ADVERTISEMENT

Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2026, 5:20 IST
Last Updated 23 ಜನವರಿ 2026, 5:20 IST
   
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್‌ ಪಿಂಚಣಿ ಯೋಜನೆಯನ್ನು 2030–31ನೇ ಹಣಕಾಸು ವರ್ಷದ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳಿಗೆ ಆರ್ಥಿಕ ನೆರವು ಮುಂದುವರಿಸುವುದಕ್ಕೂ ಅನುಮೋದನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಏನಿದು ಅಟಲ್‌ ಪಿಂಚಣಿ ಯೋಜನೆ?

ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ಒದಗಿಸುವ ದೃಷ್ಟಿಯಿಂದ ಅಟಲ್‌ ಪಿಂಚಣಿ ಯೋಜನೆಯನ್ನು 2015ರ ಮೇ 9ರಂದು ಆರಂಭಿಸಲಾಯಿತು. ಪ್ರಸ್ತುತ, 8.66 ಕೋಟಿ ಜನರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿತ ಸದಸ್ಯರು ಪಾವತಿಸಿದ ವಂತಿಗೆ ಆಧಾರದಲ್ಲಿ, ಫಲಾನುಭವಿಗೆ 60 ವರ್ಷ ತುಂಬಿದ ನಂತರ ಮಾಸಿಕ ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ₹5 ಸಾವಿರ ವರೆಗೆ ಪಿಂಚಣಿ ನೀಡಲಾಗುತ್ತದೆ.

ಪ್ರಯೋಜನಗಳೇನು?

ಈ ಯೋಜನೆಯು ನಾಗರಿಕರಿಗೆ, ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ,ಅವರ ನಿವೃತ್ತಿ ಸಮಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

ಚಂದಾದಾರರ ಮರಣದ ನಂತರ ಮತ್ತು ಅವರ ಸಂಗಾತಿ ಸಹ ಮರಣ ಹೊಂದಿದರೆ ಯೋಜನೆಯಡಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಅವರ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ADVERTISEMENT

ಚಂದಾದಾರರ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುತ್ತದೆ.

ಹೂಡಿಕೆ, ಪಿಂಚಣಿಯ ಮೊತ್ತವೆಷ್ಟು?

ಅಟಲ್‌ ಪಿಂಚಣಿ ಯೋಜನೆ ಮೂಲಕ 5 ರೀತಿಯಲ್ಲಿ ಪಿಂಚಣಿ ಮೊತ್ತವನ್ನು ನೀಡಲಾಗುತ್ತದೆ. ಅಂದರೆ ತಿಂಗಳಿಗೆ ₹1000, ₹2000, ₹3000, ₹4000 ಮತ್ತು ₹ 5000 ನಂತೆ ಪಿಂಚಣಿ ಸಿಗುತ್ತದೆ. ನೀವು ಕಟ್ಟುವ ಹಣ ,ಮತ್ತು ವರ್ಷದ ಆಧಾರದ ಮೇಲೆ ಈ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ನೀವು ₹5 ಸಾವಿರ ಪಿಂಚಣಿ ಪಡೆಯಬೇಕೆಂದರೆ, 18 ವರ್ಷದಲ್ಲಿ ಆರಂಭಿಸುವುದಾದರೆ ತಿಂಗಳಿಗೆ ₹210 ಪಾವತಿಸಬೇಕು. ಹೀಗೆ 42 ವರ್ಷಗಳವರೆಗೆ ಪಾವತಿ ಮಾಡಬೇಕು. ಒಟ್ಟು ಮೊತ್ತ ₹ 1.06 ಲಕ್ಷ ಆಗಿರುತ್ತದೆ. 60 ವರ್ಷ ತುಂಬಿದ ಬಳಿಕ ನೀವು ತಿಂಗಳಿಗೆ ₹ 5000 ಪಿಂಚಣಿ ಪಡೆಯಬಹುದು. ಹೀಗೆ ನೀವು ಆಯ್ಕೆ ಮಾಡುವ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ಪಾವತಿ ಮೊತ್ತ ನಿರ್ಧಾರವಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

  • 18 ರಿಂದ 40 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು

  • ಅರ್ಜಿದಾರರು ಮಾನ್ಯತೆ ಪಡೆದ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರಬೇಕು.‌

  • ಚಂದಾದಾರರು ಕನಿಷ್ಠ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು.

  • ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸೇರಲು ಅರ್ಹರಲ್ಲ. (2022ರ ಅಕ್ಟೋಬರ್ 1 ರಿಂದ ಈ ನಿಯಮ ಜಾರಿಗೆ ಬಂದಿದೆ)

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು, ಬ್ಯಾಂಕ್ ಶಾಖೆಗಳಿಂದ ನೋಂದಣಿ ಫಾರ್ಮ್ ಅನ್ನು ಪಡೆಯಬಹುದು ಅಥವಾ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಫಾರ್ಮ್ ಒಳಗೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿದ ನಂತರ, ಆಧಾರ್ ಕಾರ್ಡ್‌ ಹಾಗೂ ಛಾಯಾಚಿತ್ರದೊಂದಿಗೆ ಅರ್ಜಿಯನ್ನು ಬ್ಯಾಂಕ್‌ಗೆ ಸಲ್ಲಿಸಿ.

ಅಟಲ್ ಪಿಂಚಣಿ ಯೋಜನೆಯ (APY) ಫಾರ್ಮ್ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.

ಅರ್ಜಿ ಸಲ್ಲಿಸಲು ಸರಳ ಹಂತಗಳು ಇಲ್ಲಿವೆ:

  • ಯಾವುದೇ ಬ್ಯಾಂಕ್‌ನ ಶಾಖೆ ಅಥವಾ ಅಂಚೆ ಕಚೇರಿಯಿಂದ ಎಪಿವೈ ನೋಂದಣಿ ಫಾರ್ಮ್ ನಮೂನೆಯನ್ನು ಪಡೆಯಿರಿ.

  • ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಯ ಉಳಿತಾಯ ಖಾತೆ ವಿವರಗಳೊಂದಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ.

  • ನೀವು ನೇರವಾಗಿ ಬ್ಯಾಂಕ್ ಅಥವಾ ಉಳಿತಾಯ ಖಾತೆ ಹೊಂದಿರುವ ಅಂಚೆ ಕಚೇರಿಯಲ್ಲಿಯೂ ಅರ್ಜಿ ಸಲ್ಲಿಸಬಹುದು.

  • ಫಾರ್ಮ್ ಅನ್ನು ಸಲ್ಲಿಸುವ ಮೊದಲು ನಿಮ್ಮ ಪೂರ್ಣ ಹೆಸರು, ಜನ್ಮ ದಿನಾಂಕ ಮತ್ತು ವಯಸ್ಸು, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಆಧಾರ್ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ.

  • ವಿವಾಹಿತ ವ್ಯಕ್ತಿಗಳು ತಮ್ಮ ಸಂಗಾತಿಯ ಹೆಸರು ಮತ್ತು ವಯಸ್ಸಿನ ವಿವರವನ್ನು ನಮೂದಿಸಬೇಕು.

  • ಅರ್ಜಿದಾರರು ನಾಮಿನಿಯ ಹೆಸರನ್ನು ನಮೂದಿಸಬೇಕು. ಮತ್ತು ಅವರೊಂದಿಗಿನ ಸಂಬಂಧದ ಬಗ್ಗೆಯೂ ಉಲ್ಲೇಖಿಸಬೇಕು.

  • ನೀವು ಬಯಸುವ ಮಾಸಿಕ ಪಿಂಚಣಿ ಮೊತ್ತವನ್ನು ಆಯ್ಕೆ ಮಾಡಿ

  • ಫಾರ್ಮ್‌ನ ಕೊನೆಯಲ್ಲಿ ದಿನಾಂಕ ಮತ್ತು ಸ್ಥಳವನ್ನು ನಮೂದಿಸಿ.

  • ಎಪಿವೈನ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಿದ್ದೀರಿ ಎಂದು ಪ್ರಮಾಣೀಕರಿಸಲು ಹೆಬ್ಬೆರಳಿನ ಗುರುತು ಅಥವಾ ಸಹಿ ಮಾಡಿ.

ಆನ್‌ಲೈನ್‌ನಲ್ಲಿಯೂ ಸಹ ಯೋಜನೆಗೆ ಅರ್ಜಿ ಸಲ್ಲಿಸಬಹುದು: https://npstrust.org.in/open-apy-account.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ. ಅಲ್ಲಿರುವ Social Security Schemes ಅಥವಾ Services ವಿಭಾಗದಲ್ಲಿ Atal Pension Yojana ಎಂವುದನ್ನು ಆರಿಸಿ.

  • ಬಳಿಕ ಯೋಜನೆಗೆ ಲಿಂಕ್ ಮಾಡಬೇಕಾದ ನಿಮ್ಮ ಉಳಿತಾಯ ಖಾತೆಯನ್ನು ಆರಿಸಿ. ನಿಮಗೆ ಬೇಕಾದ ಪಿಂಚಣಿ ಮೊತ್ತವನ್ನು (₹ 1,000 ರಿಂದ ₹5,000 ) ಹಾಗೂ ಪಾವತಿಸುವ ಅವಧಿಯನ್ನು (ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ) ಆಯ್ಕೆ ಮಾಡಿ.

  • ಅರ್ಜಿಯಲ್ಲಿ ನಿಮ್ಮ ನಾಮಿನಿ ವಿವರ ಭರ್ತಿ ಮಾಡಿ.

  • ಕೋನೆಯದಾಗಿ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.