ADVERTISEMENT

ಸತ್ವ ಹೋಗಿದೆ; ಸಿಪ್ಪೆ ಉಳಿದಿದೆ!

ಪ್ರವೀಣ ಕುಲಕರ್ಣಿ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

`ಯುನಿವರ್ಸಿಟಿಗಳಲ್ಲಿ ಈಗ ಕ್ರಿಕೆಟ್ ಆಡಿಸುವುದು ಅದನ್ನು ಬೆಳೆಸಲಲ್ಲ; ಸಂಪ್ರದಾಯ ಉಳಿಸಿಕೊಂಡು ಹೋಗಲಷ್ಟೇ~
-ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಆಟಗಾರರ ಒಕ್ಕೊರಲ ಅಭಿಪ್ರಾಯ ಇದು. ಹಿಂದೆ ನಡೆಯುತ್ತಿದ್ದ ಕೌಶಲ ಪೂರ್ಣವಾದ ಮೂರು ದಿನಗಳ ಆಟಕ್ಕೆ ಈಗಿನ 30 ಓವರ್‌ಗಳ ಪಂದ್ಯ ಯಾವ ಹಂತದಲ್ಲೂ ಸರಿಸಾಟಿಯಾಗದು ಎನ್ನುತ್ತಾರೆ ಅವರು.

ರಾಜ್ಯದ ಅತ್ಯಂತ ಹಿರಿಯ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕ ವಿವಿ ಕೂಡ ಒಂದಾಗಿದೆ. ಇಲ್ಲಿಯ ಹಲವು ಕ್ರೀಡಾ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಿವೆ. ಕರ್ನಾಟಕ ವಿವಿ ತಂಡ ಈ ಹಿಂದೆ ದಕ್ಷಿಣ ವಲಯ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅಖಿಲ ಭಾರತ ಅಂತರ ವಿವಿ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನವನ್ನೂ ಗಳಿಸಿದೆ.

`ಹಿಂದಿನ ವಿವಿ ಕ್ರಿಕೆಟ್ ಟೂರ್ನಿಗಳು ಪ್ರತಿಭೆಯನ್ನು ಮಂಥಿಸಿ ಗಟ್ಟಿ ಕೆನೆಯನ್ನು ರಾಷ್ಟ್ರೀಯ ತಂಡಕ್ಕೆ ಎತ್ತಿ ಕೊಡುತ್ತಿದ್ದವು. ಆದ್ದರಿಂದಲೇ ಆಗಿನ ಪಂದ್ಯಗಳಿಗೆ ಬೆಲೆ ಇರುತ್ತಿತ್ತು. ಈಗಿನ ದಿನಗಳಲ್ಲಿ ಒಬ್ಬ ರಣಜಿ ಆಟಗಾರ ಸಹ ಆ ಟೂರ್ನಿಯಿಂದ ಹೊರಹೊಮ್ಮುವುದು ಕಷ್ಟವಾಗಿದೆ~ ಎನ್ನುತ್ತಾರೆ,      ಕರ್ನಾಟಕ ವಿವಿಯ ಮಾಜಿ ಆಟಗಾರ ಮತ್ತು ಹಾಲಿ ಕೆಎಸ್‌ಸಿಎ ಧಾರವಾಡ ವಲಯ ನಿಮಂತ್ರಕ ಬಾಬಾ ಭೂಸದ.

ಐವತ್ತು ವರ್ಷಗಳ ಹಿಂದೆ, ಅಂದರೆ 1960ರ ದಶಕದಲ್ಲಿ, ಕರ್ನಾಟಕ ವಿವಿ ಪಶ್ಚಿಮ ವಲಯದಲ್ಲಿ ಸ್ಥಾನ ಪಡೆದಿತ್ತು. ಹೀಗಾಗಿ ಇಲ್ಲಿಯ ಆಟಗಾರರಿಗೆ ಬಾಂಬೆ, ಬರೋಡಾ, ಗುಜರಾತ್, ವಿದರ್ಭ ವಿವಿಗಳಂತಹ ಬಲಾಢ್ಯ ತಂಡಗಳ ಎದುರು ಆಡುವ ಯೋಗ ಪ್ರಾಪ್ತವಾಗಿತ್ತು. ಧಾರವಾಡದ ಅಂಗಳದಲ್ಲಿ ವಿನೂ ಮಂಕಡ್, ಅಜಿತ್ ವಾಡೇಕರ್ ಅವರಂತಹ ಘಟಾನುಘಟಿ ಆಟಗಾರರು ಬಂದು ಆಡಿದ್ದರು.


ಬಾಬಾ ಅವರಲ್ಲದೆ ಅವಿನಾಶ್ ನೆರ್ಲೇಕರ್, ಸುಧಾಕರ ರೈ, ತೇಜ್‌ಪಾಲ್ ಅವರಂತಹ ಅಪ್ರತಿಮ ಆಟಗಾರರು ಕರ್ನಾಟಕ ವಿವಿ ತಂಡದಲ್ಲಿ ಇದ್ದರು. `ಆಗಿನ ವಿವಿ ಕ್ರಿಕೆಟ್‌ಗೆ ಶ್ರೇಷ್ಠ ಪ್ರತಿಭೆಗಳನ್ನು ನೇರವಾಗಿ ರಾಷ್ಟ್ರೀಯ ತಂಡಕ್ಕೆ ಕಳುಹಿಸಿಕೊಡುವ ಸಾಮರ್ಥ್ಯ ಇತ್ತು. ನಮ್ಮ ಇಎಎಸ್ ಪ್ರಸನ್ನ ಹಾಗೂ ಸುನಿಲ್ ಗಾವಸ್ಕರ್ ಅವರೆಲ್ಲ ವಿವಿ ತಂಡಗಳಿಂದ ನೇರವಾಗಿ ರಾಷ್ಟ್ರೀಯ ತಂಡಕ್ಕೆ ನೆಗೆದವರು~ ಎಂದು ಭೂಸದ ಹೇಳುತ್ತಾರೆ.

~ಆಗ ಡಿಸೆಂಬರ್‌ನಲ್ಲಿ ನಡೆಯುತಿದ್ದ ವಿವಿ ಕ್ರಿಕೆಟ್ ಟೂರ್ನಿಗಾಗಿ ಒಂದೂವರೆ ತಿಂಗಳು ತಾಲೀಮು ನಡೆಯುತ್ತಿತ್ತು. ಆದರೆ, ಸದ್ಯದ ಆಟಗಾರರು ಒಟ್ಟಿಗೆ ಸಂಧಿಸುವುದು ಟೂರ್ನಿಗೆ ಹೊರಟು ನಿಂತಾಗ ರೈಲ್ವೆ ನಿಲ್ದಾಣದಲ್ಲೇ. ಮೂರು ದಿನಗಳ ಪಂದ್ಯ ಎರಡು ದಿನಕ್ಕೆ, ಅಲ್ಲಿಂದ ಒಂದು ದಿನಕ್ಕೆ, ಈಗೀಗ ಅರ್ಧ ದಿನಕ್ಕೆ ಕಡಿತಗೊಳ್ಳುತ್ತಾ ಬಂದಂತೆ, ಅದರಲ್ಲಿ ಅಡಗಿದ್ದ ಮಾಧುರ್ಯವೂ ಅಷ್ಟಷ್ಟೇ ಕರಗುತ್ತಾ ಬಂತು. ಗುಣಮಟ್ಟದ ವಿಷಯಕ್ಕೆ ಬಂದರೆ ವಿವಿ ಕ್ರಿಕೆಟ್ ದೊಡ್ಡ ಸೊನ್ನೆ~ ಎಂದು ಅವರು ಆಕ್ರೋಶ ಹೊರಹಾಕುತ್ತಾರೆ.


ಕರ್ನಾಟಕ ವಿವಿ ತಂಡದ ನಾಯಕರೂ ಆಗಿದ್ದ ವಿಜಯ್ ಕಾಮತ್, ಸತತ ನಾಲ್ಕು ವರ್ಷಗಳ ಕಾಲ ಆ ತಂಡದ ಪರವಾಗಿ ಪ್ಯಾಡ್ ಕಟ್ಟಿದವರು. ರಣಜಿ ಆಡುವ ಎಲ್ಲ ಅರ್ಹತೆಗಳಿದ್ದರೂ ತಾರತಮ್ಯದ ನೀತಿಯ ಫಲವಾಗಿ ಅವರಿಗೆ ಆ ಅದೃಷ್ಟ ದಕ್ಕಲಿಲ್ಲ. ಮೊಳೆ ಹೊಡೆದ ಮುರುಕು ಬ್ಯಾಟ್‌ನಲ್ಲೇ ಅಂತರ ವಲಯ ಟೂರ್ನಿಯಲ್ಲಿ ಆಡಿದ ಆಟಗಾರ ಅವರು.

`ಆಗ ವಿವಿಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದವು. ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ಸಾಧಿಸಲಾಗಿತ್ತು. ಈಗ ಗಲ್ಲಿಗೊಂದು ವಿವಿಗಳು ಹುಟ್ಟಿಕೊಂಡಿವೆ.  ರಾಜ್ಯದ ವಿವಿಧ ವಯೋಮಾನದ ತಂಡಗಳಲ್ಲಿ ಸಿಗುವ ದುಡ್ಡು ಆಟಗಾರರನ್ನು ವಿವಿ ತಂಡಗಳಿಂದ ವಿಮುಖರಾಗುವಂತೆ ಮಾಡಿದೆ~ ಎಂದು ಕಾಮತ್ ವಿಷಾದಿಸುತ್ತಾರೆ.

ಅಂತರ ವಲಯ ಟೂರ್ನಿಗಳಲ್ಲಿ ಕಾಮತ್, ಈಗಿನ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ. 70ರ ದಶಕದಲ್ಲಿ ಕರ್ನಾಟಕ ವಿವಿ ತಂಡದ ಆಟಗಾರರಿಗೆ ಶ್ರೀಕಾಂತ್ ಅವರಲ್ಲದೆ ಕಪಿಲ್ ದೇವ್, ರವಿಶಾಸ್ತ್ರಿ, ಕೀರ್ತಿ ಆಜಾದ್, ರಾಜಿಂದರ್ ಸಿಂಗ್, ಗುಲಾಂ ಪಾಟ್ಕರ್, ಮಿಲಿಂದ್ ಗುಂಜಾಳ ಅವರಂತಹ ಸಾಧಕರ ಎದುರು ಆಡುವ ಅವಕಾಶ ಸಿಕ್ಕಿದೆ.

ಕ್ರಿಕೆಟ್‌ನ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಕಪಿಲ್ ಅವರನ್ನು ಮೀರಿ ನಿಲ್ಲಬಲ್ಲ ಆಲ್‌ರೌಂಡರ್ ಆಗಿದ್ದ ದಯಾನಂದ ಶೆಟ್ಟಿ ಕರ್ನಾಟಕ ವಿವಿ ತಂಡ ಕಂಡ ದೈತ್ಯ ಪ್ರತಿಭೆ. `ಹುಬ್ಬಳ್ಳಿ ಹುಲಿ~ ಎಂದೇ ಸಹ ಆಟಗಾರರು ಅವರನ್ನು ಕರೆಯುತ್ತಿದ್ದರು. 

ಭಾರತ ತಂಡಕ್ಕೆ ಆಡುವ ಎಲ್ಲ ಅರ್ಹತೆಗಳನ್ನು ಹೊಂದಿದ್ದ ಶೆಟ್ಟಿ ಅವರನ್ನು ಕೊನೆಯಪಕ್ಷ ರಣಜಿಯಲ್ಲೂ ಆಡಿಸಲಿಲ್ಲ. ದಯಾನಂದ ಅವರ ಸಹೋದರ ಜಯಂತ್ ಕೂಡ ಒಳ್ಳೆಯ ಆಟಗಾರನಾಗಿ ಹೆಸರು ಮಾಡಿದ್ದರು. ಕರ್ನಾಟಕ ವಿವಿಗೆ ಆಡುವ ಮೂಲಕ ರಣಜಿ ತಂಡದಲ್ಲಿ ಸ್ಥಾನ ಪಡೆದ ಆಟಗಾರರಲ್ಲಿ ಸುರೇಶ ಶಾನಬಾಳ್, ಪ್ರಕಾಶ ರಾಠೋಡ್, ರಾಜೇಶ ಕಾಮತ್, ಆನಂದ ಕಟ್ಟಿ, ಸೋಮಶೇಖರ ಶಿರಗುಪ್ಪಿ ಪ್ರಮುಖರಾಗಿದ್ದಾರೆ.

ADVERTISEMENT


ಅಯ್ಯಂಗಾರ್ ಸಹೋದರರಾದ ಮೋಹನ್ ಮತ್ತು ಮುರಳಿ, ನಜೀರ್ ಸಿಂದಗೇರಿ, ಕೈಲಾಶ್ ಮುನ್ವರ್, ರಾಜೀವ್ ಭಟ್ಕಳ್, ಪ್ರಮೋದ್ ಕಾಮತ್, ವೀರಣ್ಣ ಸವಡಿ ಅವರಂತಹ ಪ್ರತಿಭಾನ್ವಿತ ಆಟಗಾರರನ್ನು ಕರ್ನಾಟಕ ವಿವಿಯಲ್ಲಿ ಹೆಸರಿಸಬಹುದು.
`ವಿವಿ ಆಯ್ಕೆ ಸಮಿತಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
 
ಆಟಗಾರರ ಸಾಮರ್ಥ್ಯ ಬಲ್ಲ ಸ್ಥಳೀಯರು ಯಾರೂ ಸಮಿತಿಯಲ್ಲಿ ಇಲ್ಲ. ಪೂರ್ಣಪ್ರಮಾಣದ ಕೋಚ್ ಸಹ ಇಲ್ಲ. ಅಖಿಲ ಭಾರತ ಅಂತರ ವಿವಿ ಟೂರ್ನಿ ಮುಗಿದ ನಂತರ ಅಂತರ ಕಾಲೇಜು ಟೂರ್ನಿ ಆರಂಭಿಸಲಾಗುತ್ತದೆ. ಹೀಗಿರುವಾಗ ಕ್ರಿಕೆಟ್ ಉದ್ಧಾರವಾಗುವುದು ಹೇಗೆ~ ಎಂದು ಕೆಲವು ಜನ ಕ್ರಿಕೆಟ್ ಕೋಚ್‌ಗಳು ಪ್ರಶ್ನಿಸುತ್ತಾರೆ.
ಎಲ್ಲ ಸತ್ವ ಕಳೆದುಕೊಂಡು ಅಸ್ಥಿಪಂಜರದಂತೆ ಆಗಿರುವ ವಿವಿ ಕ್ರಿಕೆಟ್‌ಗೆ ಶಕ್ತಿ ತುಂಬಬೇಕು ಎಂಬುದು ಬಹುತೇಕ ಮಾಜಿ ಆಟಗಾರರ ಅಪೇಕ್ಷೆಯಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.