ADVERTISEMENT

ಬಿಸಿಲೂರಿನಲ್ಲಿ ಕ್ರೀಡಾ ಚಟುವಟಿಕೆಗೂ ಬರ...

ಚಿದಂಬರ ಪ್ರಸಾದ್
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST
ಸದ್ಯಕ್ಕೆ ಜಿಲ್ಲಾ ಕ್ರೀಡಾಂಗಣ ಎನಿಸಿರುವ ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನ ಮಳೆಗಾಲದಲ್ಲಿ ಸಣ್ಣ ಕೆರೆಯಂತೆ ಕಾಣುತ್ತದೆ.
ಸದ್ಯಕ್ಕೆ ಜಿಲ್ಲಾ ಕ್ರೀಡಾಂಗಣ ಎನಿಸಿರುವ ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನ ಮಳೆಗಾಲದಲ್ಲಿ ಸಣ್ಣ ಕೆರೆಯಂತೆ ಕಾಣುತ್ತದೆ.   

ಯಾದಗಿರಿ ಜಿಲ್ಲೆಯ ಹತ್ತಾರು ಕಡೆ ಕಂಡು ಬರುವ ಗಿರಿಗಳ ಮೇಲಿನ ಕೋಟೆಗಳು ಅರಸರ ಆಳ್ವಿಕೆಯ ಕುರುಹುಗಳಾಗಿ ನಿಂತಿವೆ. ಜಿಲ್ಲೆಯ ಗತವೈಭವವನ್ನು ಸಾರಿ ಹೇಳುತ್ತಿವೆ. ಆದರೆ ಈಗ ಅವೆಲ್ಲವೂ ಇತಿಹಾಸದ ಪುಟ ಸೇರಿವೆ.

ಅದರಂತೆಯೇ ಜಿಲ್ಲೆಯಲ್ಲಿನ ಕ್ರೀಡಾ ಚಟುವಟಿಕೆಗಳೂ ಅರಸ ಆಳ್ವಿಕೆಯ ಜೊತೆಗೆ ನೇಪಥ್ಯಕ್ಕೆ ಸರಿದಿವೆ. ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕುಸ್ತಿ, ಮಲ್ಲಕಂಬದಂತಹ ಕ್ರೀಡೆಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಜಾತ್ರೆಗಳಲ್ಲಿ ಮಾತ್ರ ಈ ಕ್ರೀಡೆಗಳನ್ನು ನೋಡಲು ಸಾಧ್ಯವಾಗುತ್ತಿದೆ. ಜಿಲ್ಲೆಯ ಸುರಪುರದ ಹಾಲೋಕುಳಿ ಜಾತ್ರೆಯಲ್ಲಿ ನಡೆಯುವ ಮಲ್ಲಕಂಬ ಪ್ರದರ್ಶನ ಈಗಲೂ ಜನರಲ್ಲಿ ರೋಮಾಂಚನ ಮೂಡಿಸುತ್ತದೆ.

ಜಿಲ್ಲೆಯಾಗಿ ಮೂರು ವರ್ಷ ಕಳೆಯುತ್ತ ಬಂದಿದ್ದರೂ, ಇದುವರೆಗೆ ಸುಸಜ್ಜಿತವಾದ ಜಿಲ್ಲಾ ಕ್ರೀಡಾಂಗಣ ನಿರ್ಮಾಣಗೊಂಡಿಲ್ಲ. ಇರುವುದೊಂದೇ ಮೈದಾನದಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳು, ಸಾರ್ವಜನಿಕ ಸಮಾರಂಭಗಳು ನಡೆಯಬೇಕು. ಸಭೆ, ಸಮಾರಂಭಗಳ ದಿನಗಳನ್ನು ನೋಡಿಕೊಂಡೇ ಕ್ರೀಡಾಕೂಟಗಳನ್ನು ಆಯೋಜಿಸುವುದು ಇಲ್ಲಿ ಅನಿವಾರ್ಯ ಎನ್ನುವಂತಾಗಿದೆ.

ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹೈದರಾಬಾದ್ ಕರ್ನಾಟಕ ಪ್ರದೇಶದ ಭಾಗವಾಗಿರುವ ಯಾದಗಿರಿ ಜಿಲ್ಲೆ, ಎಲ್ಲ ಕ್ಷೇತ್ರಗಳಂತೆ ಕ್ರೀಡಾ ವಿಭಾಗದಲ್ಲೂ ತೀರಾ ಹಿಂದುಳಿದಿದೆ. ಕ್ರೀಡಾ ಚಟುವಟಿಕೆಗಳು ನಡೆದರೂ ಕೇವಲ ಔಪಚಾರಿಕೆ ಎನ್ನುವಂತಾಗಿದೆ.

ನನಸಾಗದ ಕ್ರೀಡಾಂಗಣ:  ಕ್ರೀಡಾಂಗಣ ಇಲ್ಲದೇ ಪರದಾಡುತ್ತಿದ್ದ ಜನತೆಗೆ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಕಾಲ ಕೂಡಿ ಸುಮಾರು 2 ವರ್ಷವೇ ಕಳೆದಿದೆ. ರೂ. 5.5 ಕೋಟಿ ವೆಚ್ಚದಲ್ಲಿ 42 ಎಕರೆ ಜಾಗೆಯಲ್ಲಿ ಕ್ರೀಡಾ ಸಂಕೀರ್ಣವನ್ನು  ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಕರ್ನಾಟಕ ಗೃಹ ಮಂಡಳಿಯಿಂದ ಕಾಮಗಾರಿ ನಿರ್ವಹಣೆ ನಡೆಯುತ್ತಿದೆ. ಪುಣೆಯ ಕಂಪೆನಿಯೊಂದು ಆಕರ್ಷಕ ವಿನ್ಯಾಸ ಸಿದ್ಧಪಡಿಸಿಕೊಟ್ಟಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲೇ ಉತ್ತಮವಾದ ಸಂಕೀರ್ಣ ಇಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ. 42 ಎಕರೆ ಪ್ರದೇಶದ ಜಾಗೆಯ ಸುತ್ತ ಕಂಪೌಂಡ್ ನಿರ್ಮಾಣ, ಆಕರ್ಷಕ ವಿನ್ಯಾಸದ ಮುಖ್ಯ ಪ್ರವೇಶ ದ್ವಾರ, ಓಟದ ಟ್ರ್ಯಾಕ್, ಆಡಳಿತ ಕಟ್ಟಡ, ಟೆನಿಸ್ ಕೋರ್ಟ್, ಕ್ರಿಕೆಟ್ ಮೈದಾನ, ಗ್ಯಾಲರಿ, ಈಜುಗೊಳ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಇನ್ನೂ ಈ ಎಲ್ಲ ಕಾಮಗಾರಿಗಳು ಮುಗಿಯುವುದು ಯಾವಾಗ ಎನ್ನುವ ಚಿಂತೆ ಕ್ರೀಡಾಪಟುಗಳನ್ನು ಕಾಡುತ್ತಿದೆ.

ಮೈದಾನದ ಕೊರತೆ: ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ವಿಶಾಲವಾದ ಮೈದಾನವೇ ಇಲ್ಲದಂತಾಗಿದೆ. ಯಾವುದೇ ಕಾರ್ಯಕ್ರಮವಿರಲಿ, ಯಾದಗಿರಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿಯೇ ಆಯೋಜನೆ ಆಗಬೇಕಾಗಿದೆ.

ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಗಣ್ಯರು ಬಂದಾಗಲೆಲ್ಲ ಪದವಿಪೂರ್ವ ಕಾಲೇಜಿನ ಮೈದಾನವನ್ನೇ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ರಾಜಕೀಯ ಪ್ರಚಾರ, ಸಭೆ, ಸಮಾವೇಶಗಳ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಇರುವುದು ಇದೊಂದೇ ಮೈದಾನ. ಇದರ ಜೊತೆಗೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪೊಲೀಸ್ ಕ್ರೀಡಾಕೂಟ, ಸರ್ಕಾರಿ ನೌಕರರ ಕ್ರೀಡಾಕೂಟ ಯಾವುದೇ ಕ್ರೀಡಾಕೂಟ ನಡೆಸಲು ಇರುವುದು ಇದೇ ಮೈದಾನ.

ಇನ್ನೂ ಈ ಮೈದಾನದ ಸ್ಥಿತಿಯೂ ಚಿಂತಾಜನಕವಾಗಿದೆ. ಎಲ್ಲ ಕಾರ್ಯಕ್ರಮಗಳಿಗೆ ಬಳಕೆ ಆಗುವ ಈ ಮೈದಾನ, ಮಳೆಗಾಲದಲ್ಲಂತೂ ದೊಡ್ಡ ಕೆರೆಯಾಗಿ ಪರಿವರ್ತನೆ ಆಗುತ್ತದೆ. ಚರಂಡಿಯ ನೀರೆಲ್ಲ ಹರಿದು ಬಂದು ಇಲ್ಲಿಯೇ ಶೇಖರಣೆ ಆಗುತ್ತದೆ. ಇಂತಹ ಸ್ಥಿತಿಯಲ್ಲಿ ಮಣ್ಣು ಹಾಕಿ, ಮತ್ತೆ ಕ್ರೀಡಾಕೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕ್ರೀಡೆಗಿಲ್ಲ ಉತ್ತೇಜನ: ಈ ಜಿಲ್ಲೆಯಲ್ಲಿ ಪ್ರಸಕ್ತ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಒಬ್ಬ ಸಹಾಯಕ ನಿರ್ದೇಶಕರೂ ಇಲ್ಲ. ದೈಹಿಕ ಶಿಕ್ಷಣಾಧಿಕಾರಿಯೊಬ್ಬರನ್ನು ಪ್ರಭಾರ ಸಹಾಯಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇದರಿಂದಾಗಿ ಆಡಳಿತಾತ್ಮಕವಾಗಿ ಸಾಕಷ್ಟು ತೊಂದರೆಯೂ ಎದುರಾಗುತ್ತಿದೆ. ಇದರ ಜೊತೆಗೆ ಜಿಲ್ಲೆಯಲ್ಲಿರುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮೀಸಲಿಡುವ ಅನುದಾನವೂ ಅಷ್ಟಕ್ಕಷ್ಟೇ. 

ಇನ್ನು ಜಿಲ್ಲೆಯಲ್ಲಿ ನಡೆಯುವ ಹಲವಾರು ಕ್ರೀಡಾಕೂಟಗಳ ಬಹುತೇಕ ವಿಭಾಗಗಳಲ್ಲಿ ಕ್ರೀಡಾಪಟುಗಳೇ ಇಲ್ಲದಂತಾಗಿದೆ. ಕೇವಲ ವೇಗದ ಓಟ, ಹೈಜಂಪ್, ಲಾಂಗ್‌ಜಂಪ್ ಮುಂತಾದ ಸ್ಪರ್ಧೆಗಳಲ್ಲಷ್ಟೇ ಬೆರಳೆಣಿಕೆಯಷ್ಟು ಕ್ರೀಡಾಪಟುಗಳು ಅಭ್ಯಾಸ ನಡೆಸುವುದನ್ನು ಕಾಣಬಹುದು.  ಬ್ಯಾಡ್ಮಿಂಟನ್, ಟೆನಿಸ್‌ನಂತಹ ಕ್ರೀಡೆಗಳನ್ನು ಆಡುವವರೇ ಇಲ್ಲ.

ಜಿಲ್ಲೆಯಲ್ಲಿ ಕ್ರೀಡೆಗೆ ಪೂರಕವಾದ ವಾತಾವರಣವಿದ್ದರೂ, ಅದಕ್ಕೆ ಅನುಗುಣವಾದ ಸಂಪನ್ಮೂಲಗಳು ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಸುಸಜ್ಜಿತವಾದ ಕ್ರೀಡಾಂಗಣದ ಜೊತೆಗೆ ನುರಿತ ತರಬೇತುದಾರರನ್ನು ನೇಮಕ ಮಾಡಬೇಕಾಗಿದೆ. ಅವರಿಂದ ಜಿಲ್ಲೆಯ ಕ್ರೀಡಾಪಟುಗಳಿಗೆ ತರಬೇತಿ ನೀಡಿದಲ್ಲಿ ಯಾದಗಿರಿ ಜಿಲ್ಲೆಯ ಕ್ರೀಡಾಪಟುಗಳ ಹೆಸರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯ ಎನ್ನುವುದು ಕ್ರೀಡಾಪ್ರೇಮಿಗಳ ಅಭಿಪ್ರಾಯ. ಮುಖ್ಯವಾಗಿ ಈ ಪ್ರದೇಶದಲ್ಲಿ ಆಧುನಿಕ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಂದು ಪರಂಪರೆಯೇ ಇಲ್ಲ. ಅಂತಹದ್ದೊಂದು ಪರಂಪರೆಗೆ ಇದೀಗ ಅಡಿಪಾಯ ಹಾಕುವ ಕೆಲಸಕ್ಕೆ ಚಾಲನೆ ಸಿಗಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.