ADVERTISEMENT

ನಿರಾಸೆಯ ನಡುವೆ ಭರವಸೆಯ ಬೆಳಕು

ಮಹಮ್ಮದ್ ನೂಮಾನ್
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST
ನಿರಾಸೆಯ ನಡುವೆ ಭರವಸೆಯ ಬೆಳಕು
ನಿರಾಸೆಯ ನಡುವೆ ಭರವಸೆಯ ಬೆಳಕು   

27 ವರ್ಷಗಳ ಬಿಡುವಿನ ಬಳಿಕ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಆಡಿದ ಭಾರತ ತಂಡ ಯಾವುದೇ ಗೆಲುವು ಪಡೆಯದೆ ದೋಹಾದಿಂದ ತವರಿಗೆ ಆಗಮಿಸಿದೆ. ಏಷ್ಯಾದ ಫುಟ್‌ಬಾಲ್‌ನಲ್ಲಿ ಭಾರತ ಈಗಲೂ ಅಂಬೆಗಾಲಿಡುತ್ತಿರುವ ‘ಶಿಶು’. ಇಂತಹ ತಂಡವೊಂದಕ್ಕೆ ಬಲಾಢ್ಯರ ಜೊತೆ ಪೈಪೋಟಿ ನೀಡಲು ಅವಕಾಶ ದೊರೆತದ್ದು ನ್ಯಾಯಯುತವೇ ಎಂಬ ಚರ್ಚೆ ಫುಟ್‌ಬಾಲ್ ವಲಯದಲ್ಲಿ ಕೇಳಿಬರುತ್ತಿದೆ. ಮತ್ತೊಂದೆಡೆ, ಏಷ್ಯಾ ಕಪ್‌ನಲ್ಲಿ ತೋರಿದ ಪ್ರದರ್ಶನ ಭಾರತದ ಫುಟ್‌ಬಾಲ್‌ನ ಹೊಸ ಶಕೆಗೆ ನಾಂದಿ ಹಾಡಿದೆ ಎಂಬುದು ಫುಟ್‌ಬಾಲ್ ಪಂಡಿತರ ಹೇಳಿಕೆ.

ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಅಧ್ಯಕ್ಷ ಮಹಮ್ಮದ್ ಬಿನ್ ಹಮ್ಮಾಮ್ ‘ಈ ಟೂರ್ನಿ ಭಾರತದ ಫುಟ್‌ಬಾಲ್ ಕ್ರೀಡೆಯನ್ನು ನಿದ್ದೆಯಿಂದ ಬಡಿದೆಬ್ಬಿಸುವಂತೆ ಮಾಡಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೀಗ್‌ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಭಾರತ ಮುಗ್ಗರಿಸಿತ್ತು. ಇದು ಟೀಕಾಕಾರರಿಗೆ ಒಳ್ಳೆಯ ಅವಕಾಶ ನೀಡಿದೆ.

ದುರ್ಬಲ ತಂಡಗಳು ಪಾಲ್ಗೊಳ್ಳುವ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಗೆಲುವು ಪಡೆದು ಭಾರತ ಏಷ್ಯಾ ಕಪ್‌ಗೆ ‘ಹಿಂಬಾಗಿಲಿನಿಂದ’ ಅರ್ಹತೆ ಪಡೆದಿದೆ ಎಂಬ ಟೀಕೆ ಇದೆ. ಈ ಕಾರಣ ಥಾಯ್ಲೆಂಡ್, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ಮುಂತಾದ ಪ್ರಬಲ ತಂಡಗಳಿಗೆ ಏಷ್ಯಾ ಕಪ್‌ನಲ್ಲಿ ಆಡುವ ಅವಕಾಶ ತಪ್ಪಿಹೋಗಿದೆ ಎಂಬುದು ಕೆಲವರ ವಾದ.

ಏಷ್ಯಾ ಕಪ್‌ನಲ್ಲಿ ಭಾರತ ಆಡುವ ಪಂದ್ಯಗಳ ಫಲಿತಾಂಶ ಹೆಚ್ಚುಕಡಿಮೆ ಮೊದಲೇ ನಿರ್ಧಾರವಾಗಿತ್ತು. ಭಾರತ ‘ಸಿ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಹರೇನ್ ಮತ್ತು ದಕ್ಷಿಣ ಕೊರಿಯಾ ಜೊತೆ ಸ್ಥಾನ ಪಡೆದಿತ್ತು. ಈ ತಂಡಗಳು ಒಂದು ರೀತಿಯಲ್ಲಿ ಮೂರು ಪಾಯಿಂಟ್‌ಗಳನ್ನು ಕೈಯಲ್ಲಿ ಹಿಡಿದುಕೊಂಡೇ ಟೂರ್ನಿಗೆ ಆಗಮಿಸಿದ್ದವು. ಏಕೆಂದರೆ ಭಾರತದಿಂದ ತಕ್ಕ ಸವಾಲು ಎದುರಾಗದು ಎಂಬುದು ಮೊದಲೇ ಖಚಿತವಾಗಿತ್ತು.

ಥಾಯ್ಲೆಂಡ್ ಮತ್ತು ಇಂಡೋನೇಷ್ಯಾ ಮುಂತಾದ ತಂಡಗಳು ಅರ್ಹತಾ ಹಂತದಲ್ಲಿ ಪ್ರಬಲರ ಜೊತೆ ಪೈಪೋಟಿ ನಡೆಸಿದ್ದವು. ಇದರಿಂದ ಈ ತಂಡಗಳಿಗೆ ಅವಕಾಶ ಲಭಿಸಲಿಲ್ಲ. ಅರ್ಹತಾ ಹಂತದಲ್ಲಿ ದುರ್ಬಲ ತಂಡಗಳು ಎದುರಾದ ಕಾರಣ ಭಾರತ ಏಷ್ಯಾ ಕಪ್‌ಗೆ ಸುಲಭವಾಗಿ ಅರ್ಹತೆ ಗಿಟ್ಟಿಸಿದೆ ಎಂಬ ಮಾತು ಕೂಡಾ ಕೇಳಿಬಂದಿದೆ.

ಆದರೆ ಇಂತಹ ಟೀಕೆಗಳಿಗೆ ಮಹಮ್ಮದ್ ಬಿನ್ ಹಮ್ಮಾಮ್ ಬಳಿ ಉತ್ತರವಿದೆ. ‘ಜಪಾನ್ ಏಷ್ಯಾ ಕಪ್‌ನಲ್ಲಿ ಮೊದಲು ಪಾಲ್ಗೊಂಡದ್ದು 1988 ರಲ್ಲಿ. ಆ ಟೂರ್ನಿಯಲ್ಲಿ ತಂಡ ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಆದರೆ 1992 ರಲ್ಲಿ ನಡೆದ ಮುಂದಿನ ಏಷ್ಯಾ ಕಪ್‌ನಲ್ಲಿ ಜಪಾನ್ ಚಾಂಪಿಯನ್ ಆಯಿತು. ಭಾರತವೂ ಏಕೆ ಹೀಗಾಗಬಾರದು’ ಎಂದು ಹಮ್ಮಾಮ್ ಆತ್ಮವಿಶ್ವಾಸದಿಂದ ಹೇಳುವರು.

ಭರವಸೆಯ ಬೆಳಕು: ಭಾರತಕ್ಕೆ ಅವಕಾಶ ನೀಡಿದ್ದು ಸರಿಯೇ? ತಪ್ಪೇ? ಎಂಬ ಚರ್ಚೆಯನ್ನು ಬದಿಗಿಟ್ಟು ನೋಡೋಣ. ಟೂರ್ನಿಯಲ್ಲಿ ತಂಡ ನೀಡಿದ ಪ್ರದರ್ಶನ ದೇಶದ ಫುಟ್‌ಬಾಲ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು ನಿಜ.

ಆಡಿದ ಮೂರು ಪಂದ್ಯಗಳಲ್ಲಿ ಭಾರತ ಒಟ್ಟು 13 ಗೋಲುಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟರೆ, ಮೂರು ಗೋಲುಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿತು. ಆಸ್ಟ್ರೇಲಿಯಾ, ಬಹರೇನ್ ಮತ್ತು ದಕ್ಷಿಣ ಕೊರಿಯಾ ಕೈಯಲ್ಲಿ ಕ್ರಮವಾಗಿ 0-4, 2-5, 1-4 ರಲ್ಲಿ ಸೋಲು ಎದುರಾಯಿತು. ಎದುರಾಳಿ ತಂಡಗಳ ರ್ಯಾಂಕಿಂಗ್ ನೋಡಿದರೆ ಭಾರತದ ಸೋಲು ಅಷ್ಟೊಂದು ‘ಹೀನಾಯ’ವಾಗಿಲ್ಲ.
ಫಿಫಾ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡ ತಂಡ ಬಹರೇನ್. ಅದರ ವಿರುದ್ಧ ಭಾರತಕ್ಕೆ ಎರಡು ಗೋಲುಗಳನ್ನು ಗಳಿಸಲು ಸಾಧ್ಯವಾದದ್ದು ಮೆಚ್ಚುವ ಅಂಶ. ಅದೇ ರೀತಿ ವಿಶ್ವಕಪ್‌ನಲ್ಲಿ ಆಡಿದ ಆಸ್ಟ್ರೇಲಿಯಾ ತಂಡಕ್ಕೆ ಕೇವಲ ನಾಲ್ಕು ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿತು.

ಆಸೀಸ್ ತಂಡ ಭಾರತದ ವಿರುದ್ಧ ಕಣಕ್ಕಿಳಿಸಿದ ಮೊದಲ ಇಲೆವೆನ್‌ನಲ್ಲಿ ವಿಶ್ವಕಪ್‌ನಲ್ಲಿ ಆಡಿದ್ದ 9 ಆಟಗಾರರು ಇದ್ದರು.
ಸ್ಟಾರ್ ಸ್ಟ್ರೈಕರ್ ಬೈಚುಂಗ್ ಭುಟಿಯಾ ಆಡಿದ್ದರೆ, ಮತ್ತು ರಕ್ಷಣಾ ವಿಭಾಗದಲ್ಲಿ ಒಂದಿಬ್ಬರು ಉತ್ತಮ ಆಟಗಾರರು ಇದ್ದಲ್ಲಿ ಭಾರತಕ್ಕೆ ಇದಕ್ಕಿಂತ ಉತ್ತಮ ಪ್ರದರ್ಶನ ನೀಡಬಹುದಿತ್ತು. ಬಹರೇನ್ ಮತ್ತು ಆಸ್ಟ್ರೇಲಿಯಾ ತಂಡದ ಕೋಚ್‌ಗಳೂ ಭಾರತದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಭಾರತ ತುಂಬಾ ಹಿಂದೆ ಉಳಿದಿದೆ. ಆಸ್ಟ್ರೇಲಿಯಾ ಆಟಗಾರರ ಮುಂದೆ ಅಂಗಳದಲ್ಲಿ ಭಾರತ ತಂಡದವರು ತೀರಾ ದುರ್ಬಲರಾಗಿ ಕಂಡುಬಂದರು. ಆದರೂ, ಬಾಬ್ ಹಾಟನ್ ಮಾರ್ಗದರ್ಶನದಲ್ಲಿ ಭಾರತದ ಫುಟ್‌ಬಾಲ್ ಹೊಸ ದಿಕ್ಕಿನತ್ತ ಮುನ್ನಡೆಯುತ್ತಿದೆ ಎಂಬುದಕ್ಕೆ ಏಷ್ಯಾ ಕಪ್ ಸಾಕ್ಷಿಯಾಯಿತು.

ಭಾರತ ತಂಡ ಟೂರ್ನಿಯ ಆರಂಭಕ್ಕೆ ಮುನ್ನ ಸಮಸ್ಯೆ ಎದುರಿಸಿತ್ತು. ಬೈಚುಂಗ್ ಭುಟಿಯಾ ಅವರನ್ನು ಆಟಗಾರನಾಗಿ ಅಥವಾ ಅಧಿಕಾರಿಯಾಗಿ ತಂಡದಲ್ಲಿ ಸೇರಿಸಿಕೊಳ್ಳಬೇಕೇ ಎಂಬುದರ ಬಗ್ಗೆ ಭಾರತ ಫುಟ್‌ಬಾಲ್ ಸಂಸ್ಥೆ ಗೊಂದಲದಲ್ಲಿ ಸಿಲುಕಿತ್ತು. ಗಾಯಗೊಂಡಿದ್ದ ಭುಟಿಯಾ ಟೂರ್ನಿಯ ಯಾವುದೇ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಕಂಡುಬಂದದ್ದರಿಂದ ಮೊದಲು ಫೆಡರೇಷನ್ ಅವರನ್ನು ಅಧಿಕಾರಿಯಾಗಿ ತಂಡಕ್ಕೆ ಸೇರಿಸಿತು. ಆದರೆ ಅವರು ಕೊನೆಯ ಪಂದ್ಯದ ವೇಳೆಗೆ ಗಾಯದಿಂದ ಚೇತರಿಸಿಕೊಳ್ಳಬಹುದು ಎಂಬ ಕಾರಣ ಮತ್ತೆ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಭುಟಿಯಾ ಮೊದಲ ಎರಡು ಪಂದ್ಯಗಳಲ್ಲಿ ಆಡಲಿಲ್ಲ. ದಕ್ಷಿಣ ಕೊರಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಮೊದಲ ಇಲೆವೆನ್‌ನನ್ನೂ ಆಡಲಿಲ್ಲ. 78ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು ಕೆಲವು ನಿಮಿಷಗಳ ಕಾಲ ಮಾತ್ರ ತಮ್ಮ ಕಾಲ್ಚಳಕ ತೋರಿದರು.

‘ಸ್ಪೈಡರ್ ಮ್ಯಾನ್’ ಸುಬ್ರತೊ: ಟೂರ್ನಿಯಲ್ಲಿ ಭಾರತದ ಪರ ಮಿಂಚಿದ್ದು ಗೋಲ್‌ಕೀಪರ್ ಸುಬ್ರತೊ ಪಾಲ್. ತಂಡದ ಸಣ್ಣ ಅಂತರದ ಸೋಲಿಗೆ ಅವರ ಅದ್ಭುತ ಪ್ರದರ್ಶನವೇ ಕಾರಣ. ಎದುರಾಳಿ ಆಟಗಾರರಿಗೆ ಅವರು ಮಹಾಗೋಡೆಯಂತೆ ಕಂಡದ್ದು ನಿಜ.
ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಸುಬ್ರತೊ ಪಾಲ್ ಕನಿಷ್ಠ 16 ಸೇವ್‌ಗಳನ್ನಾದರೂ ಮಾಡಿದ್ದರು. ಪಂದ್ಯ ಒಂದು ರೀತಿಯಲ್ಲಿ ದಕ್ಷಿಣ ಕೊರಿಯಾ ಸ್ಟ್ರೈಕರ್‌ಗಳು ಮತ್ತು ಸುಬ್ರತೊ ನಡುವಿನ ನೇರ ಹಣಾಹಣಿಯಂತೆ ಕಂಡುಬಂದಿತು. ಅವರ ಚುರುಕಿನ ಪ್ರದರ್ಶನ ಇಲ್ಲದೇ ಇರುತ್ತಿದ್ದಲ್ಲಿ ಭಾರತದ ಸೋಲಿನ ಅಂತರ ಮತ್ತಷ್ಟು ಹೆಚ್ಚುತ್ತಿತ್ತು.

ಸುಬ್ರತೊ ಪಾಲ್ ಕೊರಿಯಾ ಮಾಧ್ಯಮಗಳ ಪ್ರಶಂಸೆಗೂ ಪಾತ್ರರಾದರು. ಅಲ್ಲಿನ ಅಭಿಮಾನಿಗಳು ಸುಬ್ರತೊಗೆ ‘ಸ್ಪೈಡರ್ ಮ್ಯಾನ್’ ಎಂಬ ಹೆಸರನ್ನೂ ಇಟ್ಟಿದ್ದಾರೆ. ತಂಡಕ್ಕೆ ಸತತ ಸೋಲು ಎದುರಾದರೂ ಸುಬ್ರತೊ ‘ಹೀರೊ’ ಆಗಿ ಮೆರೆದರು. 
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.