ADVERTISEMENT

ನಿಮ್ಮ ಸಾಧನೆ ಮುಗಿಲಿನಷ್ಟೇ ಎತ್ತರ

ಕೆ.ಓಂಕಾರ ಮೂರ್ತಿ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

`ಸಚಿನ್ ಮೊದಲು ನೂರನೇ ಶತಕ ಗಳಿಸುತ್ತಾರಾ? ಅಥವಾ ಪೆಟ್ರೋಲ್ ಬೆಲೆ ಮೊದಲು ನೂರು ರೂಪಾಯಿ ದಾಟುತ್ತಾ?~

-ಇಂತಹ ಒಂದು ತಮಾಷೆಯ ಚರ್ಚೆ ಒಂದು ವರ್ಷದಿಂದ ಫೇಸ್ ಬುಕ್, ಟ್ವಿಟರ್, ಆರ್ಕುಟ್‌ನಲ್ಲಿ ಹರಿದಾಡುತ್ತಲೇ ಇತ್ತು. ತೆಂಡೂಲ್ಕರ್ ಹೋದಲೆಲ್ಲಾ ಒಂದೇ ಪ್ರಶ್ನೆ. ನೂರನೇ ಶತಕ ಯಾವಾಗ...? ಕ್ಯಾಬ್ ಡ್ರೈವರ್ ಮಾತುಗಳಲ್ಲಿ, ಆಟೋ ಚಾಲಕರ ಧ್ವನಿಯಲ್ಲಿ, ಹೋಟೆಲ್, ಕಚೇರಿ, ಬಸ್ ನಿಲ್ದಾಣಗಳ್ಲ್ಲಲೂ ಸಚಿನ್ ಅವರ ನೂರನೇ ಶತಕದ ಬಗ್ಗೆಯೇ ಚರ್ಚೆ, ಜೊತೆಗೆ ಟೀಕೆಗಳು.

ನೂರಾರು ದಾಖಲೆ ನಿರ್ಮಿಸಿರುವ ಸಚಿನ್‌ಗೆ ಇದೊಂದು ಸಾಧನೆ ಮಾಡುವುದು ದೊಡ್ಡ ವಿಷಯವಾಗಿರಲಿಲ್ಲ. ಆದರೆ 99 ಶತಕ ಗಳಿಸಿದ್ದರಲ್ಲ ಎಂಬುದನ್ನು ನೆನೆದು ಖುಷಿಪಡಬೇಕಾದವರು ಟೀಕಿಸಲು ಆರಂಭಿಸಿದರು. ಮುಕ್ಕಾಲು ಭಾಗ ತುಂಬಿರುವ ನೀರಿನ ಲೋಟದ ಖಾಲಿ ಭಾಗದತ್ತ ಬೊಟ್ಟು ಮಾಡಲು ಶುರು ಮಾಡಿದರು. ಸಚಿನ್ ಇಂಥ ಟೀಕೆ ಎದುರಿಸಿದ್ದು ಇದು ಮೊದಲೇನಲ್ಲ ಬಿಡಿ!

`ಸಚಿನ್ ಶತಕ ಗಳಿಸಿದಾಗಲೆಲ್ಲಾ ಭಾರತ ಸೋಲುತ್ತೆ, ಲಿಟಲ್ ಚಾಂಪಿಯನ್ ಪಂದ್ಯ ಗೆದ್ದುಕೊಡುವ ಬ್ಯಾಟ್ಸ್‌ಮನ್ ಅಲ್ಲ. ನೂರನೇ ಶತಕದ ಮಾತು ಮರೆತುಬಿಡಿ~ ಎನ್ನುವ    ಸಾಲು ಸಾಲು ಟೀಕೆಗಳು ಅದೆಷ್ಟೊ ಬಾರಿ ಅವರ ಕಿವಿಗಳನ್ನು ಅಪ್ಪಳಿಸಿವೆ.
 
ಎಂಥಾ ವಿಪರ್ಯಾಸ ನೋಡಿ, ಪ್ರತಿ ಬಾರಿ ಸಚಿನ್ ಕಣಕ್ಕಿಳಿದಾಗ ಅವರಿಂದ ಶತಕ ನಿರೀಕ್ಷೆ ಮಾಡುತ್ತೇವೆ. ಅಕಸ್ಮಾತ್ ಶತಕ ಗಳಿಸಿ ಭಾರತ ಸೋತರೆ ಅದಕ್ಕೆ ಸಚಿನ್ ಅವರನ್ನು ಹೊಣೆಯಾಗಿಸುತ್ತೇವೆ. ಇದು ಅತಿಯಾದ ಅಭಿಮಾನವೋ? ಭ್ರಮೆಯೋ? ನಿರಾಶೆಯಿಂದ ಉದ್ಭವಿಸುವ ಪ್ರತಿಕ್ರಿಯೆಯೋ? ಗೊತ್ತಾಗುತ್ತಿಲ್ಲ.

ಸಚಿನ್ ಬಗ್ಗೆ ಅವರಿಗೇನು ಅಭಿಮಾನ ಇಲ್ಲ ಎನ್ನುವುದು ಇದರ ಅರ್ಥವಲ್ಲ. ಅವರನ್ನು ತುಂಬಾ ಪ್ರೀತಿಸುತ್ತಾರೆ. ಸಚಿನ್ ಬಾರಿಸುವ ಪ್ರತಿ ಬೌಂಡರಿಗಳನ್ನು ಖುಷಿಯಿಂದ ಸವಿದಿರುತ್ತಾರೆ. ಸಿಕ್ಸರ್ ಎತ್ತಿದಾಗ ಜಿಗಿದಾಡಿರುತ್ತಾರೆ. ಶತಕ ಗಳಿಸಿದಾಗ ಚಪ್ಪಾಳೆ ತಟ್ಟಿರುತ್ತಾರೆ!

ಆದರೆ ಶುಕ್ರವಾರ ಕೇಂದ್ರದ ಬಜೆಟ್ ವೀಕ್ಷಿಸುತ್ತಿದ್ದವರ ಕಣ್ಣುಗಳೆಲ್ಲಾ ಒಮ್ಮೆಲೇ ಕ್ರಿಕೆಟ್‌ನತ್ತ ಹರಿದಿದ್ದವು. ತೆರಿಗೆ ಮಿತಿ ಎಷ್ಟು? ಯಾವ ವಸ್ತು ಅಗ್ಗ? ಎಂದು ಕೇಳುವ ಸಮಯದಲ್ಲಿ `ಸಚಿನ್ ಸ್ಕೋರ್ ಎಷ್ಟಾಯಿತು ಸರ್~ ಎಂದು ಕ್ರಿಕೆಟ್ ಪ್ರೇಮಿಗಳು ಕಚೇರಿಗೆ ಕರೆ ಮಾಡುತ್ತಿದ್ದರು. ಕಾರಣ ಅಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಶತಕಗಳ ಶತಕದ ಗೆರೆ ಮುಟ್ಟಿದರು.

ಬಾಂಗ್ಲಾದೇಶವಾದರೇನು? ಆಸ್ಟ್ರೇಲಿಯಾ ತಂಡವಾದರೇನು? ಒಬ್ಬ ಬ್ಯಾಟ್ಸ್‌ಮನ್ ಔಟ್ ಆಗಲು ಒಂದು ಎಸೆತ ಸಾಕು. ಆ ಎಸೆತ ಶಾಲಾ ಬಾಲಕನೊಬ್ಬ ಹಾಕಿದ್ದು ಇರಬಹುದು! ಅಷ್ಟಕ್ಕೂ ಬಾಂಗ್ಲಾದ ಬೌಲಿಂಗ್ ಚೆನ್ನಾಗಿಯೆ ಇದೆ. ನಿಜ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸಚಿನ್ ನೂರನೇ ಶತಕ ದಾಖಲಿಸಿರಬಹುದು.

ಆದರೆ ಉಳಿದ 99 ಶತಕಗಳು ಲೆಕ್ಕಕ್ಕಿಲ್ಲವೇ? ಇದು ಬಾಂಗ್ಲಾ ಎದುರಿನ ಏಕದಿನ ಪಂದ್ಯದಲ್ಲಿ ಬಂದ ಮೊದಲ ಶತಕ ಎಂಬುದು ನೆನಪಿರಲಿ. ತೆಂಡೂಲ್ಕರ್ ಒಂದು ವರ್ಷದಿಂದ ಅಂಥ ಹೇಳಿಕೊಳ್ಳುವ ಫಾರ್ಮ್‌ನಲ್ಲಿರಲಿಲ್ಲ. ಆದರೆ ಫಾರ್ಮ್ ಎಂಬುದು ಎಲೆ ಮೇಲಿನ ನೀರಿನ ಗುಳ್ಳೆಯಂತೆ. ಅದು ತಾತ್ಕಾಲಿಕ. ಕ್ಲಾಸ್ ಯಾವತ್ತಿಗೂ ಶಾಶ್ವತ! 

 `ನನ್ನ ಪ್ರಕಾರ ಸಚಿನ್ ಮೇಲಿರುವಷ್ಟು ಒತ್ತಡ ಯಾರ ಮೇಲೂ ಇರಲಿಕ್ಕಿಲ್ಲ. ಪ್ರತಿ ಪಂದ್ಯದಲ್ಲೂ ಸಚಿನ್ ಶತಕ ಬಾರಿಸಬೇಕು ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಾರೆ. ಅಂತಹ ಒತ್ತಡವನ್ನು ಸಹಿಸಿಕೊಂಡು ಅವರು ಆಡುತ್ತಾರೆ~ ಎಂದು ಮಾರ್ಕ್ ವಾ ಒಮ್ಮೆ ಹೇಳಿದ್ದರು.

ಕ್ರಿಕೆಟ್ ಕ್ರೇಜ್ ಭಾರತದ್ಲ್ಲಲಿ ಅಭಿಮಾನಿಗಳು, ಮಾಧ್ಯಮದ ಒತ್ತಡದ ಅಡಿಯಲ್ಲಿ ಅವರು ಆಡುತ್ತಾ ಬಂದಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳ ಕನಸನ್ನು ಹೊತ್ತು ನಡೆದು ಬಂದಿದ್ದಾರೆ. ಇವರು ಸಚಿನ್ ತಪ್ಪೇ ಮಾಡಬಾರದು ಎಂದು ಭಾವಿಸಿದಂತಹ ಅಭಿಮಾನಿಗಳು. ಆದರೆ  ಸಚಿನ್ ಈ ಎ್ಲ್ಲಲಾ ಒತ್ತಡವನ್ನು ನಿಭಾಯಿಸಿ ಆಡುತ್ತಿರುವ ರೀತಿ ಅಚ್ಚರಿ ಮೂಡಿಸುತ್ತದೆ.

ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರ ಒಂದು ಶತಕ ಗಳಿಸುವುದೇ ಕಷ್ಟ. ಆದರೆ ಈ ಚಾಂಪಿಯನ್ ನೂರು ಶತಕ ಸಿಡಿಸಿದ್ದಾರೆ!
`ದಿನನಿತ್ಯ ಸಾವಿರಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿರುತ್ತವೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಈಗ ನನ್ನ ಸಾಮರ್ಥ್ಯ ಸಾಬೀತುಪಡಿಸಬೇಕಾದ ಅವಶ್ಯಕತೆ ಇಲ್ಲ. ಅದಕ್ಕಾಗಿ ನಾನೆಂದೂ ಆಡಿಲ್ಲ. ಆದರೆ ತಂಡ ಬಯಸಿದ್ದನ್ನು ನಾನು ಮಾಡಲು ಸದಾ ಸಿದ್ಧ~ ಎನ್ನುವುದು ಮುಂಬೈಕರ್ ಖಡಕ್ ನುಡಿ.

ಈ ಕ್ರೀಡಾ ಪ್ರಪಂಚದಲ್ಲಿ ಒಬ್ಬ ಕ್ರೀಡಾಪಟು ಅದೆಷ್ಟೊ ಸಾಧನೆ ಮಾಡಿರಬಹುದು. ವಿಶ್ವ ಚಾಂಪಿಯನ್ ಆಗಿರಬಹುದು. ಹ್ಯಾಟ್ರಿಕ್ ವಿಶ್ವಕಪ್ ಗೆದ್ದಿರಬಹುದು. 16 ಗ್ರ್ಯಾನ್ ಸ್ಲಾಮ್ ಮುಡಿಗೇರಿಸಿಕೊಂಡಿರಬಹುದು, ಒಂದೇ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕ ಜಯಿಸಿರಬಹುದು, ಸಾವಿರಾರು ಕೋಟಿ ಹಣ ಮಾಡಿರಬಹುದು.

ಆದರೆ `ಸಿಡಿಲ ಮರಿ~ ತೆಂಡೂಲ್ಕರ್ ಉಳಿದೆಲ್ಲವರಿಗಿಂತ ವಿಭಿನ್ನವಾಗಿ ಉಳಿಯುತ್ತಾರೆ. ಏಕೆ ಗೊತ್ತಾ? ಒಬ್ಬ ಕ್ರೀಡಾಪಟು ಅಂತರರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಆರಂಭದ ದಿನಗಳಿಂದ 23 ವರ್ಷಗಳವರೆಗೆ ಒಂದೇ ಮಟ್ಟದ ನಿರೀಕ್ಷೆ ಕಾಯ್ದುಕೊಂಡ ಹೋದ ಉದಾಹರಣೆ ಇಲ್ಲ.

`ಯಶಸ್ಸು ಎಂಬುದು ಒಂದು ಪಯಣ. ಆ ದಾರಿಯಲ್ಲಿ ನಿಮ್ಮ ಮೇಲೆ ಕಲ್ಲು ಎಸೆಯಲು ಕೆಲವರು ಕಾಯುತ್ತಿರುತ್ತಾರೆ. ಆದರೆ ಅದೇ ಕಲ್ಲುಗಳನ್ನು ನಾನು ಮೈಲಿಗ್ಲ್ಲಲುಗಳನ್ನಾಗಿಸಿಕೊಂಡೆ. ನನ್ನ ಇಷ್ಟು ವರ್ಷಗಳ ಪಯಣದಲ್ಲಿ ಉಬ್ಬು, ತಗ್ಗುಗಳಿದ್ದವು. ಸವಾಲು ಎದುರಾದವು. ಈಗ ಇಲ್ಲಿಗೆ ಬಂದು ನಿಂತಿದ್ದೇನೆ. ಅದೊಂದು ಅಮೋಘ ಪಯಣ~ ಎಂದು ಒಮ್ಮೆ ತೆಂಡೂಲ್ಕರ್ ಹೇಳಿದ್ದರು.

ಸಚಿನ್ ಏನು ಸಾಧಿಸಿದ್ದಾರೆ, ಯಾವ ಗುರಿ ಮುಟ್ಟಿದ್ದಾರೆ ಎಂಬುದು ಇ್ಲ್ಲಲಿ ನಗಣ್ಯ. ಆದರೆ ಅವರು ನಡೆದ ಬಂದ ದಾರಿಯೇ ಬಹು ಸುಂದರ. ತೆಂಡೂಲ್ಕರ್ ಈಗ ಟೆಸ್ಟ್‌ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಗಳಿಸಿದ್ದಾರೆ (ಬಾಂಗ್ಲಾದೇಶ ಎದುರಿನ ಪಂದ್ಯದವರೆಗೆ).

ತೆಂಡೂಲ್ಕರ್ ಈಗ ಮೊದಲಿನಂತೆ ಶ್ರೇಷ್ಠ ಫಾರ್ಮ್‌ನಲ್ಲಿ ಇಲ್ಲ. ಅದನ್ನು ಒಪ್ಪಲೇಬೇಕು. 39 ವರ್ಷ ವಯಸ್ಸಿನ ದೇಹ ಹಾಗೂ ಫಿಟ್‌ನೆಸ್ ಸಮಸ್ಯೆ ಅದಕ್ಕೆ ಅಡ್ಡಿಯಾಗಿದೆ. ಹಾಗಾಗಿ ಮೊದಲಿನಂತೆ ಆಡಬೇಕು ಎಂಬುದನ್ನು ನಿರೀಕ್ಷಿಸುವುದು ಸರಿಯಲ್ಲ.

ಆದರೆ ಸಚಿನ್‌ಗೆ ದಾಖಲೆಗಳೇನು ಹೊಸದಲ್ಲ ಬಿಡಿ. ಏಕದಿನ ಹಾಗೂ ಟೆಸ್ಟ್‌ನಲ್ಲಿ ಸಾಧನೆಗಳ ಸರಮಾಲೆಯನ್ನು ಪೋಣಿಸಿದ್ದಾರೆ. `ಕ್ರಿಕೆಟ್ ಆಡುವುದಷ್ಟೇ ನನ್ನ ಕನಸಾಗಿತ್ತು. ಆದರೆ ಇಷ್ಟೆಲ್ಲ ದಾಖಲೆ ನಿರ್ಮಾಣವಾಗಿರುವುದು ಹೆಮ್ಮೆ ಎನಿಸುತ್ತದೆ~ ಎನ್ನುತ್ತಾರೆ  ಸಚಿನ್.                        ಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.