ADVERTISEMENT

ಭೂಸುಧಾರಣೆಗೆ ತಿದ್ದುಪಡಿ | ಇಕ್ಕಲಾರದ ಕೈಗಳಿಗೆ ಕೃಷಿಭೂಮಿ!

ಅನುಭವ ಮಂಟಪ

ಜಿ.ಎಸ್.ಗೋಪಾಲ ನಾಯ್ಕ
Published 26 ಜೂನ್ 2020, 2:50 IST
Last Updated 26 ಜೂನ್ 2020, 2:50 IST
ಕೃಷಿ
ಕೃಷಿ   
"ಜಿ.ಎಸ್. ಗೋಪಾಲ ನಾಯ್ಕ"

ಭೂಮಿಗೆ ಬೀಜ ಬಿತ್ತಲು ‘ಕೂರಿಗೆ’ ಎಂಬ ಸಾಧನ ಬಳಸುತ್ತಾರೆ. ಆ ಕೂರಿಗೆಗೆ ಮೂರು (ಕಾಲು) ಕೊಳವೆಗಳಿರುತ್ತವೆ. ಮೇಲಿಂದ ಸುರಿದ ಬೀಜ ಆ ಮೂರೂ ಕೊಳವೆಗಳಿಂದ ಸಮಾನವಾಗಿ ಇಳಿದು ಭೂಮಿ ತಾಯಿಯ ಒಡಲು ಸೇರುತ್ತದೆ. ಆ ಮೂರರಲ್ಲಿ ಒಂದು ಕೊಳವೆಯ ಫಲ ಪಶು, ಪಕ್ಷಿ, ಪ್ರಾಣಿಗಳಿಗೆ, ಎರಡನೆಯದು ಭೂಮಿತಾಯಿಗೆ ಮತ್ತು ಮೂರನೆಯದು ನಮಗೆ ಎಂಬುದು ತಲೆಮಾರುಗಳಿಂದ ಮಣ್ಣನ್ನೇ ನಂಬಿ ಬದುಕಿ ಬಾಳಿದ ರೈತರ ಹಿತನುಡಿ. ಆದರೆ, ಆಧುನಿಕತೆ ಬೆಳೆದಂತೆಲ್ಲ ಆ ಮೂರೂ ಕೊಳವೆಯ ಫಲ ತಾನೊಬ್ಬನೇ ಉಣ್ಣಬೇಕೆಂಬ ಆಸೆಯಿಂದ ಹೆಚ್ಚಿನ ಫಸಲಿಗಾಗಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಿಸಿ ಫಲದ ಜೊತೆ ವಿಷವನ್ನೂ ನುಂಗುತ್ತಿರುವುದು ವಿಪರ್ಯಾಸ.

ಪರಿಸ್ಥಿತಿ ಹೀಗಿರುವಾಗ ಸರ್ಕಾರ ಅಂತಹ ರೈತರಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸಿಕೊಳ್ಳುವ ಜತೆಗೆ ಒಂದಿಷ್ಟು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವ್ಯವಸ್ಥೆ ಮಾಡಬೇಕಿತ್ತು. ಅದರ ಬದಲು ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಕೃಷಿಭೂಮಿ ಖರೀದಿಸುವವರು, ರೈತರು ಕೃಷಿ ಮಾಡಲಾಗದೆ ಅರ್ಧಕ್ಕೇ ಕೈಬಿಟ್ಟ ಕೆಲಸವನ್ನು ಮುಂದುವರಿಸಿ, ಅಗತ್ಯವಾದ ದವಸ, ಧಾನ್ಯ ಬೆಳೆದರೇನೋ ಸರಿ. ಆದರೆ, ವ್ಯವಹಾರಿಕ ಜ್ಞಾನ, ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಪಳಗಿದವರು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ ಜಮೀನಿನಲ್ಲಿ ಅಂತಹ ಸಾಂಪ್ರದಾಯಿಕ ಬೆಳೆಗಳನ್ನು ನಿರೀಕ್ಷಿಸಲಾದೀತೇ?

ಜಿ.ಎಸ್. ಗೋಪಾಲ ನಾಯ್ಕ

ರಾಜ್ಯದ ಅನೇಕ ಕಡೆಗಳಲ್ಲಿ ಸುಮಾರು ಹತ್ತು ಹದಿನೈದು ವರ್ಷಗಳಿಂದ ದಾಳಿಂಬೆ, ದ್ರಾಕ್ಷಿ, ಶುಂಠಿ ಇತ್ಯಾದಿ ಅಧಿಕ ಲಾಭ ತರುವ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹಾಗೆ ಬೆಳೆಯುತ್ತಿರುವವರಲ್ಲಿ ಹೆಚ್ಚಿನವರು ಹೊರಗಿನವರೇ. ಅಂದರೆ ಹೆಚ್ಚಿನ ಲಾಭದ ನಿರೀಕ್ಷೆಯನ್ನಿಟ್ಟುಕೊಂಡು ರೈತರಿಂದ ವರ್ಷಕ್ಕೆ ಇಂತಿಷ್ಟು ಹಣಕ್ಕೆ ಭೋಗ್ಯಕ್ಕೆಂದು ಪಡೆದು, ಅನಧಿಕೃತವಾಗಿ ಒಂದೆರಡು ಕೊಳವೆ ಬಾವಿಯನ್ನು ಕೊರೆದು, ಮನಸೋಇಚ್ಛೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸಿ ಅಧಿಕ ಲಾಭ ಬಾಚುತ್ತಾರೆ. ಯಾವಾಗ ಮಣ್ಣು ತನ್ನ ಶಕ್ತಿಯನ್ನು ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತದೋ ಆಗ ಜಮೀನನ್ನು ಅದೇ ರೈತರಿಗೆ ಹಿಂದಿರುಗಿಸಿ ಕೈ ತೊಳೆದುಕೊಳ್ಳುತ್ತಾರೆ. ಜವಳು ಭೂಮಿಯನ್ನು ಹಿಂಪಡೆದ ರೈತ, ಅದರಲ್ಲಿ ಏನೂ ಬೆಳೆಯಲಾಗದೆ ಆತ್ಮಹತ್ಯೆಗೆ ಶರಣಾಗುತ್ತಾನೆ.

ಕಠಿಣವಾದ ಭೂ ಸುಧಾರಣೆ ಕಾಯ್ದೆ ಇರುವಾಗಲೇ ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿರುವಾಗ ಕಾರ್ಪೊರೇಟ್ ಸಂಸ್ಕೃತಿಯವರ ಅನುಕೂಲಕ್ಕಾಗಿ ಕಾಯ್ದೆ ತಿದ್ದುಪಡಿ ಮಾಡಿದಲ್ಲಿ ಫಲವತ್ತಾದ ಕೃಷಿಭೂಮಿ ಹೇಗೆಲ್ಲಾ ದುರುಪಯೋಗ ಆಗಬಹುದು ಎಂಬುದನ್ನು ಸರ್ಕಾರ ಮನನ ಮಾಡಬೇಕಿದೆ. ಹೀಗೆ ಅಧಿಕ ಲಾಭದ ನಿರೀಕ್ಷೆಯನ್ನು ಇಟ್ಟುಕೊಂಡು ಖರೀದಿಸಿದ ಜಮೀನಿಗೆ ನೀರು ಬೇಕೇಬೇಕು. ಕೊಳವೆಬಾವಿಯನ್ನು ಕೊರೆಸುವ ಆಯ್ಕೆ ಅವರಿಗೆ ಸುಲಭವಾಗಿರುತ್ತದೆ. ಈಗಾಗಲೇ ಅಂತರ್ಜಲದ ಮಟ್ಟ ಕಡಿಮೆಯಾಗಿದೆ. ವಾಣಿಜ್ಯ ಬೆಳೆ ಬೆಳೆಯಲು ಕೊಳವೆ ಬಾವಿಯ ಮೊರೆ ಹೋದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದೆ ಇರದು.

ರೈತರ ಕೃಷಿಭೂಮಿಯು ಉಳ್ಳವರ ಸ್ವತ್ತಾದರೆ ಕೆಲವು ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಮತ್ತು ಬೆಳೆಗಳು ಮರೆಯಾಗುವ ಸಂಭವವುಂಟು. ಕಾಯ್ದೆ ತಿದ್ದುಪಡಿ ಮಾಡಿದ್ದಲ್ಲಿ ಅಂತಹ ಪದ್ಧತಿಗಳನ್ನು ಬಲ್ಲ ಅನುಭವಿ ಕೃಷಿಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಕಳೆದ ಬಾರಿ ಅತಿವೃಷ್ಟಿಯಿಂದ ಬೀದಿಗೆ ಬಿದ್ದ ರಾಜ್ಯದ ಸಾವಿರಾರು ರೈತರು ಇನ್ನೂ ಚೇತರಿಸಿಕೊಂಡಿಲ್ಲ. ಈಗ ಕೊರೊನಾ ಎಂಬ ಮಹಾಮಾರಿಯ ಹೊಡೆತಕ್ಕೆ ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಲಾಕ್‌ಡೌನ್ ಪರಿಣಾಮದಿಂದ ತಮ್ಮ ತಮ್ಮ ಊರು ಸೇರಿದ ವಲಸೆ ಕಾರ್ಮಿಕರು, ಇರುವ ತುಂಡು ಜಮೀನಿನಲ್ಲೇ ಕೃಷಿ ಮಾಡಲು ಮನಸ್ಸು ಮಾಡಿದ್ದಾರೆ. ಅವರ ಅಸಹಾಯಕತೆಯ ಲಾಭ ಪಡೆಯಲು ಉಳ್ಳವರು ಹೊಂಚು ಹಾಕುತ್ತಿದ್ದಾರೆ. ಸರ್ಕಾರ, ಇಕ್ಕಲಾರೆ ಕೈ ಎಂಜಲು ಎನ್ನುವವರಿಗೆ ರತ್ನಗಂಬಳಿ ಹಾಸಿದೆ. ಉತ್ತಮ ಆರೋಗ್ಯಕ್ಕಾಗಿ ಪಂಚತಾರಾ ಹೋಟೆಲ್‌ನಲ್ಲಿ ಕುಳಿತು ಸಿರಿಧಾನ್ಯದ ಪದಾರ್ಥ ತಿನ್ನುವ ಜನನಾಯಕರು ಅದನ್ನು ಬೆಳೆದವರ ಬಗ್ಗೆ ಒಂದಿಷ್ಟು ಚಿಂತಿಸಲಿ.

ಲೇಖಕ: ಕೃಷಿ ಆಸಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.