ADVERTISEMENT

ಆಳ–ಅಗಲ | ಹಸಿವಿನ ವಿರುದ್ಧದ ಯುದ್ಧ ಭಾರತ, ಚೀನಾ ಸೆಣಸು!

ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುವವರ ಸಂಖ್ಯೆಯಲ್ಲಿ 6 ಕೋಟಿಯಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 18:59 IST
Last Updated 14 ಜುಲೈ 2020, 18:59 IST
   
""
""

ಹಸಿವಿನ ವಿರುದ್ಧ ಜಗತ್ತು ಸಾರಿರುವ ಸಮರದಲ್ಲಿ ಏಷ್ಯಾ ಖಂಡವು ಗಣನೀಯ ಯಶಸ್ಸನ್ನು ಸಾಧಿಸಿದೆ. ಏಷ್ಯಾದ ಎರಡು ದೈತ್ಯ ಶಕ್ತಿಗಳಾದ ಭಾರತ ಹಾಗೂ ಚೀನಾದಲ್ಲಿ ಸಾಧಿಸಿದ ಪ್ರಗತಿಯೇ ಇದಕ್ಕೆ ಕಾರಣವಾಗಿದೆ.

ಜಾಗತಿಕ ಆಹಾರ ಭದ್ರತೆ ಹಾಗೂ ಪೌಷ್ಟಿಕಾಂಶದ ಸ್ಥಿತಿಗತಿ ಕುರಿತು ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬದಲಾವಣೆಯನ್ನು ದಾಖಲಿಸಲಾಗಿದೆ.

ಭಾರತದಲ್ಲಿ ಒಂದೂವರೆ ದಶಕದಲ್ಲಿ ಅಪೌಷ್ಟಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆಯಲ್ಲಿ 6 ಕೋಟಿಯಷ್ಟು ಇಳಿಕೆಯಾಗಿದೆ. ಹಸಿವುಮುಕ್ತ ಸಮಾಜ ನಿರ್ಮಾಣದಲ್ಲಿ ದೇಶ ಮುನ್ನಡೆದಿದ್ದರೂ ಅದು ಸಾಗಬೇಕಾದ ದಾರಿ ಇನ್ನೂ ದೂರ ಇದೆ ಎಂದು ಅಭಿಪ್ರಾಯಪಡಲಾಗಿದೆ.

ADVERTISEMENT

ಕಳೆದ ವರ್ಷ ಜಗತ್ತಿನಲ್ಲಿ 69 ಕೋಟಿ ಜನ ಹಸಿವಿನಿಂದ ಬಳಲಿದ್ದಾರೆ. ಅದರಲ್ಲಿ ಭಾರತದ ಪ್ರಮಾಣ 18.92 ಕೋಟಿಯಷ್ಟಿದೆ. ಹಸಿವಿನಿಂದ ಬಳಲುವವರ ಸಂಖ್ಯೆ ಏಷ್ಯಾದಲ್ಲಿ ಹೆಚ್ಚಿದ್ದರೂ ಆಫ್ರಿಕಾದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ ಎಂದು ವಿವರಿಸಲಾಗಿದೆ. 2030ರ ವೇಳೆಗೆ ಜಗತ್ತಿನಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಆಫ್ರಿಕಾ ನಿವಾಸಿಗಳೇ ಆಗಿರುತ್ತಾರೆ ಎಂದೂ ಅಂದಾಜಿಸಲಾಗಿದೆ.

ಏಷ್ಯಾದ ಪೂರ್ವ ವಲಯದ ಚೀನಾ ಹಾಗೂ ದಕ್ಷಿಣ ವಲಯದ ಭಾರತದಲ್ಲಿ ಭಿನ್ನ ವಾತಾವರಣ ಇದ್ದರೂ ಹಸಿವಿನ ಪ್ರಮಾಣ ತಗ್ಗಿಸುವಲ್ಲಿ ಕಳೆದ ಒಂದೂವರೆ ದಶಕದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲಾಗಿದೆ. ಇಲ್ಲಿ ಅಸಮಾನತೆ ಪ್ರಮಾಣ ಕಡಿಮೆ ಆಗುತ್ತಿದ್ದು, ಬಹುಪಾಲು ಜನರಿಗೆ ಅಗತ್ಯ ಸರಕು ಮತ್ತು ಸೇವೆಗಳು ಸಿಗುತ್ತಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಭಾರತ ಹಾಗೂ ಚೀನಾ ಮಧ್ಯೆ ಹಲವು ಸಾಮ್ಯತೆಗಳಿವೆ. ಎರಡೂ ಜಗತ್ತಿನ ಅತ್ಯಧಿಕ ಜನಸಂಖ್ಯೆ ಹೊಂದಿದ ರಾಷ್ಟ್ರಗಳಾಗಿವೆ. ಅಲ್ಲದೆ ವೇಗವಾಗಿ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿವೆ. ಆದರೆ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿದ್ದರೆ, ಚೀನಾ 25ನೇ ಸ್ಥಾನದಲ್ಲಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತವು ‘ಗಂಭೀರ ಸಮಸ್ಯೆ’ ಎದುರಿಸುವ ರಾಷ್ಟ್ರಗಳ
ವಿಭಾಗದಲ್ಲಿದ್ದರೆ, ಚೀನಾದಲ್ಲಿ ಈ ಸಮಸ್ಯೆ ತುಂಬಾ ಕಡಿಮೆ ಇದೆ.

ಕೃಷಿ ಚಟುವಟಿಕೆಗಳ ಮುಖ್ಯ ಗುರಿಯೇ ಪೌಷ್ಟಿಕ ಆಹಾರದ ಉತ್ಪಾದನೆ ಆಗಿರಬೇಕು. ಸರ್ಕಾರದ ನೀತಿ ನಿರೂಪಣೆಗಳು ಆ ನಿಟ್ಟಿನಲ್ಲೇ ಕೇಂದ್ರೀಕೃತ ಆಗಿರಬೇಕು. ಉತ್ಪಾದನೆ, ಸಂಗ್ರಹಣೆ, ಸಾರಿಗೆ, ಹಂಚಿಕೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ವೆಚ್ಚ ಕಡಿತಕ್ಕೆ ಆದ್ಯತೆ ನೀಡಬೇಕು. ಆಹಾರ ಪದಾರ್ಥ ಕೆಡದಂತೆ ಅಥವಾ ಹಾಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸ್ಥಳೀಯವಾಗಿ ಪೌಷ್ಟಿಕ ಆಹಾರ ಉತ್ಪಾದಿಸಿ, ಆಸುಪಾಸಿನಲ್ಲಿ ಮಾರಾಟ ಮಾಡಲು ಅನುವಾಗುವಂತಹ ಉತ್ತಮ ವ್ಯವಸ್ಥೆಯನ್ನು ರೂಪಿಸಬೇಕು. ಹಾಗೆಯೇ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಲಾಗಿದೆ.

ಆರೋಗ್ಯ, ಪೌಷ್ಟಿಕ ಆಹಾರ, ಶಿಕ್ಷಣ ಹಾಗೂ ಜೀವನದ ಗುಣಮಟ್ಟ – ಈ ನಾಲ್ಕು ವಿಷಯಗಳಲ್ಲಿ ಚೀನಾದ ಸಾಧನೆ ಭಾರತಕ್ಕಿಂತ ಹಿರಿದಾಗಿದೆ ಎನ್ನುತ್ತದೆ ಆಬ್ಸರ್ವರ್‌ ರಿಸರ್ಚ್‌ ಫೌಂಡೇಷನ್‌ (ಒಆರ್‌ಎಫ್‌) ಅಧ್ಯಯನ ವರದಿ. ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುವವರ ಸಂಖ್ಯೆ ದೊಡ್ಡದಿದ್ದು, ಆ ಪ್ರಮಾಣವನ್ನು ತಗ್ಗಿಸಿದಷ್ಟೂ ಬಡತನದ ನಿವಾರಣೆಗೆ ಸಹಕಾರಿಯಾಗಲಿದೆ. ಅಲ್ಲದೆ, ಆರ್ಥಿಕ ಬೆಳವಣಿಗೆಗೂ ಇದರಿಂದ ಹೊಸವೇಗ ಸಿಗುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳ ಮಾರಾಟ ಸಹ ಅಪೌಷ್ಟಿಕತೆ ಸಮಸ್ಯೆ ಹೆಚ್ಚಳಕ್ಕೆ ಕೊಡುಗೆಯನ್ನು ನೀಡಿದೆ. ಚೀನಾ ಹಾಗೂ ಅಮೆರಿಕದ ಬಳಿಕ ಈ ಬಗೆಯ ಆಹಾರ ಪದಾರ್ಥಗಳು ಮಾರಾಟವಾಗುವ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ ಭಾರತ. ಇಲ್ಲಿನ ಬಹುತೇಕ ಆಹಾರ ಉದ್ಯಮಗಳಿಗೆ ‘ಗುಣಮಟ್ಟದ ಪೌಷ್ಟಿಕ ಆಹಾರ ತಯಾರಿಕಾ ಕಂಪನಿ’ ಎಂಬ ಮಾನ್ಯತೆಯನ್ನು ನೀಡಲಾಗಿದೆ. ಪೌಷ್ಟಿಕಾಂಶ ಇರುವುದನ್ನು ಖಾತರಿ ಮಾಡಿಕೊಳ್ಳಲು ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದ ಕುರಿತು ಸರ್ಕಾರ ಹೊಸ ಮಾನದಂಡ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಒಆರ್‌ಎಫ್‌ ವರದಿಯಲ್ಲಿ ತಿಳಿಸಲಾಗಿದೆ.

‘ಜಗತ್ತಿನಲ್ಲಿ ಹಲವು ದಶಕಗಳಿಂದ ಹಸಿವಿನಿಂದ ಬಳಲುವವರ ಪ್ರಮಾಣ ನಿಧಾನವಾಗಿ ಕಡಿಮೆ ಆಗುತ್ತಿತ್ತು. ಆದರೆ, 2014ರ ಬಳಿಕ ಮತ್ತೆ ಏರು ಮುಖದಲ್ಲಿ ಸಾಗಿದೆ. ಜನಕ್ಕೆ ಊಟ ಮಾತ್ರವಲ್ಲ; ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯವೂ ಇದೆ. ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥ ಈಗ ತುಂಬಾ ದುಬಾರಿಯಾಗಿದೆ. ಕಡಿಮೆ ಆದಾಯದ ಕುಟುಂಬಗಳ ಪಾಲಿಗೆ ಅಂತಹ ಆಹಾರ ಗಗನಕುಸುಮವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ದೇಹದಲ್ಲಿ ಪೋಷಕಾಂಶಗಳು, ವಿಟ್ಯಾಮಿನ್‌ಗಳು, ಲವಣಾಂಶಗಳ ಕೊರತೆಯಿಂದ ಬಹುಬೇಗ ಸೋಂಕಿನಿಂದ ಬಳಲುವ ಸಾಧ್ಯತೆ ಹೆಚ್ಚಾಗಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆಫ್ರಿಕಾ ಹಾಗೂ ಏಷ್ಯಾದ ಹಲವು ದೇಶಗಳಲ್ಲಿ ಕಾಯಿಲೆಪೀಡಿತರು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ ಎಂದು ತಿಳಿಸಲಾಗಿದೆ.

13 ಕೋಟಿ ಜನ ಹಸಿವಿನ ದವಡೆಗೆ
ಕೋವಿಡ್‌ನಿಂದ ಎದುರಾಗಿರುವ ಬಿಕ್ಕಟ್ಟು ವರ್ಷಾಂತ್ಯದ ವೇಳೆಗೆ ಹೊಸದಾಗಿ 13 ಕೋಟಿ ಜನರನ್ನು ಹಸಿವಿನ ದವಡೆಗೆ ನೂಕಲಿದೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. ಈ ಸಮಸ್ಯೆ ಆಫ್ರಿಕಾವನ್ನು ತೀವ್ರವಾಗಿ ತಟ್ಟಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಅಲ್ಲಿನ ಬಡತನದ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಸಮೀಕ್ಷೆಯು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಕೋವಿಡ್‌ ವ್ಯಾಪಕವಾಗಿ ಹರಡಿದ್ದರಿಂದ ಜಾಗತಿಕ ಆಹಾರ ಉತ್ಪಾದನೆ ಹಾಗೂ ಪೂರೈಕೆ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಲಾಕ್‌ಡೌನ್‌ನಂತಹ ಕ್ರಮಗಳಿಂದ ಆಗಿರುವ ಪರಿಣಾಮವನ್ನು ಈಗಲೇ ಊಹಿಸುವುದು ಕಷ್ಟ. ಸಮಾಜದ ಅರ್ಥವ್ಯವಸ್ಥೆಯ ಮೇಲೆ ಅದು ನೀಡಿರುವ ಹೊಡೆತ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಹಸಿವಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯತ್ತ ಮುನ್ನಡೆಯಲು ಇದರಿಂದಲೂ ತೊಡಕಾಗಿದೆ ಎಂದು ಹೇಳಿದೆ.

ಒಂದೆಡೆ ಕೃಶಕಾಯದ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಇನ್ನೊಂದೆಡೆ ವಯಸ್ಕರಲ್ಲಿ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಎರಡೂ ಆರೋಗ್ಯ ಸಮಸ್ಯೆಗಳಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ತೊಡಕಾಗಿವೆ ಎಂದು ಸದ್ಯದ ವೈರುಧ್ಯವನ್ನು ವರದಿಯು ಎತ್ತಿ ತೋರಿದೆ.

ಭಾರತದ ಪಡಿತರ ವ್ಯವಸ್ಥೆಯ ಉಲ್ಲೇಖ
ಭಾರತದಲ್ಲಿ ಜಾರಿಯಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ವ್ಯವಸ್ಥೆಯ ಕುರಿತು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನ ಅತಿದೊಡ್ಡ ಆಹಾರ ಪದಾರ್ಥ ಪೂರೈಕೆ ಯೋಜನೆಯಲ್ಲಿ 80 ಕೋಟಿ ಜನರಿಗೆ ಐದು ಲಕ್ಷ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.