ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭವಾಗಿ ಕೇವಲ ನಾಲ್ಕು ವರ್ಷಗಳಷ್ಟೆ ಕಳೆದಿವೆ. ಅದಕ್ಕೆ ಸಿಕ್ಕ ಜನಪ್ರಿಯತೆ ಅಪಾರ!. ಮೂರು ಆವೃತ್ತಿಗಳಲ್ಲಿ ಐಪಿಎಲ್ ನಿರೀಕ್ಷೆಗೂ ಮೀರಿ ಬೆಳೆದಿದೆ. 
50 ಓವರ್‌ಗಳ ಕ್ರಿಕೆಟ್‌ನ ಸೊಬಗಿಗೆ ಧಕ್ಕೆ ತರುವಂಥಹ ಜನಪ್ರಿಯತೆ, ಆಕರ್ಷಣೆ, ಹಣ ಇದಕ್ಕೆ ಹರಿದು ಬಂದಿದೆ. ಈಗಲೂ ಬರುತ್ತಿದೆ. ಅದಕ್ಕಾಗಿಯೇ ಆಟಗಾರರು ದೇಶವನ್ನು ಪ್ರತಿನಿಧಿಸಲು ಗಾಯದ ಸಮಸ್ಯೆ ಹೇಳಿಕೊಳ್ಳುತ್ತಾರೆ. ಆದರೆ ಐಪಿಎಲ್ ಎಂದರೆ ಸಾಕು; ಎಲ್ಲಾ ಗಾಯಗಳು ಮಾಯ! ಇದೇನೋ ಮಾಯವೊ?
ಐಪಿಎಲ್‌ಗೆ ದೊರೆತ ಜನಪ್ರಿಯತೆಯ ಕಾರಣದಿಂದ ಹಾಗೂ ಆಟಗಾರರು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಭಾರತೀಯ ಕುಸ್ತಿ ಫೆಡರೇಷನ್ ಹಾಗೂ ಭಾರತ ವಾಲಿಬಾಲ್ ಫೆಡರೇಷನ್ `ಐಪಿಎಲ್~ ಮಾದರಿಯಲ್ಲಿ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಿದೆ. 
ಐಪಿಎಲ್ ಮಾದರಿಯಲ್ಲಿ ಕುಸ್ತಿ ಹಾಗೂ ವಾಲಿಬಾಲ್ ಕ್ರೀಡೆಯನ್ನು ದೇಶದ ಎಲ್ಲೆಡೆಯು ಜನಪ್ರಿಯಗೊಳಿಸಲು ಸಾಕಷ್ಟು ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. 
ಅದಕ್ಕಾಗಿಯೇ ಇತ್ತೀಚಿಗಷ್ಟೇ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲುಎಫ್‌ಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದುಶ್ಯಂತ್ ಶರ್ಮಾ ಈ ವರ್ಷದ ಅಂತ್ಯದಲ್ಲಿ (ನವೆಂಬರ್ ಅಥವಾ ಡಿಸೆಂಬರ್ ತಿಂಗಳು) ಐಪಿಎಲ್ ಮಾದರಿಯಲ್ಲಿ ಕುಸ್ತಿ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಿದ್ದಾರೆ.
ಹಂಪಿ ಉತ್ಸವ, ಮೈಸೂರು ದಸರಾ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ ಇನ್ನಿತರ ಸಂದರ್ಭಗಳಲ್ಲಿ ಮಾತ್ರ ಕುಸ್ತಿ ಸ್ಪರ್ಧೆಗಳನ್ನು ಕಾಣಬಹುದು. ಗ್ರಾಮೀಣ ಭಾಗಗಳಲ್ಲಿ ಬಹು ಪ್ರಸಿದ್ದಿ ಪಡೆದಿರುವ ಕುಸ್ತಿ ಕ್ರೀಡೆಯತ್ತ ಒಲವು ಹೆಚ್ಚಾಗಬೇಕು ಎನ್ನುವ ಉದ್ದೇಶವನ್ನು ಕುಸ್ತಿ ಫೆಡರೇಷನ್ ಹೊಂದಿದೆ. 
`ಐಪಿಎಲ್ ಮಾದರಿಯಲ್ಲಿ ಮೊದಲು ಎಂಟು ರಾಜ್ಯಗಳಲ್ಲಿ ಕುಸ್ತಿ ಚಾಂಪಿಯನ್‌ಷಿಪ್ ಆರಂಭಿಸಲು ಕುಸ್ತಿ ಫೆಡರೇಷನ್ ನಿರ್ಧಾರ ಕೈಗೊಂಡಿದೆ. ಮುಂದಿನ ಆವೃತ್ತಿಗಳಲ್ಲಿ ಇದನ್ನು ವಿಸ್ತರಿಸುವ ಯೋಜನೆ ಇದೆ. ಐಪಿಎಲ್ ರೀತಿ ಚಾಂಪಿಯನ್‌ಷಿಪ್ ನಡೆಸುವುದರಿಂದ 2012ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೂ ಅನುಕೂಲವಾಗಲಿದೆ~ ಎಂದು ದುಶ್ಯಂತ್ ಶರ್ಮಾ ಅಭಿಪ್ರಾಯ ಪಡುತ್ತಾರೆ.
ಇದೇ ರೀತಿಯಲ್ಲಿ ಆಟಗಾರರಲ್ಲಿ ವೃತ್ತಿ ಪರತೆಯನ್ನು ಹೆಚ್ಚಿಸಬೇಕು ಎನ್ನುವ ಉದ್ದೇಶವನ್ನು ಭಾರತೀಯ ವಾಲಿಬಾಲ್ ಫೆಡರೇಷನ್ ಹೊಂದಿದೆ. ಅದಕ್ಕಾಗಿಯೇ ಐಪಿಎಲ್ ಮಾದರಿಯಲ್ಲಿ `ಇಂಡಿಯನ್ ವಾಲಿ ಲೀಗ್~ (ಐವಿಎಲ್) ನಡೆಸಲು ವಾಲಿಬಾಲ್ ಫೆಡರೇಷನ್ ಯೋಜನೆಗಳನ್ನು ರೂಪಿಸಿದೆ.
ಭಾರತದ ವಾಲಿಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಾಲಿ ಲೀಗ್ ಆಯೋಜಿಸುತ್ತಿರುವುದು ವಾಲಿಬಾಲ್‌ಗೆ ಹೊಸ ರೂಪ ಹಾಗೂ ಹೆಚ್ಚಿನ ಮನ್ನಣೆ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈ ವರ್ಷದಿಂದಲೇ `ಇಂಡಿಯನ್ ವಾಲಿ ಲೀಗ್~ನ ಮೊದಲ ಆವೃತ್ತಿಗೆ ಉದ್ಯಾನನಗರಿ ಬೆಂಗಳೂರಿನಲ್ಲಿ ಚಾಲನೆ ದೊರೆಯಲಿದೆ.
ಮೇ 29ರಂದು ಉದ್ಘಾಟನಾ ಆವೃತ್ತಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ವಾಲಿ ಲೀಗ್ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಭಾರತೀಯ ವಾಲಿಬಾಲ್ ಫೆಡರೇಷನ್ ಪ್ರತ್ಯೇಕವಾಗಿ ಪದ್ಮಶ್ರೀ ಡಾ. ಪಿ. ಶಿವಾಂತಿ ಆದಿತ್ಯನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. 
`ಮೊದಲ ವಾಲಿ ಲೀಗ್‌ನಲ್ಲಿ ಒಟ್ಟು 90 ಆಟಗಾರರರು ಹಾಗೂ ಆರು ತಂಡಗಳು ಭಾಗವಹಿಸಲಿವೆ. ಉಳಿದ ಮೂರು ಆವೃತ್ತಿಗಳು ಕ್ರಮವಾಗಿ ಚೆನ್ನೈ, ಪುದುಚೇರಿ ಹಾಗೂ ಹೈದರಾಬಾದ್‌ಗಳಲ್ಲಿ ನಡೆಯಲಿವೆ~ ಎಂದು ಇಂಡಿಯನ್ ವಾಲಿ ಲೀಗ್ ಕಾರ್ಯದರ್ಶಿಯಾಗಿ ನೇಮಕವಾಗಿರುವ ಕರ್ನಾಟಕದ ಕೆ. ನಂದ ಕುಮಾರ್~ ಹೇಳಿದ್ದಾರೆ. 
ಐಪಿಎಲ್ ಹಾದಿಯಲ್ಲಿ ಸದ್ಯಕ್ಕೆ ಕುಸ್ತಿ ಹಾಗೂ ವಾಲಿಬಾಲ್‌ಗಳು ಸಾಗುತ್ತಿವೆ.ಅದಕ್ಕಾಗಿಯೇ ಸಾಕಷ್ಟು ತಯಾರಿಗಳು ನಡೆದಿವೆ. ಕ್ರಿಕೆಟ್‌ಗೆ ಸಿಕ್ಕ ಜನರ ಮನ್ನಣೆ, ಒಲವು ಈ ಕ್ರೀಡೆಗಳಿಗೂ ಸಲ್ಲಬೇಕು ಎನ್ನುವುದು ಸಂಘಟಕರ ಆಶಯ.ಇದರಿಂದ ಹೊಸ ಹೊಸ ಆಟಗಾರರಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ದೊರತಂತಾಗುತ್ತದೆ. ಐಪಿಎಲ್‌ನಿಂದ ಹೊರ ಹೊಮ್ಮಿದ ಪಾಲ್ ವಲ್ತಾಟಿಯಂಥಹ ಪ್ರತಿಭೆಗಳೂ ಸಾಕಷ್ಟಿವೆ. 
ಇದೇ ಮೊದಲ ಬಾರಿಗೆ ನಡೆಯಲಿರುವ ಕುಸ್ತಿ ಹಾಗೂ ವಾಲಿ ಲೀಗ್‌ಗೆ ಕ್ರೀಡಾಭಿಮಾನಿಗಳ ಪ್ರತಿಕ್ರಿಯೆ ಹೇಗಿರಬಹುದು. ಕ್ರಿಕೆಟ್‌ಗೆ ದೊರೆತ ಪ್ರಚಾರ ಇದಕ್ಕೂ ಸಿಗಬಹುದಾ? ಚಿಯರ್ಸ್ ಗರ್ಲ್‌ಗಳು ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಿದ ಹಾಗೆ ಕುಸ್ತಿ ಹಾಗೂ ವಾಲಿ ಲೀಗನ್ನು ಕೂಡಾ ಆಕರ್ಷಿಸಬಹುದಾ ಎನ್ನುವ ಪ್ರಶ್ನೆ ಮಾತ್ರ ಕುತೂಹಲ ಮೂಡಿಸುವಂಥದ್ದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.