ADVERTISEMENT

ಸಜ್ಜುಗೊಳ್ಳುತ್ತಿದೆ ಸೋಚಿ ನಗರ...

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಲಂಡನ್ ಈಗ ನಿಟ್ಟುಸಿರು ಬಿಟ್ಟಿದೆ.     ಸುರಕ್ಷಿತವಾಗಿ ಒಲಿಂಪಿಕ್ಸ್ ಮುಗಿಯಿತಲ್ಲಾ ಎನ್ನುವ ನೆಮ್ಮದಿ ಅವರದು. ಇದರ ಜೊತೆಗೆ ಜಗತ್ತಿನ ದೊಡ್ಡ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ ಸಂಭ್ರಮವೂ ಅವರಲ್ಲಿದೆ.

ಲಂಡನ್ ನಗರದಲ್ಲಿ ಒಂದು ವಾರದ ಹಿಂದೆ ಇದ್ದ ಸಂಭ್ರಮ ಈಗಿಲ್ಲ. ವಿವಿಧ ದೇಶಗಳ ಕ್ರೀಡಾಳುಗಳ ಸಾಹಸವನ್ನು ನೋಡಲು ಈಗ ಅವಕಾಶವಿಲ್ಲ. ಲಂಡನ್,  ಒಲಿಂಪಿಕ್ಸ್ ಮೂಲಕ ಇಡೀ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆದಿಟ್ಟುಕೊಂಡಿತ್ತು. ಈಗ ಅಂಥದ್ದೊಂದು ಸಾಹಸಕ್ಕೆ ರಷ್ಯಾದ ಸೋಚಿ ನಗರ ಅಣಿಯಾಗುತ್ತಿದೆ. ಇಲ್ಲಿ 2014ರ ಫೆಬ್ರುವರಿ 7ರಿಂದ 23ರ ವರೆಗೆ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ.

ಚಳಿಗಾಲದ ಒಲಿಂಪಿಕ್ಸ್ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಇದು 22ನೇ ಒಲಿಂಪಿಕ್ಸ್. ಇದಕ್ಕಾಗಿ ಸೋಚಿಯಲ್ಲಿ ಕ್ರೀಡಾಂಗಣ, ಒಲಿಂಪಿಕ್ಸ್ ಪಾರ್ಕ್ ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕೆ `ಮೌಂಟ್ ಫಿಸ್ಟ್~ ಎಂದು ಹೆಸರು ನೀಡಲಾಗಿದೆ. ಇದು ಕ್ರೀಡಾ ಗ್ರಾಮಕ್ಕೆ ಹತ್ತಿರದಲ್ಲಿಯೇ ಇದೆ.

ಚಳಿಗಾಲದ ಒಲಿಂಪಿಕ್ಸ್‌ನ ಇತಿಹಾಸ ತುಂಬಾ ರೋಚಕ. ಅಲ್ಲೂ ಪದಕ ಗೆದ್ದ ಸಾಧಕರಿದ್ದಾರೆ. ಇತಿಹಾಸ ನಿರ್ಮಿಸಿದ ಕ್ರೀಡಾಳುಗಳಿದ್ದಾರೆ. ಕೆಲ ಒಲಿಂಪಿಕ್ಸ್‌ಗಳನ್ನು ಬಹಿಷ್ಕರಿಸಿ ವಿರೋಧ ವ್ಯಕ್ತಪಡಿಸಿದ ಘಟನೆಗಳೂ ನಡೆದಿವೆ. ಕೆಲ ಸಲ ರಾಜಕೀಯ ಕಾರಣಗಳಿಂದಾಗಿ ಒಲಿಂಪಿಕ್ಸ್ ನಡೆಸದಂತೆ ತಡೆ ಒಡ್ಡಿದ ಸಂಗತಿಗಳೂ ಜರುಗಿವೆ. ಅಲ್ಲೂ ಉದ್ದೀಪನ ಮದ್ದಿನ ಸದ್ದು ಅಬ್ಬರಿಸಿದೆ. ಆ ಇತಿಹಾಸದ ಪುಟಗಳನ್ನು ತಿರುವಿ ಹಾಕುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಚಳಿಗಾಲದ ಒಲಿಂಪಿಕ್ಸ್‌ನ ಇತಿಹಾಸ: 1901ರಲ್ಲಿ ಮೊದಲ ಸಲ ಸ್ವೀಡನ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಳಿಗಾಲದ ಕ್ರೀಡಾಕೂಟಗಳು ನಡೆದವು. 1903 ಹಾಗೂ 1905ರಲ್ಲೂ ಈ ಕ್ರೀಡೆಗಳು ಮುಂದುವರಿದವು. ಈ ಕ್ರೀಡಾಕೂಟಗಳು ಗಳಿಸಿದ ಖ್ಯಾತಿಯ ಪರಿಣಾಮ ಚಳಿಗಾಲದ ಒಲಿಂಪಿಕ್ಸ್ ನಡೆಸುವ ಯೋಚನೆಗೆ ಬುನಾದಿ ಸಿಕ್ಕಿತು.

ಚಳಿಗಾಲದ ಕ್ರೀಡಾಕೂಟಗಳಿಗೆ ಇನ್ನಷ್ಟು ಬಲ ತುಂಬಲು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 1908ರಲ್ಲಿ ಮುಂದಾಯಿತು. ಅದೇ ವರ್ಷ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಳಿಗಾಲದ ಕ್ರೀಡಾಕೂಟಗಳನ್ನು ನಡೆಸಲು ಮಾಡಿದ ಪ್ರಯತ್ನ ವಿಫಲವಾಯಿತು.

1912ರಲ್ಲಿ ಒಲಿಂಪಿಕ್ಸ್‌ನಲ್ಲಿ ಒಂದು ವಾರದ ಚಳಿಗಾಲದ  ಕ್ರೀಡಾಕೂಟಗಳನ್ನು ನಡೆಸಲು ಇಟಲಿ, ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಮುಂದೆ ಪ್ರಸ್ತಾವ ಸಲ್ಲಿಸಿತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಕಾರಣ ಈ ಪ್ರಯತ್ನವೂ ಫಲ ನೀಡಲಿಲ್ಲ. ಹೀಗೆ ಸಾಕಷ್ಟು ಏಳುಬೀಳಿನ ಹಾದಿಯಲ್ಲಿ ಸಾಗಿ ಕೊನೆಯಲ್ಲಿ 1924ರಲ್ಲಿ ಫ್ರಾನ್ಸ್‌ನಲ್ಲಿ ಮೊದಲ ಸಲ ಚಳಿಗಾಲದ ಒಲಿಂಪಿಕ್ಸ್ ನಡೆದವು.

ಮತ್ತೆ ವಿಘ್ನ: 1924ರಲ್ಲಿ ಆರಂಭವಾದ ಚಳಿಗಾಲದ ಒಲಿಂಪಿಕ್ಸ್ ನಾಲ್ಕು ಸಲ ನಡೆದ ನಂತರ ಮತ್ತೆ ವಿಘ್ನ ಎದುರಾಯಿತು. ವಿಶ್ವ ಜಾಗತಿಕ ಯುದ್ಧ ಇದಕ್ಕೆ ಕಾರಣವಾಯಿತು.

ಒಲಿಂಪಿಕ್ಸ್‌ಗೆ ರಂಗು: 1968ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನ ಕ್ರೀಡಾಕೂಟಗಳನ್ನು ಮೊದಲ ಸಲ ಬಣ್ಣದ ಟೆಲಿವಿಷನ್‌ನಲ್ಲಿ ಪ್ರಸಾರ ಮಾಡಲಾಯಿತು. ಈ ಕೂಟದಲ್ಲಿ 37 ರಾಷ್ಟ್ರಗಳ 1158 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಮದ್ದಿನ ನಂಟು: ಚಳಿಗಾಲದ ಒಲಿಂಪಿಕ್ಸ್‌ಗೂ ಉದ್ದೀಪನ ಮದ್ದಿನ ನಂಟು ಬಿಟ್ಟಿಲ್ಲ. 1968ರ ಒಲಿಂಪಿಕ್ಸ್‌ನಲ್ಲಿ ಪಶ್ಚಿಮ ಜರ್ಮನಿಯ ಹಾಕಿ ಆಟಗಾರ ಮದ್ದು ಸೇವಿಸಿದ್ದು ಸಾಬೀತಾಗಿತ್ತು.

ಕ್ರೀಡೆಗಳು: ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸಾಹಸವೇ ಪ್ರಧಾನ. ಆದ್ದರಿಂದ ಈ ಕ್ರೀಡೆಗಳು ಜನರನ್ನು ಬೇಗನೇ ಸೆಳೆಯುತ್ತವೆ. ಸ್ಪೀಡ್ ಸ್ಕೇಟಿಂಗ್, ಐಸ್ ಹಾಕಿ, ಕ್ರಾಸ್ ಕಂಟ್ರಿ ಸ್ಕಿಲ್ಲಿಂಗ್ , ಫಿಗರ್ ಸ್ಕೇಟಿಂಗ್, ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್, ಫ್ರಿಸ್ಟೈಲ್ ಸ್ಕಿಲ್ಲಿಂಗ್, ಕರ್ಲಿಂಗ್ ಸೇರಿದಂತೆ ಇತರ ಕ್ರೀಡೆಗಳು ನಡೆಯುತ್ತವೆ.

2010ರ ಚಳಿಗಾಲದ ಒಲಿಂಪಿಕ್ಸ್ ಕೆನಡಾದಲ್ಲಿ ನಡೆದಿತ್ತು. ಈ ಕೂಟದಲ್ಲಿ 82 ರಾಷ್ಟ್ರಗಳ ಕ್ರೀಡಾಳುಗಳು ಪಾಲ್ಗೊಂಡಿದ್ದರು. 2014ರಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. 

ಭಾರತದ ಪಾತ್ರ ಏನು?
2010ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಮೂವರು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಕೆ.ಪಿ. ಶಿವಕೇಶವನ್, ತಾಶಿ ಹಾಗೂ ಜಮಾಯಂಗ್ ನಾಂಘೈಲ್ ಅವರು ಪೈಪೋಟಿ ನಡೆಸಿದ್ದರು. ಆದರೆ, ಭಾರತಕ್ಕೆ ಯಾವುದೇ ಪದಕ ಬರಲಿಲ್ಲ.

1964ರಲ್ಲಿ ಮೊದಲ ಸಲ ಆಸ್ಟ್ರಿಯಾದಲ್ಲಿ ನಡೆದ     ಒಲಿಂಪಿಕ್ಸ್‌ನಲ್ಲಿ ಭಾರತದ ಒಬ್ಬ ಸ್ಪರ್ಧಿ ಮಾತ್ರ ಭಾಗವಹಿಸಿದ್ದರು. ಅಂದಿನಿಂದ ಪಾಲ್ಗೊಳ್ಳುವವರ ಸಂಖ್ಯೆಯಲ್ಲಿ ಸುಧಾರಣೆ ಆಗಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.