ADVERTISEMENT

ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹಾಸನದ ಮಿಂಚು

ಪ್ರಮೋದ ಕುಲಕರ್ಣಿ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST
ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹಾಸನದ ಮಿಂಚು
ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹಾಸನದ ಮಿಂಚು   

ಒಂದು ವಾರ ಕಳೆದರೆ ಸಾಕು ಲಂಡನ್ ಒಲಿಂಪಿಕ್ಸ್‌ಗೆ ತೆರೆ ಬೀಳಲಿದೆ. ಅದರ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್ ಆರಂಭ. ಇದರಲ್ಲಿ ಹತ್ತು ಮಂದಿ ಕ್ರೀಡಾಳುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅದರಲ್ಲಿ ಹೈಜಂಪ್ ಸ್ಪರ್ಧಿ ಕರ್ನಾಟಕದ ಎಚ್.ಎನ್. ಗಿರೀಶ್ ಕೂಡಾ ಒಬ್ಬರು.

ಪ್ಯಾರಾಲಿಂಪಿಕ್ಸ್‌ಗೆ ತೆರಳಲಿರುವ ಭಾರತ ತಂಡದ ಕ್ರೀಡಾಳುಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಗಸ್ಟ್ ಮೊದಲ ವಾರ ಭೇಟಿಯಾಗಿದ್ದರು. `ದೇಶಕ್ಕೆ ಕೀರ್ತಿ ತನ್ನಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ತ್ರಿವರ್ಣಧ್ವಜ ರಾರಾಜಿಸುವಂತೆ ಮಾಡಿ~ ಎಂದು ಅವರು ಕ್ರೀಡಾಪಟುಗಳಿಗೆ ಹಾರೈಸಿದ್ದಾರೆ. ಲಂಡನ್‌ನಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 9ರ ವರೆಗೆ ಪ್ಯಾರಾಲಿಂಪಿಕ್ಸ್ ನಡೆಯಲಿದೆ.

ಹಾಸನ ಜಿಲ್ಲೆಯ ಹೊಸನಗರದವರಾದ ಗಿರೀಶ್ ಇದುವರೆಗೆ ಏಳು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. 2009ರಲ್ಲಿ ನಡೆದ ಐವಾಸ್ ಅಥ್ಲೆಟಿಕ್ಸ್ ಹಾಗೂ ಕುವೈತ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲೂ ಪದಕ ಜಯಿಸಿದ್ದಾರೆ.

ಗ್ರಾಮೀಣ ಪ್ರದೇಶದ ಪ್ರತಿಭೆ ಗಿರೀಶ್ ಅವರ ಎಡಗಾಲು ಊನವಾಗಿದೆ. ಆದರೆ, ಸಾಧನೆಗೆ ಇದು ಅಡ್ಡಿಯಾಗಿಲ್ಲ. ಅವರು ಶನಿವಾರ ಲಂಡನ್‌ನ ವಿಮಾನವೇರಿದರು. ಅದಕ್ಕೂ ಮುನ್ನ `ಪ್ರಜಾವಾಣಿ~ಗೆ ನೀಡಿದ ಸಂದರ್ಶನ ಇಲ್ಲಿದೆ.

-ಪ್ಯಾರಾಲಿಂಪಿಕ್ಸ್‌ಗೆ ತೆರಳುತ್ತಿದ್ದೀರಿ. ಈ ಬಗ್ಗೆ?

ತುಂಬಾ ಖುಷಿಯಾಗಿದೆ. ಗ್ರಾಮೀಣ ಪ್ರದೇಶದಿಂದ ಬಂದ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತೇನೆ ಎನ್ನುವ ಸಂಗತಿಯೇ ಖುಷಿಯನ್ನು ಹೆಚ್ಚಿಸಿದೆ. ಒಂದಿನಿತೂ ಕ್ರೀಡಾ ಸೌಲಭ್ಯಗಳಿರದ ಊರು  ಬಿಟ್ಟು ಬಂದು ಬೆಂಗಳೂರು ಸೇರಿದ್ದಕ್ಕೂ ಸಾರ್ಥಕವೆನಿಸುತ್ತಿದೆ. 

- ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಾಗ ತಕ್ಷಣದ ಪ್ರತಿಕ್ರಿಯೆ ಹೇಗಿತ್ತು?
ಬಹುವರ್ಷಗಳ ಕನಸು ನನಸಾದ ಕ್ಷಣವದು. ಕುವೈತ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದೆ. ಇದರೊಂದಿಗೆ ಲಂಡನ್ ಪ್ಯಾರಾಲಿಂಪಿಕ್ಸ್‌ಗೂ ಅರ್ಹತೆ ಲಭಿಸಿತು. ಅದಕ್ಕೂ ಮೊದಲು ಪಾಲ್ಗೊಂಡಿದ್ದ ಏಳು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಐದು ಸಲ ಪದಕ ಗೆದ್ದಿದ್ದೆ. ಆದ್ದರಿಂದ ಈ ಸಲ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತೇನೆ ಎನ್ನುವ ವಿಶ್ವಾಸವಿತ್ತು.

-ಮೊದಲ ಸಲ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದೀರಿ. ಈ ಬಗ್ಗೆ?
ಪ್ಯಾರಾಲಿಂಪಿಕ್ಸ್ ಅನ್ನು ವಿಶೇಷವೆಂದೆನೂ ಪರಿಗಣಿಸಿಲ್ಲ. ಈಗಾಗಲೇ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ಕಾರಣ ಭಯವೇನಿಲ್ಲ. ಆದರೆ, ಹೇಗೆ ಪ್ರದರ್ಶನ ನೀಡುತ್ತೇನೆ ಎನ್ನುವ ಆತಂಕವಿದೆ. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸಿದ್ದೇನೆ. ಮೊದಲ ಅವಕಾಶವನ್ನು ಸ್ಮರಣೀಯವಾಗಿಸಿಕೊಳ್ಳುವ ಗುರಿ ನನ್ನದು.

- ಹೇಗೆ ತಯಾರಿ ನಡೆಸಿದ್ದೀರಿ?

ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಊರು ಬಿಟ್ಟು ಬೆಂಗಳೂರಿಗೆ ಬಂದೆ. ಖಾಸಗಿ ಬ್ಯಾಂಕ್‌ನಲ್ಲಿ ಮಾಡುತ್ತಿದ್ದ ನೌಕರಿ ತೊರೆದೆ. ಆದ್ದರಿಂದ ಅಭ್ಯಾಸವೊಂದೆ ನಿತ್ಯದ ಕಾಯಕ.  ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಿತ್ಯ ಐದರಿಂದ ಆರು ಗಂಟೆ ಅಭ್ಯಾಸ ನಡೆಸಿದೆ. ಈಗ ಕೆಲ ದಿನಗಳಿಂದ ನವದೆಹಲಿಯಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ.

-ಪದಕ ಜಯಿಸುವ ವಿಶ್ವಾಸವಿದೆಯಾ?
ಪದಕ ಜಯಿಸಬೇಕೆನ್ನುವುದು ದೊಡ್ಡ ಕನಸು. ಆದರೆ, ಸಾಕಷ್ಟು ಸ್ಪರ್ಧೆ ಇರುವ ಕಾರಣ ಖಡಾಖಂಡಿತವಾಗಿ ಹೇಳಲಾರೆ. ಪೂರ್ಣ ಸಾಮರ್ಥ್ಯ ಹಾಕಿ ಪದಕ ಜಯಿಸಲು ಪ್ರಯತ್ನಿಸುತ್ತೇನೆ.


-ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾದ ಕ್ಷಣ ಹೇಗಿತ್ತು?
ಆ ವೇಳೆ ತುಂಬಾ ಸಂತೋಷವಾಗಿತ್ತು. ಬದುಕಿನ ಅಮೂಲ್ಯ ಕ್ಷಣವದು. ಪದಕ ಜಯಿಸಿ ಬನ್ನಿ ಎಂದು ಅವರು ಹಾರೈಸಿದರು. 

- ನಿಮ್ಮ ಕುಟುಂಬದ ಬಗ್ಗೆ?

ಮನೆಯಲ್ಲಿ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಆರ್ಥಿಕ ಅಭದ್ರತೆ ಇದೆ. ಆದ ಕಾರಣ ನನಗೆ ನೌಕರಿಯ ಅಗತ್ಯವಿದೆ. ಕ್ರೀಡೆಯನ್ನೇ ನಂಬಿಕೊಂಡು ಬಂದವರಿಗೆ ಒಂದು ಹೊತ್ತಿನ `ಅನ್ನ~ ಸಿಗದೇ ಹೋದರೆ ಯಾರೂ ತಾನೆ ಕ್ರೀಡೆಯತ್ತ ಮುಖಮಾಡುತ್ತಾರೆ. 
 

ಪ್ಯಾರಾಲಿಂಪಿಕ್ಸ್ ಬಗ್ಗೆ ಒಂದಿಷ್ಟು...
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ಸ್ ಮುಕ್ತಾಯದ ಬೆನ್ನಲ್ಲೇ ಮತ್ತೊಂದು ಕ್ರೀಡಾಹಬ್ಬ ನಡೆಯುತ್ತದೆ. ಅದುವೇ    ಪ್ಯಾರಾಲಿಂಪಿಕ್ಸ್. ಅದು    ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ನಡುವಿನ ಹೋರಾಟ. ಅಷ್ಟೇ ಅಲ್ಲ, ನಮ್ಮಲ್ಲೂ (ಅಂಗವಿಕಲರು) ಸಾಧಿಸುವ ಸಾಮರ್ಥ್ಯವಿದೆ ಎಂದು ತೋರಿಸಲು ವೇದಿಕೆ.

ದೇಶ, ಭಾಷೆ, ಗಡಿಯ ಎಲ್ಲೆ ಮೀರಿ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ಯಾರಾಲಿಂಪಿಕ್ಸ್      ಮಹತ್ವದ ಪಾತ್ರ ವಹಿಸುತ್ತದೆ. ಜನರೆಲ್ಲಾ ಒಂದೇ ಎನ್ನುವ ಭಾವ ಮೂಡಿಸುವ, ಅವಕಾಶ ಸಿಕ್ಕರೆ ನಾವೂ ಸಾಧಿಸುತ್ತೇವೆ ಎನ್ನುವ ಭರವಸೆ ಮೂಡಿಸುವ         ಕ್ರೀಡಾಕೂಟವಿದು.

ಅಂಗವೈಕಲ್ಯದಿಂದಾಗಿ ಮನಸ್ಸಿಗೆ ಕತ್ತಲು ಮೂಡಿದಾಗ , ಬದುಕು ಇಲ್ಲಿಗೆ ಮುಗಿದೇ ಹೋಯಿತು ಎನ್ನುವ ಆತಂಕ ಕಾಡಿದಾಗ ಪ್ಯಾರಾಲಿಂಪಿಕ್ಸ್ ಸಾಕಷ್ಟು ಕ್ರೀಡಾಪಟುಗಳಲ್ಲಿ ಭರವಸೆ ಮೂಡಿಸಿದೆ. 2008ರ ಬೀಜಿಂಗ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದಿಂದ ಐದು ಕ್ರೀಡಾಳುಗಳಿಗೆ ಪಾಲ್ಗೊಳ್ಳಲು ಅವಕಾಶವಿತ್ತು ಈ ಸಲ ಆ ಸಂಖ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಪದಕದ ನಿರೀಕ್ಷೆಯೂ ಹೆಚ್ಚಿದೆ.

ಎಚ್.ಎನ್. ಗಿರೀಶ್          (ಹೈಜಂಪ್), ಶರತ್ ಎಂ. ಗಾಯಕ್ವಾಡ್ (ಈಜು). ಫರ್ಮಾನ್ ಬಾಷಾ, ರಾಜೇಂದರ್ ಸಿಂಗ್ ರಹೆಲು, ಸಚಿನ್ ಚೌದ್ರಿ (ಮೂವರು ಪವರ್ ಲಿಫ್ಟಿಂಗ್), ಜಗ್‌ಶೀರ್ ಸಿಂಗ್ (ಲಾಂಗ್ ಜಂಪ್), ಜಯದೀಪ್ (ಡಿಸ್ಕಸ್ ಥ್ರೋ), ನರೇಂದರ್ (ಜಾವೆಲಿನ್ ಥ್ರೊ), ಅಮಿತ್ ಕುಮಾರ್ (ಡಿಸ್ಕಸ್ ಥ್ರೊ) ಈ ಸಲದ    ಪ್ಯಾರಾಲಿಂಪಿಕ್ಸ್‌ಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.