1948 ಜನವರಿ 30 ಮಹಾತ್ಮ ಗಾಂಧೀಜಿ ಅವರು ನಾಥುರಾಮ ಗೋಡ್ಸೆಯ ಗುಂಡಿಗೆ ಬಲಿಯಾದ ದಿನ. ಅವರ (ಗಾಂಧೀಜಿ) ಪುಣ್ಯತಿಥಿಯನ್ನು ಪ್ರತಿ ವರ್ಷ 'ಹುತಾತ್ಮರ ದಿನ'ವೆಂದು ಆಚರಿಸಲಾಗುತ್ತಿದೆ.
ಈ ದಿನವು ಗಾಂಧಿ ಅವರನ್ನು ಸ್ಮರಿಸುವ ದಿನ ಮಾತ್ರವಲ್ಲ. ಬದಲಿಗೆ ರಾಷ್ಟ್ರಪಿತನ ಪರಂಪರೆಯನ್ನು ಗೌರವಿಸುವ ಜೊತೆಗೆ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಗಾಂಧಿ ಮತ್ತು ಇತರ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ದಿನವೂ ಆಗಿದೆ.
ಮಹಾತ್ಮ ಗಾಂಧಿಯವರು 1869 ಅಕ್ಟೋಬರ್ 2ರಂದು ಗುಜರಾತ್‌ನ ಕರಾವಳಿ ಪಟ್ಟಣವಾದ ಪೋರಬಂದರ್‌ನಲ್ಲಿ ಜನಿಸಿದರು. 13ನೇ ವಯಸ್ಸಿನಲ್ಲಿ ಕಸ್ತೂರ್ಬಾ ಅವರನ್ನು ವಿವಾಹವಾದರು.
ಲಂಡನ್‌ನಲ್ಲಿ ಕಾನೂನು ಅಧ್ಯಯನ ಮಾಡಿ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡಿದರು. ಅಲ್ಲಿ ಅವರು ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಿದರು. ನ್ಯಾಯ, ಸಮಾನತೆ ಮತ್ತು ಶಾಂತಿಯುತ ಪ್ರತಿಭಟನೆಯಲ್ಲಿ ಅವರ ಹೆಚ್ಚು ನಂಬಿಕೆಯಿಟ್ಟಿದ್ದರು.
ಭಾರತಕ್ಕೆ ಹಿಂದಿರುಗಿದ ನಂತರ, ಗಾಂಧಿ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಮತ್ತು ಉಪ್ಪಿನ ಸತ್ಯಾಗ್ರಹದಂತಹ ಹೋರಾಟಗಳ ನೇತೃತ್ವವಹಿಸಿ ದೇಶದ ಸ್ವಾಂತ್ರತ್ಯಕ್ಕಾಗಿ ಹೋರಾಡಿದರು. ಸರಳ ಜೀವನಶೈಲಿ ಮತ್ತು ಅವರ ನೈತಿಕ ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅವರಿಗೆ ಅಪಾರ ಗೌರವವನ್ನು ತಂದುಕೊಟ್ಟವು.
1948 ಜನವರಿ 30ರಂದು, ಮಹಾತ್ಮ ಗಾಂಧಿಯವರು ದೆಹಲಿಯ ಬಿರ್ಲಾ ಭವನದಲ್ಲಿ ಸಂಜೆಯ ಪ್ರಾರ್ಥನಾ ಸಭೆಗೆ ತೆರಳುತ್ತಿದ್ದಾಗ, ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ. ‘ಹೇ ರಾಮ್’ ಎನ್ನುತ್ತಲೇ ಗಾಂಧಿ ಕೊನೆಯುಸಿರೆಳೆದಿದ್ದರು. ಅದು ಸ್ವಾತಂತ್ರ್ಯ ಭಾರತದ ಮೊದಲ ‘ಮಹಾನ್ ನಾಯಕ’ರೊಬ್ಬರ ಹತ್ಯೆ. ಗೋಡ್ಸೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು.
ಶಾಂತಿಯುತ ಪ್ರತಿರೋಧವು ಶಾಶ್ವತ ಬದಲಾವಣೆಯನ್ನು ತರಬಹುದು ಎಂದು ಗಾಂಧೀಜಿ ನಂಬಿದ್ದರು. ಅವರು ಜಗತ್ತಿಗೆ ಸಾರಿದ ಪ್ರಮುಖ ಸಂದೇಶಗಳು ಹೀಗಿವೆ...
ಮನುಷ್ಯ ತನ್ನ ಅವನ ಆಲೋಚನೆಗಳ ಪ್ರತಿರೂಪವೇ ಆಗಿರುತ್ತಾನೆ. ಅವನು ಏನು ಯೋಚಿಸುತ್ತಾನೆಯೋ, ಅದೇ ಆಗುತ್ತಾನೆ.
ನನ್ನ ಜೀವನವೇ ನನ್ನ ಸಂದೇಶ
ಸತ್ಯ ಮಾತ್ರ ಉಳಿಯುತ್ತದೆ. ಉಳಿದೆಲ್ಲವೂ ಕಾಲದ ಅಲೆಯ ಮುಂದೆ ಕೊಚ್ಚಿಹೋಗುತ್ತವೆ.
ದುರ್ಬಲರು ಎಂದಿಗೂ ಕ್ಷಮಿಸಲಾರರು. ಕ್ಷಮೆ ಬಲಿಷ್ಠರ ಗುಣ
ಮಾನವೀಯತೆಯ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಅದು ಒಂದು ಸಾಗರವಿದ್ದಂತೆ. ಅದರ ಕೆಲವು ಹನಿಗಳು ಕೊಳಕಾಗಿದ್ದ ಮಾತ್ರಕ್ಕೆ ಇಡೀ ಸಾಗರ ಕೊಳಕಾಗುವುದಿಲ್ಲ.
ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೀತಿ ಯಾವಾಗಲೂ ಗೆದ್ದಿವೆ.
ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಜೀವನವಿದೆ
ದೇವರಿಗೆ ಯಾವುದೇ ಧರ್ಮವಿಲ್ಲ
ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ
ಪ್ರೀತಿ ಜಗತ್ತಿನ ಪ್ರಬಲ ಶಕ್ತಿ
ಏಳು ಪಾಪಗಳಿವು:
ತತ್ವಗಳಿಲ್ಲದ ರಾಜಕೀಯ
ಪರಿಶ್ರಮವಿಲ್ಲದ ಸಂಪತ್ತು
ಆತ್ಮಸಾಕ್ಷಿಯಿಲ್ಲದ ಆನಂದ
ಚಾರಿತ್ರ್ಯವಿಲ್ಲದ ಜ್ಞಾನ
ನೈತಿಕತೆ ಇಲ್ಲದ ವ್ಯಾಪಾರ
ಮಾನವೀಯತೆ ಇಲ್ಲದ ವಿಜ್ಞಾನ
ತ್ಯಾಗವಿಲ್ಲದ ಪೂಜೆ ...ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.