ADVERTISEMENT

ಬಿಬಿಎಂಪಿಯಿಂದಲೇ ‘ಪಾವತಿ ನಿಲುಗಡೆ’

‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆ ಟೆಂಡರ್‌ಗೆ ಗುತ್ತಿಗೆದಾರರಿಂದ ಸಿಗದ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 21:36 IST
Last Updated 19 ಅಕ್ಟೋಬರ್ 2022, 21:36 IST

ಬೆಂಗಳೂರು: ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆ ಟೆಂಡರ್‌ಗೆ ಗುತ್ತಿಗೆದಾರರು ಪ್ರತಿಕ್ರಿಯಿಸಿಲ್ಲ. ಎರಡನೇ ಬಾರಿಗೆ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಈ ನಡುವೆ ಬಿಬಿಎಂಪಿ ವತಿಯಿಂದಲೇ ‘ಪಾವತಿ ನಿಲುಗಡೆ’ ವ್ಯವಸ್ಥೆ ಜಾರಿ ಮಾಡಲು ಯೋಜಿಸಲಾಗಿದೆ.

ನಗರದ ಎಂಟೂ ವಲಯದಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆಯನ್ನು ಜಾರಿಗೆ ತರಲು ಬಿಬಿಎಂಪಿ ಸೆ.18ರಂದು ಟೆಂಡರ್‌ ಕರೆದಿತ್ತು. ಅ.10ರಂದು ಟೆಂಡರ್‌ ಸಲ್ಲಿಸಲು ಅಂತಿಮ ದಿನವಾಗಿತ್ತು. ಅವಧಿ ಮುಗಿದರೂ ಗುತ್ತಿಗೆದಾರರು ಟೆಂಡರ್‌ಗೆ ಅರ್ಜಿ ಸಲ್ಲಿಸಿರಲಿಲ್ಲ. ಒಂದೆರಡು ಬಂದಿದ್ದರೂ ಇಎಂಡಿ ಮೊತ್ತವನ್ನೇ ಅವರು ಸರಿಯಾಗಿ ಪಾವತಿಸಿಲ್ಲ. ಹೀಗಾಗಿ ಮತ್ತೆ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ.

ಈ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬುಧವಾರ ದಕ್ಷಿಣ ವಲಯದಲ್ಲಿ ನಡಿಗೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆ ಜಾರಿಗೊಳ್ಳುವ ಮುನ್ನ ನಾಗರಿಕರಲ್ಲಿ ಅರಿವು ಮೂಡಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸಿ ಎಂದು ರಸ್ತೆ ಮೂಲಸೌಕರ್ಯದ ಮುಖ್ಯ ಎಂಜಿನಿಯರ್‌ ಆಗಿರುವ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರಿಗೆ ಸೂಚಿಸಿದರು. ಇದರಂತೆ ಬಿಬಿಎಂಪಿ ವತಿಯಿಂದಲೇ ‘ಪಾವತಿ ನಿಲುಗಡೆ’
ವ್ಯವಸ್ಥೆಯನ್ನು ಜಾರಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

ADVERTISEMENT

‘ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆ ಟೆಂಡರ್‌ಗೆ ಗುತ್ತಿಗೆದಾರರು ಪ್ರತಿಕ್ರಿಯಿ ಸಿಲ್ಲ. ಎರಡನೇ ಬಾರಿಗೆ ಟೆಂಡರ್‌ ಆಹ್ವಾನಿಸಲಾಗುತ್ತದೆ. ಎಲ್ಲ ಪ್ರಕ್ರಿಯೆ ಮುಗಿಯಲು ತಡವಾಗುತ್ತದೆ. ಹೀಗಾಗಿ, ಬಿಬಿಎಂಪಿ ವತಿಯಿಂದಲೇ ವಾಹನ ನಿಲುಗಡೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಪಾವತಿ ನಿಲುಗಡೆಯನ್ನು ಸದ್ಯವೇ ಜಾರಿಗೆ ತರಲಾಗುತ್ತದೆ’ ಎಂದು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಮಾರ್ಟ್‌ ಪಾರ್ಕಿಂಗ್‌ನಲ್ಲಿನ ಎಲ್ಲ ವ್ಯವಸ್ಥೆಯನ್ನು ‘‍ಪಾವತಿ ನಿಲುಗಡೆ’
ವ್ಯವಸ್ಥೆಯಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಯಂತ್ರ ಇತರೆ ವ್ಯವಸ್ಥೆಗಳಿಗೆ ವೆಚ್ಚ ಮಾಡಲು ಬಿಬಿಎಂಪಿ ಸಿದ್ಧವಿಲ್ಲ. ಇರುವ ಸಂಪನ್ಮೂಲ
ಗಳನ್ನು ಬಳಸಿಕೊಂಡು ವಾಹನ ನಿಲುಗಡೆ ರಸ್ತೆಗಳಲ್ಲಿ ಗುರುತು ಮಾಡಿ, ಸ್ವಲ್ಪ ವೆಚ್ಚದಲ್ಲಿ ಬಿಬಿಎಂಪಿಯೇ ಅನುಷ್ಠಾನ ಮಾಡುವ ಬಗ್ಗೆ ಆಲೋಚಿಸುತ್ತಿದ್ದೇವೆ’ ಎಂದು ವಿವರ ನೀಡಿದರು.

‘ವಾಹನ ನಿಲುಗಡೆ ಶುಲ್ಕವನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಬಿಬಿಎಂಪಿ ಮಾಡುತ್ತಿತ್ತು. ಅದೇ ರೀತಿ ಗುತ್ತಿಗೆದಾರರನ್ನು ನೇಮಿಸಿಕೊಂಡು ಶುಲ್ಕ ಸಂಗ್ರಹಿಸುವ ಬಗ್ಗೆಯೂ ಆಲೋಚಿಸ ಲಾಗುತ್ತಿದೆ. ಶೀಘ್ರವೇ ಯಾವ ರಸ್ತೆಗಳಲ್ಲಿ ‘ಪಾವತಿ ನಿಲುಗಡೆ’ ಶುಲ್ಕ ಜಾರಿಯಾಗುತ್ತದೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆರಂಭಿಸಲಾಗುತ್ತದೆ. ಬಿಬಿಎಂಪಿ ಅನುಷ್ಠಾನಗೊಳಿಸುವ ‘ಪಾವತಿ ನಿಲುಗಡೆ’ ಶುಲ್ಕ ಈ ಹಿಂದೆ ನಿರ್ಧರಿಸಿದಂತೆಯೇ ಇರಲಿದೆ’ ಎಂದು ಹೇಳಿದರು.

ಶುಲ್ಕ ವಿವರ: ‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆಯಲ್ಲಿ ರಸ್ತೆಗಳನ್ನು ಮೂರು ವರ್ಗವಾಗಿಸಲಾಗಿದೆ. ಎ ವರ್ಗದ ರಸ್ತೆಗಳಲ್ಲಿ ಪ್ರತಿ ಗಂಟೆಗೆ ದ್ವಿಚಕ್ರಕ್ಕೆ ₹15, ಕಾರಿಗೆ ₹30 ನಿಲುಗಡೆ ಶುಲ್ಕವಿದೆ. ಬಿ ವರ್ಗದ ರಸ್ತೆಗಳಲ್ಲಿ ದ್ವಿಚಕ್ರಕ್ಕೆ ₹10, ಕಾರಿಗೆ ₹20 ಹಾಗೂ ಸಿ ವರ್ಗದ ರಸ್ತೆಗಳಲ್ಲಿ ದ್ವಿಚಕ್ರಕ್ಕೆ ₹5, ಕಾರಿಗೆ ₹10. ಇದೇ ಶುಲ್ಕ ಬಿಬಿಎಂಪಿಯ ‘ಪಾವತಿ ನಿಲುಗಡೆ’ ವ್ಯವಸ್ಥೆಯಲ್ಲೂ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.