ADVERTISEMENT

Explainer:ಪಾಕ್‌ಗೆ ಟರ್ಕಿ–ಅಜರ್‌ಬೈಜಾನ್ ಬೆಂಬಲ; ಭಾರತ ಜೊತೆ ವ್ಯಾಪಾರಕ್ಕೆ ಧಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2025, 11:39 IST
Last Updated 14 ಮೇ 2025, 11:39 IST
<div class="paragraphs"><p>ಟರ್ಕಿ ಧ್ವಜ</p></div>

ಟರ್ಕಿ ಧ್ವಜ

   

ನವದೆಹಲಿ: ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ಇತ್ತೀಚೆಗೆ ನಡೆಸಿದ ದಾಳಿಗಳನ್ನು ಖಂಡಿಸಿ, ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿರುವ ಟರ್ಕಿ ಮತ್ತು ಅಜರ್‌ಬೈಜಾನ್ ಜೊತೆಗಿನ ಭಾರತದ ವ್ಯಾಪಾರ ಸಂಬಂಧಗಳು ಬಿಗಡಾಯಿಸುವ ನಿರೀಕ್ಷೆ ಇದೆ.

ಪಾಕಿಸ್ತಾನಕ್ಕೆ ಬೆಂಬಲ ನೀಡಿದ ನಂತರ, ಟರ್ಕಿ ಸರಕುಗಳು ಮತ್ತು ಪ್ರವಾಸೋದ್ಯಮವನ್ನು ಬಹಿಷ್ಕರಿಸುವಂತೆ ದೇಶದಾದ್ಯಂತ ಕೂಗು ಕೇಳಿಬರುತ್ತಿದೆ. ಈಸ್‌ಮೈಟ್ರಿಪ್ ಮತ್ತು ಇಕ್ಸಿಗೊದಂತಹ ಆನ್‌ಲೈನ್ ಪ್ರಯಾಣ ವೇದಿಕೆಗಳು ಈ ದೇಶಗಳಿಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡುತ್ತಿವೆ.

ADVERTISEMENT

ವಾಸ್ತವವಾಗಿ, ಭಾರತೀಯ ವ್ಯಾಪಾರಿಗಳು ಸಹ ಸೇಬು ಮತ್ತು ಅಮೃತಶಿಲೆಯಂತಹ ಟರ್ಕಿ ಉತ್ಪನ್ನಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಮಾಡಲು ಭಾರತ ಮೇ 7ರಂದು ‘ಆಪರೇಷನ್ ಸಿಂಧೂರ’ ಆರಂಭಿಸಿತ್ತು.

ಪಾಕಿಸ್ತಾನಿ ಆಕ್ರಮಣಗಳಿಗೆ ನಂತರದ ಎಲ್ಲ ಪ್ರತೀಕಾರಗಳನ್ನು ‘ಆಪರೇಷನ್ ಸಿಂಧೂರ’ಅಡಿಯಲ್ಲಿ ತೆಗೆದುಕೊಳ್ಳಲಾಯಿತು. ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಘೋಷಿಸಿವೆ.

ಸಂಘರ್ಷದ ಸಂದರ್ಭದಲ್ಲಿ ಭಾರತದ ಮಿಲಿಟರಿ ನೆಲೆಗಳ ಮೇಲಿನ ತನ್ನ ವಿಫಲ ಯತ್ನದಲ್ಲಿ ಪಾಕಿಸ್ತಾನವು ಟರ್ಕಿ ಡ್ರೋನ್‌ಗಳನ್ನು ಬಳಸಿದೆ.

ಈ ಬೆಳವಣಿಗೆಗಳು ಟರ್ಕಿ ಮತ್ತು ಅಜರ್‌ಬೈಜಾನ್ ಜೊತೆಗಿನ ಭಾರತದ ವ್ಯಾಪಾರ ಸಂಬಂಧಗಳ ಮೇಲೆ ಬೀರುವ ಪರಿಣಾಮವನ್ನು ವಿವರಿಸುವ ಕೆಲವು ಪ್ರಶ್ನೋತ್ತರಗಳು ಇಲ್ಲಿವೆ.

ಟರ್ಕಿ ಮತ್ತು ಅಜೆರ್‌ಬೈಜಾನ್ ಜೊತೆಗಿನ ಭಾರತದ ಸಂಬಂಧಗಳು ಏಕೆ ಒತ್ತಡಕ್ಕೆ ಸಿಲುಕಿಸಬಹುದು?

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ನಡೆಸಿದ ದಾಳಿಯನ್ನು ಎರಡೂ ದೇಶಗಳು ಟೀಕಿಸಿವೆ. ಸಂಘರ್ಷದಲ್ಲಿ ಪಾಕಿಸ್ತಾನವು ಟರ್ಕಿಯ ಡ್ರೋನ್‌ಗಳನ್ನು ಸಹ ಬಳಸಿದೆ.

ಭಾರತವು ಟರ್ಕಿ ಮತ್ತು ಅಜರ್‌ಬೈಜಾನ್ ಜೊತೆ ಯಾವ ಪ್ರಮಾಣದ ವ್ಯಾಪಾರ ಸಂಬಂಧ ಹೊಂದಿದೆ?

2024-25ರ ಅವಧಿಯಲ್ಲಿ ಟರ್ಕಿಗೆ ಭಾರತದ ರಫ್ತು 5.2 ಬಿಲಿಯನ್ ಡಾಲರ್‌ನಷ್ಟಾಗಿದ್ದು, 2023-24ರಲ್ಲಿ ಇದು 6.65 ಬಿಲಿಯನ್ ಡಾಲರ್ ಆಗಿತ್ತು. ಇದು ಭಾರತದ ಒಟ್ಟು 437 ಬಿಲಿಯನ್ ಡಾಲರ್ ರಫ್ತಿನಲ್ಲಿ ಕೇವಲ 1.5 ಪ್ರತಿಶತದಷ್ಟಿದೆ.

2024-25ರ ಅವಧಿಯಲ್ಲಿ ಅಜರ್‌ಬೈಜಾನ್‌ಗೆ ಭಾರತದ ರಫ್ತು ಕೇವಲ 86.07 ಮಿಲಿಯನ್ ಡಾಲರ್ ಆಗಿತ್ತು, 2023-24ರಲ್ಲಿ ಇದು 89.67 ಮಿಲಿಯನ್ ಡಾಲರ್ ಆಗಿತ್ತು. ಇದು ಭಾರತದ ಒಟ್ಟು ರಫ್ತಿನಲ್ಲಿ ಕೇವಲ ಶೇ 0.02 ರಷ್ಟಿದೆ.

2024-25ರ ಅವಧಿಯಲ್ಲಿ ಟರ್ಕಿಯಿಂದ ಭಾರತದ ಆಮದು 2.84 ಬಿಲಿಯನ್ ಡಾಲರ್ ಆಗಿದ್ದು, 2023-24ರಲ್ಲಿ ಇದು 3.78 ಬಿಲಿಯನ್ ಡಾಲರ್ ಆಗಿತ್ತು. ಇದು ಭಾರತದ ಒಟ್ಟು ಆಮದು 720 ಬಿಲಿಯನ್ ಡಾಲರ್‌ನಲ್ಲಿ ಕೇವಲ ಶೇ.0.5 ರಷ್ಟಿದೆ.

2024–25ರ ಅವಧಿಯಲ್ಲಿ ಅಜರ್‌ಬೈಜಾನ್‌ನಿಂದ 1.93 ಮಿಲಿಯನ್ ಡಾಲರ್‌ನಷಷ್ಟಿದ್ದು, ಇದು ಭಾರತದ ಒಟ್ಟು ಆಮದಿನ ಶೇ 0.0002 ರಷ್ಟಾಗಿದೆ.

ಈ ದೇಶಗಳ ನಡುವೆ ವ್ಯಾಪಾರವಾಗುವ ಪ್ರಮುಖ ಉತ್ಪನ್ನಗಳು ಯಾವುವು?

ಟರ್ಕಿಗೆ ಭಾರತವು ಖನಿಜ, ಇಂಧನ, ತೈಲ (2023-24ರಲ್ಲಿ 960 ಮಿಲಿಯನ್ ಡಾಲರ್); ವಿದ್ಯುತ್ ಯಂತ್ರೋಪಕರಣಗಳು ಮತ್ತು ಉಪಕರಣಗಳು; ಆಟೊಮೊಬೈಲ್ಸ್ ಮತ್ತು ಅದರ ಬಿಡಿಭಾಗಗಳು; ಸಾವಯವ ರಾಸಾಯನಿಕಗಳು; ಔಷಧ ಉತ್ಪನ್ನಗಳು; ಟ್ಯಾನಿಂಗ್ ಮತ್ತು ಡೈಯಿಂಗ್ ವಸ್ತುಗಳು; ಪ್ಲಾಸ್ಟಿಕ್, ರಬ್ಬರ್; ಹತ್ತಿ, ನಾರಿನ ಉತ್ಪನ್ನಗಳು, ಕಬ್ಬಿಣ ಮತ್ತು ಉಕ್ಕನ್ನು ರಫ್ತು ಮಾಡುತ್ತದೆ. ಇದು ಭಾರತದ ಒಟ್ಟು ರಫ್ತಿನಲ್ಲಿ ಶೇ 1.5ರಷ್ಟಿದೆ.

ಆಮದುಗಳು: ವಿವಿಧ ರೀತಿಯ ಅಮೃತಶಿಲೆಗಳು (ಬ್ಲಾಕ್‌ಗಳು ಮತ್ತು ಚಪ್ಪಡಿಗಳು), ತಾಜಾ ಸೇಬುಗಳು (ಸುಮಾರು 10 ಮಿಲಿಯನ್ ಡಾಲರ್), ಚಿನ್ನ, ತರಕಾರಿ, ಸುಣ್ಣ ಮತ್ತು ಸಿಮೆಂಟ್, ಖನಿಜ ತೈಲ (2023-24 ರಲ್ಲಿ 1.81 ಬಿಲಿಯನ್ ಡಾಲರ್); ರಾಸಾಯನಿಕಗಳು, ನೈಸರ್ಗಿಕ ಅಥವಾ ಸುಗಂಧಿತ ಮುತ್ತುಗಳು, ಕಬ್ಬಿಣ ಮತ್ತು ಉಕ್ಕು.

1973ರಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ನಂತರ, 1983ರಲ್ಲಿ ಭಾರತ ಮತ್ತು ಟರ್ಕಿ ಜಂಟಿ ಆಯೋಗವನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಅಜರ್‌ಬೈಜಾನ್‌ಗೆ ಭಾರತದ ರಫ್ತುಗಳು: ತಂಬಾಕು ಮತ್ತು ಅದರ ಉತ್ಪನ್ನಗಳು (2023-24 ರಲ್ಲಿ 28.67 ಮಿಲಿಯನ್ ಡಾಲರ್); ಚಹಾ, ಕಾಫಿ, ಧಾನ್ಯ; ರಾಸಾಯನಿಕಗಳು; ಪ್ಲಾಸ್ಟಿಕ್; ರಬ್ಬರ್; ಕಾಗದ ಮತ್ತು ಕಾಗದದ ಬೋರ್ಡ್, ಮತ್ತು ಸೆರಾಮಿಕ್ ಉತ್ಪನ್ನಗಳು.

ಆಮದುಗಳು: ಪಶು ಆಹಾರ, ಸಾವಯವ ರಾಸಾಯನಿಕಗಳು, ಅಗತ್ಯ ತೈಲಗಳು ಮತ್ತು ಸುಗಂಧ ದ್ರವ್ಯ, ಕಚ್ಚಾ ಚರ್ಮ ಮತ್ತು ಚರ್ಮದ ಉತ್ಪನ್ನಗಳು ( 024-25 ರ ಅವಧಿಯಲ್ಲಿ 1.52 ಮಿಲಿಯನ್ ಡಾಲರ್). 2023 ರಲ್ಲಿ, ಅಜೆರ್‌ಬೈಜಾನ್‌ನ ಕಚ್ಚಾ ತೈಲಕ್ಕೆ ಭಾರತ ಮೂರನೇ ಅತಿದೊಡ್ಡ ತಾಣವಾಗಿತ್ತು.

ಭಾರತ ಮತ್ತು ಈ ಎರಡು ರಾಷ್ಟ್ರಗಳ ಜನರ ನಡುವಿನ ಸಂಬಂಧ ಹೇಗಿದೆ?

ಪ್ರಸ್ತುತ ಟರ್ಕಿಯಲ್ಲಿ ಸುಮಾರು 3,000 ಭಾರತೀಯ ಪ್ರಜೆಗಳಿದ್ದಾರೆ. ಅವರಲ್ಲಿ 200 ವಿದ್ಯಾರ್ಥಿಗಳು ಸೇರಿದ್ದಾರೆ. ಅದೇ ರೀತಿ, ಅಜರ್‌ಬೈಜಾನ್‌ನಲ್ಲಿರುವ ಭಾರತೀಯ ಸಮುದಾಯವು 1,500ಕ್ಕೂ ಹೆಚ್ಚು ಜನರನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.