ADVERTISEMENT

ಆಳ-ಅಗಲ: ಬೊಕ್ಕಸ ತುಂಬಿಸಲು ‘ಕೋವಿಡ್ ಸೆಸ್’

ಅಮೃತ ಕಿರಣ ಬಿ.ಎಂ.
Published 29 ಸೆಪ್ಟೆಂಬರ್ 2020, 3:06 IST
Last Updated 29 ಸೆಪ್ಟೆಂಬರ್ 2020, 3:06 IST
ಸಾಮಕೇತಿಕ ಚಿತ್ರ
ಸಾಮಕೇತಿಕ ಚಿತ್ರ   

ಕೋವಿಡ್ ಲಾಕ್‌ಡೌನ್‌ನಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ತುಂಬಿಕೊಳ್ಳಲು ಕೆಲವು ರಾಜ್ಯ ಸರ್ಕಾರಗಳು ಮದ್ಯ ಮಾರಾಟದ ಮೇಲೆ ‘ವಿಶೇಷ ಕೋವಿಡ್ ಸೆಸ್’ ವಿಧಿಸಿದವು. ವಿವಿಧ ರಾಜ್ಯಗಳಲ್ಲಿ ತೆರಿಗೆ ಪ್ರಮಾಣ ಶೇ 15ರಿಂದ ಶೇ 70ರವರೆಗೆ ಇದೆ. ತೆರಿಗೆ ಏರಿಕೆಯಿಂದ ಮದ್ಯ ಮಾರಾಟವು ಕುಸಿತವನ್ನೂ ಕಂಡಿತು

l ದೆಹಲಿಯಲ್ಲಿ ಎಲ್ಲ ರೀತಿಯ ಮದ್ಯದ ಮೇಲೆ ಶೇ 70ರಷ್ಟು ಕೋವಿಡ್ ಸೆಸ್ ವಿಧಿಸಲಾಗಿತ್ತು. ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ, ಸರ್ಕಾರವು ಸೆಸ್ ವಾಪಸ್ ಪಡೆಯಿತು. ಆದರೆ ಎಲ್ಲಾ ರೀತಿಯ ಮದ್ಯದ ಮೇಲೆ ಶೇ 20ರಿಂದ ಶೇ 25ರಷ್ಟು
ವ್ಯಾಟ್‌ ವಿಧಿಸಿತು

l ಕರ್ನಾಟಕದಲ್ಲಿ ಶೇ 17, ಆಂಧ್ರ ಪ್ರದೇಶದಲ್ಲಿ ಶೇ 50ರಿಂದ ಶೇ 75, ರಾಜಸ್ಥಾನದಲ್ಲಿ ಶೇ 10ರಿಂದ ಶೇ 45ರವರೆಗೆ, ಪಶ್ಚಿಮ ಬಂಗಾಳದಲ್ಲಿ ಶೇ 30, ಕೇರಳದಲ್ಲಿ ಬಿಯರ್‌, ವೈನ್‌ ಬಾಟಲ್‌ಗಳ ಮೇಲೆ ಶೇ 10 ಹಾಗೂ ವಿದೇಶಿ ಮದ್ಯದ ಮೇಲೆ ಶೇ 35ರಷ್ಟು ಕೋವಿಡ್ ತೆರಿಗೆ ಹೇರಲಾಯಿತು

ADVERTISEMENT

l ಹಿಮಾಚಲ ಪ್ರದೇಶ ಸರ್ಕಾರವು ದೇಸಿ ಮದ್ಯ, ಕ್ಯಾನ್‌ ಬಿಯರ್, ಭಾರತದಲ್ಲಿ ತಯಾರಾದ ಮದ್ಯದ ಪ್ರತಿ ಬಾಟಲ್ ಮೇಲೆ ₹5, ಭಾರತದಲ್ಲಿ ತಯಾರಾದ ವಿದೇಶಿ ಮದ್ಯ (ಐಎಂಎಫ್‌ಎಲ್) ಮತ್ತು ಇಂಡಿಯನ್ ವೈನ್‌ನ ಪ್ರತಿ ಬಾಟಲ್‌ ಮೇಲೆ ₹10 ಹಾಗೂ ವಿದೇಶದಿಂದ ಆಮದು ಮಾಡಿಕೊಂಡ ಮದ್ಯದ ಪ್ರತಿ ಬಾಟಲ್‌ ಮೇಲೆ ₹25 ಹೆಚ್ಚುವರಿ ಸೆಸ್ ವಿಧಿಸಿತು

l ಹರಿಯಾಣ ಸರ್ಕಾರವು ದೇಸಿ ಮದ್ಯದ ಪ್ರತಿ ಬಾಟಲ್‌ಗೆ ₹5, ಐಎಂಫ್‌ಎಲ್‌ನ ಪ್ರತಿ ಬಾಟಲ್‌ಗೆ ₹20 ಹಾಗೂ ವಿದೇಶಿ ಮದ್ಯಕ್ಕೆ ₹50 ವಿಶೇಷ ಸೆಸ್ ವಿಧಿಸಿತು

l ಉತ್ತರ ಪ್ರದೇಶ ಸರ್ಕಾರವು 190 ಎಂಎಲ್‌ನ ಪ್ರತಿ ಬಾಟಲ್‌ಗೆ ₹10 ಹಾಗೂ ಪ್ರೀಮಿಯಂ ಬಾಟಲ್‌ಗೆ ₹50 ಕೋವಿಡ್ ಸೆಸ್ ವಿಧಿಸಿತು

l ಶೇ 50 ಹಾಗೂ ಅದಕ್ಕಿಂತ ಹೆಚ್ಚು ಪ್ರಮಾಣದ ತೆರಿಗೆ ವಿಧಿಸಿದ್ದರಿಂದ ದೆಹಲಿ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಕಾಶ್ಮೀರ ಮತ್ತು ಪುದುಚೇರಿ ರಾಜ್ಯಗಳಲ್ಲಿ ಮೇ ತಿಂಗಳಲ್ಲಿ ಶೇ 66ರಷ್ಟು ಹಾಗೂ ಜೂನ್‌ನಲ್ಲಿ ಶೇ 51ರಷ್ಟು ಮದ್ಯ ಮಾರಾಟ ಕುಸಿತ ಕಂಡಿತು

l ಶೇ 15ರಿಂದ 50ರಷ್ಟು ತೆರಿಗೆ ವಿಧಿಸಿರುವ ಅರುಣಾಚಲ ಪ್ರದೇಶ, ಮೇಘಾಲಯ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ ಹಾಗೂ
ಜಾರ್ಖಂಡ್‌ಗಳಲ್ಲಿ ಶೇ 34ರಷ್ಟು
ಮದ್ಯಮಾರಾಟ ಕುಸಿಯಿತು

l ಮದ್ಯ ಮಾರಾಟ ಪ್ರಮಾಣ ಕುಸಿದಿದ್ದರಿಂದ ಒಡಿಶಾ ಸರ್ಕಾರ ಶೇ 50ರಿಂದ ಶೇ 15ಕ್ಕೆ ವಿಶೇಷ ತೆರಿಗೆಯನ್ನು ಇಳಿಸಿತು

--------

ಆನ್‌ಲೈನ್‌ನಲ್ಲಿ ಮಾರಾಟ ಪರಿಗಣಿಸಿ ಎಂದಿದ್ದ ‘ಸುಪ್ರೀಂ’

ಕೊರೊನಾ ವೈರಸ್ ಹರಡುವಿಕೆ ತಡೆಯಲು ದೇಶದಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ನಿಂದ ಮದ್ಯಮಾರಾಟವೂ ಸ್ಥಗಿತಗೊಂಡಿತ್ತು. ಮದ್ಯ ಸಿಗದೆ ಮದ್ಯಪ್ರಿಯರು ನಿರಾಸೆ ಅನುಭವಿಸಿದರು. ಮೇ ತಿಂಗಳಿನಲ್ಲಿ ಹಸಿರು ವಲಯಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿತು.
ಜತೆಗೆ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಕೆಲವು ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಿತ್ತು.

ಮದ್ಯ ಮಾರಾಟಕ್ಕೆ ತಡೆ ನೀಡುವಂತೆ ಆಗ್ರಹಿಸಿ ಗುರುಸ್ವಾಮಿ ನಟರಾಜ್ ಎಂಬುವರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ‘ಸರ್ಕಾರದ ನಿರ್ಧಾರದಿಂದಾಗಿ ಸಾರ್ವಜನಿಕ ಆರೋಗ್ಯ ಅಪಾಯಕ್ಕೆ ಸಿಲುಕಿದೆ. ಕೆಲವು ರಾಜ್ಯಗಳಲ್ಲಿ ಜನರನ್ನು ನಿಯಂತ್ರಿಸಲು ಲಾಠಿ ಪ್ರಹಾರ ಮಾಡಬೇಕಾದ ಸ್ಥಿತಿ ಉದ್ಭವಿಸಿದ್ದು, ಅಂತರ ಕಾಯ್ದುಕೊಳ್ಳುವುದು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.

ಆದರೆ, ಮದ್ಯಮಾರಾಟಕ್ಕೆ ಅವಕಾಶ ನೀಡುವ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಅಂತರ ಕಾಯ್ದುಕೊಳ್ಳುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ರಾಜ್ಯಗಳು ಆನ್‌ಲೈನ್‌ನಲ್ಲಿ ಮದ್ಯಮಾರಾಟ ಅಥವಾ ಮನೆಗಳಿಗೆ ಮದ್ಯ ಸರಬರಾಜು ಮಾಡುವ ಬಗ್ಗೆ ಆಲೋಚಿಸಬೇಕು ಎಂದು ಸೂಚಿಸಿತು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ರಾಜ್ಯಗಳಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.