ADVERTISEMENT

ಚಕ್ರವಾಕ ಮನೋಜ್‌ನ ಸ್ಕೇಟಿಂಗ್ ಪ್ರೀತಿ...

ಜಿ.ಎನ್.ಶಿವಕುಮಾರ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

`ನಿಂತ ಹೆಜ್ಜೇಲಿ ನಿಲ್ಲೋದಿಲ್ಲ. ಕಾಲಿಗೆ ಗಾಲಿ ಕಟ್ಕೊಂಡರಂಗ್ ಆಡ್ತಾನ. ಬರೀ ಗಿರ್... ಅಂತ ತಿರುಗ್ತಾನ~ ಎಂದು ಜನ ಸಾಮಾನ್ಯರು, ಊರಲ್ಲಿ ಅಲ್ಲಿಂದ-ಇಲ್ಲಿಗೆ, ಇಲ್ಲಿಂದ-ಅಲ್ಲಿಗೆ ಅಡ್ಡಾಡುವ ಜನರ ಕುರಿತು ಹೇಳುವ ನುಡಿ ಇದೆ.

ಇಲ್ಲಿ ಕಾಲಿಗೆ ಗಾಲಿ ಕಟ್ಟಿಕೊಂಡು ಗಿರ್... ಬರ್... ಅಂತ ತಿರುಗುವ ಈ ಯುವಕನಿಗೆ ನಿಶ್ಚಿತ ಗುರಿ ಇದೆ. ಅದು, ರಾಷ್ಟ್ರಮಟ್ಟ, ಅಂತರರಾಷ್ಟ್ರಮಟ್ಟದಲ್ಲಿ ಚಿನ್ನ ಗೆಲ್ಲಬೇಕು ಎಂಬ ಕಾತರ.

-ಇದು ದಾವಣಗೆರೆ ನಗರದ ರೋಲರ್ ಸ್ಕೇಟಿಂಗ್ ಕ್ರೀಡಾಪಟು `ಕರ್ನಾಟಕ ಫಾಸ್ಟರ್ ಸ್ಕೇಟರ್~ ಗೌರವಕ್ಕೆ ಪಾತ್ರರಾಗಿರುವ ಸಿ. ಮನೋಜ್ ಕುರಿತು ಹೇಳಲೇ ಬೇಕಾದ ಮಾತುಗಳು.
 
ಸತತ 13 ವರ್ಷಗಳ ನಿರಂತರ ಸಾಧನೆಯಲ್ಲಿ ತೊಡಗಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಈವರೆಗೆ 75 ಚಿನ್ನದಪದಕ, 30 ಬೆಳ್ಳಿ, 10 ಕಂಚಿನ ಪದಕ ಕೊಳ್ಳೆಹೊಡೆದಿದ್ದಾರೆ. 15 ಬಾರಿ ವೈಯಕ್ತಿಕ ಚಾಂಪಿಯನ್ ಆಗಿ ಕೂಡ ಸ್ಕೇಟಿಂಗ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

ಕ್ರೀಡಾಪಟು ಆಗಿರುವ ವಿ. ಚಂದ್ರಶೇಖರ್‌ರಾವ್ ಅವರು, ಪುತ್ರ ಮನೋಜ್‌ನ ಕಾಲಿಗೆ 3ನೇ ವರ್ಷಕ್ಕೆ ಸ್ಕೇಟಿಂಗ್ ಕಟ್ಟಿದರು. ಅಲ್ಲಿಂದ ತಂದೆಯ ಸ್ಥಾನದ ಜತೆಗೆ, ಕೋಚ್ ಆಗಿಯೂ ತರಬೇತಿ ನೀಡುತ್ತಾ ಬೆಳೆಸಿದರು. ಇಂದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಪುತ್ರ ಅಂತರರಾಷ್ಟ್ರಮಟ್ಟದಲ್ಲಿ ರಾಷ್ಟ್ರವನ್ನು ಎತ್ತಿ ಹಿಡಿಯಲಿ ಎಂಬ ಕನಸೊಂದಿದೆ.

ನಗರದ ಅಮೃತಾನಂದಮಯಿ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್. ಪ್ರತಿಭಾ ಅವರು ಪುತ್ರನ ಸಾಧನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಲ್ಲಿನ `ಹಾಲಿಡೇ ಕ್ರೀಡಾ ಕ್ಲಬ್~ನಲ್ಲಿ ತನ್ನ 3ನೇ ವಯಸ್ಸಿಗೆ ರೋಲರ್ ಸ್ಕೇಟಿಂಗ್ ಕಲಿಕೆ ಆರಂಭಿಸಿದ ಮನೋಜ್, ಬ್ಯಾಡಗಿ ಶೆಟ್ರು ಶಾಲೆಯಲ್ಲಿ 4ನೇ ತರಗತಿವರೆಗೆ, ಅಮೃತಾನಂದಮಯಿ ಶಾಲೆಯಲ್ಲಿ 8ನೇ ತರಗತಿವರೆಗೆ, ಬಾಪೂಜಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ(ಸಿಬಿಎಸ್‌ಸಿ) ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಪ್ರಸ್ತುತ ನಗರದ ಅಮನ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು(ಪಿಸಿಎಂಬಿ) ವ್ಯಾಸಂಗ ಮಾಡುತ್ತಿರುವ ಮನೋಜ್, ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಥಳೀಯ ಸ್ಕೇಟಿಂಗ್ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಾ ಬೆಳೆದ ಮನೋಜ್, ಇಲ್ಲಿನ `ಪ್ರೈಂ~ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳ, ನವದೆಹಲಿ, ವಿಶಾಖಪಟ್ಟಣ, ಪಂಜಾಬ್, ನಾಗಾಪುರ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ. ರಾಷ್ಟ್ರಮಟ್ಟಕ್ಕೆ ಸತತವಾಗಿ ಹೆಚ್ಚುಬಾರಿ ಆಯ್ಕೆಯಾಗಿರುವ ರಾಜ್ಯದ ಕ್ರೀಡಾಪಟು ಕೂಡ.

ಮನೋಜ್‌ನ ಸಾಧನೆಗೆ ಜಿಲ್ಲಾಮಟ್ಟದ `ಅಸಾಧಾರಣ ಸಾಧನೆ~, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ `ರಾಜ್ಯಮಟ್ಟದ ಅಸಾಧಾರಣ ಮಕ್ಕಳ ಪ್ರಶಸ್ತಿ~ ಲಭಿಸಿದೆ. ಜಿಲ್ಲಾಡಳಿತದಿಂದ ಸನ್ಮಾನಿತರಾಗಿದ್ದಾರೆ. 

`ಕ್ರೀಡಾ ಸಾಧನೆಯ ಜತೆಗೆ ಓದಿನಲ್ಲೂ ಮುಂದಿದ್ದೇನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. 94ರಷ್ಟು ಅಂಕಗಳಿಸಿದ್ದು, ಪಿಯುನಲ್ಲಿಯೂ ಉತ್ತಮ ಸಾಧನೆ ಮಾಡುತ್ತೇನೆ ಎಂಬ ನಂಬಿಕೆ ಇದೆ. ಶೀಘ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುತ್ತೇನೆ ಎಂಬ ವಿಶ್ವಾಸವಿದೆ. ಸಾಧನೆಗೆ ಪೋಷಕರು ಬೆನ್ನೆಲುಬಾಗಿ ನಿಂತಿದ್ದಾರೆ.

ಇತ್ತ ಕಾಲೇಜಿನಲ್ಲಿ ಎಲ್ಲ ಸ್ಪರ್ಧೆಗೆ ಹೋಗಿ ಬರಲು ಮತ್ತು ಬಿಟ್ಟುಹೋದ ತರಗತಿಗಳನ್ನು ಪುನರ್ ಹೇಳಲು ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುತ್ತಿದ್ದಾರೆ ಪ್ರಾಂಶುಪಾಲರಾದ ಕೆ. ಸಾಂಬಶಿವರಾವ್ ಅವರು. ಒಟ್ಟಾರೆ `ವಿಭಿನ್ನತೆಯಲ್ಲಿ ವಿಭಿನ್ನ~ ಹಾಗೂ `ಶಾಂತಿ-ಪ್ರೀತಿ-ಭದ್ರತೆ~ ಧ್ಯೇಯ ಹೊಂದಿರುವ ಕಾಲೇಜಿನಲ್ಲಿ ನನ್ನ ಓದಿಗೇನು ಕೊರತೆ ಇಲ್ಲ~ ಎನ್ನುತ್ತಾರೆ ಮನೋಜ್.

ಪ್ರಸ್ತುತ `ಕ್ವಾಡ್~ ಸ್ಕೇಟಿಂಗ್‌ನಲ್ಲಿ ಸಾಧನೆ ತೋರಿದ್ದು, ಇದರ ಆಧಾರದ ಮೇಲೆ `ಇನ್‌ಲ್ಯಾಂಡ್~ ವಿಭಾಗದಲ್ಲಿ ಪ್ರವೇಶ ಪಡೆದು ಅಂತರರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸಿದೆ. ರಾಷ್ಟ್ರದ ಸ್ಕೇಟರ್‌ಗಳು ಅಂತರರಾಷ್ಟ್ರಮಟ್ಟದಲ್ಲಿ ತಾಂತ್ರಿಕವಾಗಿ 5 ವರ್ಷದಷ್ಟು ಹಿಂದಿದ್ದಾರೆ. ಇವೆಲ್ಲವನ್ನು ನೀಗಿಕೊಂಡು ಗುರಿ ತಲುಪಬೇಕೆಂದಿರುವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.