ವೆನೆಜುವೆಲಾದ ವಿರೋಧಪಕ್ಷದ ನಾಯಕಿ ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಒಲಿದಿದೆ.
‘ವೆನೆಜುವೆಲಾದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪ್ರಚುರ ಪಡಿಸಲು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದೆಡೆಗೆ ಶಾಂತಿಯುತವಾಗಿ ದೇಶವನ್ನು ಕೊಂಡೊಯ್ಯಲು ನಡೆಸಿದ ಹೋರಾಟಗಳಿಗಾಗಿ ಮಾರಿಯಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ’ ಎಂದು ನಾರ್ವೆಯ ನೊಬೆಲ್ ಸಮಿತಿಯ ಅಧ್ಯಕ್ಷ ಜಾರ್ಗೆನ್ ವಾಟ್ನೆ ಫ್ರಿಡ್ನೆಸ್ ಅವರು ಹೇಳಿದ್ದಾರೆ.
‘ನಿರಂಕುಶ ಆಡಳಿತದಿಂದಾಗಿ ಮಾನವೀಯತೆಯ ಅಧಃಪತನ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದಿರುಸುತ್ತಿರುವ ವೆನೆಜುವೆಲಾದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಮಾರಿಯಾ ಕಾರ್ಯನಿರ್ವಹಿಸಿದ್ದಾರೆ. ಜೀವ ಬೆದರಿಕೆಗಳು ಇದ್ದರೂ ದೇಶಕ್ಕಾಗಿ ದೃಢವಾಗಿ ನಿಂತಿದ್ದಾರೆ. ದೌರ್ಜನ್ಯದ ವಿರುದ್ಧ ನಾಗರಿಕರು ತೋರುವ ಧೈರ್ಯಕ್ಕೆ ಅವರು ಅದ್ಭುತ ಉದಾಹರಣೆಯಾಗಿದ್ದಾರೆ’ ಎಂದು ಫ್ರಿಡ್ನೆಸ್ ಹೇಳಿದ್ದಾರೆ.
‘ವೆನೆಜುವೆಲಾದಲ್ಲಿ ಶಾಂತಿಯುತವಾಗಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗುತ್ತವೆ’ ಎಂಬ ವಿಶ್ವಾಸವಿದೆ ಎಂದು ಮರಿಯಾ ಅವರು ಹೇಳಿದ್ದಾರೆ. ‘ನಾನು ಇದಕ್ಕೆ ಅರ್ಹಳಲ್ಲ. ನಮ್ಮ ದೇಶದ ಜನರಿಗೆ ಸಂದ ಗೌರವವಿದು’ ಎಂದಿದ್ದಾರೆ.
1967 ಅಕ್ಟೋಬರ್ 7ರಂದು ವೆನೆಜುವೆಲಾದ ಕರಾಕಸ್ನಲ್ಲಿ ಜನಿಸಿದ ಮಾರಿಯಾ ಅವರು ರಾಜಕಾರಣಿಯಾಗುವ ಮೊದಲು ಕೈಗಾರಿಕಾ ಎಂಜಿನಿಯರ್ ಆಗಿದ್ದರು. 2023ರಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ವೆನೆಜುವೆಲಾ ಅಧ್ಯಕ್ಷ ಸ್ಥಾನಕ್ಕೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದಾಗಿ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು. ಸರ್ವಾಧಿಕಾರಿತನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಮಾರಿಯಾ ಅವರು ಹಲವು ಬಾರಿ ತಲೆಮರೆಸಿಕೊಳ್ಳಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿತ್ತು. ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಕೆಲ ಕಾಲ ಅವರು ಸೆರೆವಾಸ ಅನುಭವಿಸಬೇಕಾಯಿತು.
ವಂಗಾರಿ ಮಾಥೈ ಅವರು1977 ರಲ್ಲಿ ಗ್ರೀನ್ ಬೆಲ್ಟ್ ಚಳುವಳಿಯ ಮೂಲಕ ಗ್ರಾಮೀಣ ಭಾಗದಲ್ಲಿ ಮರಗಳನ್ನು ನೆಡುವುದು, ಪರಿಸರ ಜಾಗೃತಿ ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದರು. ಈ ಕಾರಣಕ್ಕಾಗಿ ಅವರಿಗೆ 2004ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು.
ಇವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಆಫ್ರಿಕಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.