
ಸಂಸತ್ ಭವನ
ಚಿತ್ರ: ಪಿಟಿಐ
ನವದೆಹಲಿ: ಸ್ವಾತಂತ್ರ್ಯ ನಂತರದಲ್ಲಿನ ಬಹದೊಡ್ಡ ಬದಲಾವಣೆಗಳಲ್ಲಿ ಪ್ರಧಾನಿ ಕಾರ್ಯಾಲಯದ ವಿಳಾಸ 76 ವರ್ಷಗಳ ನಂತರ ಬದಲಾಗಿದೆ. 1947ರಿಂದ ದಕ್ಷಿಣ ಬ್ಲಾಕ್‌ನಲ್ಲಿದ್ದ ಪ್ರಧಾನಿ ಕಾರ್ಯಾಲಯ ಇನ್ನು ಮುಂದೆ ನವದೆಹಲಿಯ ಕೇಂದ್ರ ಭಾಗಕ್ಕೆ ಸ್ಥಳಾಂತರಗೊಳ್ಳಲಿದ್ದು, ಇದನ್ನು ‘ಸೇವಾ ತೀರ್ಥ’ ಎಂದು ಕರೆಯಲಾಗಿದೆ.
ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಕಚೇರಿಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದೆನ್ನಲಾಗಿದೆ. ಸುಮಾರು 2 ಲಕ್ಷ ಚದರಡಿಯ ಈ ಭವ್ಯ ಬಂಗಲೆ ನೋಡಲು ಸುಂದರ, ಭದ್ರತೆಯಲ್ಲಿ ಶ್ರೇಷ್ಠತೆ, ಭೂಕಂಪ ನಿರೋಧಕವನ್ನೂ ಒಳಗೊಂಡಂತೆ ಹಲವು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ.
ಸೇವೆಯ ಯಾತ್ರೆ ಎಂಬುದನ್ನು ಪ್ರತಿನಿಧಿಸುವಂತೆ ‘ಸೇವಾ ತೀರ್ಥ’ ಎಂದು ಪ್ರಧಾನಿ ಅವರ ನೂತನ ಕಾರ್ಯಾಲಯಕ್ಕೆ ಹೆಸರಿಡಲಾಗಿದೆ. ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ತಾ’ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ, ಪ್ರಜಾ ಕೇಂದ್ರಿತ ಆಡಳಿತವನ್ನೇ ಸೂತ್ರವಾಗಿಟ್ಟುಕೊಂಡು ಈ ಕಾರ್ಯಾಲಯ ನಿರ್ಮಿಸಲಾಗಿದೆ ಎಂದೆನ್ನಲಾಗಿದೆ.
ಈ ಹಿಂದೆ ಪ್ರಧಾನಿ ಅವರು ಕಾರ್ಯ ನಿರ್ವಹಿಸುವ ಕಚೇರಿಯನ್ನು ‘ಪ್ರಧಾನಿ ಕಾರ್ಯಾಲಯ’ ಅಥವಾ ಪಿಎಂಒ ಎಂದು ಕರೆಯಲಾಗುತ್ತಿತ್ತು. ಇನ್ನು ಮುಂದೆ ಇದನ್ನು ‘ಸೇವಾ ತೀರ್ಥ’ ಎಂಬ ಸಾಂಪ್ರದಾಯಿಕ ಹೆಸರನ್ನಿಡಲಾಗಿದೆ. ಜತೆಗೆ ಆಡಳಿತ ಎಂಬ ಸಂಸ್ಕೃತಿಯಿಂದ ಸೇವೆ ಎಂಬ ಸಂಸ್ಕೃತಿ ಕಡೆಗಿನ ಪಯಣ ಎಂದು ಸರ್ಕಾರ ಹೇಳಿದೆ. ಇದೇ ಮಾದರಿಯಲ್ಲಿ ಈ ಹಿಂದೆ ‘ರಾಜ ಪಥ’ವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ‘ಕರ್ತವ್ಯ ಪಥ’ ಎಂದು ಬದಲಿಸಿದ್ದು ಒಂದು ಉದಾಹರಣೆ.
ಬಹು ಕಟ್ಟಡಗಳ ಹಾಗೂ ಹಲವು ಆಡಳಿತದ ಉನ್ನತ ವಿಭಾಗಗಳನ್ನು ಒಳಗೊಂಡಿರುವ ಸಂಕೀರ್ಣವಾದ ‘ಸೇವಾ ತೀರ್ಥ’ವು ಹಲವು ವಿಭಾಗಗಳನ್ನು ಒಳಗೊಂಡಿದೆ.
ಸೇವಾ ತೀರ್ಥ – 1: ಪ್ರಧಾನಮಂತ್ರಿ ಕಾರ್ಯಾಲಯವಾಗಿರುವ ಇಲ್ಲಿ ಪ್ರಧಾನಿ ಹಾಗೂ ಅವರ ಕಚೇರಿಯ ಪ್ರಮುಖ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.
ಸೇವಾ ತೀರ್ಥ – 2: ಸಂಪುಟ ಕಾರ್ಯದರ್ಶಿಗಳ ಕಚೇರಿ ಇದಾಗಿದ್ದು, 2025ರಲ್ಲೇ ಇದು ಕಾರ್ಯಾರಂಭ ಮಾಡಿದೆ.
ಸೇವಾ ತೀರ್ಥ – 3: ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯದರ್ಶಿಗಳಿಗೆ ಮೀಸಲಾದ ವಿಭಾಗವಿದು. ಇದೇ ವಿಭಾಗದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಇರುತ್ತಾರೆ.
ಸೇವಾ ತೀರ್ಥ ಸಂಕೀರ್ಣದಲ್ಲೇ ವಿಶೇಷ ಸಮ್ಮೇಳನ ಸಭಾಂಗಣ (ಇಂಡಿಯಾ ಹೌಸ್) ಕೂಡಾ ಇದೆ. ಇಲ್ಲಿ ದ್ವಿಪಕ್ಷೀಯ ಮಾತುಕತೆಗಳು ಮತ್ತು ಪ್ರಮುಖ ರಾಜತಾಂತ್ರಿಕ ಚರ್ಚೆಗಳು ನಡೆಯುತ್ತವೆ. ಅಂತರರಾಷ್ಟ್ರೀಯ ಸಂಬಂಧಗಳ ಕುರಿತ ಚರ್ಚೆಗಳು ಇಲ್ಲಿ ನಡೆಯುತ್ತವೆ.
ಭಾರತೀಯ ವಾಸ್ತು ವಿನ್ಯಾಸ ಮತ್ತು ಆಧುನಿಕ ಶೈಲಿಯನ್ನು ಸೇವಾ ತೀರ್ಥದಲ್ಲಿ ಹದವಾಗಿ ಬೆರೆಸಲಾಗಿದೆ. ಭಾರತೀಯ ಸಂಸ್ಕೃತಿಯ ಕೆಲ ಚಿತ್ರಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಆ ಮೂಲಕ ಏಳು ದಶಕಗಳಿಂದ ಇದ್ದ ವಸಾಹತುಶಾಹಿ ವಾಸ್ತುಶಿಲ್ಪ ಹೊಂದಿದ್ದ ಸೌತ್ ಬ್ಲಾಕ್‌ನಿಂದ ಭಾರತೀಯ ವಾಸ್ತುಶಿಲ್ಪ ಶೈಲಿಯ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಸೇವಾ ತೀರ್ಥ ಕಟ್ಟಡದ ಹೊರಭಾಗ
ಅಧಿಕೃತ ಯೋಜನಾ ಮಾಹಿತಿಯನ್ವಯ ಸೇವಾ ತೀರ್ಥವನ್ನು 2,26,203 ಚದರ ಅಡಿ ಜಾಗದಲ್ಲಿ ನಿರ್ಮಿಸಲಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆಯ ಮಾಹಿತಿ ಅನ್ವಯ ₹1,189 ಕೋಟಿ ವೆಚ್ಚ ಇದಕ್ಕಾಗಿದೆ. ಲಾರ್ಸನ್ ಅಂಡ್ ಟುಬ್ರೊ ಕಂಪನಿಯು ಇದರ ನಿರ್ಮಾಣ ನಿರ್ವಹಣೆ ಮಾಡಿದೆ.
ಸೇವಾ ತೀರ್ಥಕ್ಕೆ ಹೊಂದಿಕೊಂಡಂತೆಯೇ ಪ್ರಧಾನ ಮಂತ್ರಿ ಅವರ ನಿವಾಸವನ್ನೂ ನಿರ್ಮಿಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ಪ್ರಧಾನಿ ಅವರ ನಿವಾಸವೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
ಭದ್ರತೆಯ ದೃಷ್ಟಿಯಿಂದಲೂ ಸೇವಾ ತೀರ್ಥ ಅತ್ಯಾಧುನಿಕವಾಗಿದೆ ಎಂದೆನ್ನಲಾಗಿದೆ. ಸಂವಹನ ವ್ಯವಸ್ಥೆಯು ಎನ್‌ಕ್ರಿಪ್ಟೆಡ್ ಮೂಲಕ ರವಾನೆಯಾಗುವ, ಸೈಬರ್ ಭದ್ರತೆಯಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆ ಮೂಲಕ ದೇಶದ ಸೂಕ್ಷ್ಮ ವಿಷಯಗಳು ಹೊರಗೆ ರವಾನೆಯಾಗದಂತೆ, ದೇಶದ ಪ್ರಮುಖ ಮಾಹಿತಿಯನ್ನು ವಿದೇಶಿ ಗೂಢಾಚಾರ ಸಂಸ್ಥೆಗಳು ಹ್ಯಾಕ್ ಮಾಡದಂತ ಭದ್ರತಾ ವ್ಯವಸ್ಥೆ ಇದರದ್ದಾಗಿದೆ.
ವಿನ್ಯಾಸದಲ್ಲೂ ಭೂಕಂಪ ನಿರೋಧಕ ಹಾಗೂ ತುರ್ತು ಸಂದರ್ಭದಲ್ಲೂ ತಡೆರಹಿತವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಸೇವಾ ತೀರ್ಥದಲ್ಲಿದೆ.
ಕೇವಲ ಡಿಜಿಟಲ್ ಸುರಕ್ಷತೆಯಷ್ಟೇ ಅಲ್ಲದೆ, ಅತಿ ಗಣ್ಯ ವ್ಯಕ್ತಿಗಳು ಸೇವಾ ತೀರ್ಥಕ್ಕೆ ಭೇಟಿ ನೀಡುವುದರಿಂದ ವಿಶೇಷ ಭದ್ರತೆಯೂ ಇಲ್ಲಿದೆ. ಪ್ರಧಾನಮಂತ್ರಿ ಅವರ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ಭದ್ರತಾ ತಂಡವು ಹೊಸ ಹಾಗೂ ಆಧುನಿಕ ಶೈಲಿಯ ರಕ್ಷಣಾ ತಂತ್ರವನ್ನು ಇಲ್ಲಿ ಅಳವಡಿಸಿದೆ ಎಂದೆನ್ನಲಾಗಿದೆ.
ದಕ್ಷಿಣದಿಂದ ನವದೆಹಲಿಯ ಕೇಂದ್ರ ಭಾಗದೆಡೆ ಪ್ರಧಾನಮಂತ್ರಿ ಕಾರ್ಯಾಲಯ ಸ್ಥಳಾಂತರಗೊಂಡಿರುವುದು ಕೇವಲ ಕಟ್ಟಡವಷ್ಟೇ ಅಲ್ಲ, ಬದಲಿಗೆ 21ನೇ ಶತಮಾನದ ಆಡಳಿತದ ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.