26 ಮಂದಿ ಅಮಾಯಕರನ್ನು ಕೊಂದ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ 9 ಕಡೆ ಉಗ್ರರ ನೆಲೆಗಳ ಮೇಲೆ ‘ಆಪರೇಶನ್ ಸಿಂಧೂರ’ ಹೆಸರಿನಲ್ಲಿ ದಾಳಿ ಮಾಡಿ 100ಕ್ಕೂ ಅಧಿಕ ಮಂದಿ ಉಗ್ರರನ್ನು ನಾಮಾವಶೇಷ ಮಾಡಿದೆ.
ಅಲ್ಲದೆ, ಇದಕ್ಕೆ ಪ್ರತಿಯಾಗಿ ಪಾಕ್ ಸೇನೆ ನಡೆಸಿದ ಶೆಲ್ ಮತ್ತು ಕ್ಷಿಪಣಿ ದಾಳಿಗಳಿಗೆ ಪ್ರತಿಯಾಗಿ ಭಾರತ, ಪಾಕ್‌ನ ಹಲವು ಸೇನಾನೆಲೆಗಳನ್ನು ಧ್ವಂಸ ಮಾಡಿತ್ತು. ಈ ದಾಳಿಯಲ್ಲಿ ಪಾಕ್‌ನ ಹಲವು ಯೋಧರು ಮೃತಪಟ್ಟಿದ್ದಾರೆ. ಭಾರತ ನಡೆಸಿದ ಪ್ರಬಲ ದಾಳಿಗೆ ಪಾಕಿಸ್ತಾನ ತಲ್ಲಣಗೊಂಡಿದೆ.
ಪಾಕಿಸ್ತಾನದ ಎಲ್ಲ ದಾಳಿಗಳನ್ನು ಯಶಸ್ವಿಯಾಗಿ ಎದುರಿಸಿ, ಉಗ್ರರ ಹುಟ್ಟಡಗಿಸಿದ ಭಾರತದ ಕಾರ್ಯಾಚರಣೆಯಲ್ಲಿ ಬಳಸಿದ ಅಸ್ತ್ರಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.
ಭಾರತದ ಈ ದಾಳಿಯಲ್ಲಿ ‘SCALP’ ಎಂಬ ಕ್ರೂಸ್ ಕ್ಷಿಪಣಿಗಳು ಮತ್ತು ರಫೇಲ್ ವಿಮಾನಗಳಲ್ಲಿ ಅಳವಡಿಸಲಾದ 'HAMMER'ಎಂಬ ಕ್ಷಿಪಣಿ ಬಳಕೆ ಸೇರಿದೆ ಎಂದು ವರದಿಯಾಗಿದೆ.
SCALP ಕ್ಷಿಪಣಿಗಳು ಯಾವುವು?
‘ಸ್ಟಾರ್ಮ್ ಶ್ಯಾಡೊ’ ಎಂದೂ ಕರೆಯಲ್ಪಡುವ SCALP, ದೀರ್ಘ ಶ್ರೇಣಿಯ ಕ್ರೂಸ್ ಕ್ಷಿಪಣಿಯಾಗಿದ್ದು, ರಹಸ್ಯ ಕಾರ್ಯಾಚರಣಾ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ. ಇದು ಯಾವುದೇ ಹವಾಮಾನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಯಾವುದೇ ಹವಾಗುಣ ಇದರ ಕ್ಷಮತೆ ಮೇಲೆ ಪರಿಣಾಮ ಬೀರುವುದಿಲ್ಲ.
SCALP ಒಂದು ಯುರೋಪಿಯನ್ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಅದರ ಪೂರ್ಣ ಅರ್ಥ 'ಸಿಸ್ಟಮ್ ಡಿ ಕ್ರೊಸಿಯೆರ್ ಆಟೋನೊಮ್ ಎ ಲಾಂಗ್ಯೂ ಪೋರ್ಟೀ' ಎಂಬುದಾಗಿದೆ.
ಅದರ ತಯಾರಕರಾದ ಎಂಬಿಡಿಎ ಸಿಸ್ಟಮ್ಸ್‌ನ ವಿವರಣೆಯ ಪ್ರಕಾರ, ಹೆಚ್ಚಿನ ನಿಖರ ಮತ್ತು ಆಳವಾದ ಕಾರ್ಯಾಚರಣಾ ಸಾಮರ್ಥ್ಯವನ್ನು ಇದು ಹೊಂದಿದೆ. ಇದು INS,GPS ಮತ್ತು ಭೂಪ್ರದೇಶದ ಉಲ್ಲೇಖಗಳನ್ನು ಒಳಗೊಂಡ ಅತ್ಯಾಧುನಿಕ ನ್ಯಾವಿಗೇಶನ್ ಸಿಸ್ಟಂ ಮೂಲಕ ಅತ್ಯಂತ ನಿಖರ ದಾಳಿ ನಡೆಸುತ್ತದೆ..
ಉಡಾವಣೆಯ ನಂತರ, ಶತ್ರು ರಾಷ್ಟ್ರದ ರಾಡಾರ್‌ಗೆ ಸಿಗದಂತೆ ತಪ್ಪಿಸಿಕೊಳ್ಳಲು ಅತ್ಯಂತ ಕೆಳಮಟ್ಟದಲ್ಲಿ ಸಂಚರಿಸುತ್ತದೆ. ಗುರಿ ಸಮೀಪಿಸುವಾಗ, ಅದರ ಆನ್‌ಬೋರ್ಡ್ ಇನ್‌ಫ್ರಾರೆಡ್ ಸೀಕರ್ ಸಂಗ್ರಹಿಸಿದ ಚಿತ್ರದ ಜೊತೆ ಗುರಿಯ ಚಿತ್ರವನ್ನು ಸರಿಹೊಂದಿಸುವ ಮೂಲಕ ನಿಖರವಾದ ದಾಳಿ ನಡೆಸುತ್ತದೆ.
SCALP ಅನ್ನು ಏಕೆ ಬಳಸಲಾಯಿತು?
ಅದರ ತಯಾರಕರು ವಿವರಿಸಿದಂತೆ SCALP ಅಸಾಧಾರಣ ನಿಖರತೆಯೊಂದಿಗೆ ಬಲವಾದ ರಹಸ್ಯ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಹೊಂದಿದೆ. ಈ ವೈಶಿಷ್ಟ್ಯಗಳು ಕಮಾಂಡ್ ಸೆಂಟರ್‌ಗಳು, ವಾಯುನೆಲೆಗಳು ಮತ್ತು ಮೂಲಸೌಕರ್ಯಗಳಂತಹ ಸ್ಥಿರ, ಪ್ರಬಲ ಗುರಿಗಳ ವಿರುದ್ಧ ನಿಖರವಾದ ದಾಳಿಗಳನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿವೆ. ಇದರ ಆಳವಾದ ದಾಳಿ ಸಾಮರ್ಥ್ಯದಿಂದಾಗಿ ಪಾಕಿಸ್ತಾನದೊಳಗಿನ ಭಯೋತ್ಪಾದಕರ ಮೂಲಸೌಕರ್ಯಗಳನ್ನು ನಾಶ ಮಾಡುವಲ್ಲಿ ಪ್ರಮುಖ ಆಯ್ಕೆಯಾಗಿತ್ತು.
HAMMER ಗೈಡೆಡ್ ಬಾಂಬ್‌ಗಳು
ಹ್ಯಾಮರ್ (ಹೈಲಿ ಅಗೈಲ್ ಮಾಡ್ಯುಲರ್ ಮ್ಯುನಿಷನ್ ಎಕ್ಸ್‌ಟೆಂಡೆಡ್ ರೇಂಜ್) 70 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಎಲ್ಲ ಹವಾಮಾನಗಳಲ್ಲಿ ನಿಖರವಾದ ಗಾಳಿಯಿಂದ ನೆಲಕ್ಕೆ ಹಾರುವ ಕ್ಷಿಪಣಿ ಇದಾಗಿದ್ದು, ಇದನ್ನು ‘ಗ್ಲೈಡ್ ಬಾಂಬ್’ ಎಂದೂ ಕರೆಯುತ್ತಾರೆ.
ಈ ಯುದ್ಧಸಾಮಗ್ರಿಯ ತಯಾರಕರಾದ SAFRAN ಎಂಬ ಫ್ರೆಂಚ್ ಕಂಪನಿಯ ಪ್ರಕಾರ, ಎಎಎಸ್‌ಎಂ ಹ್ಯಾಮರ್ ವಿಭಿನ್ನ ಪ್ರಮಾಣದ (125, 250, 500 ಮತ್ತು 1000 ಕೆಜಿ) ಬಾಂಬ್ ಬಳಕೆಗೆ ಹೊಂದಿಕೊಳ್ಳುತ್ತದೆ. ಜಾಮರ್‌ಗಳಿಂದ ತಡೆಹಿಡಿಯಲಾಗದ ಈ ಆಯುಧ ವ್ಯವಸ್ಥೆಯನ್ನು ಕಡಿಮೆ ಎತ್ತರದ ಭೂಪ್ರದೇಶದಿಂದ ಉಡಾವಣೆ ಮಾಡಬಹುದಾಗಿದೆ.. ಐಎನ್‌ಎಸ್/ಜಿಪಿಎಸ್, ಲೇಸರ್ ಅಂಡ್ ಐಆರ್ ಸೇರಿದಂತೆ ವ್ಯಾಪಕವಾದ ಮಾರ್ಗದರ್ಶಕ ಕಿಟ್‌ಗಳಿಂದಾಗಿ ಕ್ಲೋಸ್ ಏರ್ ಸಪೋರ್ಟ್ ಕಾರ್ಯಾಚರಣೆಗಳು ಮತ್ತು ಆಳವಾದ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ.
ಹ್ಯಾಮರ್ ಅನ್ನು ಏಕೆ ಬಳಸಲಾಯಿತು?
ಮೇಲೆ ವಿವರಿಸಿದಂತೆ ಹ್ಯಾಮರ್ ಗೈಡೆಡ್ ಯುದ್ಧೋಪಕರಣವು ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುತ್ತದೆ. ಜ್ಯಾಮರ್ ಇದರ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಕಡಿಮೆ ಎತ್ತರದಲ್ಲಿ ಉಡಾಯಿಸಬಹುದಾಗಿದ್ದು, ಇದನ್ನು ಅಡ್ಡಗಟ್ಟುವುದು ಅತ್ಯಂತ ಕಷ್ಟಕರವಾಗಿದೆ. ಹೀಗಾಗಿ, ಪಾಕಿಸ್ತಾನದಲ್ಲಿನ ಭಯೋತ್ಪಾದಕರು ಅಡಗಿದ್ದ ಕಟ್ಟಡಗಳನ್ನು ಭೇದಿಸಲು ಪರಿಪೂರ್ಣ ಆಯ್ಕೆಯಾಗಿತ್ತು.
ಈ ಶಸ್ತ್ರಾಸ್ತ್ರ ವ್ಯವಸ್ಥೆಗಳ ಬಳಕೆಯು ಭಾರತದ ದಾಳಿಗಳನ್ನು ನಿರೀಕ್ಷೆಗೂ ಮೀರಿ ಪರಿಣಾಮಕಾರಿಯಾಗಿಸಿತು. ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತಯಬಾದ ಪ್ರಧಾನ ಕಚೇರಿಗಳು ಸೇರಿದಂತೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.