ADVERTISEMENT

ಧನಬಲದ ಮುಂದೆ...

ಡಿ.ಗರುಡ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಈ ವಾರ ಎರಡು ಘಟನೆಗಳು ನಡೆದವು.

ಒಂದು: ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯು ಲಂಡನ್ ಒಲಿಂಪಿಕ್ಸ್ ಪ್ರಾಯೋಜಕ ಕಂಪೆನಿಯಾಗಿ ಡೌ ಕೆಮಿಕಲ್ಸ್ ಮುಂದುವರಿಯಲಿದೆ ಎಂದು ಹೇಳಿತು.
 
ಎರಡು: ಸಹಾರಾ ಸಮೂಹ ಸಂಸ್ಥೆಯ ಹೆಚ್ಚಿನ ಷರತ್ತುಗಳಿಗೆ ಒಪ್ಪಿಕೊಂಡು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಣ್ಣಗಾಗಿದ್ದು.

ಇವೆರಡೂ ಘಟನೆಗಳು ಪ್ರಾಯೋಜಕರ ಹಿತಕ್ಕಾಗಿ ಮಾತ್ರ ತುಡಿಯುವ ಕ್ರೀಡಾ ಆಡಳಿತಗಾರರ ಮನದೊಳಗಿನ ಗುಟ್ಟನ್ನು ಬಯಲಿಗೆ ಇಟ್ಟವು. ನಿಯಮ ಹಾಗೂ ಸಿದ್ಧಾಂತಗಳೆಲ್ಲ ಗಾಳಿಗೆ ತೂರಿ ಹೋಗುತ್ತವೆ. ಕ್ರೀಡಾ ಸಂಸ್ಥೆಗಳಿಗೆ ಧನಬಲ ನೀಡುವವರು ಬಯಸಿದರೆ ಏನಾದರೂ ಆಗಬಹುದು ಎನ್ನುವ ಕಟುಸತ್ಯವೂ ಅರ್ಥವಾಗಿದೆ.


ಐಒಸಿ ಒಲಿಂಪಿಕ್ ಕ್ರೀಡಾ ತತ್ವದೊಳಗೆ ಅಡಗಿರುವ ಜೀವಪ್ರೇಮಿ ಅಂಶಗಳನ್ನು ಮರೆತುಬಿಟ್ಟಿತು. ಪ್ರಾಯೋಜಕರನ್ನು ದೂರಮಾಡಿಕೊಳ್ಳಬಾರದು ಎನ್ನುವುದೇ ಅದಕ್ಕೆ ಕಾರಣ.
 
ಭೋಪಾಲ್ ಅನಿಲ ದುರಂತದಲ್ಲಿ ನೊಂದವರ ಪರವಾಗಿ ಸ್ಪಂದಿಸದ ಐಒಸಿ ಭಾರತದ ಜನರ ಮುಂದಿಟ್ಟಿರುವ ವಾದವನ್ನು ಒಪ್ಪುವುದಾದರೂ ಹೇಗೆ?
ಭೋಪಾಲ್ ಅನಿಲ ದುರಂತಕ್ಕೆ ಡೌ ಕೆಮಿಕಲ್ಸ್ ಹೊಣೆಯಲ್ಲ ಎಂದು ವಿವರಣೆ ನೀಡಿದ್ದೇ ವಿಚಿತ್ರ.

ಯೂನಿಯನ್ ಕಾರ್ಬೈಡ್ ಕೊಂಡುಕೊಂಡಿರುವ ಮಾತ್ರಕ್ಕೆ ಘಟನೆಗೆ ಇದೇ ಕಂಪೆನಿ ಕಾರಣ ಎನ್ನುವಂತೆ ಬಿಂಬಿಸುವುದೂ ಸೂಕ್ತವಲ್ಲವೆಂದು ಹೇಳಿದ್ದು ಕೂಡ ಸುಲಭವಾಗಿ ಕೈತೊಳೆದುಕೊಳ್ಳುವ ಯತ್ನ.
 
ಒಟ್ಟಿನಲ್ಲಿ ಐಒಸಿ ಡೌ ಅನ್ನು ಲಂಡನ್ ಒಲಿಂಪಿಕ್ಸ್ ಪ್ರಾಯೋಜಕತ್ವ ಸಂಸ್ಥೆಯಾಗಿ ಮುಂದುವರಿಸುವ ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದೆ.
ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಾರಣ.
 
ಆದರೆ ಅಂಥದೊಂದು ಕಂಪೆನಿಯನ್ನು ಖರೀದಿ ಮಾಡಿರುವ ಡೌ ಸೂಕ್ತವಾದ ಪರಿಹಾರವನ್ನು ಸಂತ್ರಸ್ತರಿಗೆ ನೀಡಿಲ್ಲವೆಂದು ದೂರುವುದೇ ಒಲಿಂಪಿಕ್ ಸಮಿತಿಗೆ ದೊಡ್ಡ ತಪ್ಪು ಎನ್ನುವಂತೆ ಕಾಣಿಸಿದೆ.
 

ಒಲಿಂಪಿಕ್ಸ್‌ನಿಂದ ಈ ಕೆಮಿಕಲ್ ಕಂಪೆನಿಯನ್ನು ದೂರ ಇಡಬೇಕೆಂದು ಕೇಳಿದ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮನವಿಯನ್ನೂ ಅದು ಗಂಭೀರವಾಗಿ ಪರಿಗಣಿಸಲಿಲ್ಲ. ನೀಡಿದ್ದೆಲ್ಲಾ ಹಾರಿಕೆಯ ಉತ್ತರ. ಭಾರತದವರ ಕೋರಿಕೆಗಿಂತ ಅದು ಡೌ ಹಿತಕ್ಕೆ ಮಹತ್ವ ನೀಡಿದ್ದೇ ಈ ರೀತಿಯ ಪೇಲವವಾದ ಪ್ರತಿಕ್ರಿಯೆಗಳಿಗೆ ಕಾರಣ.

ADVERTISEMENT


1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತವು ವಿಶ್ವವೇ ಕಂಡಿರುವ ದೊಡ್ಡ ದುರ್ಘಟನೆ. ಆ ಕರಾಳ ಘಟನೆಯಲ್ಲಿ ಮೃತಪಟ್ಟವರು ಹಾಗೂ ಸಂತ್ರಸ್ತರ ಬಗ್ಗೆ ಐಒಸಿ ಸುರಿಸಿದ್ದು ಮೊಸಳೆ ಕಣ್ಣೀರು.
 

ದುರಂತದ ನಂತರವೂ ದೀರ್ಘ ಕಾಲದಿಂದ ನರಕಯಾತನೆ ಅನುಭವಿಸುತ್ತಿರುವ ಜನರ ಕಣ್ಣೀರು ಅದಕ್ಕೆ ಕಾಣಿಸುತ್ತಲೇ ಇಲ್ಲ. ಡೌ ಕೊಟ್ಟಿರುವ ಪರಿಹಾರವೇ ದೊಡ್ಡದು ಎನ್ನುವಂಥ ದೊಡ್ಡಸ್ತಿಕೆಯ ಮಾತು ಐಒಸಿ ಮುಖ್ಯಸ್ಥ ಜಾಕ್ ರಾಗ್ ಅವರದ್ದು.

ಒಲಿಂಪಿಕ್ ಕೂಟಕ್ಕೆ ಧನಬಲ ನೀಡಿರುವ ಡೌ ಕೈಬಿಟ್ಟರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಲಂಡನ್ ಒಲಿಂಪಿಕ್ ಹದಗೆಡುತ್ತದೆ ಎನ್ನುವ ಭಯವೇ ರಾಗ್ ಹೀಗೊಂದು ರಾಗ ಎಳೆಯಲು ಕಾರಣ ಎನ್ನುವುದನ್ನು ವಿವರಿಸಿ ಹೇಳಬೇಕಾಗಿಲ್ಲ.

ಆದ್ದರಿಂದಲೇ ರಾಗ್ ಸ್ಪಷ್ಟನೆಯನ್ನು ಭಾರತ ಒಪ್ಪಿಕೊಂಡಿಲ್ಲ. ಈ ವಿಷಯದಲ್ಲಿ ಈಗ ನಮ್ಮ ದೇಶದ ಸರ್ಕಾರ ಯಾವ ನಿಲುವು ಪ್ರಕಟಿಸುತ್ತದೆಂದು ಕಾಯ್ದು ನೋಡಬೇಕು. ಒಂದು ಅಂಶವಂತೂ ಸ್ಪಷ್ಟ ಡೌ ಪ್ರಾಯೋಜಕತ್ವದಲ್ಲಿ ಮುಂದುವರಿಯಲಿದೆ.

ಪ್ರತಿಭಟನಾಕಾರರು ಏನೇ ಕಸರತ್ತು ಮಾಡಿದರೂ ಐಒಸಿ ಮನಸ್ಸು ಬದಲಿಸಲು ಆಗದು. ಐಒಸಿ ಈಗಾಗಲೇ ಡೌ ಕೆಮಿಕಲ್ಸ್‌ನ ಧನಬಲದ ಎದುರು ಬಾಗಿದೆ. ಇನ್ನಾರ ಮುಂದೆಯೂ ಬಾಗುತ್ತದೆಂದು ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ.


ಹೀಗೆ ಪ್ರಾಯೋಜಕರ ಒಳಿತಿಗಾಗಿ ಮಾತ್ರ ಕ್ರೀಡಾ ಸಂಸ್ಥೆಗಳು ಪಟ್ಟು ಸಡಿಲಿಸಿದ್ದು ದೊಡ್ಡ ಅಚ್ಚರಿಯೇನಲ್ಲ. ಬಿಸಿಸಿಐನಂಥ ಬಲವುಳ್ಳ ಕ್ರೀಡಾ ಸಂಸ್ಥೆಯು ಕೂಡ ಸಹಾರಾ ಸಮೂಹ ಹಾಕಿದ ಪಟ್ಟಿಗೆ `ಚಿತ್~ ಆಗಿದೆ. ಮಾತೆತ್ತಿದರೆ ನಿಯಮಗಳ ಪಾಲಿಸುವ ತತ್ವಪದ ಉದುರಿಸುವ ಬಿಸಿಸಿಐ ತಾನೇ ರೂಪಿಸಿದ ನಿಯಮಗಳ ಬಂಧನವನ್ನು ಸಹಾರಾಕ್ಕೆ ಸಹಕಾರ ನೀಡುವ ಉದ್ದೇಶದಿಂದ ಸಡಿಲಗೊಳಿಸಿದೆ.

 ಎಲ್ಲಿ ಭಾರತ ತಂಡದ ಮುಖ್ಯ ಪ್ರಾಯೋಜಕ ಸಂಸ್ಥೆಯು ಕೈಬಿಟ್ಟು ಹೋಗುವುದೋ ಎನ್ನುವ ಭಯವೇ ಬಿಸಿಸಿಐ ಒಂದು ಹೆಜ್ಜೆ ಹಿಂದೆ ಸರಿದು ನಿಲ್ಲುವುದಕ್ಕೆ ಕಾರಣ. ಸಂಧಾನದ ಹೆಸರಿನಲ್ಲಿ ಪ್ರಾಯೋಜಕರಿಗೆ ಶರಣಾಗಿ ಐಪಿಎಲ್ ಆಟಗಾರರ ವರ್ಗಾವಣೆಯ ವಿಷಯದಲ್ಲಿ ಪಟ್ಟು ಸಡಿಲಗೊಳಿಸಿದೆ  ಕ್ರಿಕೆಟ್ ಮಂಡಳಿ!                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.