗೆ ಟೆನಿಸ್ ಸ್ವಲ್ಪ ದುಬಾರಿ~ ಎನ್ನುವುದು ಆಟಗಾರ ರಿಜ್ವಾನ್ ಮಾತು.

`ಆದರೆ 2002ರ ಬಳಿಕ ನಿರಂತರ ತರಬೇತಿ ಶಿಬಿರಗಳು ನಡೆದವು. ಆಸಕ್ತಿ ಮತ್ತು ಸಾಮರ್ಥ್ಯ ಹೊಂದಿದ ಬಡ ಕುಟುಂಬದ ಮಕ್ಕಳಿಗೆ ರಿಯಾಯಿತಿ, ಉಚಿತ ತರಬೇತಿಯ ವ್ಯವಸ್ಥೆ ಮಾಡಲಾಯಿತು. ಟೆನಿಸ್ ಈಗ ಕೇವಲ ಉಳ್ಳವರ ಆಟವಾಗಿ ಉಳಿದಿಲ್ಲ. ಸಾಮರ್ಥ್ಯದ ಸ್ಪರ್ಧೆಯಾಗುತ್ತಿದೆ.~ ಎನ್ನುತ್ತಾರೆ ವಿಶ್ವನಾಥ.

ಹೈದರಾಬಾದ್ ಕರ್ನಾಟಕದಲ್ಲಿ ಐಟಿಎಫ್ ಟೂರ್ನಿ ಮೋಡಿ ಮಾಡುತ್ತಿದೆ. ಸೆ.29ರಂದು ಮುಗಿದ ಗುಲ್ಬರ್ಗ ಓಪನ್ ಮಹಿಳಾ ಐಟಿಎಫ್ ಫ್ಯೂಚರ್ಸ್ ಟೂರ್ನಿಯೂ ಹೊಸ `ಪ್ರೇರಣೆ~ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.