ADVERTISEMENT

ವೆಸ್ಟ್ ಇಂಡೀಸ್ ನೆಲದಲ್ಲಿ ನವಚೈತನ್ಯ

ಪ್ರಮೋದ ಜಿ.ಕೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST
ವೆಸ್ಟ್ ಇಂಡೀಸ್ ನೆಲದಲ್ಲಿ ನವಚೈತನ್ಯ
ವೆಸ್ಟ್ ಇಂಡೀಸ್ ನೆಲದಲ್ಲಿ ನವಚೈತನ್ಯ   

ಆವತ್ತು ಅಕ್ಟೋಬರ್ ಏಳು.  ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ಕೆರಿಬಿಯನ್ ನಾಡಿನ ಕ್ರಿಕೆಟಿಗರು ಸಂಭ್ರಮದಿಂದ ಕುಣಿದಾಡುತ್ತಿದ್ದರು. ಬ್ಯಾಟಿಂಗ್‌ನ ದೈತ್ಯಶಕ್ತಿ ಕ್ರಿಸ್ ಗೇಲ್ `ಗಂಗನಮ್~ ಶೈಲಿಯಲ್ಲಿ ನೃತ್ಯ ಮಾಡುತ್ತಿದ್ದರು.

-ವೆಸ್ಟ್ ಇಂಡೀಸ್ ತಂಡದವರ ಈ ಸಂಭ್ರಮದ ಹಿಂದೆ 33 ವರ್ಷಗಳ ನಿರಂತರ ಕಾಯುವಿಕೆಯ ವೇದನೆಯಿತ್ತು. ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದ ಸಂಭ್ರಮವಿತ್ತು. ಅಚ್ಚಳಿಯದೇ ಉಳಿದು ಹೋದ ಸಿಹಿ-ಕಹಿ ನೆನಪುಗಳಿದ್ದವು.

ಸರತಿ ಸೋಲು. ಇನ್ನೇನು ಕಿರೀಟ ಮುಡಿಗೇರಿತು ಎನ್ನುವಂತಹ ಖುಷಿಯ ತಾರಕದ ಬೆನ್ನಲ್ಲಿಯೇ ನಿರಾಸೆಯ ಸಿಡಿಲು ಬಂದೆರಗುತಿತ್ತು.  ಆಟಗಾರರ ಬಂಡಾಯ. ಇದರ ಜೊತೆಗೆ ಕ್ರಿಕೆಟ್ ಮಂಡಳಿಯ `ಆಟ~. ಇದೆಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳ ಟೀಕೆ.

ಈ ರೀತಿಯ ಸಾಲು ಸಾಲು ಸಂಕಷ್ಟಗಳು ಒಂದು ತಂಡವನ್ನು ಪದೇ ಪದೇ ಕಾಡಿದಾಗ ಆಗುವ ವೇದನೆಯಿದೆಯಲ್ಲಾ, ಅದನ್ನು ಸಹಿಸುವುದು ಕಷ್ಟ. ಅದರಲ್ಲೂ ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನ ದೈತ್ಯ ಶಕ್ತಿಯಾಗಿ ಮೆರೆದ ತಂಡ ಈ ರೀತಿಯ ಟೀಕೆಗಳನ್ನು ಎದುರಿಸುವುದಂತೂ ಸುಲಭವಲ್ಲ.

1975 ಹಾಗೂ 1979ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಸತತ ಎರಡು ಸಲ `ರಾಜ~ನಾಗಿ ಮೆರೆದ ನಂತರ ವಿಂಡೀಸ್ ತಂಡಕ್ಕೆ ಭವಿಷ್ಯದಲ್ಲಿ ಎದುರಾಗಿದ್ದು ಮೇಲಿಂದ ಮೇಲೆ ಸಂಕಷ್ಟ. ಸಾಗಿದ್ದು ದುರ್ಗಮದ ಹಾದಿ. ಕತ್ತಲಿನ ದಾರಿಯಲ್ಲಿ ಬೆಳಕು ಹುಡುಕಿ ಹೆಜ್ಜೆ ಹಾಕುವ ಅನಿವಾರ್ಯತೆ ಆ ದೇಶದ ಕ್ರಿಕೆಟಿಗರದಾಗಿತ್ತು.

 ಬ್ಯಾಟಿಂಗ್‌ನ ದೈತ್ಯ ಶಕ್ತಿಗಳಾದ ಕ್ರಿಸ್ ಗೇಲ್, ಮಾರ್ಲೊನ್ ಸ್ಯಾಮುಯೆಲ್ಸ್, ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೊ ಅವರಂತಹ ಬ್ಯಾಟ್ಸ್‌ಮನ್‌ಗಳು ಚುಟುಕು ಆಟಕ್ಕೆ ಹೇಳಿ ಮಾಡಿಸಿದಂತೆ ಇದ್ದಾರೆ. ಅವರ ಬ್ಯಾಟಿಂಗ್ ಅಬ್ಬರದ ಎದುರು ಎದುರಾಳಿ ಬೌಲರ್‌ಗಳು ನಿಂತಲ್ಲಿಯೇ ಬೆವರುತ್ತಾರೆ. ಆದ್ದರಿಂದಲೇ ಈ ಸಲ ವಿಂಡೀಸ್‌ಗೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಯಿತು.

ಆಟಗಾರರ ಪಾದರಸದಂತಹ ವೇಗ ಕೂಡಾ ವಿಂಡೀಸ್‌ಗೆ ಚಾಂಪಿಯನ್ ಪಟ್ಟ ಲಭಿಸಲು ಕಾರಣ. 33 ವರ್ಷಗಳ ಕತ್ತಲೆಯ ಹಾದಿಯಲ್ಲಿ ಬೆಳಕಿನ ಕಿರಣವೊಂದು ಮೂಡಿದೆ. ಕ್ಲೈವ್ ಲಾಯ್ಡ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ವಿಂಡೀಸ್ ಆ ದಿನಗಳನ್ನು ಈಗ ಮೆಲುಕು ಹಾಕುತ್ತಿದೆ.

ಮಂಡಳಿಯಿಂದಲೇ ಲಗಾಮಿಗೆ ಯತ್ನ: ಟ್ವೆಂಟಿ-20 ಕ್ರಿಕೆಟ್ ಸಾಮ್ರಾಟದ `ರಾಜ~ನಾಗಿ ಮೆರೆಯುತ್ತಿರುವ ವೆಸ್ಟ್ ಇಂಡೀಸ್ ಆಟಗಾರರು ಚುಟುಕು ಆಟದಲ್ಲಿ ಪಾಲ್ಗೊಳ್ಳದಂತೆ ಲಗಾಮು ಹಾಕಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೇ ಸದ್ದಿಲ್ಲದೇ ಯತ್ನಿಸಿತ್ತು.

ಈ ಮಾದರಿಯ ಕ್ರಿಕೆಟ್‌ನ ಕ್ರೇಜ್ ಹೆಚ್ಚಿಸಿದ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಗೇಲ್ ಮುಂದಾದಾಗ ಕೆರಿಬಿಯನ್ ನಾಡಿನ ಕ್ರಿಕೆಟ್ ಮಂಡಳಿ  ಕಾದ ಕೆಂಡವಾಗಿತ್ತು.     ಗೇಲ್‌ಗೆ ಸಾಕಷ್ಟು ಖ್ಯಾತಿ, ಪ್ರಚಾರ, ಅಭಿಮಾನಿ ಬಳಗ ಹಾಗೂ ಹಣವನ್ನು ತಂದುಕೊಟ್ಟಿದ್ದು ಟ್ವೆಂಟಿ-20 ಮಾದರಿ. ಆದ್ದರಿಂದ ಈ ಆಟಗಾರ ತಮ್ಮ ದೇಶದ ಮಂಡಳಿಯ ವಿರುದ್ಧ ತೊಡೆ ತಟ್ಟಿ ನಿಂತರು. ಒಂದು ವರ್ಷ ಪೂರ್ತಿಯಾಗಿ ಮಂಡಳಿಯು ದೇಶದ ತಂಡದಿಂದ ಗೇಲ್ ಅವರನ್ನು ಹೊರಕ್ಕೆ ಅಟ್ಟಿತ್ತು.

ದೇಶದ ತಂಡದಿಂದ ಗೇಲ್ ಯಾವಾಗ ಅನಾಥರಾಗಿ ಹೊರಬಿದ್ದರೋ ಆಗಲೇ ನಿಜವಾದ `ಹೀರೋ~ ಆದರು. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ವಿಂಡೀಸ್ ಮಂಡಳಿಯ ಕಣ್ಣು ಕುಕ್ಕುವಂತೆ ಮಾಡಿದರು. ಜಗತ್ತಿನ ತುಂಬಾ ಅಭಿಮಾನಿಗಳನ್ನು ಗಳಿಸಿಕೊಂಡರು.

ಅದರಲ್ಲೂ ಕ್ರಿಕೆಟನ್ನು ಧರ್ಮ ಎಂಬಂತೆ ಆರಾಧಿಸುವ ಭಾರತದಲ್ಲಿ ಅವರು ಲಕ್ಷಾಂತರ ಕ್ರೀಡಾ ಪ್ರೇಮಿಗಳ ಪಾಲಿಗೆ `ಸೂಪರ್ ಮ್ಯಾನ್~. ಎಲ್ಲಿಯೇ ಹೋದರೂ `ಆತ ಬಂದಿಲ್ಲವೇನು ಭಾರೀ ತೋಳ್ಬಲದವನು~ ಎಂದು ಎಲ್ಲರೂ ಕೇಳುವಂತಹ `ಮೋಡಿ~ಯನ್ನು ಗೇಲ್ ಮಾಡಿ ಬಿಟ್ಟಿದ್ದರು.

ಈ ಸಲದ ಐಪಿಎಲ್‌ನ ಪಂದ್ಯವೊಂದು ಬೆಂಗಳೂರಿನಲ್ಲಿ ನಡೆದಾಗ ಗೇಲ್ ಸಿಡಿಸಿದ ಸಿಕ್ಸರ್ ಗ್ಯಾಲರಿಯಲ್ಲಿದ್ದ ಬಾಲಕಿಗೆ ಬಲವಾಗಿ ಬಡಿದಿತ್ತು. ಆಕೆಯನ್ನು ಆಸ್ಪತ್ರೆಗೆದಾಖಲಿಸಲಾಗಿತ್ತು. ಮರುದಿನ ಗೇಲ್ ಆ ಬಾಲಕಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋದಾಗ, ಪುಟ್ಟ ಬಾಲಕಿ ಹೇಳಿದ್ದೇನು ಗೊತ್ತೇ! `ಪೆಟ್ಟು ಬಿದ್ದದ್ದು ದೊಡ್ಡ ವಿಷಯವಲ್ಲ.

ಇನ್ನೂ ಅನೇಕ ಸಲ ಈ ತರಹದ ಸಿಕ್ಸರ್‌ಗಳನ್ನು ಬಾರಿಸಿ~ ಎಂದು ಮುಗುಳ್ನಕ್ಕಿದ್ದಳು. ಇದು ಗೇಲ್ ಬಗ್ಗೆ ಅಭಿಮಾನಿಗಳು ಹೊಂದಿದ್ದ ಪ್ರೀತಿಗೆ ಸಾಕ್ಷಿ. ಈ ಕಾರಣದಿಂದಲೇ ವಿಂಡೀಸ್ ಕ್ರಿಕೆಟ್ ಮಂಡಳಿ ಎಚ್ಚರಗೊಂಡಿತು. ಗೇಲ್ ಅವರನ್ನು ತಂಡಕ್ಕೆ ಪುನಃ ಸೇರಿಸಿಕೊಂಡಿತು.

ಕ್ಲೈವ್ ಲಾಯ್ಡ, ಜಾರ್ಜ್ ಹೆಡ್ಲಿ, ವಿವಿಯನ್ ರಿಚರ್ಡ್ಸ್ ಹಾಗೂ  ಬ್ರಯನ್ ಲಾರಾ ಅವರಂತಹ ದೈತ್ಯ ಶಕ್ತಿಯನ್ನು ಜಗತ್ತಿಗೆ ನೀಡಿದ ವೆಸ್ಟ್ ಇಂಡೀಸ್ ಎರಡು ಸಲ ವಿಶ್ವಕಪ್ ಚಾಂಪಿಯನ್ ಆದ ನಂತರ ದುರ್ಗಮ ಹಾದಿಯಲ್ಲಿ ಸಾಗಿತು. ಯಾವ ಆಟಗಾರನನ್ನು (ಗೇಲ್) ಮಂಡಳಿ ದೂರವಿಟ್ಟಿತ್ತೋ ಅದೇ ಆಟಗಾರ ಈಗ ವಿಂಡೀಸ್ ತಂಡದ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಲೀಗ್ ಹಂತದ ಪಂದ್ಯಗಳಲ್ಲಿ ಸಂಕಷ್ಟ ಎದುರಾದಾಗ `ತೋಳ್ಬಲ~ ತೋರಿಸಿ ತಂಡ ಫೈನಲ್ ತಲುಪುವಂತೆ ಮಾಡಿದ್ದಾರೆ.

 ಪಾತಾಳಕ್ಕೆ ಕುಸಿದು ಬಿದ್ದಾಗ `ಫಿನಿಕ್ಸ್~ನಂತೆ ಪುಟಿದೆದ್ದು ಬಂದಿರುವ ವಿಂಡೀಸ್ ಆಟಗಾರರು ಈ ಟ್ರೋಫಿಯನ್ನು ತಮ್ಮ ದೇಶದ ಜನರಿಗೆ ಅರ್ಪಿಸಿದ್ದಾರೆ. ಅಂದು ಕೆರಿಬಿಯನ್ ಕಡಲ ನಡುವಣ ಬಹುತೇಕ ಪುಟ್ಟ ಪುಟ್ಟ ದ್ವೀಪಗಳ ಹಾದಿಬೀದಿಗಳಲ್ಲಿ ಜನ ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ನಾಡಿನ ಹುಡುಗರು ಕೊಲಂಬೊದಲ್ಲಿ ತೋರಿದ ಸಾಹಸಕ್ಕಾಗಿ ಅಭಿನಂದನೆಗಳ ಹೊಳೆ ಹರಿಸಿದ್ದಾರೆ.

ಸತತ ಎರಡು ಸಲ ವಿಶ್ವಕಪ್ ಗೆದ್ದ ನಂತರ ಮುಂದಿನ ಎಂಟೂ ವಿಶ್ವಕಪ್‌ಗಳಲ್ಲಿ ವಿಂಡೀಸ್ ತಂಡ ಆಡಿದೆ. ಅದರಲ್ಲಿ ನಾಲ್ಕು ಸಲ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿತ್ತು. ಈಗ ಕಷ್ಟದ ಹಾದಿ ಮುಗಿದಿದೆ. ಎಲ್ಲಾ ಸಂಕಷ್ಟಗಳನ್ನೂ ಮೆಟ್ಟಿ ನಿಂತು ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ಆಗಿದೆ. ಈ ಗೆಲುವು ವಿಂಡೀಸ್ ತಂಡಕ್ಕೆ ಗತಕಾಲದ ವೈಭವವನ್ನು ಮರಳಿ ತಂದುಕೊಡುವುದೇ?
    

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.